ಪಾಪಿಗಳ ಲೋಕದಲ್ಲಿ

ಪಾಪಿಗಳ ಲೋಕದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ: ೧೯೯೫

೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ ಬರೆಯುತ್ತಾರೆ ಎಂಬುದು ರವಿ ಬೆಳಗೆರೆಯ ಮೇಲಿದ್ದ ಆಪಾದನೆ. ಭೂಗತ ಲೋಕದ ಆಗುಹೋಗುಗಳನ್ನು ಬಹಳ ಹತ್ತಿರದಿಂದ ನೋಡಿದವರು ಇವರು. ಈ ಪುಸ್ತಕದಲ್ಲಿ ನೀಡಲಾದ ಎಲ್ಲಾ ವ್ಯಕ್ತಿಗಳನ್ನು ಮುಖಃತ ಕಂಡು ಸಂದರ್ಶನ ಮಾಡಿ ಲೇಖನ ಬರೆದಿದ್ದಾರೆ. ಆದುದರಿಂದ ಈ ಪುಸ್ತಕಕಕ್ಕೆ ಒಂದು ತೂಕ ಬಂದಿದೆ. ಒಬ್ಬ ಭೂಗತ ಲೋಕಕ್ಕೆ ಕಾಲಿಡುವಾಗ ಅವನ ಮನಸ್ಥಿತಿ ಏನು? ಕುಟುಂಬದ ಹಿನ್ನಲೆ ಏನು? ಎಂಬ ಬಗ್ಗೆ ಬರೆದಿದ್ದಾರೆ.

ಅವರೇ ಹೇಳುವಂತೆ “ ಈ ಪುಸ್ತಕದ ವ್ಯಾಪ್ತಿ ದೊಡ್ಡದು. ನಾನು ಸರಿಸುಮಾರು ಹತ್ತು ವರ್ಷ ಒಬ್ಬ ಪತ್ರಕರ್ತನಾಗಿ ಭೂಗತ ಲೋಕದಲ್ಲಿ ಕಂಡದ್ದನ್ನ, ಕೇಳಿದ್ದನ್ನ ಇಲ್ಲಿ ದಾಖಲಿಸಿದ್ದೇನೆ. ಕೋಳಿ ಫಯಾಜ್ ನನ್ನು ಶಿವಾಜಿನಗರದ ಕಸಾಯಿ ಅಡ್ಡೆಯಲ್ಲಿ ಮಾತನಾಡಿಸಿದುದರಿಂದ ಆರಂಭವಾಗಿ, ಮುತ್ತಪ್ಪ ರೈಯನ್ನು ದುಬೈನಲ್ಲಿ ಭೇಟಿಯಾಗುವ ತನಕ ಪಾಪಿಗಳ ಲೋಕದ ನನ್ನ ಯಾತ್ರೆ ಸಾಗಿ ಬಂದಿದೆ. ಗ್ಯಾಂಗ್ ವಾರ್ ಗಳು, ಒಳಗೊಳಗೇ ನಡೆದ ಮಿತ್ರದ್ರೋಹಗಳು, ಪೋಲೀಸರ ಕಠೋರ ನಿರ್ಧಾರಗಳು, ಬದುಕು ಬದಲಿಸಿಕೊಂಡ ಮುಖವಾಡ ಧರಿಸಿಕೊಂಡೇ ಭೂಗತ ಜೀವನ ಮುಂದುವರೆಸಿದವರ ಕತೆಗಳು, ಅವರ ಭಯಗಳು, ಅವರ ಪುಕ್ಕಲು, ಅವರ ವೀರಾವೇಶ ಅವರ ದುಃಖ, ಬಿಕ್ಕಳಿಕೆಗಳು, ಅವರ ಹತಾಶೆ-ನಿರಾಶೆಗಳು ಎಲ್ಲವೂ ಈ ಪುಸ್ತಕದಲ್ಲಿ ದಾಖಲಾಗಿವೆ.”

“ಪಾಪಿಗಳ ಲೋಕಕ್ಕೆ ಮುನ್ನುಡಿ ಬೇಕಿಲ್ಲ. ಬೇಕಿರುವುದು ಚರಮ ಗೀತೆ. ಸರಿಸುಮಾರು ೧೯೭೦ರ ದಶಕದಿಂದ ಇವತ್ತಿನ ತನಕ ಬೆಂಗಳೂರಿನಲ್ಲಿ ಪ್ರಚ್ಚನ್ನ ಭೂಗತ ಲೋಕ ಅರಳಿದ್ದೂ, ತಾತ್ಕಾಲಿಕವಾಗಿ ಅದರ ಸದ್ದಡಗಿದ್ದೂ ಎಲ್ಲವೂ ಆಗಿದೆ. ಬೆಂಗಳೂರಿನ ರಸ್ತೆಗಳು ರೌಡಿಗಳ ನೆತ್ತರಿನಿಂದ ತೊಯ್ದಿವೆ. ಅಮಾಯಕರು, ನಿಷ್ಪಾಪಿಗಳು ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ. ವೈಯಕ್ತಿಕ ಸೇಡಿನ ಹುಂಬ ಬಡಿದಾಟ ಮತ್ತು ಹತ್ಯೆಗಳಿಂದ ಹಿಡಿದು ಸುಪಾರಿ ಕಿಲ್ಲಿಂಗ್ ಗಳ ತನಕ, ವಿದೇಶದಲ್ಲಿ ಕುಳಿತು ಅಪ್ಪಣೆ ಕೊಟ್ಟು ಮರಣ ದಂಡನೆಗಳನ್ನೂ ಜಾರಿಗೆ ತಂದವರ ತನಕ - ಬೆಂಗಳೂರಿನ ಅಂಡರ್ ವರ್ಲ್ಡ್ ಎಲ್ಲ ತರಹದ ಸಾವುಗಳನ್ನೂ ಕಂಡಿದೆ. ಇಲ್ಲಿ ‘ನಾನು' ಅಂತ ಮೆರೆದವರೆಷ್ಟೋ ಜನ ಕೇವಲ ಕತೆಯಾಗಿ ಹೋಗಿದ್ದಾರೆ. ಯಾರನ್ನೋ ಭೀಕರ ಬಡಿದಾಟಕ್ಕೆ ಹಚ್ಚಿ ತಮ್ಮ ಆಸ್ತಿ, ಸಖ-ಪ್ರಾಣ ಎಲ್ಲವನ್ನೂ ಭದ್ರವಾಗಿ ಉಳಿಸಿಕೊಂಡು ಐಷಾರಾಮದ ಬದುಕು ಬದುಕುತ್ತಿರುವವರೂ ಇದ್ದಾರೆ.”

ಈ ಪುಸ್ತಕದಲ್ಲಿ ಒಂದು ಸಮಯದಲ್ಲಿ ಭೂಗತ ಲೋಕವನ್ನಾಳಿದ ಕೋಳಿ ಫಯಾಜ್, ಕೊತ್ವಾಲ ರಾಮಚಂದ್ರ, ಶ್ರೀರಾಂಪುರ ಕಿಟ್ಟಿ, ಜೇಡರಹಳ್ಳಿ ಕೃಷ್ಣಪ್ಪ, ಜಯರಾಜ್, ರೌಡಿ ಡೆಡ್ಲಿ ಸೋಮ, ಚಂದು, ಮುಲಾಮ ಲೋಕೇಶ, ಚಕ್ರೆ, ಬಲರಾಮ, ಬೆಕ್ಕಿನ ಕಣ್ಣು ರಾಜೇಂದ್ರ, ಮುತ್ತಪ್ಪ ರೈ ಹೀಗೆ ನಾವು ಕಂಡು ಕೇಳಿರದ ಭೂಗತ ಲೋಕದ ವ್ಯಕ್ತಿಗಳ ವಿವರಗಳಿವೆ. ಓದಿಸಿಕೊಂಡು ಹೋಗಲಷ್ಟೇ ಆಸಕ್ತಿ ಇದ್ದರೆ ಉತ್ತಮ. 

ರವಿ ಬೆಳಗೆರೆಯವರು ಈ ಪುಸ್ತಕವನ್ನು ತಮ್ಮ ಆತ್ಮೀಯ ಪೋಲೀಸ್ ಅಧಿಕಾರಿಯಾದ ಬಿ.ಕೆ.ಶಿವರಾಂ ಅವರಿಗೆ ಅರ್ಪಿಸಿದ್ದಾರೆ. ಸುಮಾರು ೪೦೦ ಪುಟಗಳ ಈ ಪುಸ್ತಕವನ್ನು ೧೯೯೫ರಲ್ಲಿ ಭಾವನಾ ಪ್ರಕಾಶನದವರು ಪ್ರಕಟಿಸಿದ್ದಾರೆ.