ಪಿಟ್ಕಾಯಣ
![](https://saaranga-aws.s3.ap-south-1.amazonaws.com/s3fs-public/styles/medium/public/%E0%B2%AA%E0%B2%BF%E0%B2%9F%E0%B3%8D%E0%B2%95%E0%B2%BE%E0%B2%AF%E0%B2%A31.jpg?itok=oyFYKXDG)
‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದುಗರನ್ನು ಕುತೂಹಲಿಗರನ್ನಾಗಿಸುವುದಲ್ಲದೆ, ಅವರಲ್ಲಿ ಬೆರಗನ್ನೂ ಉಂಟುಮಾಡುತ್ತವೆ. ಅಂತಹ ಕೆಲವನ್ನು ಇಲ್ಲಿ ಹೆಸರಿಸುವುದು ಸೂಕ್ತ-ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ; ವಿದ್ಯುತ್ ಖಾಸಗೀಕರಣಕ್ಕೆ ಗಂಟಲಲ್ಲಿ ಸಿಕ್ಕ ಮುಳ್ಳು; ಹೆದ್ದಾರಿ ಅಭಿವೃದ್ಧಿಯನ್ನು ‘ಹುಲಿ ಸವಾರಿ’ ಮಾಡಿಕೊಂಡಿರುವ ಗಡ್ಕರಿ ಸಾಹೇಬರು; ‘ಭಾರತ್ ನೆಟ್’-ಗೋಲಾಗದಿದ್ದದ್ದಕ್ಕೆ ಗೋಲ್ಪೋಸ್ಟ್ ಖಾಸಗೀಕರಣ?!; ಗಾಳಿ ಬಂದತ್ತ ತೂರಿಕೊಳ್ಳುವಾಗಲೂ ವಿಳಂಬ; ಕಳೆದುಕೊಂಡ ‘ಸೆಮಿಕಂಡಕ್ಟರ್’ ಅವಕಾಶಗಳು!; ಔಷಧಿ ರಂಗದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸತೊಡಗಿರುವುದು!; ‘ನೆಟ್ ಝೀರೊ’: ಕುಂಟನ ಮೇಲೆ ಕುರುಡ ಕೂತಿದ್ದಾನೆ, ದಾರಿ ಸಾಗುವುದೆಂತೋ ನೋಡಬೇಕು; ಡೇಟಾ ಮಾರುಕಟ್ಟೆಯ ಕೋಳಿ ಜಗಳ: ಮೂಡೀಸ್ v/s ಆಧಾರ್; ಮಾಹಿತಿ ಹಕ್ಕು ಕಾಯ್ದೆಗೆ ‘ದಯಾಮರಣ’ದ ಭಾಗ್ಯ: ಹಲ್ಲುಗಳು ತೋರಿಸೋಕೆ ಬೇರೆ-ತಿನ್ನೋಕೆ ಬೇರೆ ಇವೆಯೆ?; ಪ್ರತೀ ಚುನಾವಣೆಯ ಸಂತೆಗೆ ಇವಿಎಂ ವಿವಾದದ ಮೂರು ಮೊಳ ಹಾಜರ್!; ಡಿಜಿಟಲ್ ಭಾರತ ಎಂಬುದು ಹಾವನ್ನು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಆಗದಿರಲಿ; ಅರಸನ ಅದೃಶ್ಯ ಉಡುಪು ಮತ್ತು ಬಡತನ ನಿವಾರಣೆಯ ಸಮೀಕ್ಷೆ!; ಇಂಧನ: ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ; ಈ ಬಾರಿಯ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ; ವಿಕೆಟ್ ಇಲ್ಲದ ಕ್ರಿಕೆಟ್ ಆಟ!; ದುಡುಕ ಮನ್ನಿಸು ಪ್ರಭುವೆ...; ಸೂರ್ಯಂಗೇ ಟಾರ್ಚ್ ಹಿಡಿದ ‘ಡಿಯರ್ ಮೀಡಿಯಾ’... ಮುಂತಾದುವು.
ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ ಎನ್ನುವ ಲೇಖನವನ್ನು ಸ್ವಲ್ಪ ಗಮನಿಸೋಣ-ಕೋವಿಡ್ ಜಾಡ್ಯದಿಂದ ದಿಟವಾಗಿಯೂ ನಾವು, ಪಕ್ಕಾ ಸುಧಾರಿಸಿಕೊಂಡಿದ್ದೇವೆಯೇ?! ಇನ್ನೂ ಸಮಯ ಬೇಕಾಗಿದೆ. ಆದರೆ, ಕೋವಿಡ್ ಸನ್ನಿವೇಶದಲ್ಲಿ ಬಚ್ಚಿಟ್ಟ ಸಂಗತಿಗಳು ಮತ್ತಷ್ಟು ಹೊರಬರುತ್ತಲೇ ಇವೆ. ಆದರೆ, ಇದನ್ನು ಲೇಖಕರು ‘ಬಿಸಿಲುಗುದುರೆ’ ಎಂದಾಗ, ಕೋವಿಡ್ ಸಂದರ್ಭದ ‘ಹಠಾತ್ ಸಾವು’ ಕುರಿತ ಅಧ್ಯಯನ ಫಲಿತಾಂಶ ಏನನ್ನೂ ಸೂಚಿಸುತ್ತಿಲ್ಲ ಎನ್ನುವ ಸೂಚನೆಯನ್ನು ನೀಡುತ್ತಾರೆ. ಇತರ ಲೇಖನಗಳೂ ಸಹ ಅಂತಹ ಗಂಭೀರ ಸಂಗತಿಗಳ ಆಗರವೇ ಆಗಿವೆ.
ಅಂದರೆ ಒಂದು ಲೇಖನ, ಲೇಖನವಾಗಬೇಕಾದರೆ ಅದಕ್ಕೆ ಅಗತ್ಯವಾದ ಸಂಶೋಧನೆ ಬೇಕಾಗುತ್ತದೆ. ಇಲ್ಲವಾದರೆ ಅದು ಕೇವಲ ಹುಸಿಯಾಗಿಬಿಡುತ್ತದೆ. ಆದ್ದರಿಂದ ಈ ‘ಪಿಟ್ಕಾಯಣ’ ಪದವೇ ತಮಾಷೆಯಾಗಿದ್ದರೂ ಅದು, ಅಷ್ಟಕ್ಕೆ ನಿಲ್ಲುವುದಿಲ್ಲ; ಅದು ಸಂಶೋಧನೆಯನ್ನು ಅರಗಿಸಿಕೊಂಡು, ಸರಳವಾಗಿ ಓದಿಸಿಕೊಳ್ಳುತ್ತದೆ; ಅಲ್ಲಿ ಅಗತ್ಯವಾದ ಅಂಕಿ-ಅಂಶಗಳನ್ನು ಜತನದಿಂದ ಹೆಕ್ಕಿ ನೀಡುತ್ತದೆ, ಆ ಮೂಲಕ ನಮ್ಮನ್ನು ಮತ್ತಷ್ಟು ಚಿಂತನೆ, ರ್ಚೆಗೆ ತೊಡಗಿಸುತ್ತದೆ; ಅಂತಿಮವಾಗಿ ನಾವೇ ಒಂದು ನರ್ಣಯವನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ದಿಟವಾಗಿಯೂ ಇಲ್ಲಿನ ಬರಹದ ತಾಕತ್ತು!
ತಮ್ಮ ಕೃತಿಯ ಬಗ್ಗೆ ರಾಜಾರಾಂ ತಲ್ಲೂರು ಹೀಗೆ ಬರೆದಿದ್ದಾರೆ… “ಇದೊಂದು ಕಥೆ, ಬಾಲ್ಯದಲ್ಲಿ ಕೇಳಿದ್ದು. ಹಾಗಾಗಿ ಈಗ ಇದು ಒಂದಕ್ಕಿಂತ ಹೆಚ್ಚು ಕಥೆಗಳ ಮಿಶ್ರಣವೂ ಆಗಿರಬಹುದು. ಇರಲಿ, ಓದಿಕೊಳ್ಳಿ.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನು ರಾವಣನನ್ನು ಕೊಂದು ಕಳೆದು, ತನ್ನ ವಾನರ ಸೇನೆಯೊಂದಿಗೆ ಅಯೋಧ್ಯೆಯಲ್ಲಿ ಚಕ್ರವರ್ತಿಯಾಗಿ ಪ್ರತಿಷ್ಠಾಪನೆಗೊಂಡ ಬಳಿಕ, ತನ್ನ ವಾನರ ಸೇನೆಗೆ ತನ್ನ ಪಟ್ಟಾಭಿಷೇಕದ ಪ್ರಯುಕ್ತ ಔತಣಕೂಟ ಏರ್ಪಡಿಸುತ್ತಾನೆ.
ಔತಣಕೂಟಕ್ಕೆ ಬಂದ ವಾನರ ಪಡೆಯನ್ನು ಸಾಲಾಗಿ ಕುಳ್ಳಿರಿಸಿ, ಬಾಳೆಯೆಲೆ ಹಾಸಿ, ಊಟ ಬಡಿಸಲಾಗುತ್ತದೆ. ಉಪ್ಪು, ಉಪ್ಪಿನಕಾಯಿ, ಕೋಸಂಬರಿ... ಹೀಗೆ (ಹೆಚ್ಚಿನಂಶ ಕಥೆ ಕಟ್ಟಿದವರು ಕರಾವಳಿ ಮೂಲದವರು!). ಈ ಕೋತಿಗಳು ಎಲ್ಲ ಬಡಿಸುವ ತನಕ ಕಾದು, ಪರಿಷೇಚನ ವಿಧಿ ಪೂರೈಸಿ, ಊಟ ಆರಂಭಿಸುವವರಲ್ಲ. ಎಲೆಗೆ ಬಿದ್ದ ಮಾವಿನ ಮಿಡಿ ಉಪ್ಪಿನಕಾಯಿಯನ್ನು ತಕ್ಷಣ ಎತ್ತಿಕೊಂಡು ಪರೀಕ್ಷಿಸಿದ ಕೋತಿಯೊಂದು ಅದನ್ನು ಮೂಸಿ, ಸಣ್ಣಗೆ ನೆಕ್ಕಿ, ಹಿಂದೆ-ಮುಂದೆ ಎಲ್ಲ ತಿರುಗಿಸಿ ನೋಡಿತು. ಈ ಅಪ್ಪೆಮಿಡಿ ಉಪ್ಪಿನಕಾಯಿಯನ್ನು ಹಿಡಿದು ಸ್ವಲ್ಪ ಒತ್ತಿದಾಗ ಆದರೊಳಗಿದ್ದ ಎಳೆಯ “ಕೋಂಗಿಲು" ತುಂಡು (ಬೆಳೆದ ಮೇಲೆ ಗೊರಟಾಗುವ ಭಾಗ) ಪಿಟ್ ಎಂದು ಹೊರ ಹಾರಿ ಅಷ್ಟೆತ್ತರಕ್ಕೆ ಚಿಮ್ಮಿತು.
ಶ್ರೀರಾಮಚಂದ್ರನು ಊಟಕ್ಕೆ ಕುಳಿತ ತನ್ನ ವಾನರ ಸೇನೆಯ ಜೊತೆ, ರಾವಣನನ್ನು ಕೊಂದು ಕಳೆದ ರಾಮಾಯಣವನ್ನೆಲ್ಲ ಮತ್ತೆ ನೆನಪು ಮಾಡಿಕೊಂಡು ಲೋಕಾಭಿರಾಮದಲ್ಲಿ ತೊಡಗಿದ್ದನು. ಈ ನಡುವೆ ಒಂದು "ಕೋಂಗಿಲು" ಪಿಟ್ ಎಂದು ಹಾರಿದ್ದೇ ತಡ- ಸಾಲಾಗಿ ಊಟಕ್ಕೆ ಕುಳಿತಿದ್ದ ಕಪಿಸೇನೆ, ತಮ್ಮ ತಮ್ಮ ಎಲೆಗೆ ಬಿದ್ದ ಉಪ್ಪಿನಕಾಯಿಯನ್ನು ಹಿಡಿದು ಒತ್ತಿ, ಅದು “ಪಿಟ್" ಎಂದು ಹೊರಚಿಮ್ಮುವುದನ್ನು ಕಂಡು ಸಂತಸದಿಂದ ಕೇಕೆ ಹಾಕುತ್ತಾ, ಅದು ಚಿಮ್ಮುವ ಎತ್ತರಕ್ಕೆ ತಾವೂ ಚಿಮ್ಮಿ ನೆಗೆಯುತ್ತಾ, ಇಡೀ ಊಟದ ಮನೆಯು ರಂಪಾರೂಟಿ ಆಗಿಬಿಟ್ಟಿತು.
ಕಡೆಗೆ ಶ್ರೀರಾಮಚಂದ್ರ, ಎಲ್ಲ ಕಪಿಗಳನ್ನು ಗದರಿ, ಎಲ್ಲಕ್ಕೂ ಎರಡೇಟು ಬಿಗಿದು ಕುಳ್ಳಿರಿಸಬೇಕಾಯಿತಂತೆ. ಆ ಬಳಿಕ ಊಟ ಸುಸೂತ್ರ ಮುಗಿಯಿತು. ಈ ಎರಡೆರಡೇಟು ಕಡೆಕಡೆಗೆ ಕಪಿಸೇನೆಗೆ ಎಷ್ಟು ಅಭ್ಯಾಸ ಆಗಿಬಿಟ್ಟಿತೆಂದರೆ, ಅವು ಊಟಕ್ಕೆ ಬಂದಾಗಲೆಲ್ಲ "ಕೊಡುವ ಮರ್ಯಾದೆ ಕೊಟ್ಟರೆ ಮಾತ್ರ" (ಅಂದರೆ ಎರಡೇಟು ಬಿಗಿದು ಊಟಕ್ಕೆ ಕುಳ್ಳಿರಿಸಿದರೆ ಮಾತ್ರ) ತಾವು ಶಿಸ್ತಿನಿಂದ ಊಟ ಮಾಡುವುದು ಎಂದು ಹೇಳುತ್ತಿದ್ದುವಂತೆ. ನಾವೆಲ್ಲ ಹುಡುಗರ ಗುಂಪು ಸಣ್ಣವರಿದ್ದಾಗ, ಊಟದ ಮನೆಯಲ್ಲಿ ಗದ್ದಲ ಎಬ್ಬಿಸಿದರೆ, ಆಗೆಲ್ಲ ಈ ಕಪಿಗಳು "ಕೊಡುವ ಮರ್ಯಾದೆ ಕೊಟ್ಟರೆ ಮಾತ್ರ" ಸುಸೂತ್ರ ಊಟ ಮಾಡಿ ಹೊರನಡೆಯುವುದು ಎಂಬ ಮಾತು ಬರುವುದಿತ್ತು.
ಇದು ರಾಮಾಯಣದಲ್ಲಿ ನಾನು ಕೇಳಿರುವ "ಪಿಟ್ಕಾಯಣ"ದ ಕಥೆ. ಈ "ಪಿಟ್ಕಾಯಣ" ಪದ ನನಗೆ ಬಾಲ್ಯದಿಂದಲೂ ಫ್ಯಾಸಿನೇಟಿಂಗ್ ಪದ. 'ವಾರ್ತಾಭಾರತಿ'ಯಲ್ಲಿ ನನ್ನ ಈ ಅಂಕಣಕ್ಕೆ "ಪಿಟ್ಕಾಯಣ" ಎಂಬ ಹೆಸರಿಟ್ಟಾಗ, ಹಾಗೆಂದರೇನು? ಎಂದು ಕೇಳಿದವರು ಹಲವರು. ಈ ಕಥೆಯನ್ನು ಈಗ ನೆನಪಿಸಿಕೊಳ್ಳಲು, ಇದೂ ಒಂದು ಕಾರಣ.
ಇತ್ತೀಚೆಗೆ ಹಿರಿಯ ಲೇಖಕರೊಬ್ಬರು, ಸೋಷಿಯಲ್ ಮೀಡಿಯಾದಲ್ಲಿ ನನ್ನ ಪ್ರೆಸೆನ್ಸನ್ನು (ಸ್ವಲ್ಪ ಹೆಚ್ಚಿದೆ ಎಂದವರಿಗೆ ಅನ್ನಿಸಿರಬೇಕು!) ಗಮನಿಸಿ, ನೀವು ದಿನಕ್ಕೆ ಎಷ್ಟು ಸಮಯವನ್ನು ಅಲ್ಲಿ ಕಳೆಯುವಿರಿ ಎಂದು ಕೇಳಿದ್ದರು. ನಿಜಕ್ಕೆಂದರೆ, ಆ ಪುಟಗಳು ನನ್ನ ಡೆಸ್ಕ್ನಲ್ಲಿ ಅವುಗಳ ಪಾಡಿಗೆ ತೆರೆದಿರುತ್ತವೆ. ನನ್ನ ಆಸಕ್ತಿಯ ಸುದ್ದಿಯೊಂದು ಕಾಣಸಿಕ್ಕಿದರೆ, ಅದನ್ನು ಎತ್ತಿಟ್ಟುಕೊಂಡು, ಆ ಕ್ಷಣಕ್ಕೆ ಅದರ ಕುರಿತು ಅನ್ನಿಸಿದ್ದನ್ನು ದಾಖಲಿಸುವುದಕ್ಕೆ ಸೋಷಿಯಲ್ ಮೀಡಿಯಾ ನನಗೊಂದು ಕರಡು ತಾಣ. ವ್ಯಾವಹಾರಿಕ ಗಡಿಬಿಡಿಗಳ ನಡುವೆಯೂ, ಅಲ್ಲಿ ಕಳೆಯುವುದಕ್ಕಿಂತ ಹೆಚ್ಚು ಸಮಯವನ್ನು ನಾನು ಪತ್ರಿಕೆಗಳನ್ನು ಓದುತ್ತಾ ಕಳೆಯುತ್ತೇನೆ.
ಪಿಟ್ಕಾಯಣದ ಬರೆಹಗಳು ಹೆಚ್ಚಾಗಿ, ಅವು ಪ್ರಕಟಗೊಳ್ಳುವ ಹಿಂದಿನ ವಾರದಲ್ಲಿ ಸಂಭವಿಸಿದ್ದ ಸುದ್ದಿಯೊಂದರ ಬೆನ್ನು ಹತ್ತಿ ಸಂಗ್ರಹಿಸಿದ ಮಾಹಿತಿಗಳು ಹಾಗೂ ಆ ಸುದ್ದಿಯ ಕುರಿತು ನನ್ನ ಮಾಹಿತಿಯುತ ಅಭಿಪ್ರಾಯಗಳ ಸಂಗ್ರಹವೇ ಆಗಿವೆ. ಇದನ್ನು ಸಾಧ್ಯಗೊಳಿಸಿರುವುದು ಬಾಲ್ಯದಿಂದಲೂ ನಾನು ರೂಢಿಸಿಕೊಂಡು ಬಂದಿರುವ ಈ ಟ್ರ್ಯಾಕಿಂಗ್ ಕೌಶಲ.
ಸೋಷಿಯಲ್ ಮೀಡಿಯಾದಲ್ಲಿ ಈ ಕರಡು ಬರೆಹಗಳನ್ನು ಗಮನಿಸಿದ ವಾರ್ತಾಭಾರತಿಯ ಗೆಳೆಯ ಬಿ.ಎಂ. ಬಶೀರ್ ಅವರು, ಅಪರೂಪಕ್ಕೊಮ್ಮೆ ಅಲ್ಲಿ ಬರೆಯುತ್ತಿದ್ದ ನನಗೆ, ಪ್ರತೀವಾರದ ಅಂಕಣದ ರೂಪದಲ್ಲಿ ಅವನ್ನು ಬರೆಯಬೇಕೆಂದು ಸೂಚಿಸಿದಾಗ ಒಪ್ಪಿಕೊಂಡು, ಈಗ ಒಂದು ವರ್ಷ ದಾಟಿದೆ. ನನ್ನ ಪ್ರತೀ ವಾರದ ಕರಡು ಬರೆಹಗಳಲ್ಲಿ ಒಂದಕ್ಕೆ - ಪ್ರಕಟಿಸಬಲ್ಲ ಅಂಕಣ ಬರೆಹದ ರೂಪ ನೀಡುವುದು ನನಗೀಗ ಅನಿವಾರ್ಯ ಆಗಿದೆ. ವೃತ್ತಿ ಬರೆಹಗಾರನಾಗಿ ನನ್ನ ಪತ್ರಿಕಾ ಬರೆಹಗಳ ಕೌಶಲವನ್ನು ಸಾಣೆ ಹಿಡಿದಿಟ್ಟುಕೊಳ್ಳಲು ಇದೊಂದು ಸದವಕಾಶ ಎಂದುಕೊಂಡಿದ್ದೇನೆ. ಹೀಗೆ ಸಿದ್ಧಗೊಂಡ ಮೊದಲ ಒಂದು ವರ್ಷದ ಪಿಟ್ಯಾಯಣ ಬರೆಹಗಳ ಸಂಗ್ರಹ ಇದು.”