ಪೀಜಿ

ಪೀಜಿ

ಪುಸ್ತಕದ ಲೇಖಕ/ಕವಿಯ ಹೆಸರು
ಸುಶೀಲಾ ಡೋಣೂರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೩೦, ಮುದ್ರಣ: ೨೦೨೪

‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದೆ. ಪ್ರೇಮ್ ಚಂದ್, ಅಲೆಕ್ಸಾಂಡರ್ ಪುನ್, ಕಾಮುಗಳ ಕಾದಂಬರಿಗಳು ಘಟಿಸಿದ್ದೇ ಹೀಗೆ. ಘನ ಗಂಭೀರ ಕಾರ್ಮೋಡಗಳು ಆಕಾಶ ತುಂಬಿದಂತೆ ತಟ್ಟನೆ ಮಳೆ ಸುರಿಯುವುದಿಲ್ಲ. ಓಡಾಡುತ್ತವೆ, ಕಾಡುತ್ತವೆ ಕೊನೆಗೊಮ್ಮೆ ಸುರಿದುಬಿಟ್ಟರೆ ನಿಂತ ನೆಲದ ಗತಿ ಏನಾದೀತು ಎನ್ನುವ ಭಯ ಹುಟ್ಟಿಸುತ್ತವೆ. ಎಲ್ಲ ತಿಳಿದೂ ಈ ತಿಳುವಳಿಕೆಯನ್ನು ತೆಗೆದುಕೊಂಡು ಏನು ಮಾಡುವುದು ಎನ್ನುವ ಹತಾಶದ ಮುಂದೆ ನಮ್ಮನ್ನು ನಿಲ್ಲಿಸುತ್ತವೆ. ಬಹುತೇಕ ಈ ಕಾದಂಬರಿಯ ಕಥಾ ವಸ್ತು ಹಾಗೆಯೇ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು ಎಂದಿದ್ದಾರೆ. 

ಕಾದಂಬರಿಕಾರ್ತಿ ಸುಶೀಲಾ ಡೋಣೂರ ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ಇಲ್ಲಿದೆ… “ಹೆಣ್ಣಾಗಿ ನನ್ನ ಅನುಭವಗಳನ್ನು ಯಾವ ಸೆನ್ಸಾರ್‌ಷಿಪ್ ಇಲ್ಲದೆ ಅಭಿವ್ಯಕ್ತಿಸಲು ಸಾಧ್ಯವಾಗುವುದಾದರೆ, ನನ್ನೆಲ್ಲ ಒಳ-ಹೊರ ಸಂಕೋಚಗಳನ್ನು ಮೀರಿ ಬರೆಯ ಬಲ್ಲೆನಾದರೆ, ನನ್ನ ಅನುಭವಗಳ ಅಧಿಕೃತತೆಯಲ್ಲಿ ನನಗೆ ನಂಬಿಕೆಯಿದೆ ಎಂದಾದರೆ, ನಾನು ಹೊಸ ಭಾಷೆಯನ್ನು ಕಟ್ಟುತ್ತಿದ್ದೇನೆ ಎಂದೇ ಅರ್ಥ ಎನ್ನುತ್ತಾಳೆ ಆಡ್ರಿಯನ್.

ಹಾಗೆ, ನನ್ನ ಅನುಭವಕ್ಕೆ ದಕ್ಕಿದ್ದನ್ನು, ನಾನು ಕಂಡಿದ್ದನ್ನು, ಕಾಣಹೊರಟಿದ್ದನ್ನು ಯಾವುದೇ ಸ್ವಸೆನ್ಸಾರ್‌ಷಿಪ್ ಇಲ್ಲದೇ ಹೇಳುತ್ತಿದ್ದೇನೆ, ನನ್ನೆಲ್ಲಾ ಒಳ-ಹೊರ ಸಂಕೋಚ ಗಳನ್ನು ಮೀರಿ ಬರೆಯುವ ಮಿಡಿತವನ್ನು ಹೊಂದಿದ್ದೇನೆ ಎನ್ನುವುದೇ ಸದ್ಯದ ಬರವಣಿಗೆಯ ಸಂತೃಪ್ತಿಯೂ, ಸಾರ್ಥಕತೆಯೂ ಆಗಿದೆ ಮತ್ತು ಇದೇ ನನ್ನ ಪಾಲಿನ ಋಣ ಸಂದಾಯವೂ ಆಗಿದೆ. 'ಸಂಕೋಚವಿದ್ದವರು ಬರೆಯಲು ಹೋಗಬಾರದು; ಬರೆಯಬೇಕೆನ್ನುವವರು ಸಂಕೋಚಗಳನ್ನು ಮೀರಬೇಕು' ಎನ್ನುವುದು ಸಹೋದರ ರಾಜಶೇಖರ ಮಠಪತಿ (ರಾಗಂ) ಅವರ ನಿಲುವು. ನನ್ನ ಮೊದಲ ಕಾದಂಬರಿಯ (ನ್ಯಾನ್ಸಿ) ಮೊದಲ ಕರಡು ಓದಿದಾಗ ಅವರಾಡಿದ ಮಾತುಗಳಿವು. ಅನಂತರ ಆ ಕಾದಂಬರಿ ತನ್ನೆಲ್ಲಾ ಸಂಕೋಚಗಳನ್ನು ಮೀರಿ ಬೆಳೆದ ಪರಿಯೇ ಅಚ್ಚರಿ ಮೂಡಿಸುವಂತದ್ದು. ಹಾಗೆ ಬೆಳೆದ ಕಥೆ ಪಡೆದುಕೊಂಡ ಸಾಲು ಸಾಲು ಪ್ರಶಸ್ತಿಗಳಿಗಿಂತ ಅದನ್ನು ಬರೆಯುವಾಗಿನ ಸಂತೃಪ್ತಿ ನೀಡಿದ ಸಾರ್ಥಕತೆಯೇ ಸೋಜಿಗ ಮತ್ತು ಈ ಎರಡನೇ ಕಾದಂಬರಿಯನ್ನು ಬರೆಯುವಾಗ ಕೂಡ ಮನಸಿನಲ್ಲಿ ಉಳಿದುದು ಇವೇ ಮಾತುಗಳು. 'ಆನೆಯ ಭಾರ ಆನೆಗೆ, ಇರುವೆಯ ಭಾರ ಇರುವೆಗೆ' ಎನ್ನುವಂತೆ ನವಯುಗದ, ಸ್ವತಂತ್ರ, ಸುಶಿಕ್ಷಿತ, ದುಡಿಯುವ ಹೆಣ್ಮಕ್ಕಳ ತಲ್ಲಣಗಳು ಭಿನ್ನ. ಬಡತನ, ಶೋಷಣೆ, ಹಿಂಸೆ ಅಥವಾ ಅಸ್ಪೃಶ್ಯತೆಯಂತಹ ಘನ ಗಂಭೀರ ಹೊರೆಗಳಾಚೆ ಅವರ ತಳಮಳಗಳಿವೆ. ಸಂಕಟಗಳಿವೆ. ಬಡ, ನಿರ್ಗತಿಕ, ಹಿಂದುಳಿದ ಮಹಿಳೆಯೊಬ್ಬಳು ಅನುಭವಿಸುವಷ್ಟೇ ನೋವು-ಯಾತನೆ, ಅವಮಾನ, ದೌರ್ಜನ್ಯ, ಅಸಹಾಯಕತೆ, ಸಂಕಟಗಳನ್ನು ಸುಶಿಕ್ಷಿತ-ಸ್ವತಂತ್ರ ಮಹಿಳೆಯೂ ಅನುಭವಿಸುತ್ತಾಳೆ. ವ್ಯತ್ಯಾಸವಿಷ್ಟೇ, ಅವಳಿಗೆ ನೇರ ಕಲ್ಲೇಟು ಬಿದ್ದರೆ, ಇವಳದು ರೇಷಿಮೆಯ ರುಮಾಲಿನಲ್ಲಿ ಕಲ್ಲಿಟ್ಟ ಹೊಡೆತಗಳನ್ನುಣ್ಣುವ ಸರದಿ. ಇವಳ ಸಂಕಟ ಹೆಚ್ಚು ಜನರ ಮನಸಿಗೆ ತಾಕದೇ ಹೋಗಬಹುದು. ಇಂದಿನ ಸದ್ದುಗದ್ದಲದ, ಆತುರದ, ಗಡಿಬಿಡಿಯ, ವ್ಯಸ್ತ ಜಗತ್ತಿನಲ್ಲಿ ಈ ಹೆಣ್ಣಿನ ಪಿಸುನುಡಿಗಳನ್ನು ಸಾವಧಾನದಿಂದ, ಸಮಾಧಾನದಿಂದ ಆಲಿಸುವಂತೆ ಮಾಡುವ ಜೊತೆಗೆ ನನ್ನ ಅನುಭವಕ್ಕೆ ಬಂದ ಅಂತಹ ಎದೆಗುದಿಗಳನ್ನು ಯಾವುದೇ ಸೆನ್ಸಾ‌ರ್ ಷಿಪ್ ಇಲ್ಲದೇ, ಸಂಕೋಚಗಳಿಲ್ಲದೇ ಹೇಳಿಕೊಳ್ಳುವುದು ಸದ್ಯದ ತುರ್ತು,

ನಾನು ಮೊಟ್ಟ ಮೊದಲ ಬಾರಿಗೆ ನನ್ನ ಬೆಚ್ಚನೆಯ ಮನೆಯನ್ನು, ಊರನ್ನು ಬಿಟ್ಟು ಬೆಂಗಳೂರು ಸೇರಿದಾಗ, ರೆಕ್ಕೆ ಕಳಕೊಂಡ ಗುಬ್ಬಚ್ಚಿಯಂತೆ ಗಲಿಬಿಲಿಗೊಂಡಿದ್ದೆ. ಆಗ ಆರ್. ಪೂರ್ಣಿಮಾ ಒಂದು ಮಾತು ಹೇಳಿದ್ದರು, 'ಈಜಲು ನೀರಿಗೆ ಇಳಿಯುವ ಮೊದಲು ನಿನ್ನ ಬೆನ್ನಿಗೆ ಕಟ್ಟಿದ ಕಲ್ಲನ್ನು ಬಿಚ್ಚಿಡು' ಅಂತಂದಿದ್ದರು. ಈ ಕಾಲದ ತಲ್ಲಣಗಳನ್ನು ಮನಸಿನಲ್ಲಿ ಹೊತ್ತುಕೊಂಡು ಹೊಯ್ದಾಡುತ್ತಿರುವ ಎಲ್ಲಾ ಹೆಣ್ಣುಮಕ್ಕಳಿಗೂ ಈ ಮಾತು ಅನ್ವಯವಾಗುತ್ತದೆ. ಹಾಗೆ ಬೆನ್ನಿಗೆ ಕಟ್ಟಿಕೊಂಡ ಕಲ್ಲನ್ನು ಬಿಚ್ಚಗೆಯುವ ಪ್ರಯತ್ನದಲ್ಲಿರುವ ಹೆಣ್ಣುಮಕ್ಕಳ ಒಳದನಿಯಿದು.

ಜೀವನ ಮುಳುಗುವ ಸ್ಥಿತಿಯಲ್ಲಿದ್ದಾಗ ಸಿದ್ದಾಂತ, ವೇದಾಂತ, ಆದರ್ಶ, ಮೌಲ್ಯಗಳೆಲ್ಲ ಬದಿಗೆ ಸರಿದು, ಬದುಕು ಮಾತ್ರ ಮುಖ್ಯವಾಗುತ್ತದೆ. ಹೆಣ್ಣೂ-ಗಂಡೂ ಇಬ್ಬರಿಗೂ ಕೂಡ ಅನ್ವಯಿಸುವ ಜೀವನಸೂತ್ರವಿದು. ಆದರೆ ಹೆಣ್ಣಿನ ವಿಚಾರಕ್ಕೆ ಬಂದಾಗ ಜೀವನ ಹಾಗೂ ಜೀವಕ್ಕಿಂತ ಅವಳಿಗೆ ಆದರ್ಶವೇ ಮುಖ್ಯವಾಗಬೇಕು ಎನ್ನುವ ನಿರೀಕ್ಷೆ ಇದೆ. ಕುಟುಂಬದ, ಸಮಾಜದ, ಹೆಣ್ಣುಕುಲದ, ಅಷ್ಟೇ ಏಕೆ, ಇಡೀ ಭರತಕುಲದ ಘನತೆಯನ್ನು ಕೇವಲ ಹೆಣ್ಣಿನ ಬೆನ್ನಿಗೇ ಕಟ್ಟಲಾಗಿದೆ. ಇಂತಹ ಯಾವುದೇ ಸಿದ್ಧಾಂತಕ್ಕೆ, ಸೋಗಿಗೆ, ಮುಖವಾಡಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಲು ಬಯಸದೇ, ಜೀವವಿರೋಧಿ ಸಿದ್ಧಾಂತಗಳಿಗಿಂತ ಬದುಕಿಗೆ ಉಸಿರು ತುಂಬುವ ಸಣ್ಣ ಸಣ್ಣ ತಪ್ಪುಗಳನ್ನು ಮಾಡುವಷ್ಟು ಔದಾರ್ಯವನ್ನು ತಮಗೆ ತಾವೇ ತೋರುವ, ಮತ್ತೆ ಅಲ್ಲಿಂದ ಹೊಸ ತಿರುವು ಪಡೆದು, ತಮ್ಮನ್ನು ತಾವೇ ಸರಿಪಡಿಸಿಕೊಳ್ಳುತ್ತ ಸಾಗುವ; ತಂತಮ್ಮ ಒಳಗಣ್ಣಿಗೆ, ತಮ್ಮ ಆತ್ಮಗೌರವ ಕುಸಿಯಗೊಡದಂತೆ ಬದುಕುವ ದಿಟ್ಟೆಯರ ಕಥನವಿದು.

ಬದುಕಿನ ರೀತಿಯಲ್ಲಿ, ಬಯಕೆಗಳಲ್ಲಿ, ಸಂವೇದನೆಯಲ್ಲಿ, ಅಭಿವ್ಯಕ್ತಿಯಲ್ಲಿ, ಘನತೆಯಲ್ಲಿ ಗಂಡಿಗಿಂತ ಭಿನ್ನಳಾಗಿರುವ ಈ ಕಾಲದ ಹೆಣ್ಣಿನ ಹೋರಾಟದ ದಾರಿಯೂ ಬೇರೆಯೇ ಆಗಿದೆ. ಅವಳ ಗೆಲುವಿನ ದಾರಿಯೂ ಬೇರೆ, ಗ್ರಹಿಕೆಯೂ ಬೇರೆ, ವ್ಯಾಖ್ಯಾನವೂ ಬೇರೆಯಾಗಿದೆ. ಸಮಾನತೆಗಾಗಿಯೊ, ಸ್ವಾತಂತ್ರ್ಯಕ್ಕಾಗಿಯೊ, ಘನತೆಗಾಗಿಯೊ ಹೋರಾಡು ವುದಕ್ಕಿಂತ ಮುಖ್ಯವಾಗಿ ಅವಳು ಈಗ ತನ್ನೊಂದಿಗೆ, ತನ್ನ ಸುತ್ತಮುತ್ತ ರೂಪುಗೊಳ್ಳು ತ್ತಿರುವ ಹೊಸ ಸವಾಲುಗಳೊಂದಿಗೆ, ತನ್ನ ಒಳಗೇ ಸೃಷ್ಟಿಯಾಗುತ್ತಿರುವ ಹೊಸ ತಲ್ಲಣಗಳೊಂದಿಗೆ, ಬದಲಾಗುತ್ತಿರುವ ನೈತಿಕ ಪ್ರಜ್ಞೆಯ ಅರ್ಥದೊಂದಿಗೆ ಹೋರಾಡ ಬೇಕಿದೆ. ಹೋರಾಟಕ್ಕೂ ಮುನ್ನವೇ ದಣಿಯುತ್ತಿರುವ ತನ್ನ ಮನಸಿಗೆ ತಾನೇ ಶಕ್ತಿ ಹಾಗೂ ಚೈತನ್ಯವನ್ನು ತುಂಬಿಕೊಳ್ಳಬೇಕಿದೆ. ಹೊಸ ಅಲೆಯ ಮಹಿಳಾ ಲೋಕದ ಚಲನಶೀಲತೆಯನ್ನು, ಅದರೊಟ್ಟಿಗೆ ಮೆಟ್ರೊ ನಗರಗಳಲ್ಲಿ ದುಡಿಯಲು ಬರುವ ಅವರ ದೈನಿಕ ಬದುಕಿನ ಜೀವಂತ ಪ್ರತಿಫಲನಗಳನ್ನು ಹೇಗಿದೆಯೊ ಹಾಗೆ ಕಾಣಿಸುವುದು ಈ ಕಥನದ ದರ್ದು. ಈ ಇಡೀ ಕಥಾನಕ ಇಂತಹ ಹೆಣ್ಣುಮಕ್ಕಳ ಉಮ್ಮಳಿಕೆಗಳ ಒಟ್ಟು ರೂಪವಾಗಿದೆ.

ವರ್ಷಗಳ ಕಾಲ ನನ್ನ ಸಹಯಾತ್ರಿಗಳಾಗಿ ನನ್ನ ಬದುಕೇ ನನಗೆ ಭಿನ್ನವಾಗಿ ಕಾಣುವಂತೆ, ನನ್ನ ಪಯಣವೇ ನನಗೆ ಅಚ್ಚರಿ ಮೂಡಿಸುವಂತೆ ಮಾಡಿದ ನನ್ನೆಲ್ಲಾ ಗೆಳತಿಯರಿಗೆ ವಂದನೆ ಹಾಗೂ ಈ ಕಥಾನಕದ ಒಂದು ಭಾಗವಾಗಿರುವುದಕ್ಕೆ ಅವರಿಗೆ ಅಭಿನಂದನೆ, ಮೊಟ್ಟ ಮೊದಲ ಬಾರಿಗೆ ಮನೆಯಿಂದ ಹೊರಬಿದ್ದ ನನಗೆ ಪೀಜಿ. ರೂಮೇಟ್, ಮೆಸ್ ಎನ್ನುವ ಪದಗಳೆಲ್ಲಾ ಪೂರಾ ಹೊಸದೇ. ಜೊತೆಗೇ ಉಂಡು, ಪಕ್ಕದಲ್ಲೇ ಮಲಗಿ, ವರ್ಷವರ್ಷಗಳ ಕಾಲ ಜೊತೆಗೇ ಇದ್ದರೂ ಒಮ್ಮೊಮ್ಮೆ ಅಪರಿಚಿತರಂತೆ ಮುಖ ತಿರುಗಿಸಿ ಹೋಗುತ್ತ, ಮತ್ತೊಮ್ಮೆ ರಕ್ತ ಹಂಚಿಕೊಂಡು ಹುಟ್ಟಿದವರಿಗಿಂತ ಹೆಚ್ಚೆನ್ನುವ ಭಾವ ಬೆಸೆಯುತ್ತ, ಬದುಕಿನ ಮತ್ತೊಂದು ಮಗ್ಗುಲನ್ನು ಪರಿಚಯಿಸಿದವರು. ಈ ಕಥಾನಕದ ತುಂಬಾ ಅವರ ನೆರಳುಗಳಿವೆ. ಅಂದಮೇಲೆ ಈ ಅಕ್ಷರಗಳಲ್ಲಿ ಅವರದೂ ಪಾಲಿದೆ.” ಸುಮಾರು ೨೮೦ ಪುಟಗಳ ಈ ಕಾದಂಬರಿ ಸಮೃದ್ಧ ಓದಿಗೊಂದು ರಹದಾರಿ.