ಪಾಶ್ಚಾತ್ಯ ಸಂಸ್ಕೃತಿ...ಏನು? ಎತ್ತ?

ಪಾಶ್ಚಾತ್ಯ ಸಂಸ್ಕೃತಿ...ಏನು? ಎತ್ತ?

ನಮ್ಮ ಹಿರಿಯರು ಆಗಾಗ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ನಾವು ಹಾಳಾಗುತ್ತಿರುವುದೇ ಆ ಸಂಸ್ಕೃತಿ ಪ್ರಭಾವದಿಂದ ಅದರಲ್ಲೂ ನಮ್ಮ ಯುವ ಜನಾಂಗ ದಾರಿತಪ್ಪಲು ಅದೇ ಮುಖ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹಾಗಾದರೆ ಪಾಶ್ಚಾತ್ಯ ಸಂಸ್ಕೃತಿ ಎಂದರೆ ಕೆಟ್ಟದ್ದೆ? ಪಾಶ್ಚಾತ್ಯರು ಹಾಳಾಗಿದ್ದಾರೆಯೆ?  ಒಂದು ಸಂಸ್ಕೃತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಎಲ್ಲಾ ಸಂಸ್ಕೃತಿಗಳಿಗಿಂತ ನಮ್ಮ ಜೀವನಶೈಲಿಯೇ ಅತ್ಯುತ್ತಮ ಎಂಬುದು ಸರಿಯಾದ ತಿಳಿವಳಿಕೆಯೇ? ಒಂದಷ್ಟು ಈ ಬಗೆಗೆ ಚಿಂತಿಸಬೇಕಿದೆ, ವಿಮರ್ಶೆಗೆ ಒಳಪಡಿಸಬೇಕಿದೆ...

ಮುಖ್ಯವಾಗಿ ಪಾಶ್ಚಾತ್ಯ ಸಂಸ್ಕೃತಿ ಎಂದರೆ ಅಮೆರಿಕ, ಯೋರೋಪ್, ಆಸ್ಟ್ರೇಲಿಯ ಮುಂತಾದ ದೇಶಗಳ ಜೀವನ ವಿಧಾನ ಮನಸ್ಸಿನಲ್ಲಿಟ್ಟುಕೊಂಡು ಇದನ್ನು ಹೇಳುತ್ತಿದ್ದೇನೆ.

ವಾಸ್ತವವಾಗಿ ಏನಿರಬಹುದು?  ಸಂಸ್ಕೃತಿಯನ್ನು ಅದರ ಆಳದಲ್ಲಿ ಅರಿತು ವಿಶದವಾಗಿ ಚರ್ಚಿಸಲು ದೀರ್ಘ ತಳಮಟ್ಟದ ಅಧ್ಯಯನದ ಅವಶ್ಯಕತೆ ಇದೆ. ಆದರೆ ಸರಳವಾಗಿ ಮೇಲ್ಮಟ್ಟದಲ್ಲಿ ಜನರಲ್ಲಿ ಇರಬಹುದಾದ ಅಭಿಪ್ರಾಯದ ಆಧಾರದ ಮೇಲೆ ಇಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. 

ಊಟ, ಬಟ್ಟೆ ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ಉದಾಹರಣೆಯಾಗಿ ನೋಡೋಣ.

ಆಹಾರದ ವಿಷಯಕ್ಕೆ ಬಂದರೆ ಅವರು ನಮಗಿಂತಲೂ ಭಿನ್ನ. ಅದಕ್ಕಿಂತ ಹೆಚ್ಚಾಗಿ ಅವರು ಸಹಜವಾಗಿ ಉಪಯೋಗಿಸುವ ಬಿಯರ್, ವೈನ್, ಓಡ್ಕಾ, ವಿಸ್ಕಿ, ರಮ್ ಮುಂತಾದ ಕುಡಿತದ ಬಗ್ಗೆ ನಮ್ಮ ಸಂಪ್ರದಾಯವಾದಿಗಳಿಗೆ ಬಹಳ ಬೇಸರ. ಮತ್ತೆ ಅವರ ಉಡುಗೆ ತೊಡುಗೆ ಅದರಲ್ಲೂ ಮಹಿಳೆಯರ ತುಂಡುಡುಗೆ ಬಗ್ಗೆ ಇಲ್ಲಿನವರು ಕೆಂಡ ಕಾರುತ್ತಾರೆ. ಊಟ ಬಟ್ಟೆಯ ವಿಷಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮುಖ್ಯವಾಗುತ್ತದೆ. ಇದರ ಬಗ್ಗೆ ನಿಯಂತ್ರಣ ಹೇರುವುದು ಉಚಿತವಲ್ಲ. ಪಂಚೆಯೋ, ಜೀನ್ಸೋ, ಸೀರೆಯೋ, ಚಡ್ಡಿಯೋ ಹಾಗೆ ಬ್ರೆಡ್ಡೋ, ಪೀಜಾನೋ, ಮುದ್ದೆಯೋ, ರೊಟ್ಟಿಯೋ, ಮಾಂಸವೋ, ತರಕಾರಿಯೋ ಅವರವರ ಇಷ್ಟ. ಕುಡಿತ ಅಷ್ಟೊಂದು ಉತ್ತಮವಲ್ಲ ಯಾರಿಗಾದರೂ. ಆದರೆ ಅಲ್ಲಿಯ ವಾತಾವರಣಕ್ಕೆ ಸರಿಹೊಂದಬಹುದೇನೋ ಆದ್ದರಿಂದ ಅದರ ಬಗೆಗೆ ಇರುವ ಆರೋಪ ಅಸಮಾಧಾನ ನಿರಾಧಾರ. 

ಆದರೆ ಮುಖ್ಯವಾಗಿ ಕೌಟುಂಬಿಕ ವ್ಯವಸ್ಥೆಯ ಬಗೆಗೆ  ಚರ್ಚಿಸಬೇಕಿದೆ. ಮನುಷ್ಯ ಸಮಾಜದ ಅತ್ಯಂತ ಚಿಕ್ಕ ಘಟಕ ಕುಟುಂಬ. ಕೌಟುಂಬಿಕ ವ್ಯವಸ್ಥೆ ಇಲ್ಲದ ಯಾವ ಸಮಾಜವೂ ಈಗ ಅಸ್ತಿತ್ವದಲ್ಲಿ ಇಲ್ಲ. ಪಾಶ್ಚಾತ್ಯರಲ್ಲಿ ಕುಟುಂಬ ವ್ಯವಸ್ಥೆ ಹೆಚ್ಚು ಪ್ರಬುದ್ಧವಾಗಿ, ನಾಗರೀಕವಾಗಿ ಮತ್ತು ವಾಸ್ತವಿಕ ನೆಲೆಯಲ್ಲಿ ಅರ್ಥೈಸಲಾಗಿದೆ ಮತ್ತು ಆಚರಣೆಯಲ್ಲಿದೆ. ಗಂಡು ಹೆಣ್ಣು ನಮ್ಮಂತೆಯೇ ಪ್ರೀತಿಸಿಯೋ, ಪರಿಚಯದ ಮುಖಾಂತರವೋ, ಬ್ರೋಕರ್ ಮೂಲಕವೋ, ಇಂಟರ್ ನೆಟ್ ಸಂಪರ್ಕ ಜಾಲತಾಣಗಳ ಮೂಲಕವೋ ಮದುವೆಯಾಗುತ್ತಾರೆ. ಗಂಡು ಹೆಣ್ಣಿನ ಆಸಕ್ತಿ ಒಪ್ಪಿಗೆ ಇಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ.

ಬಹಳಷ್ಟು ಸಂಬಂಧಗಳು ನಮ್ಮಂತೆಯೇ ಜೀವನ ಪರ್ಯಂತ ಜೊತೆಯಾಗಿಯೇ ಇರುತ್ತವೆ. ಒಂದು ವೇಳೆ ಭಿನ್ನಾಭಿಪ್ರಾಯ ಉಂಟಾದರೆ ಸರಳವಾಗಿ ಸಹಜವಾಗಿ ಒಪ್ಪಂದದ ಮೇರೆಗೆ  ಬೇರೆಯಾಗುತ್ತಾರೆ. ಅದು ಅಷ್ಟೇನು ನೋವಿನ ಸಂಕಷ್ಟದ ಕಾಲವಾಗುವುದಿಲ್ಲ. ಏಕೆಂದರೆ ಅವರ ಆರ್ಥಿಕ ಪರಿಸ್ಥಿತಿ ನಮಗಿಂತ ಉತ್ತಮವಾಗಿದೆ ಮತ್ತು ಸಾಮಾಜಿಕ ವ್ಯವಸ್ಥೆ ಇದನ್ನು ಸಹಜವಾಗಿಯೇ ಸ್ವೀಕರಿಸುತ್ತದೆ. ಮಕ್ಕಳೂ ಕೂಡ ಒಂದು ಹಂತಕ್ಕೆ ಇದರಿಂದ ಒತ್ತಡ ಮುಕ್ತರಾಗುತ್ತಾರೆ.

ಆದರೆ ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ವ್ಯವಸ್ಥೆ ಸೃಷ್ಟಿಸಲಾಗಿದೆ. ಮದುವೆ ವಿಷಯದಲ್ಲಿ ಗಂಡು ಹೆಣ್ಣಿಗಿಂತ ಅವರ ಪೋಷಕರು ಮತ್ತು ಸಂಬಂಧಿಗಳು ಹೆಚ್ಚು ಜವಾಬ್ದಾರಿ ಮತ್ತು ಆಸಕ್ತಿ ತೋರಿಸುತ್ತಾರೆ. ಇದೊಂದು ಜನುಮಜನುಮದ ಅನುಬಂಧ ಎಂದು ಒತ್ತಡ ಹೇರುತ್ತಾರೆ. ಗಂಡ ಹೆಂಡತಿ ಎರಡು ದೇಹ ಒಂದೇ ಆತ್ಮ ಎಂದು ನಂಬಿಸಲಾಗುತ್ತದೆ. ಆದರೆ ವಾಸ್ತವ ನೆಲೆಯಲ್ಲಿ ಹಾಗಿರುವುದಿಲ್ಲ. ಬಹಳ ಹಿಂದೆ ಹಾಗಿತ್ತೇನೋ ಗೊತ್ತಿಲ್ಲ. ಈಗ ಮಾತ್ರ ಹೆಚ್ಚು ಕಡಿಮೆ ಎರಡು ವಿಭಿನ್ನ ಹಿನ್ನೆಲೆಯ ಆಧುನಿಕ ಕಾಲದ ಎರಡು ಜೀವಗಳು ಒಂದೇ ಆಗುವುದು ಕಷ್ಟವಾಗುತ್ತಿದೆ. ಒಂದು ರೀತಿಯ ಆತ್ಮವಂಚಕ ವ್ಯಾಪಾರಿ ಒಪ್ಪಂದಗಳಾಗುತ್ತಿವೆ. ಆರ್ಥಿಕ ಪರಿಸ್ಥಿತಿಯೇ ಮದುವೆ ಒಪ್ಪಂದದ ಮೂಲಾಧಾರವಾಗಿದೆ. ಹೊಂದಾಣಿಕೆ ಅವಶ್ಯ ನಿಜ. ಆದರೂ ಅದೇ ಸಾಧ್ಯವಾಗುತ್ತಿಲ್ಲ.                

ಭಿನ್ನಾಭಿಪ್ರಾಯ ಉಂಟಾದಾಗ ಪಾಶ್ಚಾತ್ಯರಂತೆ ಸಹಜವಾಗಿ ಬೇರೆಯಾಗಲು ಸಾಧ್ಯವಾಗುತ್ತಿಲ್ಲ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಅದು ಅತ್ಯಂತ ಹಿಂಸಾತ್ಮಕವಾಗುತ್ತಿದೆ. ಆರ್ಥಿಕ ಅಭದ್ರತೆ, ಕೊಂಕು ನುಡಿ, ಹೆಣ್ಣಿನ ಅಸಹಾಯಕತೆಯ ದುರ್ಬಳಕೆ ಸಹಿಸಲಸಾಧ್ಯ. ಒಂದು ಸಂಪರ್ಕ ಕೊರತೆಯನ್ನು ಗಂಡ ಬಿಟ್ಟವಳು, ಹೆಂಡತಿ ಸಾಕಲಾರದವನು ಮುಂತಾದ ಅನೇಕ ಉಪಮೇಯಗೊಂದಿಗೆ ಅವರ ಯೋಗ್ಯತೆಗೆ ತಕ್ಕಂತೆ ಆರೋಪಗಳ ಸುರಿಮಳೆಯೇ ಆಗುತ್ತದೆ. ಇನ್ನು ಅಲ್ಲಿ ಒಂದು ಹೆಣ್ಣು ನಾಲ್ಕಾರು ಗಂಡುಗಳನ್ನು ಮತ್ತು ವಯಸ್ಸಾದ ಗಂಡು ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಕೆಲವು ಘಟನೆಗಳನ್ನು ವೈಭವೀಕರಿಸಲಾಗುತ್ತಿದೆ. ಇಲ್ಲಿ ಕದ್ದು ಮುಚ್ಚಿ ನಡೆಯುವ ಕ್ರಿಯೆ ಅಲ್ಲಿ ಬಹಿರಂಗವಾಗಿ ನಡೆಯಬಹುದು. ಮತ್ತೆ ಮಕ್ಕಳು ಮತ್ತು ಪೋಷಕರ ಸಂಬಂಧ ನಮ್ಮಂತೆ ಭಾವನಾತ್ಮಕ ನೆಲೆಯಲ್ಲಿ, ಆಷಾಡಭೂತಿತನದ, ನಾಟಕೀಯ, ದುಡ್ಡಿನ ಮೇಲೆ ಹೆಚ್ಚು ಅವಲಂಬಿತವಾಗದೆ ಸ್ವಲ್ಪ ನಾಗರೀಕವಾಗಿದೆ. ಆಧುನಿಕ ಭಾರತದಲ್ಲಿ ಆರ್ಥಿಕ ಅಭಿವೃದ್ಧಿಯೇ ವೈಯಕ್ತಿಕ ಸಂಬಂಧಗಳ ಕುಸಿತಕ್ಕೆ ಕಾರಣವಾಗುತ್ತಿರುವುದು ದುರಂತ. ಇಲ್ಲಿ ಆದರ್ಶಗಳನ್ನು ಮಾತನಾಡಲಾಗುತ್ತದೆ ಆಚರಣೆಗಳನ್ನು ಸ್ವಾರ್ಥಕ್ಕಾಗಿ ಬಳಸಲಾಗುತ್ತದೆ. ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಯನ್ನು ಸಾರಾಸಗಟಾಗಿ ತಿರಸ್ಕರಿಸದೆ ಅಲ್ಲಿನ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ನಮ್ಮಲ್ಲಿರುವ Hypocratic ಮನೋಭಾವ ಕಡಿಮೆ ಮಾಡಿಕೊಂಡು ಇಲ್ಲಿನ ಅದ್ಭುತ ಚಲನಶೀಲ ಸಂಸ್ಕೃತಿಯನ್ನು ಮತ್ತಷ್ಟು ಉಜ್ವಲಗೊಳಿಸಿ ಸಮಾನತೆ ಸಾಧಿಸಿ ನೆಮ್ಮದಿಯ ಆರಾಮದಾಯಕ  ಬದುಕು ಕಟ್ಟಿ ಕೊಳ್ಳೋಣ.

" ಎಲ್ಲಾ ನಾಗರಿಕತೆಗಳಿಗಿಂತ ನಾವೇ ಉತ್ತಮ " ಎಂಬ ಸಂಕುಚಿತ ಮನೋಭಾವ ನಮ್ಮ ಬದಲಾವಣೆಗೆ ಅಡ್ಡಿಯಾಗಿದೆ. ಸೃಷ್ಟಿಯ ಎಲ್ಲಾ ನಾಗರಿಕತೆಗಳು ಆಯಾ ಪ್ರದೇಶದ ವೈಶಿಷ್ಟ್ಯ ವೈವಿಧ್ಯತೆ ಹೊಂದಿರುತ್ತದೆ. ಯಾವುದು ಮೇಲು ಕೀಳಲ್ಲ. ಉತ್ತಮವಾದದ್ದು ಎಲ್ಲಿಂದ ಬಂದರೂ ನಾವು ಅದನ್ನು ಸ್ವೀಕರಿಸಬೇಕು ಎಂಬ ಒಂದು ಮಾತಿದೆ. ಅನುಭವದ ಆಧಾರದ ಮೇಲೆ ಅದನ್ನು ಪುನರ್ ರೂಪಿಸಿಕೊಳ್ಳುತ್ತಾ ಜೀವನವನ್ನು ಹೆಚ್ಚು ಆರಾಮದಾಯಕ ಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಅದೇ ಅಭಿವೃದ್ಧಿ, ಅದೇ ನಾಗರಿಕತೆ, ಅದೇ ಬದುಕಿನ ಸಾರ್ಥಕತೆ.......

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.

-ವಿವೇಕಾನಂದ. ಹೆಚ್.ಕೆ.

ಚಿತ್ರ ಕೃಪೆ: ಇಂಟರ್ನೆಟ್ ಮೂಲಕ