ಪಾಲ್ ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಮತ್ತು ಚುನಾವಣೆಯ ನಂತರದ ದಿನಗಳು...!

ಪಾಲ್ ಲಿಂಚ್ ಅವರ 'ಪ್ರೊಫೆಟ್ ಸಾಂಗ್' ಮತ್ತು ಚುನಾವಣೆಯ ನಂತರದ ದಿನಗಳು...!

ನಾನು ರಾಜಕೀಯ ವಿಮರ್ಶಕನಲ್ಲ; ಅಲ್ಲದೇ, ಹಿಂದೆಂದೂ ರಾಜಕೀಯದ ಆಗು-ಹೋಗುಗಳ ಕುರಿತು, ಅಥವಾ ರಾಜಕೀಯ ಪಕ್ಷಗಳ ಸಮರ್ಥನೆಯಲ್ಲೂ-ವಿರೋಧದಲ್ಲೂ, ಅಥವಾ ರಾಜನೀತಿಜ್ಞ/ರಾಜಕಾರಣಿಯನ್ನು ಪರಿಚಯಿಸುವ ಲೇಖನವನ್ನು ಎಂದಿಗೂ ಬರೆಯಲಿಲ್ಲ. ಬರೆಯುವುದೂ ಇಲ್ಲ ಅಂತ ನನ್ನ ಧೃಢ ನಿರ್ಧಾರವೂ ಇದೆ. ಆದರೆ, ಕಳೆದ ನವೆಂಬರ್ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ನನ್ನ ಮಿತ್ರನೊಬ್ಬನು ನನಗೆ 'ಪಾಲ್ ಲಿಂಚ್' ಅವರ 'ಅಂತಾರಾಷ್ಟ್ರೀಯ ಮ್ಯಾನ್ ಬುಕರ್ ಪ್ರಶಸ್ತಿ' ವಿಜೇತ ಪುಸ್ತಕ 'Prophet Song' ಉಡುಗೊರೆಯಾಗಿ ನೀಡಿದರು. ಪುಸ್ತಕ ಪ್ರಾರಂಭಿಸುತ್ತಿದ್ದಂತೆ ಪ್ರತಿ ವಾಕ್ಯವೂ ನನಗೆ ದಿಙ್ಮೂಢಿಸಲು ಪ್ರಾರಂಭಿಸಿ, ಮಂತ್ರಮುಗ್ಧಗೊಳಿಸಲು ಯತ್ನಿಸಿತು. ಪುಸ್ತಕ ಓದಿ ಮುಗಿಸುತ್ತಿದ್ದಂತೆ ನನಗೊಂದು ಕಹಿ ವಿಚಾರ ಕಾಡಲು ಆರಂಭಿಸಿತು. ಅದುವೇ, ಕಾದಂಬರಿಯಲ್ಲಿ ಚರ್ಚಿಸಲ್ಪಟ್ಟ ಸರಣಿ ದುರ್ಘಟನೆಗಳು ಅತ್ಯಂತ ಅಸಾಧ್ಯವಾದ ದೇಶದಲ್ಲಿ ಸಂಭವಿಸಬಹುದಾದರೆ, ಅದು ಎಲ್ಲೆಡೆ ಸಂಭವಿಸಬಹುದೆಂಬ ಆತಂಕ.

'ಪ್ರಾಫೆಟ್ ಸಾಂಗ್' ನೀಳ್ಗತೆಯನ್ನು ಆಳ-ಅಗಲಕ್ಕೆ ವಿಮರ್ಶಿಸುವ ಅಗತ್ಯವಿಲ್ಲ; ಅದರ, ಸಂಕ್ಷಿಪ್ತ ಸಾರಾಂಶದಿಂದಲೇ ನಮ್ಮ ಭವಿತವ್ಯವನ್ನು ಅವಲೋಕಿಸಲು ಸಾಧ್ಯ ಎಂಬುವುದು ನನ್ನ ವ್ಯಕ್ತಿಗತ ಅಭಿಪ್ರಾಯವಾಗಿದೆ. ಐರ್ಲೆಂಡ್ ದೇಶದ ಹತ್ತಿರದ ಭವಿಷ್ಯದಲ್ಲಿ, ಬಲಪಂಥೀಯ ರಾಷ್ಟ್ರೀಯ ಮೈತ್ರಿ ಪಕ್ಷವು [National Alliance Party] ಬಲವಾಗಿ ಹಿಡಿತ ಸಾಧಿಸಿ, ಐರಿಶ್ ಸಂವಿಧಾನವನ್ನು ಅಮಾನತುಗೊಳಿಸಿದೆ. ಮೈತ್ರಿ ಕೂಟವು ಹೊಸ ರಹಸ್ಯ ಪೊಲೀಸ್ ಪಡೆಯಾದ 'ಸಿನಿಸ್ಟರ್ ಗಾರ್ಡ ನ್ಯಾಷನಲ್ ಸರ್ವಿಸ್ ಬ್ಯುರೋ'ವನ್ನು ತಮ್ಮ ನಿಗೂಢ ಕಾರ್ಯಗಳನ್ನು ನಿರ್ವಹಿಸಲು ಸ್ಥಾಪಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದರೊಂದಿಗೆ ನಾಗರಿಕ ಸ್ವಾತಂತ್ರ್ಯಗಳು ಹರಣವಾಗುತ್ತಿವೆ. ಹಾಡುಹಗಲೇ, ರಸ್ತೆಬದಿಗಳಲ್ಲಿ ಗುಂಪು-ಹತ್ಯೆಗಳು, ಮಹಿಳಾ ಶೋಷಣೆಗಳು, ಬೀದಿಗಳಲ್ಲಿ ಗುಂಡಾಗಳ ಕಾಟಗಳು ಇತ್ಯಾದಿಗಳಿಂದ ಬೇಸೆತ್ತ ನಿರಾಶ್ರಿತರು, ಪಲಾಯನ ಮಾಡುವುದರೊಂದಿಗೆ ಘರ್ಷಣೆಗಳು ಉಂಟಾಗುತ್ತಿದೆ. ನಿರಾಶ್ರಿತರ ಪಾಲಾಯನವು, ಸೂಟ್‌ಕೇಸಿನಲ್ಲಿ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ ವಿಮಾನ ನಿಲ್ದಾಣಕ್ಕೆ ಹೋಗುವಷ್ಟು ಸರಳವಲ್ಲ ಎಂದು ತಿಳಿದಿರಬೇಕಾದ ಕಹಿಸತ್ಯ!

'ಎಲಿಶ್ ಸ್ಟಾಕ್' ಎಂಬವಳು ಮೈಕ್ರೋಬಯಾಲಜಿಸ್ಟ್ ಆಗಿ ದುಡಿಯುತ್ತಿರುವ ನಾಲ್ಕು ಮಕ್ಕಳ ಮಹಾತಾಯಿ. ಇದ್ದಕ್ಕಿದ್ದಂತೆ ಅವಳು ಒಂದು ಸಂಜೆ ತನ್ನ ಬಾಗಿಲಿನ ಹೊಸ್ತಲಿನಲ್ಲಿ 'ಸಿನಿಸ್ಟರ್ ಗಾರ್ಡಾ ನ್ಯಾಷನಲ್ ಸರ್ವೀಸ್ ಬ್ಯೂರೋ'ಗಳ ಅಧಿಕಾರಿಗಳನ್ನು ಕಂಡು ಹೌಹಾರಿದಳು. ಆಕೆಯ ಪತಿ ಲಾರಿ ಸ್ಟ್ಯಾಕ್ - ಶಿಕ್ಷಕರು ಮತ್ತು ಟ್ರೇಡ್ ಯೂನಿಯನ್ ನಾಯಕರು - ನನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ. ವಿಚಾರಣೆಯ ನೆಪದಲ್ಲಿ ಹೊಸ ಆಡಳಿತದ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದೆಂಬ ಕುಂಟು ನೆಪದಡಿಯಲ್ಲಿ ಇನ್ನೇತರ ಯಾವುದೇ ಆರೋಪವಿಲ್ಲದೆ ಬಂಧಿಸಲ್ಪಟ್ಟನು.

ಸಮಾಜವು - ನೈತಿಕವಾಗಿಯೂ, ಪಾರಂಪರಿಕವಾಗಿಯೂ - ಕುಸಿಯಲು ಪ್ರಾರಂಭಿಸಿದಾಗ, ಎಲಿಶ್ ತನ್ನ ಕುಟುಂಬವನ್ನು ಸಂರಕ್ಷಿಸಲು ಸಾಧ್ಯವಾದ ಎಲ್ಲವನ್ನೂ ಪ್ರಯೋಗಿಸುತ್ತಾಳೆ. ಪ್ರಾರಂಭಿಕ ಹಂತದ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ತನ್ನ ತಂದೆ 'ಸೈಮನ್' ಕುರಿತು ಅವಳು ಕಾಳಜಿ ವಹಿಸುತ್ತಾಳೆ. ತೀರ್ಥರೂಪವರನ್ನು ಸೇವೆಸಲ್ಲಿಸುವುದರೊಂದಿಗೆ, ಮಕ್ಕಳ ಸಲಹುವನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವ ಏಕ ಮಹಿಳೆ - ಪತಿಯ ಬಂಧನದಿಂದ ಮಾನಸಿಕವಾಗಿ ಛಿದ್ರಗೊಳ್ಳುತ್ತಾಳೆ. ನಂತರ, ಸೂಕ್ತ ಚಿಕಿತ್ಸೆ ಲಭಿಸದೆ ತಂದೆಯ ನಿಧವನ್ನೂ ಕಣ್ಣಾರೆ ನೋಡುತ್ತಾಳೆ.

ಲ್ಯಾರಿ - ಬಂಧನದ ಆರಂಭದ ದಿನಗಳಲ್ಲೇ - ತನ್ನ ಕುಟುಂಬದೊಂದಿಗಿನ ಎಲ್ಲಾ ಸಂಪರ್ಕವನ್ನು ಕಳೆದುಕೊಳ್ಳುತ್ತಾನೆ: ಎಲಿಶ್ - ಅವನ ಹೆಂಡತಿ, ಮಾರ್ಕ್ - ಅವನ ಹಿರಿಯ ಮಗ, ಅವರ ಏಕೈಕ ಮಗಳು - ಮೊಲ್ಲಿ, ಹದಿಮೂರು ವರ್ಷದ ಬೈಲಿ ಮತ್ತು ಅವರ ಶಿಶು ಮಗು ಬೆನ್. ಎಲಿಶ್ ಪ್ರಾರಂಭದಲ್ಲಿ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ಪ್ರಯತ್ನಿಸುತ್ತಾಳೆ; ಆದರೆ, ಲ್ಯಾರಿ ಕಣ್ಮರೆಯಾಗಿರುವುದು ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ. ಆದಾಗ್ಯೂ, ಎಲಿಶ್ ಇದನ್ನು ನಂಬಲು ನಿರಾಕರಿಸಿ; ಆಡಳಿತವು ಹೆಚ್ಚು ಕಾಲ ಅಧಿಕಾರವನ್ನು ಹೊಂದಿರಬಾರದು ಮತ್ತು ವಿದೇಶಿ ಸುದ್ದಿಗಳಲ್ಲಿ ತನ್ನ ದುಃಖವನ್ನು ಬಹಿರಂಗಪಡಿಸಲು ಯತ್ನಿಸುತ್ತಾಳೆ. ಅಂತರರಾಷ್ಟ್ರೀಯ ಆಕ್ರೋಶ ಮತ್ತು ಆರ್ಥಿಕ ನಿರ್ಬಂಧಗಳ ಮೂಲಕ ದಬ್ಬಾಳಿಕೆ ತೆಗೆದುಹಾಕಲಾಗಬಹುದು ಎಂದು ನಂಬುತ್ತಾಳೆ.

ಮಾರ್ಕ್ಅನ್ನು ಮಿಲಿಟರಿ ಸೇವೆಗೆ ಕರೆಯಲಾಯಿತು. ಪಕ್ಷಾಂತರಗೊಂಡ ಸೈನಿಕರು ಮತ್ತು ನಾಗರಿಕ ಸ್ವಯಂಸೇವಕರನ್ನು ಒಳಗೊಂಡಿರುವ ಕ್ಷೀಪ್ರವಾಗಿ ಬೆಳೆಯುತ್ತಿರುವ ಬಂಡುಕೋರ ಪಡೆಗೆ ಸೇರಲು ನಿರ್ಧರಿಸುವ ಮೊದಲೇ ಮರೆಯಾಗಲು ತೀರ್ಮಾನಿಸುತ್ತಾನೆ. ಅವನು ಶೀಘ್ರದಲ್ಲೇ ತನ್ನ ತಾಯಿಯೊಂದಿಗೆ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾನೆ. ಹೋರಾಟದ ಪ್ರಗತಿಪರರು, ಮತ್ತು ಬಂಡುಕೋರರು - ಡಬ್ಲಿನ್ ನಗರವನ್ನು ವಶಪಡಿಸಿಕೊಳ್ಳುತ್ತಾರೆ; ಆದರೆ ಸ್ವಲ್ಪ ಸಮಯದ ನಂತರ, ಆಡಳಿತ ಸರ್ಕಾರವು ಬಂಡುಕೋರರನ್ನು ಹೊರಹಾಕಲು ನಗರದ ಮೇಲೆ ಬಾಂಬ್ ದಾಳಿಯನ್ನು ಪ್ರಾರಂಭಿಸುತ್ತದೆ.

ಸರಕಾರ ಪ್ರಾಯೋಜಿತ ಒಂದು ದಾಳಿಯಲ್ಲಿ, ಬೈಲಿ ತನ್ನ ತಲೆಬುರುಡೆಯಲ್ಲಿ ಗಾಯಗೊಳ್ಳುತ್ತಾನೆ. ಎಲಿಶ್ ಅವನನ್ನು ತುಂಬಾ ಕಷ್ಟದಿಂದ ಆಸ್ಪತ್ರೆಗೆ ಕರೆದೊಯ್ಯುತ್ತಾಳೆ; ಆದರೆ, ಅದೇ ರಾತ್ರಿ ಅವನನ್ನು ಆಸ್ಪತ್ರೆಯಲ್ಲೇ ಬಿಟ್ಟು ಮನೆಗೆ ಹೋಗಲು ಆಸ್ಪತ್ರೆ ಸಿಬ್ಬಂದಿಗಳು ಒತ್ತಾಯಿಸುತ್ತಾರೆ. ಮರುದಿನ, ಅವಳು ಹಿಂದಿರುಗಿದಾಗ, ಬೈಲಿ ಅಲ್ಲಿರಲಿಲ್ಲ ಎಂದು ಅವಳು ಕಂಡುಕೊಂಡಳು; ಬೈಲಿಯನ್ನು ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತದೆ.

ಅವಳು ಮಿಲಿಟರಿ ಆಸ್ಪತ್ರೆಗೆ ಹೋಗಿ ಕೈ ಸುಟ್ಟುಕೊಳ್ಳುತ್ತಾಳೆ; ತನ್ನ ಮಗನನ್ನು ಪತ್ತೆಹಚ್ಚಲು ಹಲವಾರು ವಿಫಲ ಪ್ರಯತ್ನಗಳ ನಂತರ, ಅಂತಿಮವಾಗಿ ಶವಗಾರದಲ್ಲಿ ತನ್ನ ಮಗುವಿನ ವಿರೂಪಗೊಂಡ ಶವ ಪತ್ತೆಹಚ್ಚುತ್ತಾಳೆ. ಮಗುವಿನ ದೇಹದ ಮೇಲೆ ಚಿತ್ರಹಿಂಸೆಯ ಲಕ್ಷಣಗಳು ಒಡೆದೆದ್ದು ಕಾಣಸಿಗುತ್ತದೆ. ದುಃಖದಿಂದ ಬೇಸತ್ತ ಎಲಿಶ್ ಮತ್ತು ಅವಳ ಉಳಿದ ಇಬ್ಬರು ಮಕ್ಕಳು, ತಮ್ಮ ಉಳಿತಾಯದ ಸ್ವಲ್ಪ ಹಣವನ್ನು ಬಳಸಿಕೊಂಡು ಉತ್ತರ ಐರ್ಲೆಂಡ್‌ನ ಹೋರಾಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಿರಾಶ್ರಿತರೊಂದಿಗೆ ಸೇರುತ್ತಾರೆ. ಕಥೆಯು ಅಸ್ಪಷ್ಟವಾಗಿ ಕೊನೆಗೊಳ್ಳುತ್ತದೆ: ಎಲಿಶ್ ತನ್ನ ಇಬ್ಬರು ಮಕ್ಕಳೊಂದಿಗೆ ಸಮುದ್ರತೀರದಲ್ಲಿ ನಿಂತು, ನಿರಾಶ್ರಿತರ ದೋಣಿಗೆ ಏರಲು ಹೊರಟಿದ್ದಾಗ, ತನ್ನ ಮಗಳಿಗೆ: "To the sea, we must go to the sea, the sea is life" ಎಂದು ಹೇಳುತ್ತಾಳೆ.

ಈ ನೀಳ್ಗಥೆಯೂ ಕಥಾಸಾಹಿತ್ಯದ ಪ್ರಮುಖತೆ ನಿಮಗೆ ಜ್ಞಾಪಿಸುತ್ತದೆ; ಅಲ್ಲದೇ, ವಿಶೇಷತಃ ಅದು ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆಂದು ಬಲವಾಗಿ ಪ್ರತಿಪಾದಿಸುತ್ತದೆ: ಅದುವೇ, ಕಾದಂಬರಿಯಲ್ಲಿ ಚರ್ಚಿಸಲ್ಪಟ್ಟ ಸರಣಿ ದುರ್ಘಟನೆಗಳು ಅಸಾಧ್ಯವಾದ ದೇಶದಲ್ಲಿ ಸಂಭವಿಸಬಹುದು ಎಂದು ಮುನ್ನೆಚ್ಚರಿಕೆ!

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.