ಪಾಲ್ಗಡಲ ಮುತ್ತುಗಳು

ಪಾಲ್ಗಡಲ ಮುತ್ತುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ : ಧನಂಜಯ ಕುಂಬ್ಳೆ
ಪ್ರಕಾಶಕರು
ನವೀನ ಪ್ರಕಾಶನ, ಆರಿಕ್ಕಾಡಿ, ಕುಂಬಳೆ- ೬೭೧೩೨೧, ಕಾಸರಗೋಡು
ಪುಸ್ತಕದ ಬೆಲೆ
ರೂ. ೧೦.೦೦, ಮುದ್ರಣ : ೧೯೯೪

೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ ಧನಂಜಯ ಕುಂಬ್ಳೆಯವರೂ ಈಗ ಉತ್ತಮ ಕವಿ, ಉಪನ್ಯಾಸಕರಾಗಿದ್ದಾರೆ. ‘ನವೀನ' ಎಂಬ ಅಂಚೆ ಕಾರ್ಡು ಮಾಸಿಕವನ್ನು ಬಹಳ ಹಿಂದೆ ಅವರು ಪ್ರಕಟಿಸುತ್ತಿದ್ದ ನೆನಪು ನನಗೆ ಈಗಲೂ ಇದೆ. 

ಸಂಪಾದಕರ ಮಾತು ಇದರಲ್ಲಿ ಧನಂಜಯ ಕುಂಬ್ಳೆಯವರು ಬರೆಯುತ್ತಾರೆ ‘ ಹನಿಗವನವು ಸದ್ಯದ ಸಂದರ್ಭದಲ್ಲಿ ಮೆಚ್ಚುಗೆಯನ್ನೂ, ಇನ್ನೊಂದೆಡೆಯಿಂದ ಉಪೇಕ್ಷೆಯನ್ನೂ ಗಳಿಸಿಕೊಂಡ ಪ್ರಕಾರ ನಮ್ಮ ಕನ್ನಡದ ಬಹುಪಾಲು ಓದುಗರು ಎಂಥ ಅವಸರದಲ್ಲೂ ಹನಿಗವನಗಳ ಕಡೆ ಕಣ್ಣು ಹಾಯಿಸಿ, ರಸಸ್ವಾದಿಸಿ, ಖುಷಿ ಪಡುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದುದರಿಂದ ಹನಿಗವನ ಬರೆಯುವವರ ಸಂಖ್ಯೆ ಜಾಸ್ತಿಯಾಗಿದೆ. ಬರೆದುದೆಲ್ಲವೂ ಕವನಗಳಾಗಿವೆಯೇ ಎಂಬುದು ಈಗಿನ ಪ್ರಶ್ನೆ. ಇಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯ ಹನಿಗವನಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಹೀಗೆ ಮಾಡುವಾಗ ಇಡೀ ಕರ್ನಾಟಕವನ್ನು ಗಮನಿಸಲಾಗಿಲ್ಲ ಎಂಬ ಮಿತಿ ಇದ್ದೇ ಇದೆ.' 

ಈ ಪುಸ್ತಕವನ್ನು ಶ್ರೀಕೃಷ್ಣ ಚೆನ್ನಂಗೋಡು, ವಿ.ಗ.ನಾಯಕ, ಎಸ್.ಬಿ.ದಂಬೆ ಮೂಲೆಯವರು ಪರಾಮರ್ಶಿಸಿ ಉತ್ತಮ ಕವನಗಳನ್ನು ಆಯ್ಕೆ ಮಾಡಲು ಸಹಕರಿಸಿದ್ದಾರೆ. ವಿ.ಗ.ನಾಯಕ ಅವರು ತಮ್ಮ ಮುನ್ನುಡಿಯಾದ ‘ಮುತ್ತುಗಳ ಸುತ್ತಮುತ್ತ' ಇದರಲ್ಲಿ ಹನಿಕವನಗಳ ಸಂಪಾದಕರಾದ ಧನಂಜಯ ಕುಂಬ್ಳೆ ಬಗ್ಗೆ ಹಾಗೂ ಈ ಪುಸ್ತಕದಲ್ಲಿರುವ ಕವನಗಳ ಬಗ್ಗೆ ಉತ್ತಮ ವಿಮರ್ಶೆ ಬರೆದಿದ್ದಾರೆ. ಅವರು ಒಂದೆಡೆ ಬರೆಯುತ್ತಾರೆ ‘ ಪಾಲ್ಗೊಡಲ ಮುತ್ತುಗಳು ಎಷ್ಟೊಂದು ಧ್ವನಿಪೂರ್ಣವಾಗಿದೆ, ಕಾವ್ಯಮಯವಾಗಿದೆ. ಧನಂಜಯ ಸ್ವತಃ ಕವಿ. ಆದುದರಿಂದಲೇ ಅವರು ಕಾವ್ಯಕ್ಷೇತ್ರ ಪಾಲ್ಗೊಡಲು ಎಂದು ಕಲ್ಪಿಸಿ, ಹನಿಗವನಗಳನ್ನು ಮುತ್ತುಗಳು ಎಂದು ಪರಿಗಣಿಸಿದ್ದಾರೆ. ಮುತ್ತುಗಳಿಗೆಲ್ಲಿ ಸಾವು? ಎಲ್ಲಿ ಕೇಡು? ಮುತ್ತು ಚಿಕ್ಕ, ಚೊಕ್ಕ, ಹೊಳೆಯುವುದು ಅದರ ಗುಣ. ‘

ಎದೆ ಎದೆಗೂ

ವ್ಯತ್ಯಯ

ಹಾಳಾಗಲಿ

ಎದೆ ಎದೆ

ಗೂಡಲಿ 

ಹಾಲಾಗಲಿ

ಎಂದು ವಿ.ಗ.ನಾಯಕ ರವರು ಹನಿಗವನಗಳಿಗೆ ಮುನ್ನುಡಿ ಹಾಕಿದ್ದಾರೆ. ಖ್ಯಾತ ಕವಿಗಳಾದ ಅಮೃತ ಸೋಮೇಶ್ವರ, ಶ್ರೀಕೃಷ್ಣ ಚೆನ್ನಂಗೋಡ್, ಎಚ್. ದುಂಡಿರಾಜ್, ವಿಷ್ಣು ನಾಯ್ಕ, ಮಾಧವಿ ಭಂಡಾರಿ, ಶಾಂತಾರಾಮ ಬಾಳೆಗುಳಿ, ಗಣಪತಿ ದಿವಾಣ, ಸುಜಿ ಕುರ್ಯ ಹೀಗೆ ಹತ್ತು ಹಲವಾರು ಮಂದಿಯ ಕನಿಗವನಗಳು ಮನಸ್ಸಿಗೆ ಮುದ ನೀಡುತ್ತವೆ. ಪುಸ್ತಕದ ಬೆನ್ನುಡಿಯಲ್ಲಿರುವ ಶ್ರೀಕೃಷ್ಣ ಚೆನ್ನಂಗೋಡು ಅವರ ಎರಡು ಹನಿಗವನಗಳು ಮನಸೆಳೆಯುತ್ತವೆ.

ಚಿಕ್ಕ ಕವಿತೆಗಳು

ಹೊರಗಿದ್ದ ಹಿರಿಯರು

ಒಳಬರುವ ಮೊದಲೆ

ಕಣ್ಣು ಹೊಡೆದು ಮುತ್ತಿಕ್ಕಿ

ಬೇರ್ಪಡುವ ಹುಡುಗ ಹುಡುಗಿಯರು

ದೊಡ್ಡ ಕವಿತೆಗಳು

ಆರಾಮವಾಗಿ ಕೋಣೆಹೊಕ್ಕು

ಬಾಗಿಲು ಬಿಗಿದು

ಕಿಟಕಿಯ ತೆರೆಯೆಳೆದು

ಪಲ್ಲಂಗವೇರುವ ಗಂಡು ಹೆಣ್ಣುಗಳು

ಹೀಗೆ ಉತ್ತಮವಾಗಿರುವ ಹನಿಗಳನ್ನು ಹೆಕ್ಕಿ ಸಂಗ್ರಹಿಸಿದ್ದಾರೆ ಧನಂಜಯ ಕುಂಬ್ಳೆಯವರು. ೪೪ ಪುಟಗಳ ಈ ಪುಸ್ತಕವು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಆದರೆ ಓದಿದ ಬಳಿಕವೂ ಕನಿಗವನಗಳ ಕನವರಿಗೆ ಇದ್ದೇ ಇರುತ್ತದೆ.