ಪಾಪ್‍ಕಾರ್ನ್ ತಿಂದು ರೋಗ?

ಪಾಪ್‍ಕಾರ್ನ್ ತಿಂದು ರೋಗ?

ಬರಹ

(ಇ-ಲೋಕ-39)(10/9/2007)

 

 ಕೊಲೆರಾಡೋದ ವ್ಯಕ್ತಿಯೋರ್ವನಿಗೆ ಪಾಪ್‍ಕಾರ್ನ್ ತಿನ್ನುವ ಹುಚ್ಚು.ಸಾಮಾನ್ಯ ಪಾಪ್‍ಕಾರ್ನ್ ಅಲ್ಲ.ಮೈಕ್ರೋವೇವ್‍ನಲ್ಲಿ ತಯಾರಿಸಿದ-ಕೃತಕ ಬೆಣ್ಣೆ ಹಾಕಿದ ಪಾಪ್‍ಕಾರ್ನ್.ವಾರಕ್ಕೆರಡು ಬಾರಿಯಾದರೂ ಪಾಪ್‍ಕಾರ್ನ್ ತಿನ್ನುವ ಕ್ರಮವನ್ನು ಕಳೆದ ಹತ್ತು ವರ್ಷಗಳಿಂದ ಬೆಳೆಸಿಕೊಂಡಿದ್ದಾನೆ.ಈಗಾತನ ಶ್ವಾಸಕೋಶಗಳು ಹಾನಿಗೊಳಗಾಗಿವೆ.ವೈದ್ಯರು ಆತನನ್ನು ಪರೀಕ್ಷಿಸಿ,ಪಾಪ್‍ಕಾರ್ನ್ ತಿನ್ನುವ ಚಟವೇ ಆತನಿಗೆ ಮುಳುವಾಗಿರಬಹುದು ಎಂದು ಸಂದೇಹಿಸಿದ್ದಾರೆ.ಆತನ ಶ್ವಾಸಕೋಶವನ್ನು ಪರೀಕ್ಷೆಗೊಳಪಡಿಸಿದಾಗ,ಅದರಲ್ಲಿ ಡೈಅಸಿಟೈಲ್ ಅನ್ನುವ ರಾಸಾಯಿನಿಕದ ಅಂಶ ಅಧಿಕವಾಗಿರುವುದು ಕಂಡು ಬಂತು.ಡೈಅಸಿಟೈಲ್ ಅನ್ನುವುದು ಕೃತಕ ಬೆಣ್ಣೆಯಲ್ಲಿ ಉಪಯೋಗಿಸುವ ರಾಸಾಯಿನಿಕ.ಮೈಕೋವೇವ್‍ನಲ್ಲಿ ತಯಾರಿಸುವ ಪಾಪ್‍ಕಾರ್ನ್‌ನ್ನು ಸುವಾಸಿತವಾಗಿಸಲು ಇದನ್ನು ಬಳಸುತ್ತಾರಂತೆ.ಮೈಕ್ರೋವೇವ್ ಪಾಪ್‍ಕಾರ್ನ್ ತಯಾರಿಕಾ ಘಟಕಗಳ ಕೆಲಸಗಾರರು ಡೈಅಸಿಟೈಲ್ ರಾಸಾಯಿನಿಕದ ಆವಿಯನ್ನು ಉಸಿರಾಡುವುದರಿಂದ,ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಕ್ಕೆ ತುತ್ತಾಗುವುದು ಹಿಂದಿನಿಂದಲೂ ತಿಳಿದಿತ್ತು.ಆದರೆ ಬಳಕೆದಾರರಲ್ಲಿ ಅಂತಹ ರೋಗ ಕಂಡು ಬರುವುದು ಇದೇ ಮೊದಲು.ತಿನ್ನುವ ಮೊದಲು ಪ್ಯಾಕೆಟ್ ಒಡೆದು,ಅದರ ಪರಿಮಳ ಆಘ್ರಾಣಿಸುವ ಅಭ್ಯಾಸ ಆ ವ್ಯಕ್ತಿಗೆ ಮುಳುವಾಯಿತಿರಬೇಕೆಂದು ವೈದ್ಯರ ಸಂದೇಹ.ಪಾಪ್‍ಕಾರ್ನ್ ತಯಾರಿಸುವ ಕಂಪೆನಿ ಡೈಅಸಿಟೈಲ್ ಅಪಾಯಕಾರಿ ಎಂದು ಒಪ್ಪುತ್ತಿಲ್ಲವಾದರೂ ಸದ್ಯ ಅದರ ಬಳಕೆ ನಿಲ್ಲಿಸಲು ತೀರ್ಮಾನಿಸಿದೆಯಂತೆ.

 ಸ್ಪರ್ಧೆಯಲ್ಲಿ ಗೆಲ್ಲಿ,ಬಾಹ್ಯಾಕಾಶಯಾನಿಯಾಗಿ!

ದಕ್ಷಿಣ ಕೊರಿಯಾದ ವ್ಯಕ್ತಿ ರಶ್ಯಾದ ಸೊಯೂಜ್ ಬಾಹ್ಯಾಕಾಶ ವಾಹನದಲ್ಲಿ ಯಾತ್ರೆ ಕೈಗೊಳ್ಳುವ ಕಾರ್ಯಕ್ರಮವಿದೆ.ಇದಕ್ಕೆ ಯಾರಾಗಬಹುದು ಎನ್ನುವುದನ್ನು ನಿರ್ಧರಿಸಲು ಸ್ಪರ್ಧೆಯೊಂದು ನಡೆದಿತ್ತು.ಮೂವತ್ತಾರು ಸಾವಿರ ಉಮೇದುವಾರರೂ ಇದ್ದರು.ಕೊನೆಗೂ ಕೋ ಸಾನ್ ಅನ್ನುವಾತ ಯಿ-ಸೋ-ಯಾನ್ ಎನ್ನುವ ಮಹಿಳೆಯನ್ನು ಹಿಂದಿಕ್ಕಿ ವಿಜಯಿಯಾಗಿದ್ದಾನೆ.ಬಹುಮಾನವಾಗಿ ಆತ ಮುಂದಿನ ಎಪ್ರಿಲ್ ವೇಳೆ ಬಾಹ್ಯಾಕಾಶಕ್ಕೆ ಹೋಗಲಿದ್ದಾನೆ.ಮೂರು ವರ್ಷಗಳ ಹಿಂದೆ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಗೆದ್ದಿದ್ದ ಸಾಧನೆಯನ್ನು ಆತ ಮಾಡಿದ್ದಿದೆ.ಸಂಶೋಧಕನಾದ ಈತ ಮೂವತ್ತರ ಹರೆಯದವ.ಸದ್ಯ ತರಬೇತಿ ರಶ್ಯಾದಲ್ಲಿ ನಡೆಯುತ್ತಿದೆ.ಮುಂದಿನ ವರ್ಷ ರಾಕೆಟ್ ಉಡಾಯಿಸುವ ಯೋಜನೆಯನ್ನು ಕೊರಿಯಾ ಹೊಂದಿದೆ.ಸಣ್ಣ ಉಪಗ್ರಹವನ್ನು ಕಕ್ಷೆಯಲ್ಲಿರಿಸಲು ಅದು ಪ್ರಯತ್ನಿಸಲಿದೆ.

ಐಪಾಡ್ ಈಗ ಅಗ್ಗ

 ಎಂಟು ಗಿಗಾಬೈಟ್ ಸಾಮರ್ಥ್ಯದ ಐಪಾಡ್ ಬೆಲೆ ಈಗ ಆರುನೂರು ಡಾಲರಿನಿಂದ ನಾಲ್ಕುನೂರು ಡಾಲರಿಗೆ ಇಳಿದಿದೆ.ನಾಲ್ಕು ಗಿಗಾಬೈಟು ಸಾಮರ್ಥ್ಯದ ಐಪಾಡ್‍ಗಳ ಉತ್ಪಾದನೆ ನಿಲ್ಲಿಸಲೂ ಆಪಲ್ ಕಂಪೆನಿ ತೀರ್ಮಾನಿಸಿದೆಯಂತೆ. ಮೂರು ತಿಂಗಳ ಹಿಂದೆ ಐಪಾಡ್ ಮಾರುಕಟ್ಟೆಯಲ್ಲಿ ಲಭ್ಯವಾಗಿತ್ತು.ಐಪಾಡ್,ಮೊಬೈಲಿನಲ್ಲಿ ಹಾಡನ್ನು ಆಲಿಸುವ ಸೌಲಭ್ಯ ನೀಡುವ ಸಾಧನ ಎನ್ನುವುದು ನಿಮಗೆ ಗೊತ್ತೇ ಇದೆ.ಆಪಲ್ ಕಂಪೆನಿ ತನ್ನ ಸಾಧನಗಳ ಬೆಲೆ ಇಳಿಕೆ ಮಾಡುವ ಪರಿಪಾಟ ಹೊಂದಿಲ್ಲ. ಹೊಸ ಆವೃತ್ತಿಗಳಲ್ಲಿ ಹೆಚ್ಚು ಹೆಚ್ಚು ಸೌಲಭ್ಯ ಒದಗಿಸಿ,ಬೆಲೆ ಕಾಯ್ದುಕೊಳ್ಳುವುದು ಕಂಪೆನಿ ಹಿಂದಿನಿಂದ ಪಾಲಿಸಿಕೊಂಡು ಬಂದ ಕ್ರಮ. ಈಗ ಏಕಾಏಕಿ ಬೆಲೆ ಇಳಿಕೆ ಜನರಿಗೆ ಆಶ್ಚರ್ಯ ತಂದಿದೆ.ಇತ್ತೀಚೆಗೆ ಐಪಾಡ್ ಖರೀದಿಸಿದವರಿಗೆ ನಿರಾಸೆಯಾಗದಂತೆ,ಕಳೆದ ಪಾಕ್ಷಿಕದಲಿ ಖರೀದಿಸಿದ ಗ್ರಾಹಕರಿಗೆ ಇನ್ನೂರು ಡಾಲರು ವಾಪಸ್ಸು ಮಾಡಲು ಆಪಲ್ ನಿರ್ಧರಿಸಿದೆ. ಹೊಸ ಮಾಡೆಲುಗಳಲ್ಲಿ ಸ್ಪರ್ಶಸಂವೇದಿ ತೆರೆಯಿದೆ.ನಿಸ್ತಂತು ಮೂಲಕ ಸಮೀಪದ ಐಟ್ಯೂನ್ ಅಂಗಡಿಗಳಿಂದ ಸಂಗೀತವನ್ನು ಐಪಾಡಿಗೆ ಇಳಿಸಿಕೊಳ್ಳಲು ಸಾಧ್ಯ.ನ್ಯಾನೋ ಎನ್ನುವ ಜನಪ್ರಿಯ ಮಾದರಿಯಲ್ಲಿ ವಿಡಿಯೋ ವೀಕ್ಷಿಸುವ ಸೌಲಭ್ಯವೂ ಇದೆ.ಐಪಾಡ್ ಕ್ಲಾಸಿಕ್‍ನಲ್ಲಿ ನೂರರುವತ್ತು ಗಿಗಾಬೈಟ್ ಸಾಮರ್ಥ್ಯವಿದೆ.

ಕಾರಿನಲ್ಲಿ ವಿದ್ಯುತ್ ಮೋಟಾರ್ ಬಳಕೆ: ಅಧಿಕ ಮೈಲೇಜ್

ಕಾರಿನ ಇಂಜಿನ್‍ನಿಂದ ಪವರ್ ಸ್ಟಿಯರಿಂಗ್,ಏಸಿ ವ್ಯವಸ್ಥೆ,ಬ್ರೇಕ್ ವ್ಯವಸ್ಥೆ ಇತ್ಯಾದಿಗಳಿಗೆ ಚಾಲನಶಕ್ತಿಯನ್ನು ಬೆಲ್ಟ್ ಬಳಸಿ ಒದಗಿಸುವುದು ಸಾಮಾನ್ಯ ಕ್ರಮ. ಆದರೆ ಬೆಲ್ಟ್ ಬಳಕೆಯಿಂದ ಇಂಜಿನ್ ದಕ್ಷತೆ ತಗ್ಗುತ್ತದೆ. ಮೈಲೇಜ್ ಕಡಿಮೆಯಾಗುತ್ತದೆ.ಏರುತ್ತಿರುವ ಇಂಧನದ ಬೆಲೆಗಳು ಮತ್ತು ಸರಕಾರಿ ನಿಯಮಗಳನ್ನು ಪಾಲಿಸಲು ಕಾರ್ ತಯಾರಿಕಾ ಕಂಪೆನಿಗಳಾದ ಟೊಯೊಟಾ,ಫೋರ್ಡ್ ಕಂಪೆನಿಗಳು ವಿದ್ಯುತ್ ಮೋಟಾರು ಬಳಕೆ ಆರಂಭಿಸಿವೆ.ವಾಹನದ ಚಲನೆಗೆ ಇಂಜಿನ್ ಬಳಕೆಯಾಗುತ್ತದಾದರೂ,ಇತರ ವ್ಯವಸ್ಥೆಗಳಾದ ಏಸಿ,ಪವರ್ ಸ್ಟಿಯರಿಂಗ್,ಬ್ರೇಕಿಂಗ್ ಮುಂತಾದ ವ್ಯವಸ್ಥೆಗಳಿಗೆ ಚಾಲನಶಕ್ತಿ ಒದಗಿಸಲು ಪ್ರತ್ಯೇಕ ವಿದ್ಯುತ್ ಮೋಟಾರು ಬಳಸಲಾಗುತ್ತಿದೆ.ಇದರಿಂದ ಕಾರಿನ ದಕ್ಷತೆ ಶೇಕಡಾ ಎಂಟರಷ್ಟು ಏರಿಕೆಯಾಗುತ್ತದೆಯಂತೆ.ದಕ್ಷತೆ ಜತೆಗೆ ವಾಹನದ ರಿಪೇರಿ ಸಾಧ್ಯತೆ ಇಳಿಯುವುದು ಇನ್ನೊಂದು ಲಾಭ.ಬೆಲ್ಟ್ ಕಡಿಯುವುದು ಇಂತಹ ಸಮಸ್ಯೆ ಇಲ್ಲದಿರುವುದು ಇದಕ್ಕೆ ಕಾರಣ.ಅಲ್ಲದೆ ವಿದ್ಯುತ್ ಮೋಟಾರಿಗೆ ಸಂವೇದಕಗಳನ್ನು ಅಳವಡಿಸಿ,ಕಾರಿನಲ್ಲಿ ಹೆಚ್ಚು ಸೌಲಭ್ಯಗಳನ್ನು ಕೊಡಬಹುದು.ಕಾರು ವೇಗದಲ್ಲಿ ಸಾಗುವಾಗ ಒಂದು ಲೇನಿನಿಂದ ಇನ್ನೊಂದಕ್ಕೆ ಸಾಗದಂತೆ ತಡೆಯುವ ಸ್ವಯಂಚಾಲೀ ವ್ಯವಸ್ಥೆಗಳನ್ನು ವಿದ್ಯುತ್ ಮೋಟಾರು ಅಳವಡಿಸಿದ ಕಾರುಗಳಲ್ಲಿ ಒದಗಿಸಬಹುದು. ಗೂಗಲ್‍ಗೆ ಸ್ಪರ್ಧೆ ನೀಡಲು ಜಪಾನ್ ಕಂಪೆನಿಗಳ ತೀರ್ಮಾನ ಅಂತರ್ಜಾಲ ಶೋಧಿಸುವ ಸೇವೆ ಒದಗಿಸುವುದರಲ್ಲಿ ಮನೆ ಮಾತಾಗಿರುವ ಗೂಗಲಿಗೆ ಸ್ಪರ್ಧೆ ನೀಡುವ ಶೋಧಕವನ್ನು ತಯಾರಿಸಲು ಜಪಾನಿನ ಟೆಕ್ ಕಂಪೆನಿಗಳು ಮುಂದಾಗಿವೆ.ಈ ಕೆಲಸಕ್ಕೆ ನೂರ ಮೂವತ್ತು ಮಿಲಿಯನ್ ದಶಲಕ್ಷ ಡಾಲರು ಬಜೆಟ್ ಒದಗಿಸಲಾಗಿದೆ.ಹಿಟಾಚಿ,ಸೋನಿ,ಟೊಯೋಟಾ,ಎನ್ ಇ ಸಿ ಮುಂತಾದ ಕಂಪೆನಿಗಳ ಐಟಿ ವಿಭಾಗಗಳು ಈ ಕೆಲಸದಲ್ಲಿ ಕೈಜೋಡಿಸಿವೆ.

*ಅಶೋಕ್‍ಕುಮಾರ್ ಎ