ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ! ಭಾಗ‌ ‍ 2

ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ! ಭಾಗ‌ ‍ 2

ಪಿ. ಬಿ. ಎಸ್. ಜೊತೆ ಹೀಗೊಂದು ಗಾಯನ - ನಮನ!

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ - ಪಲ್ಲವಿಯಾದರೂ ಬಂದೇ ತೀರುವುದು ಎಂದು ನನಗೆ ಗೊತ್ತು. ಆದಿಯಲ್ಲಿ ಗಣೇಶನ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಘ್ನ ವಿನಾಯಕನನ್ನು ಸ್ತುತಿಸೋಣ....

"ಮೂಷಿಕ ವಾಹನ ಮೋದಕ ಹಸ್ತಾ, ಚಾಮರ ಕರ್ಣ ವಿಳಂಭಿತ ಸೂತ್ರಾ! ಶರಣು ಶರಣಯ್ಯಾ ಶರಣು ಬೆನಕಾ, ನೀಡಯ್ಯ ಬಾಳು ಬೆಳಗುವಾ ತನಕ....!
ಎಂದು ಭಕ್ತಿಯಿಂದ ಪಿ.ಬಿ.ಎಸ್ ಹಾಡಲು.....ಎಲ್ಲ ಬೇರೆ ಬೇರೆ ಅವತಾರದ ದೇವರುಗಳ ಪ್ರತ್ಯಕ್ಷ ಸಿರಿಯೇ ಅಲ್ಲಿ ಅವತರಿಸಿತು. ಸಾಕ್ಷಾತ್ ನಾರಾಯಣನನ್ನು ಕಂಡಂತಾಗಿ...
"ಕಾಪಾಡು ಶ್ರೀ ಸತ್ಯ ನಾರಾಯಣ, ಪನ್ನಗ ಶಯನಾ..." ಹೇಳಿದಂತೆ ಏನೋ ಮರೆಯಾಗಿ ಗರ್ಭಗುಡಿಯ ಬಾಗಿಲು ಹಾಕಿದಂತಾಯ್ತು. ಪಿ. ಬಿ. ಎಸ್ ಅಲ್ಲಿಗೇ ನಿಲ್ಲಿಸಲಿಲ್ಲ ಹಾಡುವುದನ್ನು...
"ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ನರಹರಿಯೇ"....ಎಂದು ಹಾಡಲಾರಂಬಿಸಿದರು. ಇನ್ನೂ ದರುಶನ ಕಾಣದೆ, " ಭಗವಂತ ಕೈ ಕೊಟ್ಟ.." ಎನ್ನುವಾಗಲೇ ರಂಗ ಒಂದು ಕ್ಷಣಕ್ಕೆ ಬಂದು ಮರೆಯಾದಂತೆನಿಸಿತು. ಇನ್ನಷ್ಟು ಭಕ್ತಿಯಿಂದ ಹಾಡಲಾರಂಭಿಸಿದರು "ರಂಗಾ, ವಿಠಲಾ, ಎಲ್ಲಿ ಮರೆಯಾದೆ? ಏಕೇ ದೂರಾದೆ?...." ಎಂದು ಭಕ್ತಿ ಆವೇಶದಿಂದ ಪಾಂಡುರಂಗ ವಿಠಲನನ್ನು ಕರೆದು ಕಡೆಗೆ ಅವನೊಂದಿಗೆ ರಂಗಛಾಯೆಗೆ ಹೊರಟರು.

ಪಿ.ಬಿ. ಎಸ್ ಹಾಡದ ಹಾಡಿನ ವಸ್ತುಗಳೇ ಇಲ್ಲವೆನ್ನುವಂತಾಗಿದೆ. ಅಷ್ಟು ಹಾಡುಗಳನ್ನು ಕನ್ನಡ ಕುಲಬಾಂಧವರಿಗೆ ನೀಡಿದ್ದಾರೆ. ಕನ್ನಡಾಂಭೆಯೇ ಧನ್ಯಳಾಗಿದ್ದಾಳೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.

ಭಕ್ತಿ ಗೀತೆಗಳಲ್ಲಿ ಭಗವತ್ಲೀಲೆಯೇ ಅಡಗಿರುತಿತ್ತು. ಮೇಲೆ ಬರೆದಂತೆ ಅವರ "ಶರಣು ಶರಣಯ್ಯ ಶರಣು ಬೆನಕ" ಅಂತೂ ಎಲ್ಲರ ಅಚ್ಚು ಮೆಚ್ಚು. ಎಲ್ಲಾರು ಒಂದಾಗಿ ನಿನ್ನ, ನಕ್ಕು ನಮಿಸೋದು ನೋಡೋಕೆ ಚೆನ್ನ ಅಂತ ಹಾಡುತ್ತಿದ್ದರೆ ಸಾಕು ಅಲ್ಲಿ ಪ್ರೀತಿ, ಭಕ್ತಿ, ಶ್ರದ್ಧೆ ವಿನಾಯಕನ ಮೇಲೆ ಒಟ್ಟಿಗೇ ಉಂಟುಮಾಡುತ್ತೆ. ಪಿ.ಬಿ.ಎಸ್ ಅವರು ಭಕ್ತಿ ಭಾವವನ್ನು ಹೇಗೆ ತರಿಸೋದು ಹಾಡಿನಲ್ಲಿ, ಅದನ್ನು ಹೇಗೆ ಹಾಡೊದು ಅಂತ ತೋರಿಸಿಕೊಟ್ಟಿದ್ದಾರೆ. ಗಣೇಶ ಎಲ್ಲೇ ಹೊರಟಿರಲಿ, ಅಲ್ಲಿಗೆ ಧಾವಿಸಬೇಕು, ಹಾಗೆ ಕರೆದಿದ್ದಾರೆ. ಪ್ರತೀ ಹಬ್ಬ - ಹುಣ್ಣಿಮೆ, ಶಾಲಾ ದಿನಗಳ ಆಚರಣೆ, ಮತ್ತಿತರ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಹಾಡಾಗಿ ಹೇಳಿದ್ದು ಲೆಕ್ಕ ವಿಲ್ಲದಷ್ಟು. ಮೊನ್ನೆತಾನೆ ರಾಗ ಸಂಗೀತ ಸಂಧ್ಯಾದಲ್ಲೂ ಇದನ್ನು ಕೇಳಿ ಎಲ್ಲರೂ ಅವರೊಡನೆ ಹಾಡಿ ಆನಂದಿಸಿದ್ದಾರೆ. ರಂಗಾ ವಿಠಲಾ ..ಏಲ್ಲಿ ಮರಯಾದೆ ಅಂತೂ ಕಥೆಯನ್ನೇ ಹೇಳಿ, ಕಂಬನಿ ಬರಿಸುತ್ತೆ. ಅಷ್ಟು ಭಕ್ತಿ ಭಾವದಿಂದ ತುಂಬಿದ ಭಾವುಕತೆ ಅದರಲ್ಲಿದೆ. ಇದಲ್ಲದೇ "ಕಾಪಾಡು ಶ್ರೀ ಸತ್ಯನಾರಾಯಣ, ಪನ್ನಗ ಶಯನಾ..., ಹರಿನಾಮವೇ ಚಂದಾ, ತೂಗುವೇ ರಂಗನಾ ತೂಗುವೇ ಕೃಷ್ಣನಾ, ಇನ್ನೂ ಹಲವಾರು ಭಕ್ತಿಗೀತೆಗಳನ್ನು ನಮಗೆ ನೀಡಿದ್ದಾರೆ. ಭಕ್ತಿ ಸೂಸುವ ಇತರ ಗೀತೆಗಳಾದ ."ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ..", ಭಗವಂತ ಕೈಕೊಟ್ಟ..., ಗೊಂಬೆಯಾಟವಯ್ಯ, ಆ ದೇವನಾಡಿದ ...ಇವೂ ಕೂಡ ಭಕ್ತಿ ಭಾವವನ್ನು ಬಿತ್ತರಿಸುವಲ್ಲಿ ಯಶಸ್ವಿಯಾಗಿವೆ.

ಭಕ್ತಿಯಿಂದ ದೇಶಭಕ್ತಿಗೆ, ಕನ್ನಡನಾಡಿನ ಒಲುಮೆ, ಸಿರಿ, ಸಂಪತ್ತು ಮತ್ತು ನಾಡಹಬ್ಬದ ದಾರಿಯಲ್ಲಿ ಪಯಣಿಸಿದರೆ...........

ದಾರಿಯುದ್ದಕ್ಕೂ ದೇಶಪ್ರೇಮ, ಕನ್ನಡನಾಡಿನ ಪ್ರೀತಿ, ಸೌರಭ, ಪ್ರೇಮದ ಉಸಿರಿನಲಿ ಉಲಿದ ಉಲಿಗಳು ಕಾಣಬರುತ್ತೆ. ಹೊಸ ಮನೋಲ್ಲಾಸ ಅನುಭವ ಉಂಟಾಗುತ್ತದೆ.
ಮೊದಲನೆಯದಾಗಿ "ಬಾ ತಾಯೆ ಭಾರತಿಯೆ ಭಾವ ಭಾಗೀರತಿಯೆ..." ಯಾರಿಗೆ ಗೊತ್ತಿಲ್ಲ, ಯಾರು ಕೇಳಿಲ್ಲ?, ಅದನ್ನು ನಾನು ಕೇಳೇ ಇಲ್ಲ. ಅರ್ಥಾತ್ ಎಲ್ಲರೂ ಕೇಳಿ, ಆನಂದಿಸಿರುವ ಭವ್ಯ ಭಾರತವನ್ನು ಕಹಳೆ ಊದಿ ಕರೆದಂತಿದೆ. ಈ ಬರಹ ಇಲ್ಲೇ ಬಿಟ್ಟು ಒಂದು ಸಲ ಕೇಳೋಣವೆನ್ನಿಸುತಿದೆ. ಮಧುರವಾದ ಈ ಹಾಡನ್ನು ಪಿ.ಬಿ.ಎಸ್ ಕಂಠಸಿರಿಯಲ್ಲಿ ಆಲಿಸುತ್ತಿದ್ದರೆ, ಯಾರಿಗಾದರೂ ದೇಶ ಪ್ರೇಮದ ಭಕ್ತಿ, ಭಾವುಕತೆ ಬಂಧಿಸಿ ಹಿಡಿದಿಡಿಸುವುದರಲ್ಲಿ ಸಂಶಯವೇ ಇಲ್ಲ. "ಇಳಿದು ಬಾ ತಾಯೇ ಇಳಿದು ಬಾ, ಹರನ ಜಡೆಯಿಂದ ಹರಿಯ ಅಡಿಯಿಂದ..." ದೇಶಭಕ್ತಿಯ ಜೊತೆ, ದಿವ್ಯ ಭಕ್ತಿಯನ್ನೂ ಸೂಸುವ, ಪಂಚತತ್ವಗಳನ್ನೂ ಪರಿಚಯಿಸುವ ಈ ಕೃತಿ ದೇವಿಯ ಆದಿಶಕ್ತಿಯ ಪ್ರತೀಕವಾಗಿದೆ. ಭಾವೋಲ್ಲಾಸದೊಂದಿಗೆ ಮನೋಲ್ಲಾಸವನ್ನೂ ಪರಿಣಮಿಸುವುದು. ’ಕನ್ನಡನಾಡಿನ ವೀರರ ಮಣಿಯ ಗಂಡು ಭೂಮಿಯ ವೀರ ನಾಡಿನ ಚರಿತೆಯ’ನ್ನು ಪಿ.ಬಿ. ಎಸ್ ಎಷ್ಟು ಚೆನ್ನಾಗಿ ಹಾಡಿದರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ನಾಡಹಬ್ಬವನ್ನು ರಸವತ್ತಾಗಿ ಹಾಡಿ ತೋರಿಸಿದ ಗೀತೆ " ಮೈಸೂರು ದಸರಾ ಎಷ್ಟೊಂದು ಸುಂದರಾ...". "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ...."ಕಷ್ಟಗಳ ಮಳೆಯಿಂದ ನಮ್ಮನ್ನೆಲ್ಲಾ ಕಾಪಾಡು ಎಂದು ಕೇಳಿಕೊಂಡ ಗೀತೆ ಇದಾಗಿದೆ. ಇನ್ನೂ ಹಲವಾರು ದೇಶಭಕ್ತಿ, ನಾಡಭಕ್ತಿ ಗೀತೆಗಳ ರಸದೌತಣವನ್ನೇ ಪಿ. ಬಿ. ಎಸ್ ಅವರು ನಮಗೆ ನೀಡಿದ್ದಾರೆ, ಅವು ಸರ್ವಕಾಲಕ್ಕೂ ಸಕಾಲಿಕವಾಗಿವೆ: ಹಾಗೂ ಅಮರವಾಗಿರುವಲ್ಲಿ ನಿಸ್ಸಂಶಯವಾಗಿದೆ.

ಪ್ರಣಯದ ದಾರಿಯಲ್ಲಿ ಪಯಣಿಸುವ ಮೊದಲು ಕಷ್ಟಗಳನ್ನು ಪರಿಹರಿಸೋಣ. ಏನಂತೀರ?

"ದೀನ ನಾ ಬಂದಿರುವೆ...." ಇದು ಭಾವ ಬಿಂದುಗಳನ್ನು (ಕಂಬನಿ) ಕಣ್ಣಲ್ಲಿ ಹರಿಸುವಲ್ಲಿ ಬಿಲ್ಕುಲ್ ಸತ್ಯ. ಎಷ್ಟು ಭಾವನೆ ಭರಿತವಾಗಿದೆ ಎಂದರೆ ಕಣ್ಣೀರೇ ಇದಕ್ಕೆ ಸಾಕ್ಷಿಯಾಗಿದೆ. ಕಣ್ಣೀರು ಬರಲಿಲ್ಲವಾದರೆ ಇದಕ್ಕನುಗುಣವಾದ ಭಾವ ಹಾಡುವುದರಲ್ಲಿರಲಿಲ್ಲ ಎಂದಲ್ಲವೇ? ಪಿ. ಬಿ. ಎಸ್ ಹಾಡಿರುವ ಹಾಡುಗಳ ಸಾಹಿತ್ಯ ಬರೆದವರು ಹಲವಾರು ಉತ್ತಮ ಸಾಹಿತಿಗಳು, ಸಾಹಿತ್ಯದಲ್ಲಿರುವ ಪದಲಾಲಿತ್ಯ ಅನುಪಮವಾದದ್ದು. ಆದರೆ, ಅದರ ಭಾವಗಳನ್ನು ಹಾಡುವಾಗ ಬರಿಸದಿದ್ದರೆ ಅದರ ಮೌಲ್ಯ ಕಡಿಮೆಯಾಗುತ್ತೆ. ಕಲೆ ಸಾಹಿತ್ಯದಲ್ಲಿ ಎಷ್ಟಿದೆಯೋ ಅಷ್ಟೇ ಹಾಡುವುದರಲ್ಲಿದೆ. ಇಬ್ಬರೂ ಕಲಾವಿದರೆ,  ಪಿ.ಬಿ.ಎಸ್ ಒಬ್ಬ ಕಲಾವಿದ, ಸಾಹಿತಿ, ಮತ್ತು ಹಾಡುಗಾರರೂ, ಅದರಲ್ಲೂ ಈ ಎಲ್ಲ ವಿಷಯಗಳಲ್ಲೂ ಸಂಪೂರ್ಣ ಕಲೆ (ವಿದ್ಯೆ) ಇದ್ದಿದ್ದರಿಂದಲೇ ಅವರ ಹಾಡುಗಾರಿಕೆಯಲ್ಲಿ ನಾವೇನು ಕೇಳಿದೆವೋ ಇಷ್ಟು ವರುಷಗಳು "ಆ ಒಂದು ವಿಶಿಷ್ಟ ಅನುಭವ" ನಮ್ಮೆಲ್ಲರ ಶ್ರವಣೇಂದ್ರೀಯ ಅನುಭವಿಸಿ ಸವಿದಿದ್ದು. "ಬದುಕಿದೆನು ಬದುಕಿದೆನು ಭವ ಬಂಧನದೊಳಗೆ..." ಇನ್ನೊಂದು ಇದೇ ರೀತಿಯ ದೀನಬಂಧು ವಾದ ಶ್ರೀಹರಿಯಲ್ಲಿ ಸಹಾಯ ಕೋರುವ ಸನ್ನಿವೇಶವನ್ನೊಳಗೊಂಡ ಗೀತೆ. "ಬಂದದ್ದೆಲ್ಲಾ ಬರಲಿ ನಮ್ಮ ಗೋವಿಂದನ ದಯವಿರಲಿ"...ಏನು ಕಷ್ಟ ಬಂದರೂ, ಗೋವಿಂದನ ದಯೆ ಒಂದಿದ್ದರೆ ಸಾಕು, ನಿರ್ಭಯವಾಗಿರಲು ಅನ್ನುವ ಸಂದೇಶವನ್ನು ಹೊತ್ತು ತರುತ್ತದೆ. "ಬಾಡಿಹೋದ ಬಳ್ಳಿಯಿಂದ ಹೂವು ಅರಳಬಲ್ಲದೇ" ಹಾಡನ್ನೂ ಇಲ್ಲೇ ಸೇರಿಸಬಹುದೆನಿಸುತಿದೆ. ಕಷ್ಟಗಳು ಸಂಬಂಧ ಸೇತುವೆಯನ್ನು ಕಡಿದರೆ, ಫಲವೆಲ್ಲಿಂದ ಬಂದೀತು? ಇದರ ಭಾವವನ್ನು ಜೀವನದ ನೈಜ ಸ್ಥಿತಿಯಲ್ಲಿ ಪಿ. ಬಿ. ಎಸ್ ತಂದಿದ್ದಾರೆ ಎಂದು ನನ್ನ ಅನಿಸಿಕೆ. ಹೀಗೆ ಹಲವಾರು ಕಷ್ಟ ಕಾರ್ಪಣ್ಯಗಳ ಭಾವವನ್ನು ಹೊತ್ತ ಗೀತೆಗಳು ನಮ್ಮ ಕಷ್ಟಗಳ ಸಮಯದಲ್ಲಿ ಸ್ಮರಿಸುವಂತೆ ಮಾಡಿವೆ. ನಾನೆಷ್ಟೋ ಸಲ "ಬದುಕಿದೆನು, ಬದುಕಿದೆನು" ಹಾಡನ್ನು ಕಷ್ಟ ಕಾಲದಲ್ಲಿ ಗೊಣಗಿಕೊಂಡು ಹಾಡಿದ್ದಿದೆ. ಆ ಸಮಯದಲ್ಲೂ ಅದು ಒಂದು ತರಹ ಹಿತವನ್ನು ಕೊಟ್ಟಿದೆ. ಸಂಗೀತ ಕೇಳಿ ಅಥವಾ ಹಾಡಿದರೆ ಮನಸ್ಸಿಗೆ ಏನೋ ಒಂದು ನೆಮ್ಮದಿ. ನಿಮಗೂ ಇದರ ಅನುಭವವಾಗಿರಬೇಕು!

ಪ್ರಣಯದ ಹಾದಿಯಲ್ಲಿ ಲಹರಿ ಹರಿಸುವ ಮೊದಲು "ಪ್ರಕೃತಿ"ಯನ್ನು ಅಣಿ ಮಾಡೋಣ....

"ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು..." ಹುಣ್ಣಿಮೆ ಬೆಳದಿಂಗಳು ಆಗಸದಲ್ಲಿ ಮೂಡಿದಾಗ...."ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ..." ಇವುಗಳಿಗೂ ಶೋಭಾಯಮಾನ. ಬೆಳ್ಳಿ ಮೋಡಗಳು ಬೆಳದಿಂಗಳಲ್ಲಿ ಇನ್ನಷ್ಟು ಮನೋಹರವಾಗಿ ಮೆರೆಯುವುದು. ಹಕ್ಕಿಗಳ ಹಾರಾಟ, ಚಿಲಿಪಿಲಿ ಉಲಿಗಳು ಬೆಳದಿಂಗಳಿಗೆ ಮತ್ತಷ್ಟು ಮೆರಗು ಕೊಟ್ಟಿದೆ. "ಬಾನಲ್ಲಿ......ಚಂದ್ರಗೆ ಮೆರವಣಿಗೆ" ಯಂತಿದೆ. "ಬೆಳ್ಳಕ್ಕಿ ಆಗುವಾಸೆ"...ಎಲ್ಲರಿಗೂ ಬರಬಹುದು. "ಬಾನಿಗೆ ಬೆಳ್ಳಿ ಮೇಘಕೆ ನೀಲಿ..." ಹಂಚಿದಂತಿದೆ. "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೆ...." ಚುಂಬಕ ಗಾಳಿಯು ಬೀಸುತ್ತಿರೆ.......ಏನಾಗುತ್ತೆ ನೋಡೋಣ ಅನ್ನೋ ಕುತೂಹಲವೇ?

ತನುವು - ಮನವು ಪ್ರೇಯಸಿಗೆ ಕರೆಯೋಲೆ ಕಳಿಸಿದೆ......

"ಬಾರೇ ಬಾರೇ ಚಂದದ ಚೆಲುವಿನ ತಾರೆ, ಒಲವಿನ..." ಪ್ರೇಯಸಿ ಬಂದ ಮೇಲೆ, ಪ್ರಣಯದ ಒಡೆಯ( ಅರ್ಥಾತ್ ನಮ್ಮ ಹೀರೋ) ಹೀಗೆ ಹಾಡಲಾರಂಬಿಸಿದ : .....

"ನಿಲ್ಲು ನೀ ನಿಲ್ಲು ನೀ ನೀಲವೇಣಿ..." ಪ್ರೇಯಸಿ ಕರೆಯೋಲೆಗೆ ಓಗೊಡ್ಡಿ ಬಂದು ನಿಂತಮೇಲೆ....ಮನೋಲ್ಲಾಸಗೊಂಡ ಸ್ನೇಹಿತ ಅವಳ ಬರುವು ಅವನಲ್ಲಿ ಏನನ್ನು ಮೂಡಿಸಿತು ಎನ್ನುವುದನ್ನು ಪ್ರಣಯದ ಗೀತೆಯಲ್ಲೇ ಹಾಡುತ್ತಾನೆ.

"ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ, ನಕ್ಕು ನೀ ನಲಿದಾಗ ಸೋತೇ ನಾನಾಗ".....ಈಗ ಪ್ರೇಮಿಗಳಿಬ್ಬರೂ ಮನಸೋತಿದ್ದಾರೆ ಒಬ್ಬರಿಗೊಬ್ಬರು. ಪ್ರಣಯದ ಲಹರಿಯನ್ನೇ ಹರಿಸಲು ಅನುವಾಗಿದ್ದಾರೆ. ಬನ್ನಿ, ಹಾಡೋಣ ಅವರೊಂದಿಗೆ...

"ಕಾಳಿದಾಸನ ಕಾವ್ಯಲಹರಿಗೆ ಕಾರಣ ಹೆಣ್ಣಿನ ಅಂದ..." ಎಂದು ನಮ್ಮ ಹೀರೋಗೀಗ ಮನದಟ್ಟಾಗಿದೆ!

"ನಗು ನಗುತಾ ನೀ ಬರಲು.."
"ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ ನನಗೆಂದೇ ಬರೆದ ಪ್ರೇಮದ ಓಲೆ".....
"ಮಲೆನಾಡ ಹೆಣ್ಣ ಮೈಬಣ್ಣ ಆ ನಡು ಸಣ್ಣ ಮನಸೋತೆ ನಾ ಚಿನ್ನ"....
"ಹೃದಯವೀಣೆ ಮಿಡಿಯೆ....."
"ಪಂಚಮವೇದ ಪ್ರೇಮದ ನಾದ ಪ್ರಣಯದ ಸರಿಗಮ ಭಾವಾನಂದ..."
"ನಿನ್ನ ಕಣ್ಣ ನೋಟದಲ್ಲೇ....."
"ನಿನ್ನ ಕಣ್ಣ ಕನ್ನಡಿಯಲ್ಲಿ ನನ್ನ ನಾ..."
"ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ..."
"ಕೊಡಗಿನ ಕಾವೇರಿ...."
"ಓಡುವನದಿ ಸಾಗರವ ಸೇರಲೇ ಬೇಕು, ನಾನೂ ನೀನು ಎಂದಾದರು ...."
"ಬಾಳೊಂದು ಭಾವಗೀತೆ..."
"ನಿನ್ನೊಲುಮೆಯಿಂದಲೇ..."
"ಚಿನ್ನ ಎಂದೂ ನಗುತಿರು, ನನ್ನ ಸಂಘ ಬಿಡದಿರು..."
"ನಗು ನಗುತಾ ನಲೀ ನಲೀ ಏನೇ ಬಂದರೂ..."
"ಎಂದೂ ನಿನ್ನ ನೋಡುವೆ, ಎಂದೂ ನಿನ್ನ ಸೇರುವೆ..."
"ಒಂದು ದಿನಾ ಎಲ್ಲಿಂದಲೋ ನೀ ಬಂದೆ..."
"ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ..."
"ಆಕಾಶವೆ ಬೀಳಲಿ ಮೇಲೇ ನಾ ನಿನ್ನ ಕೈ ಬಿಡೆನು..."
"ಎಂದೆಂದೂ ನಿನ್ನನು ಮರೆತು ನಾನಿರಲಾರೆ, ಒಂದು ದಿನಾ ನೊಂದರು ನೀ ನಾ ತಾಳಲಾರೆ..."
"ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ, ಹಸಿವಿನಲ್ಲೂ ಹಬ್ಬಾನೆ ದಿನವು ನಿತ್ಯ ಉಗಾದಿನೆ..."
"ಒಲವೆ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ...." ಒಲವೆ ಜೀವನ ಸಾಕ್ಷಾತ್ಕಾರ ಆದಮೇಲೆ ಒಂದು ರೀತಿಯ ಮೌನ ಭೇದಿಸುವ ಈ ಗೀತೆ...
"ಮೌನವೇ ಆಭರಣ, ಮುಗುಳ್ನಗೆಯೇ ಶಶಿಕಿರಣ, ನೋಟವೇ ಹೂವ್ ಬಾಣ..." ಹೂವ್ ಬಾಣ ಹೃದಯಕೆ ನಾಟಿ ಜನುಮದ ಅನುಬಂಧಕ್ಕೆ ಕಾರಣವಾಯಿತು.

"ಜನುಮ ಜನುಮದಾ ಅನುಬಂಧ ಹೃದಯ, ಹೃದಯಗಳ ಪ್ರೇಮಾನುಬಂಧ..." ಪ್ರೇಮಾನುಬಂಧದಿಂದ "ಸಂಗಮ, ಸಂಗಮ ಅನುರಾಗ ಸಂಗಮ" ವು ಶುಭಸ್ಯ ಶೀಘ್ರಂ ಆಗಿ ಮಹೂರ್ತದ ಕಾಲ ನಿಶ್ಚಯವಾಗಿ ...

""ಶುಭ ಮಂಗಳ, ಸುಮಹೂರ್ತವೇ ಶುಭವೇ, ಅನುರಾಗದ ಅನುಬಂಧವೇ..." ಮಂಗಳ ಗೌರಿಯ ಪೂಜೆಯ ಫಲವೇನೋ "ನಮ್ಮ ಸಂಸಾರ, ಆನಂದ ಸಾಗರ, ಪ್ರೀತಿ ಎಂಬ ದೈವವೇ ನಮಗಾಧಾರ, ಆ ದೈವತಂದ ಬಲದಿಂದ ಬಾಳೇ ಬಂಗಾರ..." ಹೆಂಡತಿ ತವರಿಗೆ ಹೋಗಿರಲು..."ಒಲವಿನಾ ಪ್ರಿಯಲತೆ, ಅವಳದೇ ಚಿಂತೆ, ಅವಳ ಮಾತೇ ಮದುರ ಗೀತೆ ಅವಳೆ ನನ್ನಾ ದೇವತೇ..."

ಮಗುವಾದನಂತರದ ಗೀತೆ "ಹಾಡೊಂದು ಹಾಡುವೆ , ನೀ ಕೇಳು ಮಗುವೇ..." ಮಗುವಿನಾಟಿಕೆಯೊಂದಿಗೆ ಹಾದಿದ್ದು "ಆಡಿಸಿನೋಡು, ಬೀಳಿಸಿನೋಡು ಉರುಳಿಹೋಗದು..."

ಕಲಾರಾಧನೆಗೆಂತಲೇ ಬರೆಸಿದ ಗೀತೆ" ರವಿವರ್ಮನ ಕುಂಚದಾ ಕಲೆ, ಭಲೆ, ಸಾಕಾರವೂ..." ಎಂಥಾ ಮನಸ್ಸಿಗೆ ಮುದ ಕೊಡುವ ಹಾಡಿದು.

ಇನ್ನೂ ಹಲವಾರು ಗೀತೆಗಳನ್ನು ಸುಮಧುರವಾಗಿ ಹಾಡಿ ಅಮರವಾಗಿಸಿದವರು ಪಿ. ಬಿ. ಎಸ್ ಅವರು. ಇವು ಎಂದೂ ಕನ್ನಡಿಗರ ಮನೆ, ಮನಗಳಲ್ಲಿ ಅಚ್ಚಳಿಯದೇ ಉಳಿಯುವುದು. ಕನ್ನಡಿಗರೇ ಧನ್ಯ ಇಂತಹ ಹಾಡುಗಾರರು ನಮ್ಮ ನೆಲದಲ್ಲಿ ಜನಿಸದಿದ್ದರೂ, ನೆಲೆಸಿ, ನಡೆ, ನುಡಿ, ಭಾಷೆ, ಸಂಸ್ಕೃತಿ ಎಲ್ಲವುದನ್ನೂ ಬೆಳಗಿಸಿದ ಮಹಾನುಭಾವರಿಗೆ ( ಕಡೆಯ ಗೀತೆಯಿಂದ) "ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ, ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು..." ನನ್ನ ಅಕ್ಷರ ನಮನ!!!!!





 

Comments

Submitted by nageshamysore Sat, 04/20/2013 - 05:25

ಮೀರಾ ಅವರೆ, ಪಿಬಿಶ್ರಿಯವರ ಗಾನಸುಧಾಲೋಕದ ತುಣುಕುಗಳನ್ನೆತ್ತಿ, ಸೊಗಸಾಗಿ ಕಟ್ಟಿಕೊಟ್ಟ ಲೇಖನ..ತುಂಬಾ ಧನ್ಯವಾದಗಳು. - ನಾಗೇಶ ಮೈಸೂರು, ಸಿಂಗಪುರದಿಂದ
Submitted by lpitnal@gmail.com Sat, 04/20/2013 - 06:45

ಮೀನಾ ರಿಗೆ ನಮಸ್ಕಾರ. ಪಿ ಬಿ ಎಸ್ ಹಾಡಿನ ಗುಂಗು, ಮೈತುಂಬಿ, ಮನದಿಂಗುತ್ತಲೇ, ಕಾಲ ಹಿನ್ನೋಡಿ, ನಮ್ಮ ಮೈಮನಗಳು ಸಂಗೀತ ಗಾರುಡಿಗನ ಅದ್ಭುತ ಹಾಡುಗಳನ್ನು ಮತ್ತೊಮ್ಮೆ ನೆನಪಿಸಿ, ಧನ್ವತೆಯನ್ನು ತಂದು ಕೊಟ್ಟಿರಿ, ಕನ್ನಡಮ್ಮನನ್ನು ಸಿರಿವಂತಗೊಳಿಸಿ, ನಾಡಸಿರಿಯಾಗಿ ಮೆರೆದ ಪಿ ಬಿ ಎಸ್, ಹಾಯ್ ಇನ್ನಿಲ್ಲವಲ್ಲ! ಬಹುಶ: ಮಡುಗಟ್ಟಿದ ದುಖ: ಹೊರಬರಲು, ಕೆಲ ದಿನಗಳು ಬೇಕೇನೋ, ಅವರಿಲ್ಲವೆನ್ನುವುದು ಅರಿವಿಕೆ ಬರಲು! ಧನ್ಯತೆಯ ಜೀವ. ಅವರನ್ನು ನೋಡಿ, ಕೇಳಿ, ಆನಂದಿಸಿದ್ದು ನಮ್ಮ ಅದೃಷ್ಟವೆಂದೇ ಅಂದುಕೊಳ್ಳುತ್ತೇನೆ.ಉತ್ತಮ ಸಕಾಲಿಕ ಲೇಖನ. ಹಂಚಿಕೊಂಡಿದ್ದಕ್ಕೆ ಅಭಿನಂದನೆಗಳು.
Submitted by rasikathe Sat, 04/20/2013 - 07:28

ಧನ್ಯವಾದಗಳು ನಿಮ್ಮ‌ ಪ್ರತಿಕ್ರಿಯೆಗೆ. ಲಕ್ಷ್ಮಿಕಾಮ್ತ್ ಮತ್ತು ನಾಗೇಷ‌ ಅವರೆ. ಹಾದುಗಳನ್ನೆಲ್ಲವನ್ನೂ ಹಾಕಲು ಸಾಧ್ಯವೇ ಇಲ್ಲ‌, ಅಶ್ಹ್ತೊಮ್ದು ದೊಡ್ಡ‌ ಉಡುಗೊರೆ ನಮಗೆ ನೇಡಿದ್ದಾರೆ ಪಿ. ಬಿ. ಎಸ್ ಅವರು! ಅವರಿಗೆ ಚಿರ‌ ಷಾಮ್ತಿ ದೊರೆಯಲಿ! ಅಮರವಾಗಿದೆ ಅವರ‌ ಅಮರ‌ ಮಧುರ‌ ಕನ್ನಡ‌ ಪ್ರೇಮ‌! ಮೀನಾ.
Submitted by ಗಣೇಶ Sun, 04/21/2013 - 00:20

>>>ಆದಿಯಲ್ಲಿ ಗಣೇಶನ ಪೂಜಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಘ್ನ ವಿನಾಯಕನನ್ನು ಸ್ತುತಿಸೋಣ...-ಬನ್ನಿ, ನಮ್ಮೊಡನೆ ನೀವೂ ಹಾಡಿ. ಯಾರಿಗೂ ಹಾಡುಬರದೇ ಇಲ್ಲವೇ ಇಲ್ಲ. ಮೊದಲ ಎರಡು ಸಾಲುಗಳಾದರೂ...---ಒಂದೇ ಸಾಲು ಹಾಡಿದೆ ಮೇಡಂ...ನನ್ನಾಕೆಯು ಮೆಚ್ಚಿ ತಾಳನೂ ಹಾಕಿದಳು(ಬೆನ್ನಮೇಲೆ :( ).ಅಷ್ಟು ಚೆನ್ನಾಗಿದ್ದ ನನ್ನ ರಾಗಕ್ಕೆ ... "ರಾತ್ರಿ ಇದೇನ್ರೀ ನಿಮ್ಮ ರೋಗ.." ಅಂದಳು. :( ಇನ್ನು ಉಳಿದ ಹಾಡುಗಳನ್ನು ನಾಳೆ ಬೆಳಗ್ಗೆದ್ದು ಹಾಡುವೆ.. ; ಪಿಬಿಎಸ್ ಅವರ ಕವನಗಳನ್ನು ಸುಂದರವಾಗಿ ಪೋಣಿಸಿ ಅರ್ಪಿಸಿದ್ದೀರಿ. ಧನ್ಯವಾದಗಳು.
Submitted by rasikathe Sun, 04/21/2013 - 10:21

ಗಣೇಷ್ ಜಿ ನಮಸ್ಕಾರ‌, ಧನಯವಾದಗಳು! ಅಷ್ಟೇ ಮೊದಲನೇ ಸಾಲು ಸಾಕು, ಇನ್ನೊಮ್ಮೆ ರಾಗ‌ ಬದ್ಧವಾಗಿ ಹೇಳುತ್ತೇನೆ ಅಮ್ತ‌ ಹೆಮ್ಡತಿಗೆ ಸಮಾಧಾನಿಸಿ.....:) ಮೀನಾ