ಪಾಪದ ಫಲ ಇಲ್ಲೇ ಸಿಗಬೇಕು

ಮುಂಬೈ ದಾಳಿಯ ಪ್ರಧಾನ ಸಂಚುಕೋರ ತಹಾವುರ್ ರಾಣಾ ಕೊನೆಗೂ ತನ್ನ ಪಾಪದ ಫಲವನ್ನು ಭಾರತದಲ್ಲೇ ಉಣ್ಣಲು ಬರುತ್ತಿದ್ದಾನೆ. ಅಮೇರಿಕದಲ್ಲಿ ಬಂಧಿತನಾಗಿದ್ದು, ಅಲ್ಲಿನ ಜೈಲಿನಲ್ಲಿ ಕೊಳೆಯುತ್ತಿರುವ ಆತ ಭಾರತದಲ್ಲಿ ವಿಚಾರಣೆ ಎದುರಿಸುವುದನ್ನು ತಪ್ಪಿಸಲು ಸತತ ಪ್ರಯತ್ನ ನಡೆಸಿಯೂ ಈಗ ವಿಫಲನಾಗಿದ್ದಾನೆ. ಆತನನ್ನು ಗಡಿಪಾರು ಮಾಡಲು ಅಲ್ಲಿನ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದು, ಆತ ಭಾರತಕ್ಕೆ ಬಂದು ವಿಚಾರಣೆ ಎದುರಿಸಲಿದ್ದಾನೆ. ೨೦೨೩ರ ಮೇ ತಿಂಗಳಲ್ಲೇ ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ಆದೇಶಿಸಲಾಗಿತ್ತು. ಆದರೆ ಆತ ಅದನ್ನು ತಪ್ಪಿಸಿಕೊಳ್ಳಲು ವಿವಿಧ ಕಾನೂನು ಅಡ್ಡಿಗಳನ್ನು ಒಡ್ಡುತ್ತಾ ಬಂದಿದ್ದ. ಇತ್ತೀಚೆಗೆ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ತಹಾವುರ್ ರಾಣಾನನ್ನು ಭಾರತಕ್ಕೆ ಒಪ್ಪಿಸುವುದಾಗಿ ಘೋಷಿಸಿದ್ದರು. ಆತ ಭಾರತಕ್ಕೆ ಕಳಿಸಲ್ಪಡುವುದು ಖಂಡಿತ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದಾಗ ಕೊನೆಯ ಪ್ರಯತ್ನವಾಗಿ ಅಲ್ಲಿನ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. “ಭಾರತಕ್ಕೆ ಕಳಿಸಿದರೆ ನಾನು ಅಲ್ಲಿ ಚಿತ್ರಹಿಂಸೆ ಎದುರಿಸಬೇಕಾಗುತ್ತದೆ. ಹಾಗಾಗಿ ನನ್ನನ್ನು ಅಲ್ಲಿಗೆ ಕಳಿಸಬಾರದು” ಎಂಬುದಾಗಿ ಆತ ಕೋರ್ಟಿನಲ್ಲಿ ಪ್ರಲಾಪಿಸಿದ್ದ. ಆದರೆ ಆತನ ಅಹವಾಲಿಗೆ ಕಿವಿಗೊಡದ ಸುಪ್ರೀಂ ಕೋರ್ಟ್ ಆತನನ್ನು ಭಾರತಕ್ಕೆ ಗಡಿಪಾರು ಮಾಡಲು ಸಮ್ಮತಿಸಿದೆ.
೨೦೦೮ರಲ್ಲಿ ಮುಂಬೈ ಮೇಲೆ ನಡೇದ ದಾಳಿಯು ಭಾರತದ ಇತಿಹಾಸದಲ್ಲೇ ಭೀಕರ ಭಯೋತ್ಪಾದಕ ದಾಳಿಗಳಲ್ಲೊಂದು. ಆ ದಾಳಿಯಲ್ಲಿ ೧೬೬ ಮಂದಿ ಸಾವಿಗೀಡಾಗಿದ್ದರು. ದಾಳಿಯಲ್ಲಿ ನೇರವಾಗಿ ಪಾಲ್ಗೊಂಡ ಭಯೋತ್ಪಾದಕರನ್ನೆಲ್ಲ ಕೊಲ್ಲಲಾಗಿತ್ತಾದರೂ ದಾಳಿಯ ಹಿಂದಿನ ರೂವಾರಿಗಳನ್ನು ಕೂಡಾ ಪತ್ತೆ ಹಚ್ಚಿ ಹಿಡಿದು ಶಿಕ್ಷಿಸುವುದು ಮುಖ್ಯವಾಗಿತ್ತು. ಬಳಿಕ ಹಲವಾರು ಮಂದಿ ಸಂಚುಕೋರರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗಿದೆಯಾದರೂ ತಹಾವುರ್ ರಾಣಾನ ಕಠಿಣ ವಿಚಾರಣೆಯಿಂದ ಇನ್ನಷ್ಟು ಮಂದಿಯ ಹೆಸರು ಹೊರಬರಬಹುದೆಂದು ನಿರೀಕ್ಷಿಸಲಾಗಿದೆ.
ಮುಂಬೈ ದಾಳಿಯ ಪ್ರಧಾನ ಸಂಚುಕೋರರು ನೆರೆಯ ಪಾಕಿಸ್ತಾನದಲ್ಲಿರುವವರು ಎಂಬುದು ತಿಳಿದಿರುವುದೇ ಆಗಿದೆ. ಅವರಲ್ಲಿ ಹಲವರೀಗ ಒಬ್ಬೊಬ್ಬರಾಗಿ ಸಾಯುತ್ತಾ ಪಾಪದ ಫಲ ಅನುಭವಿಸುತ್ತಿದ್ದಾರೆ. ಆದರೆ ತಹಾವುರ್ ರಾಣಾ ವಿಚಾರಣೆಯಿಂದ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಸರಕಾರ, ಸೇನೆ ಮತ್ತು ಐ ಎಸ್ ಐ ಕೈವಾಡದ ಬಗ್ಗೆ ಹೆಚ್ಚಿನ ಪುರಾವೆ ದೊರೆಯಬಹುದೆಂಬ ಆಶಯವಿದೆ. ಜತೆಗೇ ನೂರಾರು ಭಾರತೀಯರ ಸಾವಿಗೆ ಕಾರಣನಾದವನನ್ನು ಭಾರತದಲ್ಲೇ ಗಲ್ಲಿಗೆ ಹಾಕುವುದು ಸೂಕ್ತವೂ ಆಗಿದೆ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೦-೦೪-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ