ಪುಗಸಟ್ಟೆ ಬಾಳು-ಚೆಂದಾಗಿ ಬಾಳು
ಕವನ
ಪುಗಸಟ್ಟೆ ಬಾಳಲ್ಲಿ ಕೆಲ್ಸಗೆಟ್ಟು ಕೂಡಬ್ಯಾಡ್ರಿ
ಬೊಗಸೀಗೆ ಸಿಕ್ಕಷ್ಟು ಶ್ರಮಿಸೋಣ್ರಿ | ಬನ್ನೀರಿ
ಮುಗಿಲಾಗ ನಮ್ಹೆಸ್ರು ಹೊಳೆತೈತ್ರೀ ||
ಹಸಿರಾಗ ಉಸಿರೈತಿs ಹೆಸರಾಗ ಏನುಐತಿs
ಖುಷಿಯಾಗ ಹಸಿರನ್ನ ಬೆಳೆಸೋಣ್ರಿ | ಬನ್ನೀರಿ
ಹಸಿಹಸಿಯ ವೃಕ್ಷವ ಕಡಿಬ್ಯಾಡ್ರಿss ||
ಹುಸಿಬಿಟ್ಟು ಮರ್ಗಬ್ಯಾಡ್ರಿ ಕಸುವೀಲೆ ದುಡಿದ್ಬಿಡ್ರಿ
ಕಸದಲ್ಲಿ ರಸವಾss ತಗಿಯೋಣ್ರಿ | ಬನ್ನೀರಿ
ಕಾಸಿದ್ರದು ಕೈಲಾಸ ಮರೀಬ್ಯಾಡ್ರಿ||
ಕುಳಿತುಂಡ್ರೆ ಕುಡ್ಕಿಹೊನ್ನು ಸಾಲ್ದಂಗ ಆಗತೈತಿ
ತಿಳುಕೊಂಡು ದುಡಿಮೆ ಮಾಡೋಣ್ರಿ | ಬನ್ನೀರಿ
ಬಳುಕೊಳ್ಳಿ ಮನಃಶ್ಯಾಂತಿ ಎದೆಯಾಗ್ರೀ ||
ಆಲಸ್ಯ ತರವಲ್ಲ ಮನುಸ್ಯಾನ ಜನುಮಾಕs
ಕಲ್ಲರಳಿ ಹೂವಾಗಿ ಬೆಳಗ್ತೈತ್ರಿ | ಜಗದೊಳ್ಗ
ಜಲದಂತೆ ಯಾವತ್ತೂ ಬಾಳಬೇಕ್ರೀ ||
-ಈರಪ್ಪ ಬಿಜಲಿ ಕೊಪ್ಪಳ
ಚಿತ್ರ್
