ಪುಟಾಣಿ ಪಂಟರ್ಸ್
ಮಕ್ಕಳಿಗಾಗಿ ಕಥೆ ಬರೆಯುವವರೇ ಕಡಿಮೆಯಾಗಿರುವಾಗ ಅಶ್ವಿನಿ ಶಾನಭಾಗ ಮಕ್ಕಳಿಗಾಗಿ ಸಾಹಸಮಯ ಕಥೆಯುಳ್ಲ ‘ಪುಟಾಣಿ ಪಂಟರ್ಸ್’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಆಪರೇಷನ್ ಬೆಕ್ಕಿನ ಮರಿ ಎಂಬ ಕಥಾ ಹಂದರ ಹೊಂದಿರುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಯಶಸ್ವಿನಿ ಎಸ್ ಎನ್. ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ಹೀಗಿವೆ…”ನನಗೆ ಈ ಕತೆಯಲ್ಲಿ ಇಷ್ಟ ಆದ ಎರಡು ಮುಖ್ಯವಾದ ವಿಷಯಗಳು ಎಂದರೆ ಮಕ್ಕಳು ತೋರುವ ಕುತೂಹಲ ಮತ್ತು ಸಹಾನುಭೂತಿ. ಈ ಕತೆಯಲ್ಲಿ ಬರುವ ಮೂವರು ಮುಖ್ಯ ಪಾತ್ರಗಳು - ಆರ್ಯ, ಮೀರಾ ಮತ್ತು ಅಪ್ಪು ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತ ನೋಡಿರುವ ಮಕ್ಕಳನ್ನು ನೆನಪಿಸುತ್ತಾರೆ. ಅವರು ಆಡುವ ಸ್ಕೂಟರ್ ಆತ, ಹಿರಿಯರಿಂದ ಬಚ್ಚಿಟ್ಟುಕೊಂಡು ಚಾಕಲೇಟ್ ತಿನ್ನೋದು, ಜೇಬಿನಲ್ಲಿ ಸದಾ ತಿನ್ನಲು ಏನಾದರೂ ಇಟ್ಟುಕೊಳ್ಳುವುದು, ತಮ್ಮ ಕೆಲಸ ಆಗಬೇಕು ಅಂತ ಪೋಷಕರಿಗೆ ಪೂಸಿ ಹೊಡೆಯುವುದು ಮಕ್ಕಳಿಗೆ ಇಷ್ಟವಾಗುತ್ತೆ.
ಈ ಮೂವರು ಮಕ್ಕಳು ಕಾಲೋನಿಯಲ್ಲಿ ಇರುವ ದೊಡ್ದ ಮಕ್ಕಳೊಂದಿಗೆ ಸೇರಿ ಬೆಕ್ಕಿನ ಮರಿಗಳ ಮೇಲಿರುವ ಪ್ರೀತಿಗಾಗಿ ಮಾಡುವ ಕೆಲಸಗಳು ರೋಚಕವಾಗಿವೆ. ಕತೆಯಲ್ಲಿ ಬರುವ, ಮಕ್ಕಳು ಹೆದರುವ ಶಿಸ್ತಿನ ಕರ್ನಲ್ ಅಂಕಲ್ ಪಾತ್ರ ಮನಸಲ್ಲಿ ಉಳಿಯುತ್ತೆ. ಈ ಪುಸ್ತಕದಲ್ಲಿ ಮಕ್ಕಳ ಮನಸ್ಸನ್ನು ಸೆರೆಹಿಡಿಯುವಲ್ಲಿ ಲೇಖಕರು ಅದ್ಭುತ ಕೆಲಸವನ್ನು ಮಾಡಿದ್ದಾರೆ.”
ಈ ಕೃತಿಯನ್ನು ಬರೆದ ಅಶ್ವಿನಿ ಶಾನಭಾಗ ಅವರು ತಮ್ಮ ಮುನ್ನುಡಿಯಲ್ಲಿ “ ನನ್ನ ಬಾಲ್ಯವನ್ನು ಸಮೃದ್ಧಗೊಳಿಸಿದ ವಿಷಯಗಳಲ್ಲಿ ಪುಸ್ತಕಗಳು ಕೂಡ ಒಂದು. ತಿಂಗಳಿಗೆ ನಾಲ್ಕರಿಂದ ಐದು ಪಾಕ್ಷಿಕ, ಮಾಸಿಕ ಪುಸ್ತಕಗಳು ನನ್ನಂತಹ ಮಕ್ಕಳ ಕೈ ಸೇರುತ್ತಿದ್ದ ಸುವರ್ಣ ಯುಗ ಅದು. ಎಂತಹ ಅದ್ಭುತ ಕಲ್ಪನಾ ಲೋಕವದು. ಇಂತಹ ಬಾಲ್ಯವನ್ನು ಅನುಭವಿಸಿ ಬಂದ ನಾವು, ನಮ್ಮ ಮಕ್ಕಳಿಗೂ ಇಂತಹ ಒಂದು ಸಂಭ್ರಮ ಸಿಗಲಿ ಅಂತ ಬಯಸುವುದು ಸಹಜ. ಆದರೆ ಪಾಪ ಇಂದಿನ ಮಕ್ಕಳಿಗೆ ಇಂತಹ ಒಂದು ಸವಲತ್ತು ಕನ್ನಡ ಸಾಹಿತ್ಯದಲ್ಲಿ ಇಲ್ಲ. ಮಕ್ಕಳನ್ನು ಸೆಳೆಯುವಲ್ಲಿ ಕನ್ನಡದ ಮಕ್ಕಳ ಸಾಹಿತ್ಯ ಎಲ್ಲೋ ಎಡವುತ್ತಿದೆ ಅಂತ ಅನ್ನಿಸುತ್ತಿದೆ.
ಒಂದು ಮಗುವಿನ ತಾಯಿಯಾದ ನನಗೆ ಇಂದಿನ ಮಕ್ಕಳಿಗೆ ಯಾವ ರೀತಿಯ ಸಾಹಿತ್ಯ ಬೇಕು, ಯಾವ ರೀತಿಯ ಕಥೆ ಪುಸ್ತಕಗಳಲ್ಲಿ ಮಕ್ಕಳು ಆಸಕ್ತಿ ತೋರಿಸುತ್ತಾರೆ ಅನ್ನುವ ಹದ ತಿಳಿಯಲು ತುಂಬಾ ಸಮಯ ಹಿಡಿಯಲಿಲ್ಲ. ಮಕ್ಕಳಿಗೆ ಕಥೆ ಬರೆಯುವಾಗ, ಹೇಳುವಾಗ ಅವರ ವಯಸ್ಸಿಗೆ ಭಾರವಾಗುವಂತಹ ನೀತಿ ಪಾಠಗಳನ್ನು ಹೇಳಬಾರದು. ಅವರಷ್ಟೇ ಮುಗ್ಧವಾಗಿ ನಾವು ಕಲಿಸಬೇಕಿರುವ ಪಾಠಗಳನ್ನು ಹೇಳಿ ಮುಗಿಸಬೇಕು. ಅವರ ಕಲ್ಪನಾ ಲೋಕಕ್ಕೆ ಬಣ್ಣ ತುಂಬುವಂತೆ ಇರಬೇಕು. ಆಕರ್ಷಕ ಚಿತ್ರಗಳು ಅವರನ್ನು ಪುಸ್ತಕಗಳ ಕಡೆಗೆ ಸೆಳೆಯುವಂತೆ ಇರಬೇಕು.
ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕನ ಕಥೆಗಳು ಇಂದಿನ ಮಕ್ಕಳನ್ನು ಸೆಳೆಯುತ್ತಿಲ್ಲ ಅಂದರೆ, ನಾವು ಇಂದಿನ ವಾತಾವರಣವನ್ನು ಬಳಸಿಕೊಂಡು ಕಥೆಗಳನ್ನು ಹೆಣೆದು ಅವರ ಮುಂದೆ ಇಟ್ಟು, ಅವರನ್ನು ಪುಸ್ತಕ ಲೋಕಕ್ಕೆ ಎಳೆದು ತರಬೇಕು. ಇಂತಹ ಒಂದಿಷ್ಟು ಮಾನದಂಡಗಳನ್ನು ಇಟ್ಟುಕೊಂಡು ರಚಿಸಿದಂತಹ ಪುಸ್ತಕ ಇದು. ಇದು ನನ್ನ ಎರಡನೇ ಪುಸ್ತಕ ಮಕ್ಕಳಿಗಾಗಿ ಬರೆದ ಮೊದಲ ಚಾಪ್ಟರ್ ಬುಕ್. ಸಂಪೂರ್ಣ ಹೊಸ ಅನುಭವ. ಆದ್ದರಿಂದ ಖುಷಿ ಆತಂಕ ಎರಡು ಇದೆ. ಕನ್ನಡದ ಮಕ್ಕಳು ಪ್ರೀತಿಯಿಂದ ಈ ಪುಸ್ತಕವನ್ನು ಅಪ್ಪಿಕೊಂಡರೆ ಅಷ್ಟೇ ಸಾಕು.” ಎಂದಿದ್ದಾರೆ.