ಪಿಂಕಿ ‘WAY’

ಪಿಂಕಿ ‘WAY’

ಪುಸ್ತಕದ ಲೇಖಕ/ಕವಿಯ ಹೆಸರು
ಅಲೈಕ್ಯ ಮೈತ್ರೇಯಿ
ಪ್ರಕಾಶಕರು
ಪಿನಾಕಿ ಪುಸ್ತಕ, ಗಿರಿನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ಅಲೈಕ್ಯ ಮೈತ್ರೇಯಿ ಅವರ ಚೊಚ್ಚಲ ಕಾದಂಬರಿ ಪಿಂಕಿ ‘ವೇ’ ಇತ್ತೀಚೆಗೆ ಬಿಡುಗಡೆಯಾಗಿದೆ. ಸುಮಾರು ೧೪೦ ಪುಟಗಳ ಈ ಕಾದಂಬರಿಯ ಕುರಿತು ಲೇಖಕರಾದ ಅನಂತ ಕುಣಿಗಲ್ ಅವರು ಪುಸ್ತಕದಲ್ಲಿ ತಮ್ಮ ‘ಮೊದಲ ಮಾತನ್ನು ದಾಖಲು ಮಾಡಿದ್ದಾರೆ. ಅವರು ತಮ್ಮ ಮೊದಲ ಮಾತಿನಲ್ಲಿ ವ್ಯಕ್ತ ಪಡಿಸಿದ ಭಾವಗಳು ಹೀಗಿವೆ...

“ನಾನು ಹಿಂದೂ ಅಲ್ಲ ಎಂದರೆ ನೀವು ನಂಬಬೇಕು. ಹೌದು, ನಾನು ಮುಸ್ಲಿಂ ಅಲ್ಲ ಕ್ರೈಸ್ತ, ಜೈನ, ಬೌದ್ಧ ಯಾವುದೂ ಅಲ್ಲ ನಾನು ಮನುಷ್ಯನೆಂದರೆ ನೀವು ನಂಬಲೇಬೇಕು!" ಧರ್ಮ ಎಂದರೇನು ಎಂಬ ಪ್ರಶ್ನೆಗೆ ಸುಲಭವಾಗಿ ಮತ್ತು ನೇರವಾಗಿ ಯಾರೂ ಉತ್ತರಿಸಲಾರದಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ. ಧರ್ಮವೆಂದರೆ ಆಚಾರ, ವಿಚಾರ, ಅಸ್ತಿತ್ವ ಎಂದು ನಂಬಲಾಗಿದ್ದ ದಿನಗಳು ದೂರವಾಗಿ, ಧರ್ಮ ಎಂದರೆ ಒಡೆದು ಆಳುವ ರಾಕ್ಷಸರ ಮಂತ್ರ ಎಂಬಂತಾಗಿದೆ. ಸಧ್ಯ ಗೂಂದಲಗಳ ಗೂಡಿನಲ್ಲಿರುವ ಎಷ್ಟೋ ಮುಗ್ಧ ಮನಸ್ಸುಗಳಲ್ಲಿ ಈ ಕಾದಂಬರಿಯ ವಸ್ತು ಚೂರು ಕಣ್ಣು ತೆರೆಸಬಹುದು.

ಧರ್ಮ ಧರ್ಮಗಳು ಮುಖಾಮುಖಿಯಾಗಿ ಯುದ್ಧ ಸಾರುವ ಬದಲು ಪ್ರೀತಿ ಹುಡುಕಬೇಕು! ಆ ಕೆಲಸಕ್ಕೆ ನಾವೆಲ್ಲರೂ ಮುಂದಾಗಬೇಕು. ನಾವು ನೀವುಗಳೇ ಧರ್ಮ! ಧರ್ಮಕ್ಕಿಂತ ಮಾನವೀಯತೆ ಮುಖ್ಯವೆಂಬುದು ನಮ್ಮ ಅರಿವಿಗೆ ಬಂದ ದಿನ ಎಲ್ಲ ಧರ್ಮಗಳು ಒಂದಾಗುತ್ತವೆ. ಆಗ ಜಗತ್ತಿನಲ್ಲಿ ಶಾಂತಿಯನ್ನೊರತುಪಡಿಸಿ ಬೇರೇನೂ ಇರುವುದಿಲ್ಲ. ಧರ್ಮವೆಂಬದು ಹುಚ್ಚು. ಆ ಹುಚ್ಚಿಗಾಗಿ ಹೋರಾಡಿ ಪ್ರಾಣ ಬಿಟ್ಟ ಎಷ್ಟೋ ಅಮಾಯಕ ಜೀವಗಳ ಮನೆಯವರನ್ನು "ಧರ್ಮ ಎಂದರೇನು?" ಎಂದು ಕೇಳಿದ ಪ್ರಶ್ನೆಗೆ ನಾವು ನಿರೀಕ್ಷಿಸಿದ ಉತ್ತರ ಸಿಗಬಹುದೇ? ಖಂಡಿತ ಇಲ್ಲ. ಯಾಕೆಂದರೆ ಈ ದಿನ ಧರ್ಮ, ಧರ್ಮವಾಗಿ ಉಳಿದಿಲ್ಲ.

ರಾಜಕೀಯ ತಂತ್ರಗಳಿಗಾಗಿಯೇ ಮಾಡಿದ ಆಟಿಕೆಯ ವಸ್ತು ಎಂಬಂತೆ ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ಆ ಧರ್ಮದ ಅಮಲಿನಲ್ಲಿ ಎಷ್ಟೋ ಯುವಕರು ಹಾದಿ ತಪ್ಪುತ್ತಿದ್ದಾರೆ. ಇದರಿಂದಾಗಿ ಧರ್ಮ ತನ್ನ ಶ್ರೇಷ್ಠತೆಯನ್ನು ಕಳಚಿಕೊಂಡಿದೆ. ಧರ್ಮ-ದೇವರು ಎಂಬ ಗೊಂದಲಗಳಿಗೆ ನಮ್ಮ ಜೀವನದಲ್ಲೇ ನಡೆಯಬಹುದಾದ ನೈಜ ಘಟನೆಗಳನ್ನು ಸಾಂದರ್ಭಿಕವಾಗಿ ವಿವರಿಸುತ್ತಾ.. ಧರ್ಮ ಎಂದರೆ ಪ್ರೀತಿ, ಧರ್ಮ ಎಂದರೆ ಸ್ನೇಹ, ಧರ್ಮ ಎಂದರೆ ಬೆನಿಫಿಟ್ಸ್ ಇಲ್ಲದ ಒಂದು ಪಾರದರ್ಶಕ ಸಂಬಂಧ, ಧರ್ಮ ಎಂದರೆ ನಂಬಿಕೆ, ಧರ್ಮ ಎಂದರೆ ಮಾನವೀಯತೆ ಎಂದು ಪಿಂಕಿ, ಮದನ್ ಪಪ್ಪಾ, ರೇಖಾ ಮಮ್ಮಿ ಪಾತ್ರಗಳ ಮೂಲಕ ಲೇಖಕಿ ಅಲೈಕ್ಯ ಮೈತ್ರೇಯಿ ಅವರು ಹೇಳಹೊರಟಿದ್ದಾರೆ.

ಪ್ರಸ್ತುತ ಸಮಯಕ್ಕೆ ಈ ಕಾದಂಬರಿ ನಮಗೆ ನಾವೇ ಹಿಡಿದುಕೊಂಡ ಪ್ರಶ್ನೆಪ್ರತ್ರಿಕೆ. ಉತ್ತರಗಳನ್ನು ನಾವು ನಾವುಗಳೇ ಕಂಡುಕೊಳ್ಳಬೇಕು. ಎಲ್ಲರು ಹಿಂದು ಮುಂದು ನೋಡಿ ಪಕ್ಕಕ್ಕೆ ಸರಿದುಬಿಡುವಂಥಹ ಕಾಲದಲ್ಲಿ ಇಂಥದ್ದೊಂದು ವಸ್ತುವನ್ನು ಆರಿಸಿಕೊಂಡು, ಅದನ್ನು ನಿಭಾಯಿಸಿರುವ ಲೇಖಕಿಯ ಚಾಣಾಕ್ಷತನಕ್ಕೆ ಮತ್ತು ಕಾದಂಬರಿಯ ವಸ್ತು ಎಲ್ಲರನ್ನು ತಲುಪಬೇಕೆಂಬ ಆಶಯ ಹೊತ್ತು ಪ್ರಕಟಿಸಲು ಮುಂದಾದ ಪಿನಾಕಿ ಪುಸ್ತಕ ಬಳಗದ ಧೈರ್ಯಕ್ಕೆ ನನ್ನ ಮೆಚ್ಚುಗೆ ಇದೆ.
ಧರ್ಮ ಮತ್ತು ದೇವರು ಎಂಬ ಭ್ರಾಂತುವಿನಿಂದ ಹೊರಬಂದು, ವಾಸ್ತವವನ್ನು ಅರಿಯಲು ಮನಸು ಮಾಡುವ ಎಲ್ಲ ಓದುಗರಿಗೂ ಇದೊಂದು ವೈಚಾರಿಕ ಓದಾಗಬಲ್ಲುದು. ಬದಲಾವಣೆ ಬಯಸುವವರ ಮನ ತಿಳಿಯಾಗಬಹುದು.”