ಪಿಒಕೆ ವಿಷಯ ಮತ್ತೆ ಮುನ್ನೆಲೆಗೆ: ಪ್ರಧಾನಿ ಮೋದಿ ಚಾಣಾಕ್ಷ ನಡೆ

ಪಿಒಕೆ ವಿಷಯ ಮತ್ತೆ ಮುನ್ನೆಲೆಗೆ: ಪ್ರಧಾನಿ ಮೋದಿ ಚಾಣಾಕ್ಷ ನಡೆ

ಪಾಕಿಸ್ಥಾನದೊಂದಿಗೆ ಮಾತುಕತೆ ಏನಿದ್ದರೂ ಉಗ್ರವಾದ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ವಿಷಯಗಳಿಗೆ ಸೀಮಿತ ಎಂದು ಸ್ಪಷ್ಟಪಡಿಸುವ ಮೂಲಕ ಈ ಬಗೆಗಿನ ಎಲ್ಲ ವದಂತಿ, ಊಹಾಪೋಹಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರೆ ಎಳೆದಿದ್ದಾರೆ.

ಭಾರತ-ಪಾಕಿಸ್ಥಾನ ನಡುವೆ ಕದನ ವಿರಾಮ ಘೋಷಣೆಯಾದ ವೇಳೆ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಮಾತುಕತೆ ಮೂಲಕ ತಮ್ಮ ನಡುವಿನ ವಿವಾದ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಲು ಮುಂದಾಗಿರುವ ಕುರಿತಂತೆ ಹಲವು ಊಹಾಪೋಹಗಳು ಸೃಷ್ಟಿಯಾಗಿದ್ದವಲ್ಲದೆ ಭಾರತ ಸರಕಾರದ ಈ ನಡೆ ಒಂದಿಷ್ಟು ಅಚ್ಚರಿಗೂ ಕಾರಣವಾಗಿತ್ತು.

ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ. ಮಾಡಿದ ಭಾಷಣದಲ್ಲಿ ಭಯೋತ್ಪಾದನೆ ವಿಷಯದಲ್ಲಿ ಭಾರತ ಈ ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಬಂದಿರುವ ಶೂನ್ಯ ಸಹಿಷ್ಣುತೆಯ ನಿಲುವಿಗೆ ಬದ್ಧವಾಗಿದ್ದು ಇದರಲ್ಲಿ ರಾಜಿ ಯಾ ಸಡಿಲಿಕೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುವ ಮೂಲಕ ಕೇವಲ ಪಾಕಿಸ್ಥಾನಕ್ಕೆ ಮಾತ್ರವಲ್ಲದೆ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಪಾಕಿಸ್ಥಾನ ಪದೇಪದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾವಿಸಿ, ಭಾರತದ ವಿರುದ್ಧ ವೃಥಾ ಆರೋಪಗಳನ್ನು ಮಾಡುತ್ತಲೇ ಬಂದಿದ್ದು ಈ ವಿಷಯವನ್ನು ಜೀವಂತವಾಗಿರಿಸುವ ಪ್ರಯತ್ನ ನಡೆಸುತ್ತಲೇ ಬಂದಿದೆ. ಇದೇ ವೇಳೆ ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರನ್ನು ಒಳನುಸುಳಿಸಿ ಕಣಿವೆ ಪ್ರದೇಶದಲ್ಲಿನ ಶಾಂತಿಯನ್ನು ಕದಡುವ ಹುನ್ನಾರದಲ್ಲಿಯೂ ನಿರತವಾಗಿದೆ. ಆದರೆ ಪಾಕಿಸ್ಥಾನದ ಈ ಎಲ್ಲ ರಾಜತಾಂತ್ರಿಕ ಕುಟಿಲತೆ ಮತ್ತು ಕಣಿವೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳಿಗೆ ಭಾರತವು ತೀಕ್ಷ್ಣ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಈ ಎಲ್ಲ ಸಂದರ್ಭಗಳಲ್ಲಿಯೂ ಪಾಕಿಸ್ಥಾನದ ಮಾನ ಹರಾಜಾಗುತ್ತಲೇ ಬಂದಿದ್ದರೂ ಅದು ತನ್ನ ಎಡೆಬಿಡಂಗಿತನವನ್ನು ಬಿಡುತ್ತಿಲ್ಲ. ಕಳೆದೆರಡು ವಾರಗಳ ಬೆಳವಣಿಗೆಯೂ ಇದರ ಮುಂದುವರಿದ ಭಾಗವಾಗಿದ್ದು ಪಾಕಿಸ್ಥಾನ ಮತ್ತೆ ಮೈ ಸುಟ್ಟುಕೊಂಡಿದೆ. ಇಷ್ಟೆಲ್ಲ ಆಗಿಯೂ ಪಾಕಿಸ್ಥಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತದ ತಾಳ್ಮೆಯನ್ನು ಮತ್ತೊಮ್ಮೆ ಪರೀಕ್ಷಿಸ ಹೊರಟಿರುವುದು ಅದರ ವಿನಾಶಕ್ಕೆ ಮುನ್ನುಡಿಯಾಗಲಿದೆ ಎಂಬುದಕ್ಕೆ ಪ್ರಧಾನಿ ಮೋದಿ ಅವರು ನೀಡಿದ ಎಚ್ಚರಿಕೆಯ ಮಾತುಗಳೇ ಸಾಕ್ಷಿ

ಪಾಕಿಸ್ಥಾನದೊಂದಿಗಿನ ಮಾತುಕತೆ ಏನಿದ್ದರೂ ಉಗ್ರವಾದದ ನಿರ್ಮೂಲನೆಗೆ ಸೀಮಿತ. ಇದಾದ ಬಳಿಕವಷ್ಟೇ ವ್ಯಾಪಾರ, ನೀರು ಹಂಚಿಕೆ ಕುರಿತಂತೆ ಮಾತುಕತೆ. ಇದನ್ನು ಕೇವಲ ಪಾಕಿಸ್ಥಾನ ಮಾತ್ರವಲ್ಲ ಇಡೀ ವಿಶ್ವ ಅರ್ಥೈಸಿ ಕೊಳ್ಳಬೇಕು ಎನ್ನುವ ಮೂಲಕ ಪ್ರಧಾನಿ ಮೋದಿ ಅವರು ಭಾರತ-ಪಾಕಿಸ್ಥಾನ ನಡುವೆ ವಿಶ್ವದ ಯಾವುದೇ ಇತರ ರಾಷ್ಟ್ರಗಳ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ. ಎಂದು ಸೂಚ್ಯವಾಗಿ ಹೇಳಿದ್ದಾರೆ. ಈ ಬಾರಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡುವ ಸಂದರ್ಭದಲ್ಲಿ ಪ್ರಧಾನಿ ಅವರು ಪಾಕ್ ಆಕ್ರಮಿತ ಕಾಶ್ಮೀರದ ವಿಷಯವನ್ನು ನೇರವಾಗಿ ಪ್ರಸ್ತಾವಿಸಿ ಪಿಒಕೆ ಮೇಲಣ ಭಾರತದ ನ್ಯಾಯಯುತ ಹಕ್ಕನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಪ್ರಧಾನಿ ಮೋದಿ ಅವರ ಚಾಣಾಕ್ಷ ನಡೆ ಪಾಕಿಸ್ಥಾನ ಸರಕಾರಕ್ಕೆ ಮತ್ತೊಂದು ತಲೆನೋವನ್ನು ತಂದಿಟ್ಟಿರುವುದಂತೂ ಸತ್ಯ

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಈ ಭಾಷಣ, ಪಾಕಿಸ್ಥಾನ ಮತ್ತು ಜಗತ್ತಿಗೆ ಯಾವ ಸಂದೇಶವನ್ನು ರವಾನಿಸಬೇಕಿತ್ತೋ ಅದನ್ನು ರವಾನಿಸುವಲ್ಲಿ ಯಶಸ್ವಿಯಾಗಿರುವುದೇ ಅಲ್ಲದೆ ಪಾಕಿಸ್ಥಾನದ ಬಗೆಗಿನ ತನ್ನ ಧೋರಣೆಯನ್ನು ಭಾರತ ಇನ್ನಷ್ಟು ಬಿಗಿಗೊಳಿಸಲಿದೆ ಎಂಬುದನ್ನು ದೃಢಪಡಿಸಿದೆ.

ಕೃಪೆ: ಉದಯವಾಣಿ, ಸಂಪಾದಕೀಯ