ಪಾವನಾಮಯಿ ಶಾರದಾಮಾತೆ

ಪಾವನಾಮಯಿ ಶಾರದಾಮಾತೆ

ಪಾವನಾಮಯಿ, ಮಮತೆಯ ಸಾಕಾರಮೂರ್ತಿ, ತ್ಯಾಗದೇವತೆ, ಆಧ್ಯಾತ್ಮಿಕ ಬದುಕಿಗೆ ಪ್ರಾಧಾನ್ಯತೆ ನೀಡಿದ, ನಿರಾಳ ಮನಸ್ಸಿನ, ‘ಓರ್ವ ಪುರುಷನ ಹಿಂದಿನ ಬಲವಾದ ಪ್ರೇರಕ ಶಕ್ತಿಯಾದ ಶಾರದಾ ಮಾತೆ’. ತನ್ನ ಪತಿಯ ಪ್ರತಿಯೊಂದು ಚಟುವಟಿಕೆಗಳನ್ನು ಅವಲೋಕಿಸಿ, ಅದು ತನ್ನದೇ ಎಂಬ ಹಾಗೆ ದುಡಿದವರು ಶ್ರೀ ಮಾತೆಯವರು. ತನ್ನನ್ನು ನಂಬಿ ಬಂದವರನ್ನು ಎತ್ತಿ ಹಿಡಿದು ದುಃಖವನ್ನು ನಿವಾರಿಸುವುದು, ಅವರ ಅಹವಾಲನ್ನು ಕೇಳಿ ಪರಿಹರಿಸುವುದು ,ಅವರ ಮೊದಲ ಆದ್ಯತೆಯಾಗಿತ್ತು.

ತೋರ್ಪಡಿಕೆ, ಬಿಗುಮಾನ, ಅಹಂಕಾರ, ಆಡಂಬರ ಅವರಿಗಾಗದು. ಸರಳ, ಸಹಜ, ಆರ್ದ್ರತೆ, ತ್ಯಾಗ, ಒಳ್ಳೆಯ ನೈತಿಕತೆ, ಸಜ್ಜನಿಕೆ ಎಂಬ ಆಭರಣಗಳೇ ನಮ್ಮ ಜೀವನದ ತಳಪಾಯ, ಮೆಟ್ಟಿಲು ಎರಡೂ ಆಗಿರಬೇಕೆಂದು ತಮ್ಮ ಅನುಯಾಯಿಗಳಿಗೆ ಹೇಳುತ್ತಿದ್ದರು. ‘ಅಮ್ಮಾ’ ಎಂಬ ಪದದಿಂದ ಅವರನ್ನು ಕರೆಯುವುದು ಅವರಿಗೆ ಮಾತೃತ್ವದ ಸಂಚಲನವಾಗುತ್ತಿತ್ತಂತೆ. ಗುಪ್ತಗಾಮಿನಿಯಾದ ಸರಸ್ವತಿ ನದಿಯಂತೆ ಅವರ ಬದುಕು. ಸ್ವಾಮಿ ವಿವೇಕಾನಂದರು ಅವರ ರಾಮಕೃಷ್ಣ ಮಿಷನ್ ಸಂಸ್ಥೆಯಿಂದ ಹೊರಬಂದ ಅನರ್ಘ್ಯರತ್ನವೆನಿಸಿದವರು.

೧೮೫೩ ದಶಂಬರ ೨೨ರಂದು ಜನಿಸಿದ ಮಾತೆಯವರು ೧೯೨೦ ರಲ್ಲಿ ದೇವರಪಾದ ಸೇರಿದರು. ನಂಬಿ ಬಂದವರಿಗೆ ಧೈರ್ಯವನ್ನು, ಶಕ್ತಿಯನ್ನು ಕೊಡುತ್ತಿದ್ದ ತಾಯಿ. ದೀನರು, ಬಡವರನ್ನು ಎತ್ತಿ ಹಿಡಿದು ಸಮಾಜದ ಮಧ್ಯೆ ಜೀವಿಸುವಂತೆ ಮಾಡಿದ ಸಾಧಕರು. ಒಂದು ಸಲ 'ಶೀಲ ಇಲ್ಲದ ಹೆಣ್ಣು ಮಗಳನ್ನು ನೀವ್ಯಾಕೆ ನೋಡಬೇಕೆಂದು' ಕೇಳಿದ್ದಕ್ಕೆ ಶಾರದಾಮಾತೆಯವರು ಕೊಟ್ಟ ಉತ್ತರ 'ಕೊಚ್ಚೆ ಕೊಳಕು, ಮಲಮೂತ್ರದಲ್ಲಿ ಹೊರಳಾಡಿಕೊಂಡಿರುವ ತನ್ನ ಕರುಳಿನ ಕುಡಿಯನ್ನು ತಾಯಿ ಎತ್ತಿ, ಸ್ನಾನ ಮಾಡಿಸಿ ಎದೆಹಾಲು ಉಣಿಸಿ ಅಪ್ಪುವುದಿಲ್ಲವೇ? ಆ ಮಗುವನ್ನು ದೂರಕ್ಕೆ ಬೇಡವೆಂದು ನೂಕುತ್ತಾಳೆಯೇ? ಎಂತಹ  ಹೃದಯವಂತಿಕೆಯ ಗುಣವಲ್ಲವೇ? ಒಂದೆಡೆ ಓದಿದ ನೆನಪು ಶ್ರೀ ರಾಮಕೃಷ್ಣ ಪರಮಹಂಸರು ಹನ್ನೆರಡು ವರ್ಷಗಳ ಪರ್ಯಂತ ತಪಸ್ಸನ್ನು ಆಚರಿಸಿದ್ದರಂತೆ. ಅದರಲ್ಲಿಯೂ ಆರು ವರ್ಷ ಕಣ್ಣ ರೆಪ್ಪೆ ಮುಚ್ಚದೆ ಮಾಡಿದ ಕಠಿಣ ತಪಸ್ಸಂತೆ. ಅದರ ಫಲವನ್ನು ಶಾರದಾಮಾತೆಗೆ ಸಮರ್ಪಣೆ ಮಾಡಿದ್ದರಂತೆ. ಹಾಗಾದರೆ ಮಹಾತಾಯಿಯಲ್ಲವೇ?

ಸಮಾಜದ ನಿರ್ಗತಿಕ, ನಿರ್ಲಕ್ಷಿತ ವರ್ಗದವರಿಗೆ ಸಾಂತ್ವನದ ಶರಧಿಯನ್ನೇ ಹರಿಸಿ ದಾರಿತೋರಿಸಿದವರು. ಈ ಮಹಾನ್ ಶಕ್ತಿಯನ್ನು ಪಡೆದ ಭರತಭೂಮಿ ಧನ್ಯೆ. ಪ್ರತಿಯೊಬ್ಬರೂ ಹೆತ್ತತಾಯಿಯನ್ನು, ಹೊತ್ತ ಮಣ್ಣನ್ನು ಪ್ರೀತಿಸಿ, ಗೌರವಿಸಿ ಎಂದು ಕರೆಯಿತ್ತ ಮಹಾದೇವತೆಯ ಸ್ಥಾನದಲ್ಲಿ ನಾನವರ ಜೀವನದ ಚಿತ್ರಣವನ್ನು ನೋಡುತ್ತಿರುವೆ.

ಮಾಹಿತಿ ಸಂಗ್ರಹ: ರತ್ನಾ ಕೆ.ಭಟ್ ತಲಂಜೇರಿ

(ಮಹಾತಪಸ್ವಿಯ ಜನ್ಮ ದಿನದ ಸಂದರ್ಭದಲ್ಲಿ ಈ ಕಿರು ಲೇಖನ)

ಚಿತ್ರ ಕೃಪೆ: ಇಂಟರ್ನೆಟ್ ತಾಣ