ಪಾರಂಪರಿಕ ತಾಣಗಳನ್ನು ಉಳಿಸುವುದು ಇಂದಿನ ಅಗತ್ಯ
ಹೌದು, ನಮ್ಮ ಹಳೆಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ನಮಗೆ ಉಳಿದಿರುವುದು ಪಾರಂಪರಿಕ ತಾಣಗಳೇ. ನಮ್ಮ ಹಿಂದಿನ ರಾಜರು ಕೈಗೊಂಡ ಕಾರ್ಯಗಳು, ವಿದೇಶೀ ಆಕ್ರಮಣಕಾರರಿಂದ ದಾಳಿಗೊಳಗಾಗಿ ಭಗ್ನವಾದ ದೇವಾಲಯ, ಕಟ್ಟಡಗಳು, ಹಿಂದಿನ ಕಲಾ ವೈಭವ, ಅಂದಿನ ಕಾಲದ ಸಂಸ್ಕೃತಿ, ಆಚಾರ-ವಿಚಾರ, ಆಹಾರ ಕ್ರಮಗಳು, ಹುಟ್ಟು-ಸಾವಿನ ನಡುವಿನ ಬದುಕು ಇತ್ಯಾದಿಗಳನ್ನು ತಿಳಿಸುವುದು ನಮ್ಮಲ್ಲಿನ್ನೂ ಉಳಿದುಕೊಂಡಿರುವ ಶಿಲ್ಪಕಲೆಯ ಪಾರಂಪರಿಕ ತಾಣಗಳು.
ಬೇಲೂರಿನ ಶಿಲಾಬಾಲಿಕೆಗಳಾಗಲಿ, ಹಂಪಿಯ ಕಲ್ಲಿನ ರಥವಾಗಲಿ, ಚಾಲುಕ್ಯ ವಂಶದ ರಾಜಧಾನಿಯಾಗಿದ್ದ ಪಟ್ಟದಕಲ್ಲು ಆಗಲಿ ಇವನ್ನೆಲ್ಲಾ ಉಳಿಸಿ ಮುಂದಿನ ಪೀಳಿಗೆಗೆ ತೋರಿಸುವ ಕೆಲಸ ಅವಶ್ಯವಾಗಿ ಆಗಬೇಕಾಗಿದೆ. ಎಪ್ರಿಲ್ ೧೮ ‘ವಿಶ್ವ ಪಾರಂಪರಿಕ ತಾಣ ದಿನ'. ಈ ದಿನದ ಸಂದರ್ಭದಲ್ಲಿ ನಾವು ಕರ್ನಾಟಕ ರಾಜ್ಯದಲ್ಲಿ ವಿಶ್ವಸಂಸ್ಥೆ ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಿದ ತಾಣಗಳ ಬಗ್ಗೆ ತಿಳಿದುಕೊಳ್ಳುತ್ತಾ ಈ ದಿನದ ಮಹತ್ವವನ್ನು ಅರಿತುಕೊಳ್ಳೋಣ.
ನಮ್ಮ ರಾಜ್ಯದ ಹಂಪಿ ಹಾಗೂ ಪಟ್ಟದಕಲ್ಲು ತಾಣಗಳು ಈಗಾಗಲೇ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿವೆ. ಹೊಯ್ಸಳ ದೇವಾಲಯಗಳಿಗೂ ಈ ಗರಿಮೆಯನ್ನು ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ೧೦-೧೪ನೇ ಶತಮಾನದಲ್ಲಿ ನಿರ್ಮಾಣವಾದ ಹೊಯ್ಸಳ ಕಾಲದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳನ್ನು ಈ ಪಟ್ಟಿಯಲ್ಲಿ ಸೇರಿಸುವಂತೆ ೨೦೨೨-೨೩ ಸಾಲಿನಲ್ಲಿ ಶಿಫಾರಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಹೊಯ್ಸಳ ದೇವಾಲಯಗಳೂ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕಾಣಿಸುತ್ತದೆ ಎಂಬ ಆಶಾಭಾವನೆ ಇದೆ.
ಹಂಪಿ ಎಂದರೆ ನಮಗೆ ನೆನಪಾಗುವುದು ಕಲ್ಲಿನ ರಥ. ಈ ರಥದ ಚಿತ್ರವನ್ನು ಭಾರತೀಯ ರಿಜರ್ವ್ ಬ್ಯಾಂಕ್ ತಾನು ಪ್ರಸ್ತುತ ಮುದ್ರಿಸುತ್ತಿರುವ ೫೦ ರೂ. ಮುಖಬೆಲೆಯ ಕರೆನ್ಸಿ ನೋಟಿನಲ್ಲಿ ಅಳವಡಿಸಿದೆ. ಈ ಸ್ಥಳದ ಅತ್ಯಪೂರ್ವ ವಾಸ್ತು ಶಿಲ್ಪ ಹಾಗೂ ಐತಿಹಾಸಿಕ ಪ್ರಾಮುಖ್ಯತೆಯು ಹಂಪಿಗೆ ಈ ಸ್ಥಾನ ನೀಡಿದೆ. ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿ ಹಾಗೂ ಅಲ್ಲಿನ ದೇವಾಲಯಗಳನ್ನು ವಿಶ್ವಸಂಸ್ಥೆಯು ೧೯೮೬ರಲ್ಲಿಯೇ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಿದೆ. ಅಂದಿನ ಕಾಲದ ಶ್ರೀಮಂತ ರಾಜ ಮನೆತನವಾದ ವಿಜಯನಗರ ಸಾಮ್ರಾಜ್ಯದ ಕುರುಹಾಗಿರುವ ಈ ದೇವಾಲಯಗಳು ತಮ್ಮ ಇಂಡೋ-ಇಸ್ಲಾಮಿಕ್ ಶೈಲಿಯ ವಾಸ್ತು ಕಲೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಕಲ್ಲಿನ ರಥ, ವಿರೂಪಾಕ್ಷ ದೇವಾಲಯಗಳು ಪ್ರತೀ ವರ್ಷ ಸಹಸ್ರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರವಾಸಿಗರು ಇದರ ಸೌಂದರ್ಯವನ್ನು ಕಣ್ಣಿನಲ್ಲಿ ಸವಿಯದೇ ಇದನ್ನು ಹಾಳು ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ೧೯೯೯ರಿಂದ ವಿಶ್ವ ಸಂಸ್ಥೆ ಇದನ್ನು ಅಳಿವಿನಂಚಿನಲ್ಲಿರುವ ಪ್ರದೇಶ ಎಂದು ಹೇಳಿದೆ. ಇದೇ ಕಾರಣಕ್ಕಾಗಿ ಕಲ್ಲಿನ ರಥದ ಸುತ್ತ ತಡೆ ಬೇಲಿಯನ್ನೂ ಇತೀಚೆಗೆ ಅಳವಡಿಸಲಾಗಿದೆ. ಇಂತಹ ಶಿಲಾ ವಿನ್ಯಾಸಗಳು ಒಮ್ಮೆ ಹಾಳಾದರೆ ಮುಂದೆಂದೂ ರಚನೆ ಮಾಡಲು ಸಾಧ್ಯವಿಲ್ಲ. ಇಂತಹ ಸೌಂದರ್ಯಗಳನ್ನು ನಾವು ನೋಡಿ, ಮನಸ್ಸಿನಿಂದ ಸವಿಯುವ ಕೆಲಸ ಮಾಡಬೇಕು. ಅದನ್ನು ವಿರೂಪಗೊಳಿಸುವ ಮೂಲಕ ಅಲ್ಲ ಎಂಬ ಅರಿವು ಕಿಡಿಗೇಡಿಗಳಿಗೆ ಬರಬೇಕಿದೆ.
ಅದೇ ರೀತಿ ಪಾರಂಪರಿಕ ಪಟ್ಟಿಗೆ ಸೇರಿದ ಮತ್ತೊಂದು ಪ್ರದೇಶ ಚಾಲುಕ್ಯ ವಂಶದ ರಾಜಧಾನಿಯಾಗಿದ್ದ ಪಟ್ಟದಕಲ್ಲು ಪ್ರದೇಶ. ದಕ್ಷಿಣ ಭಾರತದ ದ್ರಾವಿಡ ಶಿಲ್ಪ ಶೈಲಿ ಹಾಗೂ ಉತ್ತರದ ಆರ್ಯ ಶೈಲಿಗಳ ವಾಸ್ತುಶಿಲ್ಪಗಳಿಂದ ಕಂಗೊಳಿಸುತ್ತಿರುವ ಇದು ಎಂಟನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಇಲ್ಲಿನ ೯ ದೇವಾಲಯಗಳನ್ನು ಹಾಗೂ ಒಂದು ಜೈನ ಬಸದಿಯನ್ನು ೧೯೮೭ರಲ್ಲಿ ಸಾಂಸ್ಕೃತಿಕ ನೆಲೆಯಲ್ಲಿ ವಿಶ್ವ ಸಂಸ್ಥೆ ಪಾರಂಪರಿಕ ತಾಣ ಎಂದು ಘೋಷಿಸಿದೆ.
ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸುವ ಕಾರ್ಯವನ್ನು ವಿಶ್ವ ಸಂಸ್ಥೆ ೧೯೮೨ರಿಂದ ಮಾಡುತ್ತಾ ಬಂದಿದೆ. ಈ ಮೂಲಕ ಅದು ಅಳಿವಿನಂಚಿನಲ್ಲಿರುವ ಅಪರೂಪದ ತಾಣಗಳನ್ನು ಸಂರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ. ಇದೊಂದು ಬಹಳ ಉತ್ತಮ ಕಾರ್ಯ. ಏಕೆಂದರೆ ನಮ್ಮ ದೇಶದಲ್ಲಿರುವ ಹಲವಾರು ಪಾರಂಪರಿಕ ತಾಣಗಳು ವಿನಾಶದ ಅಂಚಿನಲ್ಲಿವೆ. ನಾವು ಇವುಗಳನ್ನು ಹೀಗೆಯೇ ಬಿಟ್ಟುಬಿಟ್ಟರೆ ನಮ್ಮ ಮುಂದಿನ ಜನಾಂಗಕ್ಕೆ ಕೇವಲ ಇವುಗಳ ಫೋಟೋಗಳು ಮಾತ್ರ ನೋಡಲು ಉಳಿದೀತು.
ಈ ವರ್ಷ ೨೦೨೨ರಲ್ಲಿ ವಿಶ್ವ ಸಂಸ್ಥೆ ‘ಪರಂಪರೆ ಮತ್ತು ಹವಾಮಾನ' ಎಂಬ ಧ್ಯೇಯ ವಾಕ್ಯದೊಡನೆ ‘ವಿಶ್ವ ಪಾರಂಪರಿಕ ತಾಣ ದಿನ’ವನ್ನು ಆಚರಣೆ ಮಾಡುತ್ತಿದೆ. ಹವಾಮಾನ ವೈಪರಿತ್ಯ ನಾವಿಂದು ಅನುಭವಿಸುತ್ತಿರುವ ಬಹಳ ದೊಡ್ದ ಸಮಸ್ಯೆ. ನಮ್ಮದೇ ಆದ ಕುಕೃತ್ಯಗಳಿಂದ ಪರಿಸರವು ಪ್ರತೀ ವರ್ಷ ಹದಗೆಡುತ್ತಾ ಹೋಗುತ್ತಿದೆ. ಈ ದೃಷ್ಟಿಯಿಂದ ಹವಾಮಾನ ಬದಲಾವಣೆ, ವೈಪರಿತ್ಯಗಳಿಂದ ವಿಶ್ವ ಪಾರಂಪರಿಕ ತಾಣಗಳಿಗಾಗುವ ಹಾನಿಯನ್ನು ವಿಶ್ವ ಸಂಸ್ಥೆ ಪರಿಣಿತರ ತಂಡದೊಂದಿಗೆ ಪರಿಶೀಲಿಸಲಿದೆ. ಹಾನಿಯಾಗುವ ಸಾಧ್ಯತೆ ಇದ್ದರೆ ಅದನ್ನು ತಡೆಗಟ್ಟುವ ಹಾಗೂ ಸರಿ ಪಡಿಸುವ ಕಾರ್ಯವನ್ನು ವಿಶ್ವಸಂಸ್ಥೆ ಮಾಡಲಿದೆ. ಈ ಪಾರಂಪರಿಕ ತಾಣಗಳನ್ನು ಎರಡು ವಿಭಾಗದಲ್ಲಿ ವಿಶ್ವ ಸಂಸ್ಥೆ ವಿಂಗಡಿಸಿದೆ. ಒಂದು ಸಾಂಸ್ಕೃತಿಕ ಮತ್ತೊಂದು ನೈಸರ್ಗಿಕ.
ಭಾರತ ದೇಶದ ೪೦ ವಿವಿಧ ತಾಣಗಳನ್ನು ಈ ಪಾರಂಪರಿಕ ತಾಣಗಳಿಗೆ ಸೇರಿಸಲಾಗಿದೆ. ಇದರಲ್ಲಿ ೩೨ ಸಾಂಸ್ಕೃತಿಕ ತಾಣಗಳು, ೭ ನೈಸರ್ಗಿಕ ತಾಣಗಳು ಮತ್ತು ಒಂದು ತಾಣವನ್ನು ನೈಸರ್ಗಿಕ ಹಾಗೂ ಸಾಂಸ್ಕೃತಿಕ ತಾಣವಾಗಿ ಗುರುತಿಸಲಾಗಿದೆ. ಆಗ್ರಾದ ಕೋಟೆ ಮತ್ತು ತಾಜ್ ಮಹಲ್, ಮಹಾರಾಷ್ಟ್ರದ ಅಜಂತಾ-ಎಲ್ಲೋರಾ ಗುಹೆಗಳು ಇವುಗಳು ಮೊದಲಿಗೆ ಘೋಷಣೆಯಾದ (೧೯೮೩) ಭಾರತದ ಪಾರಂಪರಿಕ ತಾಣಗಳು. ನೈಸರ್ಗಿಕ ಪಟ್ಟಿಯಲ್ಲಿ ನಮ್ಮ ದಕ್ಷಿಣ ಭಾರತದ ಹೆಮ್ಮೆಯ ಪಶ್ಚಿಮ ಘಟ್ಟಗಳೂ ಸೇರಿವೆ. ಈ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತಕ್ಕೆ ೬ನೇ ಸ್ಥಾನ ದೊರೆತಿದೆ. ಇಟಲಿ ದೇಶ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿ ೫೬ ತಾಣಗಳನ್ನು ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.
ಈ ಅಪರೂಪದ ವಾಸ್ತು ಶಿಲ್ಪ ಕಲಾ ವೈಭವವನ್ನು ಹೊಂದಿರುವ ತಾಣಗಳನ್ನು ನಾವು ಸಂರಕ್ಷಿಸಬೇಕು. ಇದರಿಂದಾಗಿ ನಮ್ಮ ಮುಂದಿನ ಪೀಳಿಗೆಗೂ ಇತಿಹಾಸದ ಸರಿಯಾದ ಕಲ್ಪನೆ ಸಿಗುತ್ತದೆ. ವಿಶ್ವ ಪಾರಂಪರಿಕ ತಾಣ ದಿನದಂದು ಈ ನಿರ್ಧಾರವನ್ನು ನಾವೆಲ್ಲರೂ ಕೈಗೊಳ್ಳಬೇಕಾಗಿದೆ.
ಹಂಪಿಯ ಕಲ್ಲಿನ ರಥ ಚಿತ್ರ ಕೃಪೆ: ಅಂತರ್ಜಾಲ ತಾಣ