ಪೀಲೆ : ಏನಯ್ಯಾ ನಿನ್ನ ಲೀಲೆ !
ಫುಟ್ಬಾಲ್ ಜಗತ್ತು ಕಂಡ ಅತ್ಯದ್ಭುತ ಆಟಗಾರರಲ್ಲಿ ಬ್ರೆಜಿಲ್ ದೇಶದ ಪೀಲೆ ಒಬ್ಬರು ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ೧೯೫೭ರ ಬಳಿಕ ಎರಡು ದಶಕಗಳ ಕಾಲ ಅಕ್ಷರಶಃ ಫುಟ್ಬಾಲ್ ಜಗತ್ತನ್ನು ಆಳಿದವರು ಪೀಲೆ. ಬಾಲ್ಯದಲ್ಲಿ ಅನುಭವಿಸಿದ ಕಡು ಬಡತನ, ಕಪ್ಪು ವರ್ಣದಿಂದ ಆದ ಅವಮಾನ, ಹೊಟ್ಟೆಪಾಡಿಗಾಗಿ ಹೊಲಿದ ಚಪ್ಪಲಿಗಳು, ಮಾಡಿದ ಶೂ ಪಾಲೀಶ್ ಇವೆಲ್ಲವನ್ನೂ ಮೆಟ್ಟಿ ಗೆದ್ದ ಪೀಲೆಯ ಬದುಕು ನಿಜಕ್ಕೂ ವರ್ಣರಂಜಿತ ಹಾಗೂ ಪ್ರೇರಣಾದಾಯಕ. ಕಳೆದ ವರ್ಷ ಡಿಸೆಂಬರ್ ೨೯ರಂದು ತನ್ನ ೮೨ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಈ ಫುಟ್ಬಾಲ್ ದಂತಕತೆಗೆ ಒಂದು ಅಕ್ಷರ ಶೃದ್ಧಾಂಜಲಿ...
‘ಪೀಲೆ' ಹೆಸರು ಬಂದದ್ದು ಹೇಗೆ ?: ಪೀಲೆ ಎಂಬ ಹೆಸರು ಅವರ ಹೆತ್ತವರು ಇಟ್ಟ ಹೆಸರಲ್ಲ. ಅವರಿಗೆ ಪೀಲೆ ಎಂಬ ಹೆಸರು ಬಂದ ಬಗ್ಗೆ ಹಲವಾರು ಕಥೆಗಳಿವೆ. ಅಂಕಣಕಾರರಾದ ಶ್ರೀ ಕಿರಣ್ ಉಪಾಧ್ಯಾಯರ ಪ್ರಕಾರ “ಅಸಲಿಗೆ ‘ಪೀಲೆ' ಎನ್ನುವುದು ಆತನ ನಿಜ ನಾಮಧೇಯವಲ್ಲ. ಅದಕ್ಕೆ ಯಾವುದೇ ಅರ್ಥವೂ ಇಲ್ಲ. ಆತನಿಗೆ ಅಪ್ಪ ಇಟ್ಟ ಹೆಸರು ಎಡಿಸನ್. ಅಮೇರಿಕದ ಪ್ರಸಿದ್ಧ ಸಂಶೋಧಕ ಥೋಮಸ್ ಆಲ್ವಾ ಎಡಿಸನ್ ಇವರಿಂದ ಪ್ರೇರಿತರಾಗಿ ಇಟ್ಟ ಹೆಸರದು. ನಂತರ ಅದನ್ನು ಆತ ಎಡ್ಸನ್ ಎಂದು ಬದಲಾಯಿಸಿದ್ದ. ಎಲ್ಲರೂ ಆತನನ್ನು ಪ್ರೀತಿಯಿಂದ ‘ಡಿಕೊ' ಎಂದು ಕರೆಯುತ್ತಿದ್ದರು. ತನ್ನ ಊರಿನ ‘ವಾಸ್ಕೋ ಡ ಗಾಮಾ’ ತಂಡದಲ್ಲಿ ‘ಬೇಲೆ' ಎಂಬ ಹೆಸರಿನ ಗೋಲ್ ಕೀಪರ್ ಇದ್ದ. ಪೀಲೆಗೆ ಆತ ಬಹಳ ಇಷ್ಟವಾಗಿದ್ದ. ತನ್ನ ಸ್ನೇಹಿತರ ಮುಂದೆ ಆತನ ಹೆಸರನ್ನು ತಪ್ಪಾಗಿ ‘ಪೀಲೆ' ಎಂದು ಉಚ್ಛರಿಸಿದ್ದರಿಂದ ಸ್ನೇಹಿತರು ಎಡ್ಸನ್ ನನ್ನು ‘ಪೀಲೆ' ಎಂದು ಛೇಡಿಸುತ್ತಿದ್ದರು. ಆತ ಎಷ್ಟು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಇದೇ ವಿಷಯಕ್ಕಾಗಿ ಸ್ನೇಹಿತರೊಂದಿಗೆ ಜಗಳ ಮಾಡಿಕೊಂಡದಕ್ಕಾಗಿ ಈತನನ್ನು ಕಾಲೇಜಿನಿಂದ ಎರಡು ದಿನ ಅಮಾನತು ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕರೆಯಲು ಸುಲಭವಾಗಿದೆ ಎನ್ನುವ ಕಾರಣಕ್ಕೆ ‘ಪೀಲೆ' ಎಂಬ ಹೆಸರನ್ನೇ ಆತ ಒಪ್ಪಿಕೊಂಡ.”
ಅಂದ ಹಾಗೆ ಪೀಲೆ ಯ ಪೂರ್ತಿ ಹೆಸರು ಎಡ್ಸನ್ (ಎಡಿಸನ್) ಅರಾಂಟೆಸ್ ಡೊ ನಾಸಿಮೆಂಟೊ. ಈತ ಹುಟ್ಟಿದ್ದು ಅಕ್ಟೋಬರ್ ೨೩, ೧೯೪೦ರಲ್ಲಿ ಬ್ರೆಜಿಲ್ ದೇಶದ ಟ್ರೆಸ್ ಕೊರಾಸೆಸ್ ಎಂಬಲ್ಲಿ.
ಇನ್ನೊಂದು ಮಾಹಿತಿಯ ಪ್ರಕಾರ ಎಡ್ಸನ್ ನನ್ನು ಆತನ ಕ್ಲಬ್ ನ ಸದಸ್ಯರು ‘ಪೀಲೆ' ಎಂದು ಕರೆದು ರೇಗಿಸುತ್ತಿದ್ದರಂತೆ. ಆದರೆ ಒಂದು ದಿನ ಆ ಪದಕ್ಕೆ ‘ಪವಾಡ' ಎಂಬ ಅರ್ಥವಿದೆ ಎಂದು ತಿಳಿದ ಬಳಿಕ ಎಡ್ಸನ್ ತನ್ನನ್ನು ‘ಪೀಲೆ’ ಎಂದು ಕರೆಯಿಸಿಕೊಳ್ಳಲು ಸಂತೋಷ ಪಡಲಾರಂಭಿಸಿದನಂತೆ. ನಂತರದ ದಿನಗಳಲ್ಲಿ ಹೆಸರಿಗೆ ತಕ್ಕಂತೆ ‘ಪೀಲೆ' ಪವಾಡವನ್ನು ಸೃಷ್ಟಿಸಿಯೇ ಬಿಟ್ಟರು.
ಬಾಲ್ಯ, ಬಡತನ, ಸಂಸಾರ: ಅತೀ ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ಪೀಲೆ ತನ್ನ ಹೊಟ್ಟೆ ಪಾಡಿಗಾಗಿ ಬಾಲ್ಯದಲ್ಲಿ ಶೂ ಪಾಲೀಶ್ ಮಾಡುತ್ತಿದ್ದ. ನಂತರ ಶೂ, ಚಪ್ಪಲಿ ಹೊಲಿಯುವುದನ್ನೂ ಕಲಿತುಕೊಂಡ. ಫುಟ್ಬಾಲ್ ಆಟದಲ್ಲಿ ಬಹಳ ಆಸಕ್ತಿ ಇದ್ದರೂ, ಕಲಿಸುವವರು ಯಾರೂ ಇರಲಿಲ್ಲ. ಆಡಲು ಬಾಲ್, ಒದೆಯಲು ಶೂ ಎರಡೂ ಇರಲಿಲ್ಲ. ಆದರೆ ಅಲ್ಲಿ ಇಲ್ಲಿ ಸಿಕ್ಕ ವಾರ್ತಾ ಪತ್ರಿಕೆಗಳನ್ನೇ ಫುಟ್ಬಾಲ್ ನಂತೆ ಮಾಡಿ ಅದನ್ನು ಬರಿಗಾಲಿನಲ್ಲಿ ಒದೆಯುತ್ತಿದ್ದ. ಇವನ ತಂದೆಯೂ ಉತ್ತಮ ಫುಟ್ಬಾಲ್ ಪಟು ಆಗಿದ್ದರು. ಆದರೆ ಬಡತನದ ಕಾರಣ ಹೆಚ್ಚೇನೂ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಸಣ್ಣ ಸಣ್ಣ ಕ್ಲಬ್ ಮೂಲಕ ಆಟವನ್ನು ಆಡುವ ಮೂಲಕ ನಿಧಾನವಾಗಿ ಫುಟ್ಬಾಲ್ ನ್ನು ಕರಗತಗೊಳಿಸಿಕೊಳ್ಳುತ್ತಾನೆ ಪೀಲೆ. ಫುಟ್ಬಾಲ್ ನಲ್ಲಿ ಫಾರ್ವರ್ಡ್ ವಿಭಾಗದಲ್ಲಿ ಆಡುತ್ತಿದ್ದ ಪೀಲೆ ತನ್ನ ೧೫ನೇ ವಯಸ್ಸಿನಲ್ಲೇ ಸ್ಯಾಂಟೋಸ್ ತಂಡದ ಮುಖಾಂತರ ವೃತ್ತಿ ಬದುಕಿಗೆ ನಾಂದಿ ಹಾಡುತ್ತಾನೆ. ಮುಂದಿನ ಒಂದೇ ವರ್ಷದಲ್ಲಿ ಬ್ರೆಜಿಲ್ ನ ರಾಷ್ಟೀಯ ತಂಡಕ್ಕೆ ಆಯ್ಕೆಯಾದ ಪೀಲೆ ನಂತರ ಹಿಂದಿರುಗಿ ನೋಡಿದ್ದೇ ಇಲ್ಲ.
ಪೀಲೆ ಅಂಗಣದಲ್ಲಿ ಆಡಿದ ಆಟಕ್ಕಿಂತಲೂ ರೋಚಕ ಅವರ ಸಾಂಸಾರಿಕ ಜೀವನ. ಪೀಲೆಗೆ ಮೂರು ಹೆಂಡತಿಯರು ಮತ್ತು ಅವರಿಂದ ಏಳು ಮಂದಿ ಮಕ್ಕಳು. ತನ್ನ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ೧೯೬೬ರಲ್ಲಿ ರೋಸ್ಮೆರಿ ಡೋಸ್ ನನ್ನು ವಿವಾಹವಾದ ಪೀಲೆ ೧೯೮೨ರಲ್ಲಿ ಆಕೆಗೆ ವಿಚ್ಚೇದನ ನೀಡುತ್ತಾರೆ. ನಂತರ ೧೯೯೪ರಲ್ಲಿ ಅಸ್ಸಿರಿಯಾ ಲೆಮೊನ್ ಸೀಕ್ಲಾಸ್ ರನ್ನು ಮದುವೆಯಾಗುತ್ತಾರೆ. ೧೪ ವರ್ಷಗಳ ನಂತರ ಈ ವಿವಾಹವೂ ಮುರಿದು ಬಿದ್ದು ತನ್ನ ತೀವ್ರ ಅನಾರೋಗ್ಯದ ನಡುವೆಯೂ ಉದ್ಯಮಿ ಮಾರ್ಸಿಯಾ ಆಕಿ ಜೊತೆ ೨೦೧೬ರಲ್ಲಿ ಮದುವೆಯಾಗುತ್ತಾರೆ. ತನ್ನ ೭ ಮಂದಿ ಮಕ್ಕಳಿಂದ ಹಲವಾರು ಬಾರಿ ಮುಜುಗರ ಸನ್ನಿವೇಷಕ್ಕೂ ಪೀಲೆ ಸಿಕ್ಕಿ ಬೀಳುತ್ತಾರೆ.
ಮೂರು ವಿಶ್ವಕಪ್ ಗೆಲುವು: ಪೀಲೆ ಫುಟ್ಬಾಲ್ ಇತಿಹಾಸದಲ್ಲಿ ಮೂರು ವಿಶ್ವಕಪ್ ಗೆದ್ದ ಏಕೈಕ ಆಟಗಾರ. ೧೯೫೮ರಲ್ಲಿ ತಮ್ಮ ಪಾದಾರ್ಪಣಾ ವಿಶ್ವಕಪ್ ಪಂದ್ಯದಲ್ಲೇ ಪ್ರಶಸ್ತಿಯನ್ನು ಗೆಲ್ಲಿಸಿಕೊಟ್ಟ ಕೀರ್ತಿ ಪೀಲೆಗೆ ಸಲ್ಲಬೇಕು. ಆ ವಿಶ್ವಕಪ್ ನ ಮೊದಲೆರಡು ಲೀಗ್ ಪಂದ್ಯಗಳಲ್ಲಿ ಪೀಲೆಗೆ ಆಟವಾಡಲು ಅವಕಾಶ ದೊರೆತಿರಲಿಲ್ಲ. ಆದರೆ ನಂತರ ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಪೀಲೆ ಆ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಹಿತ ಆರು ಗೋಲ್ ಬಾರಿಸಿದರು. ನಂತರ ೧೯೬೨ ಹಾಗೂ ೧೯೭೦ರಲ್ಲೂ ಪೀಲೆ ಬ್ರೆಜಿಲ್ ತಂಡವನ್ನು ವಿಶ್ವಕಪ್ ವಿಜೇತರನ್ನಾಗಿಸಿದ್ದರು.
ಪೀಲೆ ತಮ್ಮ ವೃತ್ತಿ ಜೀವನದಲ್ಲಿ ೧೩೬೩ ಪಂದ್ಯಗಳನ್ನಾಡಿ, ೧೨೭೯ ಗೋಲ್ ಗಳನ್ನು ಹೊಡೆದಿದ್ದರು. ಇದೊಂದು ಗಿನ್ನೆಸ್ ದಾಖಲೆಯೂ ಹೌದು. ಪೀಲೆಯವರು ಬಾರಿಸುತ್ತಿದ್ದ ‘ಬೈಸಿಕಲ್ ಕಿಕ್' ಅತ್ಯದ್ಭುತವಾಗಿರುತ್ತಿತ್ತು. ಅದಕ್ಕಾಗಿಯೇ ಅವರನ್ನು ‘ಸೂಪರ್ ಮ್ಯಾನ್', ಬ್ಲಾಕ್ ಪರ್ಲ್ (ಕಪ್ಪು ಹವಳ), ಪೋರ್ಚ್ ಗೀಸ್ ಭಾಷೆಯಲ್ಲಿ ‘ಪೆರೋಲಾ ನೆಗ್ರಾ’ (ಕಪ್ಪು ಮುತ್ತು) ಹಾಗೂ ‘ಓ ರೀ’ (ರಾಜ) ಎಂದೆಲ್ಲಾ ಕರೆಯಲಾಗುತ್ತಿತ್ತು. ೧೯೭೪ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪೀಲೆ, ನಂತರದ ದಿನಗಳಲ್ಲಿ ಅಂದರೆ ೧೯೯೫ರಿಂದ ೧೯೯೮ರವರೆಗೆ ಬ್ರೆಜಿಲ್ ನ ಕ್ರೀಡಾ ಸಚಿವರಾಗಿಯೂ ಕೆಲಸ ಮಾಡಿದ್ದರು. ಸ್ವಲ್ಪ ಸಮಯ ಫುಟ್ಬಾಲ್ ತರಭೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೀಲೆ ಕ್ರೀಡಾ ಸಂಬಂಧಿತ ಕೆಲವು ಚಲನ ಚಿತ್ರಗಳಲ್ಲೂ ನಟಿಸಿದ್ದರು. ಮಹತ್ವದ ಸಂಗತಿ ಎಂದರೆ ಪೀಲೆ ತಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗಿ ನೆಲೆಸಬಾರದು ಎಂದು ಬ್ರೆಜಿಲ್ ಸರಕಾರ ಅವರನ್ನು ೧೯೬೧ರಲ್ಲಿ ‘ಸರಕಾರದ ಆಸ್ತಿ' ಎಂದು ಘೋಷಿಸಿತ್ತು.
ಭಾರತ ಭೇಟಿ: ಖ್ಯಾತಿ ಪಡೆದ ವಿದೇಶೀ ವ್ಯಕ್ತಿಗಳು ಭಾರತಕ್ಕೆ ಭೇಟಿ ನೀಡಿಯೇ ನೀಡುತ್ತಾರೆ. ಪೀಲೆ ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಒಮ್ಮೆ ಭಾರತದ ಫುಟ್ಬಾಲ್ ‘ಮೆಕ್ಕಾ’ ಎನಿಸಿರುವ ಕೊಲ್ಕತ್ತಾಗೆ ೧೯೭೭ರ ಸೆಪ್ಟೆಂಬರ್ ೨೪ರಲ್ಲಿ ಆಗಮಿಸಿದ್ದರು. ಅಂದು ಮೋಹನ್ ಬಗಾನ್ ವಿರುದ್ಧದ ಪ್ರದರ್ಶನ ಪಂದ್ಯವೊಂದರಲ್ಲಿ ಆಟವಾಡಿದ್ದರು. ನಂತರ ೨೦೧೫ರಲ್ಲಿ ಸುಬ್ರತೋ ಕಪ್ ಪಂದ್ಯಾವಳಿಗೆ ವಿಶೇಷ ಅತಿಥಿಯಾಗಿ ನವ ದೆಹಲಿಗೆ ಆಗಮಿಸಿದ್ದ ಪೀಲೆ ಭಾರತದ ಖ್ಯಾತ ಆಟಗಾರ ಬೈಚುಂಗ್ ಭುಟಿಯಾ ಜತೆ ಫುಟ್ಬಾಲ್ ಸಂಬಂಧ ಸುಮಾರು ಮುಕ್ಕಾಲು ಗಂಟೆ ಮಾತನಾಡಿದ್ದರು. ಭಾರತದಲ್ಲಿ ಫುಟ್ಬಾಲ್ ಆಟದಲ್ಲಿ ಇನ್ನಷ್ಟು ಸುಧಾರಣೆಯಾಗಬೇಕು ಎನ್ನುವ ಮಾತುಗಳನ್ನಾಡಿದ್ದರು.
ಫುಟ್ಬಾಲ್ ಮಾಂತ್ರಿಕನ ಕೊನೆಯ ದಿನಗಳು: ೨೦೨೨ ಡಿಸೆಂಬರ್ ೨೯ರಂದು ಬ್ರೆಜಿಲ್ ನ ಸಾವೋ ಪಾಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ ಅವರಿಗೆ ೮೨ ವರ್ಷಗಳಾಗಿತ್ತು. ಫುಟ್ಬಾಲ್ ಮೈದಾನದಲ್ಲಿ ಪಾದರಸದಂತೆ ಓಡಾಟ ನಡೆಸಿದ್ದ ಪೀಲೆ ತನ್ನ ಜೀವನದ ಕೊನೆಯ ದಿನಗಳನ್ನು ಕರುಳಿನ ಕ್ಯಾನ್ಸರ್, ಕಿಡ್ನಿ ವೈಫಲ್ಯ ಹೀಗೆ ಹತ್ತಾರು ಸಮಸ್ಯೆಗಳಲ್ಲಿ ಬಳಲಿ ಆಸ್ಪತ್ರೆಯ ಹಾಸಿಗೆಯಲ್ಲಿ ಕೊನೆಯುಸಿರೆಳೆದದ್ದು ಮಾತ್ರ ದುರಂತ.
ಪೀಲೆ ಹೇಳುತ್ತಿದ್ದ ಮೂರು ಮಾತುಗಳನ್ನು ಮಾತ್ರ ಇಂದಿನ ಯುವ ಜನಾಂಗ ಮರೆಯಲೇ ಬಾರದು. ಒಂದು, ‘ಜನರನ್ನು ಗೌರವಿಸಲು ಕಲಿಯಿರಿ' ಎರಡನೆಯದು, ‘ಯಾವುದೇ ಸಂದರ್ಭ ಒದಗಿಬಂದರೂ ಅದನ್ನು ಎದುರಿಸಲು ಸದಾ ಸಿದ್ಧರಾಗಿರಿ.’ ಮೂರನೆಯದು ಮತ್ತು ಬಹುಮುಖ್ಯ ಮಾತು ‘ಯಾವತ್ತೂ ನಾನೇ ಶ್ರೇಷ್ಟ ಎಂದು ತಿಳಿದುಕೊಳ್ಳಬೇಡಿ.’
ಚಿತ್ರ ೧: ತಾನು ಗೆದ್ದ ಮೂರು ವಿಶ್ವಕಪ್ ಪ್ರಶಸ್ತಿಗಳೊಂದಿಗೆ ಪೀಲೆ
ಚಿತ್ರ ೨: ಪೀಲೆಗೆ ಖ್ಯಾತಿ ತಂದುಕೊಟ್ಟ ‘ಬೈಸಿಕಲ್ ಕಿಕ್'
ಚಿತ್ರ ಕೃಪೆ: ಅಂತರ್ಜಾಲ ತಾಣ