ಪಾಲಿಹೌಸಿನಲ್ಲಿ ರಾಜಕುಮಾರರ ತಪಸ್ಸಿಗೊಲಿದ ತರಕಾರಿ ಕೃಷಿ
ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿಮೀ ಸಾಗಿದರೆ ಸಿಗುತ್ತದೆ ಶ್ರೀನಗರ ಬಡಾವಣೆ.
ಅಲ್ಲಿ ವಿ. ರಾಜಕುಮಾರ್ ಅವರ ಮನೆಯಿರುವ ಕಂಪೌಂಡಿಗೆ ಇತ್ತೀಚೆಗೆ ಕಾಲಿಟ್ಟಾಗ ಕಾಣಿಸಿತು: ಒಂದು ಸೆಂಟ್ಸ್ ವಿಸ್ತೀರ್ಣದ ಪಾಲಿಹೌಸ್. ಅದರೊಳಗೆ ಹೊಕ್ಕರೆ ಕೃಷಿಲೋಕವೊಂದರ ದರ್ಶನ.
ಕಳೆದ ಆರು ವರುಷಗಳಿಂದ ಅಲ್ಲಿ ಐದಾರು ಕುಟುಂಬಗಳಿಗೆ ಸಾಕಾಗುವಷ್ಟು ತರಕಾರಿ ಬೆಳೆಯುತ್ತಿದ್ದಾರೆ ರಾಜಕುಮಾರ್. ಸುಮಾರು ಇಪ್ಪತ್ತು ಅಡಿ ಅಗಲದ ಪಾಲಿಹೌಸಿನ ಎರಡೂ ಬದಿಗಳಲ್ಲಿ ಪಾಲಿಥೀನ್ ಷೀಟಿನ ಚಾವಣಿಯಿಂದ ನೆಲದ ವರೆಗೆ ನೇತಾಡುತ್ತಿರುವ ಪ್ಲಾಸ್ಟಿಕ್ ಬಲೆಗೆ ಹಬ್ಬಿಕೊಂಡಿವೆ ಅಲಸಂಡೆ ಬಳ್ಳಿಗಳು. ಪಾಲಿಹೌಸಿನ ಮಧ್ಯದಲ್ಲಿ ಐದಡಿ ಅಂತರದಲ್ಲಿ ತಲಾ ಐದು ಕುಂಡಗಳ ಎರಡು ಸಾಲುಗಳು. ಆ ಕುಂಡಗಳಲ್ಲಿ ಆಳೆತ್ತರ ಬೆಳೆದಿರುವ ಬೆಂಡೆಕಾಯಿ ಮತ್ತು ಟೊಮೆಟೊ ಗಿಡಗಳು. ಕುಂಡಗಳ ನಡುವೆ ಪುಟ್ಟ ಹರಿವೆ ಸಸಿಗಳು. ಕುಂಡಗಳ ಪಕ್ಕದಲ್ಲಿ ಪ್ಲಾಸ್ಟಿಕ್ ಬಲೆಯ ಚಪ್ಪರಕ್ಕೆ ಹಬ್ಬಿರುವ ಕುಂಬಳಕಾಯಿ ಬಳ್ಳಿಗಳು.
ಅಲ್ಲಿ ಗಮನ ಸೆಳೆದದ್ದು ಮೂರಡಿ ವ್ಯಾಸದ ತೆಂಗಿನ ನಾರಿನ ಮೂರು ಸಿಲಿಂಡರುಗಳು. ಡ್ರಿಪ್ ಪೈಪಿಗೆ ತೆಂಗಿನ ನಾರು ಸುತ್ತಿ, ಆ ಪೈಪನ್ನು ಸಿಲಿಂಡರಿನಂತೆ ಸುತ್ತಿ ಅವನ್ನು ರಚಿಸಿದ್ದಾರೆ ರಾಜಕುಮಾರ್. “ಚೀನಿಕಾಯಿ ಬಳ್ಳಿ ನೂರಡಿ ಉದ್ದಕ್ಕೆ ಬೆಳೀತದೆ. ಅದನ್ನು ಹಾಗೇ ಬಿಟ್ಟರೆ, ಯಾವ್ಯಾವುದೋ ದಿಕ್ಕಿನಲ್ಲಿ ಬೆಳೀತದೆ. ಅದರ ಬದಲಾಗಿ ಈ ತೆಂಗಿನ ನಾರಿನ ಸಿಲಿಂಡರಿಗೆ ದಿನದಿನವೂ ಅದರ ತುದಿಯನ್ನು ಸುತ್ತಿದರೆ, ನೂರಡಿ ಉದ್ದದ ಬಳ್ಳಿ ಆರಡಿ ಎತ್ತರದ ಸಿಲಿಂಡರ್ ಆಕಾರದಲ್ಲಿ ಬೆಳೀತದೆ” ಎಂದು ವಿವರಿಸುತ್ತಾರೆ ರಾಜಕುಮಾರ್.
ಅನಂತರ, ಪಕ್ಕದಲ್ಲೇ ಇರುವ ತಮ್ಮ ಇನ್ನೊಂದು ಮನೆಯ ಟೆರೇಸಿಗೆ ಸಾವಯವ ಕೃಷಿಕ ಗ್ರಾಹಕ ಬಳಗದ ನಮ್ಮನ್ನು ಕರೆದೊಯ್ದರು ರಾಜಕುಮಾರ್. ಕಬ್ಬಿಣದ ಏಣಿ ಹತ್ತಿ, ಅಲ್ಲಿನ ಎರಡನೇ ಪಾಲಿಹೌಸ್ ಪ್ರವೇಶಿಸಿದಾಗ ಅಲ್ಲಿ ೩೫ ಅಡಿ ಉದ್ದ, ೩೦ ಅಡಿ ಅಗಲದ ಜಾಗದಲ್ಲಿ ಇನ್ನೊಂದು ತರಕಾರಿ ಕೃಷಿಲೋಕ ದರ್ಶನ.
ಅಲ್ಲಿ ಟೆರೇಸಿನ ನಾಲ್ಕೂ ಬದಿಗಳಲ್ಲಿ “ವೀಡ್ ಮ್ಯಾಟಿ”ನಿಂದ ರಚಿಸಿದ ಎರಡು ಹಂತಗಳ “ಗಿಡತೊಟ್ಟಿಗಳು”. ಅದಲ್ಲದೆ, ಟೆರೇಸಿನ ನಡುವಣ ಜಾಗದಲ್ಲಿ ತಲಾ ೨೫ ಅಡಿ ಉದ್ದದ ಆರು ಗಿಡತೊಟ್ಟಿ ಸಾಲುಗಳು. ಗಿಡತೊಟ್ಟಿಗಳ ಅಗಲ ಎರಡು ಅಡಿ, ಎತ್ತರ ಒಂದೂವರೆ ಅಡಿ. ಆ ತೊಟ್ಟಿಗಳಲ್ಲಿ ತುಂಬಿದ್ದಾರೆ ಕೊಕೊಪೀಟ್, ಮಣ್ಣು ಮತ್ತು ಸೆಗಣಿಯ ಮಿಶ್ರಣ (೧:೧:೧ ಪ್ರಮಾಣದಲ್ಲಿ). ಅವುಗಳಲ್ಲಿ ಬೆಳೆದಿದ್ದಾರೆ ಟೊಮೆಟೊ, ಹಸಿರು ಮೆಣಸು, ಹರಿವೆ ಗಿಡಗಳನ್ನು ಮತ್ತು ಸೌತೆ, ಮುಳ್ಳುಸೌತೆ, ಅಲಸಂಡೆ, ಹಾಗಲಕಾಯಿ, ಚೌಳಿಕಾಯಿ, ಚೀನಿಕಾಯಿ ಇತ್ಯಾದಿ ಬಳ್ಳಿಗಳನ್ನು. ಎಲ್ಲ ಗಿಡ ಬಳ್ಳಿಗಳಲ್ಲಿಯೂ ಫಸಲು ತೊನೆದಾಡುತ್ತಿತ್ತು.
“ನಿಮ್ಮ ಪಾಲಿಹೌಸ್ ಎಲ್ಲ ದಿಕ್ಕಿನಲ್ಲಿಯೂ ಮುಚ್ಚಿಕೊಂಡಿದೆ. ತರಕಾರಿ ಹೂಗಳ ಪರಾಗಸ್ಪರ್ಶ ಹೇಗೆ ಆಗುತ್ತಿದೆ?” ಎಂದು ಕೇಳಿದಾಗ ರಾಜಕುಮಾರ್ ತೋರಿಸಿದ್ದು ಮುಜಂಟಿ (ಕೊಂಡಿ ಇಲ್ಲದ) ಜೇನ್ನೊಣಗಳ ಕುಟುಂಬಗಳನ್ನು. ಬಿದಿರಿನ ಮತ್ತು ಮರದ ಜೇನುಪೆಟ್ಟಿಗೆಗಳಲ್ಲಿ ಸಾಕಿರುವ ಪುಟ್ಟ ಜೇನ್ನೊಣಗಳು ಅಲ್ಲಿ ಹಾರಾಡುತ್ತಿದ್ದವು.
ಪಾಲಿಹೌಸಿನಲ್ಲಿ ತರಕಾರಿ ಬೆಳೆಯುವ ತಮ್ಮ ಅನುಭವವನ್ನೆಲ್ಲ ಭಟ್ಟಿಯಿಳಿಸಿ ಗಿಡತೊಟ್ಟಿಗಳಿಗೆ ನೀರುಣಿಸುವ ವ್ಯವಸ್ಥೆ ಮಾಡಿದ್ದಾರೆ ರಾಜಕುಮಾರ್. ಅದು ಹೀಗಿದೆ: ತೊಟ್ಟಿಗಳು ನೆಲ/ ತಳ ಮಟ್ಟದಿಂದ ಅರ್ಧ ಅಡಿ ಎತ್ತರದಲ್ಲಿ ಎರಡು ಸಮಾಂತರ ಕಬ್ಬಿಣದ ಪೈಪುಗಳ ಸ್ಟ್ಯಾಂಡಿನ ಮೇಲೆ ನಿಂತಿವೆ. ಆ ಸಮಾಂತರ ಪೈಪುಗಳ ನಡುವೆ ಹಾದು ಹೋಗಿದೆ ಮೂರೂವರೆ ಇಂಚು ವ್ಯಾಸದ ಪಿವಿಸಿ ಪೈಪ್. ಆ ಪೈಪಿನಲ್ಲಿ ಎರಡು ಅಡಿಗೊಂಡರಂತೆ ತೂತುಗಳು. ಆ ತೂತುಗಳಿಗೆ ತೂರಿಸಿದ ಒಂದಡಿ ಉದ್ದದ ಅರ್ಧ ಇಂಚು ವ್ಯಾಸದ ಸ್ಪಂಜಿನ ಬತ್ತಿಗಳು. ಆ ಬತ್ತಿಗಳಿಂದ ನೀರು ನಿಧಾನವಾಗಿ ಮೇಲೇರಿ, “ಗಿಡತೊಟ್ಟಿ”ಗಳ ಮಿಶ್ರಣವನ್ನು ಯಾವಾಗಲೂ ತೇವಯುಕ್ತವಾಗಿ ಇರಿಸುತ್ತದೆ. “ಗಿಡತೊಟ್ಟಿಗಳ ಮಿಶ್ರಣದಲ್ಲಿ ನಿಮ್ಮ ಬೆರಳು ತೂರಿಸಿ. ಪುಸಕ್ಕನೆ ನಿಮ್ಮ ಬೆರಳು ತಳದ ವರೆಗೆ ಹೋಗುತ್ತದೆ. ಯಾಕೆಂದರೆ, ಆ ಮಿಶ್ರಣ ಅಷ್ಟು ಮೃದು” ಎಂದು ವಿವರಿಸಿದರು ರಾಜಕುಮಾರ್.
“ನಿಮ್ಮ ಪಾಲಿಹೌಸಿನಲ್ಲಿ ಪೀಡೆಕೀಟಗಳ ನಿಯಂತ್ರಣಕ್ಕೆ ಏನು ಮಾಡುತ್ತೀರಿ?” ಎಂಬ ಪ್ರಶ್ನೆಗೆ ರಾಜಕುಮಾರ್ ಅವರ ಉತ್ತರ, “ಅದು ಬಹಳ ಸುಲಭ. ತೆಂಗಿನಕಾಯಿ ನೀರನ್ನು ಒಂದು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿಡಿ. ಐದಾರು ದಿನಗಳಲ್ಲಿ ಅದು ಬುರುಗು ಬಂದು, ಘಾಟು ವಾಸನೆ ಬರುತ್ತದೆ. ಅದನ್ನು ಒಂದು ಟೀ-ಚಮಚದಷ್ಟು ಮತ್ತು ಗೋಮೂತ್ರ ಒಂದು ಟೀ-ಚಮಚದಷ್ಟು ಒಂದು ಲೀಟರ್ ನೀರಿಗೆ ಹಾಕಿ. ಈ ಮಿಶ್ರಣವನ್ನು ಗಿಡಬಳ್ಳಿಗಳಿಗೆ ಸಿಂಪಡಿಸಿ. ಯಾವುದೇ ಪೀಡೆಕೀಟದ ಉಪದ್ರ ಇರೋದಿಲ್ಲ.”
ತರಕಾರಿ ಬೆಳೆಸಲು ಜಮೀನಿಲ್ಲ, ನೀರಿಲ್ಲ, ಪುರುಸೊತ್ತಿಲ್ಲ ಎಂಬವರಿಗೆಲ್ಲ ರಾಜಕುಮಾರ್ ಅವರ ಕಳೆದ ಆರು ವರುಷಗಳ ತರಕಾರಿ ಕೃಷಿ ಉತ್ತರವಾಗಿದೆ. ಅವರ ಎರಡು ಪಾಲಿಹೌಸುಗಳನ್ನು ಕಣ್ಣಾರೆ ಕಂಡ ನಂತರ, ಒಂದು ಮನೆಯ ಟೆರೇಸಿನಲ್ಲಿ ಐದಾರು ಕುಟುಂಬಗಳಿಗೆ ಇಡೀ ವರುಷಕ್ಕೆ ಬೇಕಾದಷ್ಟು ತರಕಾರಿ ಬೆಳೆಯಬಹುದು ಎಂಬುದಕ್ಕೆ ಬೇರಾವುದೇ ಪುರಾವೆ ಅಗತ್ಯವಿಲ್ಲ.
ಕೊನೆಗೊಂದು ಮಾತು: ರಾಜಕುಮಾರ್ ತಾವು ಬೆಳೆಸಿದ ತರಕಾರಿಗಳನ್ನೂ ಯಾವತ್ತೂ ಮಾರಾಟ ಮಾಡಿಲ್ಲ. ಅಕ್ಕಪಕ್ಕದವರಿಗೆ, ಆತ್ಮೀಯರಿಗೆ ಹಂಚಿದ್ದಾರೆ. “ತರಕಾರಿ ಕೃಷಿ ನನ್ನ ಹವ್ಯಾಸ” ಎಂಬ ಅವರ ವಿನಯದ ಮಾತನ್ನು ಮೀರಿದ ಸತ್ಯ ಏನೆಂದರೆ, ಅದು ಅವರ ತಪಸ್ಸು!