ಪಾಲಿಥೀನ್ ಮಲ್ಚಿಂಗ್ - ಅಧಿಕ ಇಳುವರಿಗೆ ಸಹಾಯಕ

ಕಳೆ ನಿಯಂತ್ರಣ, ತೇವಾಂಶ ಸಂರಕ್ಷಣೆ ಮಣ್ಣು ಶೀತವಾಗುವುದರಿಂದ ತಡೆಯಲು ಮಣ್ಣಿಗೆ ಪಾಲಿಥ್ಹೀನ್ ಹೊದಿಕೆ ಹಾಕುವುದು ಉತ್ತಮ ಬೆಳೆ ವಿಧಾನ. ಮಳೆಗಾಲದಲ್ಲಿ ತರಕಾರಿ ಬೆಳೆಸುವ ರೈತರು, ಬೇಸಿಗೆಯಲ್ಲಿ ತರಕಾರಿ ಬೆಳೆಸುವವರು, ತೋಟಗಾರಿಕಾ ಬೆಳೆಗಳಾದ ಹಣ್ಣು ಹಂಪಲು ಬೆಳೆಸುವವರು ಎದುರಿಸುವ ಅತೀ ದೊಡ್ಡ ಸಮಸ್ಯೆಗಳೆಂದರೆ ಕಳೆ ಬೆಳೆಯುವುದು. ಕಳೆ ನಿಯಂತ್ರಣವನ್ನು ಮಾನವ ಶ್ರಮದಲ್ಲಿ ಮಾಡುವುದದರೆ ಆ ಬೆಳೆ ಖಂಡಿತವಾಗಿಯೂ ಲಾಭದಾಯಕವಾಗುವುದಿಲ್ಲ. ಕಳೆಗಳನ್ನು ಇತರ ವಿಧಾನಗಳಿಂದ ನಿಯಂತ್ರಣ ಮಾಡುವುದು ಸಹ ದುಬಾರಿ ಮತ್ತು ಅಚಾತುರ್ಯಕ್ಕೆ ಆಸ್ಪದ.
ಮಳೆ ಅಧಿಕ ಪ್ರಮಾಣದಲ್ಲಿ ಬರುವ ಕಡೆಗಳಲ್ಲಿ ಕಳೆಗಳ ಬೆಳವಾಣಿಗೆ ಜಾಸ್ತಿ. ಯಾವುದೇ ತರಕಾರಿ ಕೃಷಿ ಮಾಡಿದರೂ ಕಳೆ ನಿಯಂತ್ರಣ ಕಷ್ಟ. ಅಷ್ಟೇ ಅಲ್ಲದೆ ಮಳೆಯ ಭಾರದ ನೀರಿನ ಹನಿಗಳಿಂದ ಮಣ್ಣು ಕೊಚ್ಚಣೆಗೊಳಗಾಗುತ್ತದೆ. ಇದನ್ನು ತಡೆಯುವುದಕ್ಕೆ ಮಳೆಗಾಲದ ಎತ್ತರಿಸಿದ ಸಾಲುಗಳಿಗೆ ಪಾಲಿಥೀನ್ ಹೊದಿಕೆಯನ್ನು ಹಾಕುವುದು ಉತ್ತಮ. ಇದು ಕಳೆ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಮಳೆ ನೀರಿನ ದೊಡ್ಡ ಹನಿಗಳು ನೇರವಾಗಿ ಮಣ್ಣಿಗೆ ಬೀಳುವಾಗ ಮಣ್ಣು ಕೊಚ್ಚಣೆಯಾಗಿ ಫಲವತ್ತತೆ ತೊಳೆದು ಹೋಗುತ್ತದೆ. ಹೆಚ್ಚಿನೆಲ್ಲಾ ರೋಗ ಕಾರಕ ಜೀವಿಗಳು, ಮಣ್ಣಿನ ಮೂಲಕ ಸಸ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ. ಮಳೆ ಹನಿಗಳು ಮಣ್ಣಿನ ಮೇಲೆ ಬಿದ್ದಾಗ ಮಣ್ಣು ಸಿಡಿದು ಎಲೆಗಳ - ಕಾಂಡದ ಮೇಲೆ ಅಂಟಿಕೊಂಡು ರೋಗವನ್ನುಂಟುಮಾಡುತ್ತದೆ. ಅಧಿಕ ಶೀತ ವಾತಾವರಣ ಇರುವಾಗ ರೋಗಕಾರಕಗಳ ಚಟುವಟಿಕೆ ಹೆಚ್ಚು.
ಇಂತಹ ಕಡೆ ಪಾಲಿಥೀನ್ ಹೊದಿಕೆ ಹಾಕುವುದರಿಂದ ಮಣ್ಣು ಬೆಚ್ಚಗೆ ಇರುವಂತೆ ಮಾಡುತ್ತದೆ. ಬೇರು ಬೆಳವಣಿಗೆಗೆ ಇದು ಅನುಕೂಲವಾಗುತ್ತದೆ. ಯಾವುದೇ ರೀತಿಯಲ್ಲಿ ಮಣ್ಣು ಕೊಚ್ಚಣೆ ಉಂಟಾಗುವುದಿಲ್ಲ. ಕಳೆ ಬೆಳೆವಣಿಗೆ ಇಲ್ಲದಾಗುತ್ತದೆ.
ಮಳೆಗಾಲ ಪ್ರಾರಂಭದಲ್ಲಿ ಸಾಲು ಮಾಡುವಾಗ ಸಾಕಷ್ಟು ಕೊಟ್ಟಿಗೆ ಗೊಬ್ಬರಗಳನ್ನು ಪೂರೈಕೆ ಮಾಡಿ ಆಗಲೇ ಪಾಲಿಥೀನ್ ಶೀಟನ್ನು ಹಾಕಿ ಸಸಿ - ಇಲ್ಲವೇ ಬೀಜವನ್ನು ಬಿತ್ತನೆ ಮಾಡಬೇಕು. ಒಂದು ವೇಳೆ ಈಗಾಗಲೇ ಸಾಲು ಮಾಡಿ ಸಸಿ ಮಾಡಿದ್ದೇ ಆದರೆ ಅಂತವರು ಪಾಲಿಥೀನ್ ಶೀಟುಗಳನ್ನು ಸಾಲಿನ ಮೇಲೆ ಸಸಿ ಇರುವ ಕಡೆ ತುಂಡು ಮಾಡಿ ಹಾಕಬಹುದು.
ಪಾಲಿಥೀನ್ ಶೀಟು ಹೊದಿಸಿ ಬೆಳೆ ಬೆಳೆಸುವುದರಿಂದ ಕೊಟ್ಟ ಗೊಬ್ಬರದ ಲಭ್ಯತೆ ಹೆಚ್ಚಾಗುತ್ತದೆ. ಸಸ್ಯ ಬೆಳವಣಿಗೆ ಉತ್ತಮವಾಗಿ ಇಳುವರಿ ಹೆಚ್ಚಳವಾಗುತ್ತದೆ. ತರಕಾರಿ ಬೆಳೆಗಾರರು ಹೆಚ್ಚಾಗಿ ಕಳೆ ನಿಯಂತ್ರಣಕ್ಕೆ ಮತ್ತು ಸಸ್ಯಗಳಿಗೆ ಬೆಳವಣಿಗೆಗೆ ಅನುಕೂಲವಾಗಲೆಂದು ಮೊದಲು ಎತ್ತರಿಸಿದ ಸಾಲು ಮಾಡಿ ಸುಮಾರು ೧ ತಿಂಗಳಲ್ಲಿ ಮತ್ತೊಮ್ಮೆ ಸಾಲಿಗೆ ಮಣ್ಣು ಏರಿಸುತ್ತಾರೆ. ಈ ಖರ್ಚು ದುಬಾರಿಯದ್ದಾಗಿದ್ದು, ಪಾಲಿಥೀನ್ ಮಲ್ಚಿಂಗ್ ಮಾಡುವಾಗ ಎರಡನೇ ಬಾರಿ ಮಣ್ಣು ಏರಿಸುವ ಖರ್ಚು ಉಳಿತಾಯವಾಗುತ್ತದೆ. ಮೊದಲು ಮಣ್ಣು ಏರಿಸುವಾಗಲೇ ಸ್ವಲ್ಪ ಹೆಚ್ಚು ಮಣ್ಣು ಏರಿಸಿಕೊಂಡರೆ ಸಾಕಾಗುತ್ತದೆ.
ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ತೇವಾಂಶ ಸಂರಕ್ಷಣೆ- ಕಳೆ ನಿಯಂತ್ರಣದ ಉದ್ದೇಶಕ್ಕಾಗಿ ಪಾಲಿಥೀನ್ ಶೀಟುಗಳನ್ನು ಹೊದಿಸಬೇಕು. ಪಾಲಿಥೀನ್ ಶೀಟುಗಳನ್ನು ಹೊದಿಸುವುದರಿಂದ ಮಣ್ಣಿನ ತೇವಾಂಶದ ಆವೀಕರಣ ಶೇ.೬೦ ಕ್ಕೂ ಹೆಚ್ಚು ಕಡಿಮೆಯಾಗುತ್ತದೆ. ಗಾಳಿಯಿಂಗಾಗುವ ಮಣ್ಣುಸವಕಳಿ ಕಡಿಮೆಯಾಗುತ್ತದೆ.
ಪಾಲಿಥೀನ್ ಶೀಟುಗಳನ್ನು ಹೊದಿಸಲು ಅಂಥಃ ಖರ್ಚು ಬರುವುದಿಲ್ಲ. ಒಂದು ಚದರ ಮೀಟರ್ ವಿಸ್ತೀರ್ಣಕ್ಕೆ ಸುಮಾರು ೫ ರೂ. ಖರ್ಚು ತಗಲುತ್ತದೆ. ಅದಕ್ಕಿಂತ ಹೆಚ್ಚಿನ ಲಾಭ ಇಳುವರಿ ಹೆಚ್ಚಳದ ಮೂಲಕ- ಕಳೆ ನಿಯಂತ್ರಣ ಕೆಲಸ ಇಲ್ಲದೆ, ಮತ್ತು ಅಂತರ ಬೇಸಾಯದ ಖರ್ಚು ಇಲ್ಲದೆ ಮರಳಿ ಬರುತ್ತದೆ. ಚಳಿಗಾಲದ ಬೆಳೆಗೆ ಅಗಸ್ಟ್ -ಸಪ್ಟೆಂಬರ್ ತಿಂಗಳಲ್ಲಿ ಬೆಳೆ ಪ್ರಾರಂಭಿಸುವುದಾದಲ್ಲಿ ಪಾಲಿಥೀ ಹೊದಿಕೆ ಹಾಕಿ ಬೆಳೆ ಬೆಳೆಸಿದರೆ ನಂತರ ಬೆಳೆ ಮಾಗುವ ತನಕವೂ ನೀರಾವರಿ ಮಾಡಬೇಕಾಗಿಲ್ಲ. ಮಣ್ಣಿನಲ್ಲಿದ್ದ ತೇವಾಂಶವನ್ನು ಆವೀಕರಣ ಆಗದಂತೆ ತಡೆದು ಬೆಳೆಗಳಿಗೆ ಬೇಕಾದಷ್ಟು ಲಭ್ಯವಾಗುವಂತೆ ಮಾಡುತ್ತದೆ. ಬೇಸಿಗೆಯಲ್ಲಿ ಪಾಲಿಥೀನ್ ಶೀಟುಗಳನ್ನು ಹೊದಿಸುವಾಗ ಹನಿ ನೀರಾವರಿಯ ಕೊಳವೆಗಳನ್ನು ಸಾಲಿನ ಮೇಲೆ ಹಾಕಿ ಅದರ ಮೇಲೆ ಪಾಲಿಥೀನ್ ಶೀಟುಗಳನ್ನು ಹೊದಿಸಬೇಕು.
ಯಾವ ಯಾವ ಬೆಳೆಗೆ ಪಾಲಿಥೀನ್ ಮಲ್ಚಿಂಗ್ ಮಾಡಬಹುದು?
ಎಲ್ಲಾ ನಮೂನೆಯ ತರಕಾರಿ ಬೆಳೆಗಳಿಗೂ ಪಾಲಿಥೀನ್ ಮಲ್ಚಿಂಗ್ ಹೊಂದಾಣಿಕೆಯಾಗುತ್ತದೆ. ಬದನೆ, ಬೆಂಡೆ, ಹೀರೆ, ಮೆಣಸು ಕಲ್ಲಂಗಡಿ, ಕರಬೂಜ, ಬೀನ್ಸ್, ಅಲಸಂಡೆ, ಸಿಹಿ ಗೆಣಸು ಎಲ್ಲದಕ್ಕೂ ಮಲ್ಚಿಂಗ್ ಮಾಡಬಹುದು.
ಮಾಹಿತಿ: ರಾಧಾಕೃಷ್ಣ ಹೊಳ್ಳ