ಪುಂಡಾಟಕ್ಕೆ ಕಡಿವಾಣ ಹಾಕಿ

ಪುಂಡಾಟಕ್ಕೆ ಕಡಿವಾಣ ಹಾಕಿ

ಅಂಗಡಿ ಮಾಲೀಕನೊಬ್ಬನ ಮೇಲೆ ಕೆಲವು ದುಷ್ಕರ್ಮಿಗಳು ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ನಗರ್ತಪೇಟೆಯಲ್ಲಿ ನಡೆದಿದೆ. ಅಂಗಡಿಯವನ ಜತೆ ಕೆಲವು ಯುವಕರು ವಾಗ್ವಾದ ನಡೆಸುತ್ತಿರುವುದು, ನಂತರ ಆತನನ್ನು  ಹೊರಗೆ ಎಳೆದು ಹೊಡೆಯುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಈಗ ದೇಶದೆಲ್ಲೆಡೆ ವೈರಲ್ ಆಗಿದೆ. ಅಂಗಡಿಯಲ್ಲಿ ಆತ ಹಿಂದಿ ಭಜನೆ ಹಾಡುಗಳನ್ನು (ಹನುಮಾನ್ ಚಾಲೀಸಾ) ಜೋರಾಗಿ ಕೇಳಿಸುವಂತೆ ಹಾಕಿದ್ದನೆಂದೂ, ಅದೇ ವೇಳೆ ಅಜಾನ್ ಆಗುತ್ತಿದ್ದುದರಿಂದ ಭಜನೆ ಹಾಡು ನಿಲ್ಲಿಸುವಂತೆ ಯುವಕರು ಕೇಳಿಕೊಂಡರೂ ಅಂಗಡಿಯವ ನಿಲ್ಲಿಸದೇ ಇದ್ದುದಕ್ಕೆ ಹಲ್ಲೆ ಮಾಡಿದರೆಂದೂ ವರದಿಯಾಗಿದೆ. ಇದನ್ನು ಅಂಗಡಿ ಮಾಲಿಕನೇ ಧೃಢಪಡಿಸಿದ್ದಾನೆ. ಈ ಸಂಬಂಧ ಮೂವರನ್ನು ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಹಿಂದಿ ಭಜನೆ ಹಾಡು ಹಾಕಿದ್ದಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ, ಅಂಗಡಿ ಮಾಲೀಕ ನೀಡಿರುವ ದೂರಿನಲ್ಲಾಗಲೀ ಎಫ್ ಐ ಆರ್ ನಲ್ಲಾಗಲೀ ಈ ಅಂಶ ನಮೂದಾಗಿಲ್ಲ. ಭಜನೆ ಹಾಡು, ಹನುಮಾನ್ ಚಾಲೀಸಾ, ಅಜಾನ್ ಯಾವುದರ ಪ್ರಸ್ತಾಪವೂ ಅದರಲ್ಲಿ ಇಲ್ಲದಿರುವುದು ಅಚ್ಚರಿಯ ಸಂಗತಿ. ಪ್ರಕರಣ ರಾಜಕೀಯ ತಿರುವನ್ನೂ ಪಡೆದಿದ್ದು, ಹಲ್ಲೆಗೆ ಒಳಗಾದ ಮುಖೇಶ್ ಅವರನ್ನು ಸಂಸದರಾದ ತೇಜಸ್ವಿ ಸೂರ್ಯ, ಪಿ ಸಿ ಮೋಹನ್, ಶಾಸಕ ಉದಯ ಗರುಡಾಚಾರ್ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆ ಹೆಚ್ಚಾಗುತ್ತಿದೆ. ಸರ್ಕಾರ ಕಿಡಿಗೇಡಿಗಳ ಪರ ನಿಲ್ಲುತ್ತಿದೆ' ಎಂದು ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ ಯುವಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನೊಂದೆಡೆ, ಬೆಂಗಳೂರಿನ ಸುಲ್ತಾನ್ ಪಾಳ್ಯ ಎಂಬ ಜನವಸತಿ ಪ್ರದೇಶದಲ್ಲಿ ಕೆಲವು ಪುಂಡರು ಮಾರಕಾಸ್ತ್ರಗಳನ್ನು ಝಳಪಿಸುತ್ತಾ ಬೈಕ್ ಗಳಲ್ಲಿ ಓಡಾಡಿ, ಭೀತಿಯ ವಾತಾವರಣವನ್ನು ಸೃಷ್ಟಿಸಿರುವ ಘಟನೆ ನಡೆದಿದೆ. ಈ ಸಂಬಂಧ, ಆರ್ ಟಿ ನಗರ ಠಾಣೆ ಪೋಲೀಸರು, ಕಾಡುಗೊಂಡನಹಳ್ಳಿಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೈಕ್ ಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೋಲೀಸರ ವಿಚಾರಣೆ ಸಂದರ್ಭದಲ್ಲಿ ಈ ಪುಂಡರು, ತಮ್ಮ ಏರಿಯಾದಲ್ಲಿ ‘ಹವಾ ಸೃಷ್ಟಿಸಲು' ಈ ಕೃತ್ಯ ಎಸಗಿದ್ದಾಗಿ ಬಾಯಿಬಿಟ್ಟಿದ್ದಾರೆ.

ಇಂತಹ ಪುಂಡಾಟದ ಘಟನೆಗಳು ರಾಜ್ಯದ ಯಾವುದೇ ಭಾಗದಲ್ಲಿ ನಡೆದರೂ ಅದನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಬೇಕು. ರಾಜಕೀಯ, ಒತ್ತಡ-ಪ್ರಭಾವಕ್ಕೆ ಮಣಿದು, ಪ್ರಕರಣಗಳನ್ನು ದುರ್ಬಲಗೊಳಿಸಬಾರದು. ಪುಂಡರ ಮೇಲೆ ಕಠಿಣಾತಿಕಠಿಣ ಸೆಕ್ಷನ್ ಗಳನ್ನು ಹಾಕಿ, ಶಿಕ್ಷೆಯಾಗುವಂತೆ ಮಾಡಬೇಕು. ಆಗ ಮಾತ್ರವೇ ಬೇರೆಯವರು ಇಂತಹ ಕೃತ್ಯ ಎಸಗಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ಸಾರ್ವಜನಿಕರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೯-೦೩-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ