ಪಿಂಚ್ ಆಫ್ ಪ್ರಪಂಚ

ಪಿಂಚ್ ಆಫ್ ಪ್ರಪಂಚ

ಪುಸ್ತಕದ ಲೇಖಕ/ಕವಿಯ ಹೆಸರು
ರಂಗಸ್ವಾಮಿ ಮೂಕನಹಳ್ಳಿ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೦.೦೦. ಮುದ್ರಣ: ೨೦೨೦

ಪಿಂಚ್ ಆಫ್ ಪ್ರಪಂಚ ಪುಸ್ತಕವು ರಂಗಸ್ವಾಮಿ ಮೂಕನಹಳ್ಳಿ ಇವರ ಒಂಬತ್ತನೇ ಪ್ರಕಟಿತ ಪುಸ್ತಕ. ತುಮಕೂರು ಜಿಲ್ಲೆಯ ಸಿರಾದಲ್ಲಿ ಇವರ ಜನನ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಿರಾ ಮತ್ತು ಬೆಂಗಳೂರಿನಲ್ಲಿ. ಇಪ್ಪತ್ತಮೂರನೆಯ ವಯಸ್ಸಿಗೆ ದುಬಾಯಿ ಪ್ರಯಾಣ. ನಂತರ ಕೈಬೀಸಿ ಕರೆದದ್ದು ಬಾರ್ಸಿಲೋನಾ. ಇಂಗ್ಲೆಂಡ್ ನ ಇನ್ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿ. ಇದುವರೆಗೆ ಅರವತ್ತು ದೇಶಗಳ ಪ್ರಯಾಣ, ಪ್ರವಾಸ. ಆ ದೇಶಗಳ ಆರ್ಥಿಕ ಸ್ಥಿತಿಗತಿ ಬಗ್ಗೆ ನಿರಂತರ ಲೇಖನ ಕೃಷಿ ಮಾಡಿ ಇದುವರೆಗೆ ಪ್ರಕಟಿಸಿರುವ ಪುಸ್ತಕಗಳು ಎಂಟು. 

ಹತ್ತು ದೇಶ - ಹಲವು ವಿಶೇಷ ಎಂದು ತಮ್ಮ ಪುಸ್ತಕಕ್ಕೆ ಟ್ಯಾಗ್ ಲೈನ್ ನೀಡಿರುವ ರಂಗಸ್ವಾಮಿಯವರು ತಾವು ಭೇಟಿ ನೀಡಿದ ಸುಮಾರು ೬೦ ದೇಶಗಳ ಪೈಕಿ ಒಂಬತ್ತು ದೇಶಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ಮುನ್ನುಡಿಯಾದ ‘ಟೇಕ್ ಆಫ್ ಆಗುವ ಮುನ್ನ' ಇದರಲ್ಲಿ ರಂಗಸ್ವಾಮಿಯವರು ಹೀಗೆ ಬರೆಯುತ್ತಾರೆ. ‘ಬಡತನವೆಂದರೆ ಅದು ಬವಣೆಯಲ್ಲ. ಅದೊಂದು ಶಾಲೆ, ಬದುಕು ಒಬ್ಬ ಅತ್ಯುತ್ತಮ ಶಿಕ್ಷಕ. ಅನ್ನ ತಿಂದರೆ ಅಕ್ಕಿ ಹೆಚ್ಚು ಖರ್ಚಾಗುತ್ತೆ ಅಂತ ಬೆಳಿಗ್ಗೆ ಅನ್ನ ಬಸಿದು ಅದರ ನೀರನ್ನು ಗಂಜಿಯ ರೂಪದಲ್ಲಿ ಕುಡಿಯುತ್ತಾ, ಬೇಸಿಗೆ ರಜೆಯಲ್ಲಿ ಸೇಠು ಅಂಗಡಿಯಲ್ಲಿ ಗ್ರಾಹಕರು ಬಂದು ತೆಗೆಸಿ ಗುಡ್ಡೆ ಹಾಕಿದ ಸೀರೆ ಮತ್ತಿತರ ಬಟ್ಟೆ ಬರೆಗಳನ್ನು ಎತ್ತಿ ಸ್ವಸ್ಥಾನ ಸೇರಿಸುವ ಕೆಲಸ ಮಾಡುತ್ತಾ, ಉಳಿದ ದಿನಗಳಲ್ಲಿ ನ್ಯೂಸ್ ಪೇಪರ್ ನಲ್ಲಿ ಎನ್ವಲಪ್ ತಯಾರಿಸಿ ಮೆಡಿಕಲ್ ಶಾಪುಗಳಿಗೆ ಹತ್ತು ರೂಪಾಯಿಗೆ ಸಾವಿರ ಎನ್ವಲಪ್ ಮಾರುವ ಕೆಲಸ ಮಾಡುತ್ತಾ, ಅಮ್ಮ ಹಾಕಿದ ಉಪ್ಪಿನಕಾಯಿ, ಹಪ್ಪಳ ಸಂಡಿಗೆ, ಚಟ್ನಿ ಪುಡಿಗಳ ಗ್ರಾಹಕರಿಗೆ ತಲುಪಿಸುವ ಹುಡುಗನಾಗಿ ದಿನ ಕಳೆಯುತ್ತಾ... ಕಳೆದು ಹೋಯಿತು ನನ್ನ ಬಾಲ್ಯ. ಕಾಲೇಜಿಗೆ ಬಂದರೂ ಕಾಲಿಗೆ ಒಳ್ಳೆಯ ಚಪ್ಪಲಿ ಕಂಡಿರಲಿಲ್ಲ. ಬಸ್ ಪಾಸ್ ಆಗುವವರೆಗೆ ಹತ್ತಾರು ಕಿಲೋಮೀಟರ್ ಕಾಲೇಜಿಗೆ ನಡೆದೇ ಹೋಗುತ್ತಿದ್ದೆ. ಜೀವನದ ಪ್ರಥಮ ೨೨ ವರ್ಷ ಪಕ್ಕದ ಮೈಸೂರು, ಬೆಂಗಳೂರಿನ ಎಂಜಿ ರಸ್ತೆ ಕೂಡಾ ನೋಡಿರದ ಈ ಹುಡುಗನಿಗೆ ನಂತರದ ೨೦ ವರ್ಷಗಳಲ್ಲಿ ೬೦ ದೇಶ ನೋಡುವ ಭಾಗ್ಯ ಸಿಕ್ಕಿತು ಎಂದರೆ ಕೆಲವೊಮ್ಮೆ ನನಗೇ ನಂಬಿಕೆ ಬರುವುದಿಲ್ಲ! 

ಮೇಲಿನದು ಬಾಲಿವುಡ್ ಚಿತ್ರದ ಕಥೆಯಿರಬಹುದು ಎನ್ನುವ ಭಾವನೆ ಎಂಥವರಿಗೂ ಬರುವುದು ಸಹಜ. ಆದರೆ ಇದು ಸತ್ಯ. ಬದುಕು ನನ್ನ ಪಾಲಿಗೆ ಎರಡೂ ಮುಖವನ್ನು ಬಹಳ ಕಡಿಮೆ ಸಮಯದಲ್ಲಿ ತೋರಿಸಿದೆ. ಬಡತನವೆಂಬ ಶಾಲೆಯಲ್ಲಿ ಒಬ್ಬ ವಿಧೇಯ ವಿದ್ಯಾರ್ಥಿ ಖಂಡಿತಾ ಕಲಿಯುತ್ತಾನೆ. ಬಡತನದ ಬದುಕನ್ನು ಬಹಳ ಹತ್ತಿರದಿಂದ ಕಂಡು ಅನುಭವಿಸಿದ ಆಧಾರದ ಮೇಲೆ ನಾನು ಕಂಡ ದೇಶಗಳ ಅನುಭವಗಳು ಅನಾವರಣವಾಗಿವೆ.’

ರಂಗಸ್ವಾಮಿಯವರು ಐಫೆಲ್ ಟವರ್ ಬಗ್ಗೆ ಹೇಳುತ್ತಾ ಅದಕ್ಕೆ ಬಳಕೆಯಾದ ಕಬ್ಬಿಣ, ಅದರ ಎತ್ತರ ಇವುಗಳ ಬಗ್ಗೆ ಹೇಳುವುದಿಲ್ಲ. ಆದರೆ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ವ್ಯಕ್ತಿಯ ಕಣ್ಣಿನಿಂದ ಅದನ್ನು ವರ್ಣಿಸುತ್ತಾರೆ. ಇವರು ಬರೆದ ದೇಶಗಳಿಗೆ ಯಾವ ಸಮಯ ಹೋಗೋದು ಉತ್ತಮ?, ಬಜೆಟ್ ಎಷ್ಟು ಬೇಕು? ಆ ದೇಶದ ಮೂಲಭೂತ ರಿವಾಜುಗಳೇನು? ವೀಸಾ ಬೇಕೇ? ಅವರ ಸಂಸ್ಕೃತಿ ನಮಗಿಂತ ಹೇಗೆ ಭಿನ್ನ? ಎಂಬ ಬಗ್ಗೆ ಸಾಮಾನ್ಯ ಆದರೆ ಅತ್ಯಂತ ಮಹತ್ವಪೂರ್ಣ ಮಾಹಿತಿಯನ್ನು ನೀಡುತ್ತಾರೆ. ಇದು ಅಪ್ಪಟ ಸಸ್ಯಾಹಾರಿಯಾಗಿರುವ ರಂಗಸ್ವಾಮಿಯವರ ಅನುಭವದ ಮಾಹಿತಿಗಳು. ಹಲವಾರು ದೇಶಗಳು ಸಂಪೂರ್ಣ ಮಾಂಸಹಾರಿ ದೇಶಗಳು. ಅಲ್ಲಿ ಸಸ್ಯಹಾರಿಗಳಿಗೆ ಏನೇನು ಸೌಲಭ್ಯಗಳಿವೆ ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. 

ಇವರು ಸ್ವಿಟ್ಜರ್ ಲ್ಯಾಂಡ್, ಬಾರ್ಸಿಲೋನಾ, ವಿಯಟ್ನಾಮ್, ಅಂದೋರಾ, ಶ್ರೀಲಂಕಾ, ಲಿಸ್ಟನ್, ದುಬೈ, ಕೌಲಾಲಂಪುರ ಹಾಗೂ ಫ್ರಾನ್ಸ್ ಮುಂತಾದ ೯ ಊರು ಅಥವಾ ದೇಶಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಇದನ್ನು ಓದಿದ ಬಳಿಕ ನೀವು ಬಹಳ ಸರಾಗವಾಗಿ, ಸಲೀಸಾಗಿ ಈ ದೇಶಗಳಿಗೆ ತೆರಳ ಬಹುದು. ಇವರು ಪ್ರತೀ ದೇಶದ ಭಾಷೆ, ರಾಜಧಾನಿ, ಜನಸಂಖ್ಯೆ, ಹಣ, ಸಮಯದ ವ್ಯತ್ಯಾಸ, ಯಾವ ಸಮಯದಲ್ಲಿ ಪ್ರವಾಸ ಮಾಡುವುದು ಉತ್ತಮ, ವೀಸಾ ಬಗ್ಗೆ, ಆ ದೇಶದಲ್ಲಿ ನಡೆದುಕೊಳ್ಳಬೇಕಾದ ರೀತಿ, ಸಸ್ಯಹಾರಿಗಳ ಸಮಸ್ಯೆ, ಭಾಷಾ ಸಮಸ್ಯೆ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಪ್ರತೀ ದೇಶದ ವಿವರಕ್ಕೂ ಮೊದಲು ಕ್ಯೂಆರ್ ಕೋಡ್ ನೀಡಿದ್ದಾರೆ. ನಿಮ್ಮ ಮೊಬೈಲ್ ಮೂಲಕ ಅದನ್ನು ಸ್ಕ್ಯಾನ್ ಮಾಡಿ ಆಯಾ ದೇಶಗಳ ಬಗ್ಗೆ ಅಧಿಕ ಮಾಹಿತಿಯನ್ನು ವಿಡಿಯೋ ಮೂಲಕ ಪಡೆದುಕೊಳ್ಳಬಹುದು. ಪ್ರತಿಯೊಂದು ದೇಶದ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ನೀಡಿದ್ದಾರೆ. ಪ್ರತೀ ಪುಟದ ಕೆಳಗಡೆ ವಿದೇಶದ ಬಗ್ಗೆ ವಿಶೇಷ ಮಾಹಿತಿಗಳ ಟಿಪ್ಸ್ ನೀಡಿದ್ದಾರೆ.

ಧೀರಜ್ ಪೊಯ್ಯೆಕಂಡ ಅವರು ಆಕರ್ಷಕ ಮುಖಪುಟವನ್ನು ವಿನ್ಯಾಸ ಮಾಡಿದ್ದಾರೆ. ಸುಮಾರು ೧೩೦ ಪುಟಗಳ ಈ ಪುಸ್ತಕವನ್ನು ಬೆಂಗಳೂರಿನ ಅಯೋಧ್ಯಾ ಪ್ರಕಾಶನದವರು ತಮ್ಮ ೧೩ನೆಯ ಪ್ರಕಟನೆಯಾಗಿ ಹೊರತಂದಿದ್ದಾರೆ. ಪ್ರಪಂಚ ತಿರುಗಾಡುವ ಆಶೆ ಉಳ್ಳವರು ಹಾಗೂ ಆಸಕ್ತರು ಅಗತ್ಯವಾಗಿ ಈ ಪುಸ್ತಕವನ್ನು ಓದಲೇ ಬೇಕು.