ಪುಟಗಳ ನಡುವಿನ ನವಿಲುಗರಿ
ಕುಸುಮಾ ಶಾನಭಾಗ “ಉದಯವಾಣಿ" ದಿನಪತ್ರಿಕೆಯಲ್ಲಿ ೨೦೦೮-೨೦೦೯ರಲ್ಲಿ ಎಂಟು ತಿಂಗಳ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹ ಇದು. “ಪ್ರಜಾವಾಣಿ" ವಾರ್ತಾಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಸ್ವಯಂನಿವೃತ್ತಿಯ ನಂತರ ಬರೆದ ಬದುಕಿನ ಅನುಭವಗಳು ಮತ್ತು ನಿತ್ಯ ಜೀವನದಲ್ಲಿ ಅವರು ಕಂಡ, ಅನುಭವಿಸಿದ ಕೆಲವು ಘಟನೆಗಳು ಇಲ್ಲಿವೆ.
ಇದರ ಒಂದೊಂದು ಲೇಖನವೂ ಮನಸ್ಸನ್ನು ತಟ್ಟುತ್ತದೆ. ಯಾಕೆಂದರೆ, ಇವೆಲ್ಲವೂ ನೈಜಕತೆಗಳೇ ಆಗಿವೆ. ಬೆಂಗಳೂರಿನ ನಂದಿನಿ ಲೇಔಟಿನಿಂದ ಕಾಣೆಯಾದ ಯುವತಿಯರ ಬಗ್ಗೆ ಬರೆದ “ಎಲ್ಲಿ ಹೋದರು ಈ ಬಾಲೆಯರು!” ಲೇಖನ, ನಗರಜೀವನದ ಕರಾಳಮುಖವೊಂದನ್ನು ಬಹಿರಂಗ ಪಡಿಸುತ್ತದೆ. ಅಲ್ಲಿ ಬಡಯುವತಿಯರು ಸುರಕ್ಷಿತರಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.
“ಉಪಕಾರ ಎಂಬ ಸಿಹಿಗೆ ಮುತ್ತುವ…" ಲೇಖನ ಹೆಗ್ಗಡದೇವನಕೋಟೆ ಸಮೀಪದ ಬೀಚನಹಳ್ಳಿ ಕಬಿನಿ ಕಾಲೋನಿಯ ಪಿಯುಸಿ ಓದುವ ಮೂವರು ಯುವಕರು ಬಗ್ಗೆ. ದೇವಾಲಮ್ಮ ಎಂಬ ಮಹಿಳೆ ಜೇನ್ನೊಣಗಳ ದಾಳಿಯಿಂದ ತತ್ತರಿಸಿ ಹೋದಾಗ, ಇವರು ಓಡಿ ಹೋಗಿ, ಹೊಗೆ ಹಾಕಿ, ತಾವೂ ನೂರಾರು ಜೇನ್ನೊಣಗಳಿಂದ ಚುಚ್ಚಿಸಿಕೊಂಡು ಆಕೆಯನ್ನು ರಕ್ಷಿಸುತ್ತಾರೆ. ಅವಳನ್ನು ಹೆಗ್ಗಡದೇವನಕೋಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಾಗ ಅಲ್ಲಿ ತಾಂಡವವಾಡುವ ಭ್ರಷ್ಟಾಚಾರವನ್ನು ಬಿಚ್ಚಿಡುತ್ತದೆ ಈ ಲೇಖನ. ಅನಂತರ, ಈ ಮೂವರು ಬಡ ಕೃಷಿ ಕಾರ್ಮಿಕರ ಮಗಂದಿರನ್ನು ಕಬಿನಿ ಕಾಲೋನಿಯ ಕೆಲವರು ತಮ್ಮ ಸ್ವಾರ್ಥಕ್ಕೆ ಕೆಲಸದ ಆಳುಗಳಂತೆ ಬಳಸಿಕೊಳ್ಳುವುದನ್ನೂ ದಾಖಲಿಸಿದ್ದಾರೆ. ಆ ಹುಡುಗರ ಉಪಕಾರ ಪ್ರವೃತ್ತಿಯೇ ಅವರಿಗೆ ಮುಳುವಾಯಿತೇ?
"ಮಣ್ಣಿನ ಮಗಳ ಕೊನೆಯ ದಿನಗಳು” ಲೇಖನ ಹೀಗೆ ಶುರುವಾಗುತ್ತದೆ: “ಇಪ್ಪತ್ತು ಕುಂಟೆ ಹೊಲದಲ್ಲಿ, ಚೆನ್ನಮ್ಮ ಆ ವರ್ಷ ಕಬ್ಬು ಹಾಕಬಾರದಿತ್ತು…" ಆ ವರ್ಷ ಮಳೆ ಕೈ ಕೊಡುತ್ತದೆ. ಚೆನ್ನಮ್ಮ ಬೆಳೆದ ಹದಿನೈದು ಟನ್ ಕಬ್ಬನ್ನು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಒಯ್ದರೂ ತಿರಸ್ಕೃತವಾಗುತ್ತದೆ. ಕೈಸಾಲ ಕೊಟ್ಟಿದ್ದವರಿಂದ ಅವಮಾನಕ್ಕೆ ಒಳಗಾಗುವ ಚೆನ್ನಮ್ಮ ಕೊನೆಗೆ ಮನೆ ಎದುರಿನ ನುಗ್ಗೆ ಮರಕ್ಕೆ ನೇಣು ಹಾಕಿಕೊಳ್ಳುತ್ತಾಳೆ.
ಹೆಸರುಘಟ್ಟದಲ್ಲಿ ನೃತ್ಯಗ್ರಾಮ ಆರಂಭಿಸಿದ್ದ ದಿ. ಪ್ರೊತಿಮಾ ಬೇಡಿ ಅವರ ಶಿಷ್ಯೆಯರು ತನ್ನ ಶಾಲೆಯಲ್ಲಿ ನೀಡಿದ್ದ ನೃತ್ಯ ಕಾರ್ಯಕ್ರಮ ನೋಡಿದ ಬೀರೇಶನಿಗೆ ನೃತ್ಯ ಕಲಿಯುವ ಆಸೆಯಾಯಿತು. ಆತ ತನ್ನ ಕನಸು ನನಸು ಮಾಡಿಕೊಂಡ ಬಗೆಯನ್ನು ವಿವರಿಸುತ್ತದೆ “ಪ್ರೊತಿಮಾ ಬೇಡಿಯ ಸೆಳೆತಕೆ ಒಲಿದ ದನಗಾಹಿ” ಲೇಖನ.
"ಅವರಿಗೆ ಎಲ್ಲರೂ ಇದ್ದರೂ ಯಾರೂ ಇರಲಿಲ್ಲ" ಸೆಲಿನಾ ಎಂಬ ಬೆಂಗಳೂರಿನ ಸರ್ಕಾರಿ ಕಾಲೇಜಿನ ಇಂಗ್ಲಿಷ್ ಅಧ್ಯಾಪಕಿಯ ನೈಜ ಕತೆ. ಅವರು ಅಂತಿಮ ಹಂತದ ಕ್ಯಾನ್ಸರಿನಿಂದ ಬಳಲುತ್ತಿದ್ದರು. (ಲೇಖಕಿಯೂ ಕ್ಯಾನ್ಸರಿನಿಂದ ಚೇತರಿಸಿಕೊಂಡವರು.) ಆದರೆ, ಸೆಲಿನಾ ಕೊನೆಗಾಲದಲ್ಲಾದರೂ ತನ್ನ ಲಕ್ಷಗಟ್ಟಲೆ ಹಣ ಖರ್ಚು ಮಾಡಲು ಮನಸ್ಸು ಮಾಡಲಿಲ್ಲ. ತನ್ನ ಆರೈಕೆಗೆ ನರ್ಸ್ ಇಟ್ಟುಕೊಳ್ಳಲೂ ತಯಾರಿರಲಿಲ್ಲ. ಅವರ ಅಕ್ಕಂದಿರಂತೂ ಅವರನ್ನು ನೋಡಿಕೊಳ್ಳಲು ಸುತಾರಾಂ ತಯಾರಿರಲಿಲ್ಲ. ಆದರೆ, ಸೆಲಿನಾ ತೀರಿಕೊಂಡಾಗ, ಅಂತ್ಯಸಂಸ್ಕಾರದ ಮುನ್ನವೇ ಮನೆಗೆ ಧಾವಿಸಿ, ಎಲ್ಲ ಸೊತ್ತುಗಳನ್ನೂ ಹಂಚಿಕೊಂಡರು.
ತಮ್ಮದಲ್ಲದ ತಪ್ಪಿನಿಂದ ಏಡ್ಸ್ ರೋಗಪೀಡಿತರಾದ ಮೂವರ ಸಂಕಟಗಳನ್ನು ಕಟ್ಟಿಕೊಡುವ ಲೇಖನ “ಬಹಿಷ್ಕಾರ - ತಿರಸ್ಕಾರಗಳೇಕೆ?” ತಮ್ಮ ನೈಜ ಸ್ವಭಾವವನ್ನು ಮರೆಮಾಚಿ, ಮುಖವಾಡ ಹಾಕಿಕೊಂಡು, ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾ ಬದುಕುವ ಕೆಲವರನ್ನು ಪರಿಚಯಿಸುತ್ತದೆ "ಹೇರಿಕೊಂಡರೆ ಹೊರೆ” ಲೇಖನ. ಕೆಲವು ಪತ್ರಕರ್ತರ ಅಹಂ ಮತ್ತು ಸಣ್ಣತನಗಳನ್ನು ದಾಖಲಿಸಿದೆ "ಅಸೂಯೆಯ ಜಾಡು ಹಿಡಿದು…" ಲೇಖನ.
ತಮ್ಮ ತಂದೆ “ಭಾರತೀಸುತ" ಮತ್ತು ಕೊಡಗಿನ ಗೌರಮ್ಮನ ಬಗ್ಗೆ ಲೇಖಕಿ ಬರೆದ ಎರಡು ಲೇಖನಗಳೂ ಈ ಸಂಕಲನದಲ್ಲಿವೆ.