ಪುಟಾಣಿ ಹಂದಿ ಮರಿಯ ಗುಟ್ಟು

ಪುಟಾಣಿ ಹಂದಿ ಮರಿಯ ಗುಟ್ಟು

ಅದೊಂದು ಪುಟಾಣಿ ಹಂದಿಮರಿ. ರಾತ್ರಿ ಬೆಚ್ಚಗಿನ ಹುಲ್ಲಿನ ಮೇಲೆ ಸೋದರ ಮತ್ತು ಸೋದರಿ ಹಂದಿಮರಿಗಳ ಜೊತೆ ಮಲಗಿದ್ದಾಗ, ಅದು ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಮುಗುಳ್ನಗುತ್ತಿತ್ತು - ತನ್ನ ಗುಟ್ಟನ್ನು ನೆನೆಯುತ್ತಾ.  ತಾನು ಪುಟಾಣಿ ಹಂದಿ ಮರಿ ಆಗಿದ್ದರೆ ಒಳ್ಳೆಯದೇ ಎಂದುಕೊಳ್ಳುತ್ತಿತ್ತು.

ಆದರೆ, ಕೆಲವೇ ದಿನಗಳ ಮುಂಚೆ, ಪುಟಾಣಿ ಹಂದಿಮರಿಗೆ ಬಹಳ ಬೇಜಾರಾಗಿತ್ತು. ಅದರ ಕುಟುಂಬದಲ್ಲಿ ಪುಟಾಣಿ ಹಂದಿಮರಿಯೇ ಅತ್ಯಂತ ಕಿರಿಯ ಮತ್ತು ಅತ್ಯಂತ ಪುಟಾಣಿ. ಅದರ ಐದು ಅಣ್ಣಂದಿರು ಮತ್ತು ಐದು ಅಕ್ಕಂದಿರು ಅದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದ್ದವು. ರೈತನ ಮಡದಿ ಇದನ್ನು "ಪುಟಾಣಿ" ಎಂದು ಕರೆಯುತ್ತಿದ್ದಳು ಯಾಕೆಂದರೆ ಅದು ಉಳಿದ ಎಲ್ಲ ಹಂದಿಮರಿಗಳಿಗಿಂತ ಗಾತ್ರದಲ್ಲಿ ಬಹಳ ಪುಟಾಣಿ ಆಗಿತ್ತು.

ತನ್ನ ಗೆಳತಿಯೊಂದಿಗೆ ಹಂದಿಮರಿಗಳಿಗೆ ತಾಜಾ ಹುಲ್ಲು ಕೊಯ್ಯುತ್ತಿದ್ದಾಗ ರೈತನ ಮಡದಿ ಹೇಳಿದಳು, “ಈ ಪುಟಾಣಿ ಹಂದಿಮರಿ ಬೆಳೆಯುವುದೇ ಇಲ್ಲ ಅನಿಸುತ್ತದೆ.”

ಅಣ್ಣಂದಿರೂ ಅಕ್ಕಂದಿರೂ ಪುಟಾಣಿ ಹಂದಿಮರಿಯನ್ನು ಬಹಳ ಗೇಲಿ ಮಾಡುತ್ತಿದ್ದರು. "ಪುಟಾಣಿ ಹಂದಿಮರಿ, ನೀನು ಈ ಭೂಮಿಯಲ್ಲೇ ಅತ್ಯಂತ ಸಣ್ಣ ಹಂದಿಮರಿ ಆಗಿದ್ದಿ” ಎನ್ನುತ್ತಾ ಅವರೆಲ್ಲರೂ ನಗುತ್ತಿದ್ದರು.

“ನನ್ನನ್ನು ನನ್ನಷ್ಟಕ್ಕೇ ಬಿಟ್ಟು ಬಿಡಿ” ಎನ್ನುತ್ತಾ ಪುಟಾಣು ಹಂದಿಮರಿ ಹಂದಿಮನೆಯ ಮೂಲೆಗೆ ಹೋಗಿ ಒಂದು ಚೆಂಡಿನಂತೆ ಮೈ ಸುತ್ತಿ ಮಲಗಿಕೊಂಡು ಅಳಲು ಶುರು ಮಾಡುತ್ತಿತ್ತು. “ನೀವೆಲ್ಲರೂ ದುರಾಶೆಯ ಹಂದಿಗಳು ಆಗಿರದಿದ್ದರೆ ಮತ್ತು ನನಗೂ ಸ್ವಲ್ಪ ತಿನ್ನಲು ಅವಕಾಶ ಕೊಡುತ್ತಿದ್ದರೆ, ನಾನು ದೊಡ್ಡವನಾಗುತ್ತಿದ್ದೆ” ಎಂದು ಅದು ದುಃಖದಿಂದ ಪಿಸು ನುಡಿಯಿತು.

ಪ್ರತೀ ಸಲ ಹಂದಿಗಳಿಗೆ ಆಹಾರ ಹಾಕಿದಾಗಲೂ ಹಾಗೆಯೇ ಆಗುತ್ತಿತ್ತು - ಉಳಿದೆಲ್ಲ ಹಂದಿಮರಿಗಳು ನುಗ್ಗಿ ಬಂದು, ಪುಟಾಣಿ ಹಂದಿಮರಿಯನ್ನು ಪಕ್ಕಕ್ಕೆ ತಳ್ಳಿ, ತಾವೇ ಎಲ್ಲವನ್ನೂ ತಿಂದು ಬಿಡುತ್ತಿದ್ದವು. ಪುಟಾಣಿ ಹಂದಿಮರಿಗೆ ಕಸ ಮಾತ್ರ ಉಳಿದಿರುತ್ತಿತ್ತು. ಹೀಗಾಗುತ್ತಿದ್ದರೆ, ಪುಟಾಣಿ ಹಂದಿಮರಿ ಬೆಳೆಯುದಾದರೂ ಹೇಗೆ?

ಹೀಗಿರುವಾಗ, ಅದೊಂದು ದಿನ ಪುಟಾಣಿ ಹಂದಿಮರಿಗೆ ಒಂದು ಸಂಗತಿ ಗೊತ್ತಾಯಿತು. ಅದು ಹಂದಿಮನೆಯ ಮೂಲೆಯಲ್ಲಿ ಎಂದಿನಂತೆ ಅಡ್ಡಾಗಿದ್ದಾಗ, ಅದಕ್ಕೆ ಆಹಾರ ಹಾಕುವ ತೊಟ್ಟಿಯ ಹಿಂಬದಿಯಲ್ಲಿ, ಹಲಗೆಬೇಲಿಯಲ್ಲಿ ಒಂದು ಪುಟ್ಟ ತೂತು ಕಾಣಿಸಿತು. "ನಾನು ಅದರಲ್ಲಿ ತೂರಿಕೊಳ್ಳಬಹುದು”ಎಂದು ಪುಟಾಣಿ ಹಂದಿಮರಿ ಉತ್ಸಾಹದಿಂದ ಯೋಚಿಸಿತು.

ಅವತ್ತು ರಾತ್ರಿ ಉಳಿದೆಲ್ಲ ಹಂದಿಮರಿಗಳು ಮಲಗುವ ತನಕ ಪುಟಾಣಿ ಹಂದಿಮರಿ ಕಾದು ಕುಳಿತಿತು. ಅನಂತರ, ಅದು ಹಲಗೆಬೇಲಿಯ ಪುಟ್ಟ ತೂತಿನಲ್ಲಿ ನುಸುಳಿತು. ಓ, ಪುಟಾಣಿ ಹಂದಿಮರಿ ಹಂದಿಮನೆಯಿಂದ ಹೊರಗೆ ಬಂದಿತ್ತು! ಈಗ ಅದು ಎಲ್ಲಿಗೆ ಬೇಕಾದರೂ ಹೋಗಬಹುದಾಗಿತ್ತು.

ಆ ರಾತ್ರಿ ಪುಟಾಣಿ ಹಂದಿಮರಿ ಹಲವು ಸಾಹಸ ಮಾಡಿತು. ಮೊದಲು ಅದು ಕೋಳಿಮನೆಗೆ ಹೋಗಿ ಅಲ್ಲಿದ್ದ ಧಾನ್ಯಗಳನ್ನು ಗಬಗಬನೆ ತಿಂದಿತು. ಅನಂತರ, ಬೇಲಿಯ ಕೆಳಗೆ ತೂರಿಕೊಂಡು ಹೊಲಕ್ಕೆ ಹೋಯಿತು. ಅಲ್ಲಿ ಬೇಕಾದಷ್ಟು ಕ್ಯಾರೆಟುಗಳನ್ನು ತಿಂದಿತು. ತದನಂತರ, ತರಕಾರಿ ಹೊಲಕ್ಕೆ ಹೋಗಿ, ಒಂದು ಸಾಲಿನಲ್ಲಿ ಬೆಳೆದಿದ್ದ ಎಲೆಕೋಸುಗಳನ್ನೆಲ್ಲ ತಿಂದಿತು. ಅಬ್ಬ, ಎಂತಹ ಹಬ್ಬದೂಟ! ಅಷ್ಟರಲ್ಲಿ ಪುಟಾಣಿ ಹಂದಿಮರಿ ಹೊಟ್ಟೆ ಬಿರಿಯುವಷ್ಟು ತಿಂದಾಗಿತ್ತು.

ಹಾಗಾಗಿ ಅದು ಹಂದಿಮನೆಗೆ ಹಿಂತಿರುಗಿ ಹೊರಟಿತು. ಆ ಹಾದಿಯಲ್ಲಿ ಒಳ್ಳೆಯ ಪರಿಮಳ ಅದರ ಮೂಗಿಗೆ ಬಡಿಯಿತು. ಅಲ್ಲೆಲ್ಲ ಹುಡುಕಾಡಿದಾಗ ಅದಕ್ಕೆ ಗೊತ್ತಾಯಿತು - ಅದು ಸ್ಟ್ರಾಬೆರಿಗಳ ಪರಿಮಳ. ಎಂತಹ ರುಚಿರುಚಿ ಹಣ್ಣುಗಳು ಅವು!
ಅದನ್ನು ತಿನ್ನುತ್ತಾ, ನಾಳೆ ಇದರಿಂದಲೇ ತನ್ನ ಹಬ್ಬದೂಟ ಶುರು ಮಾಡಬೇಕೆಂದು ಯೋಚಿಸಿತು ಪುಟಾಣಿ ಹಂದಿಮರಿ.
ಗುಟ್ಟಿನಲ್ಲಿ ಭೂರಿಭೋಜನ ಮುಗಿಸಿದ ಪುಟಾಣಿ ಹಂದಿಮರಿ ಅದೇ ತೂತಿನಲ್ಲಿ ತೂರಿಕೊಂಡು ಹಂದಿಮನೆಗೆ ವಾಪಾಸು ಬಂದು, ಅಮ್ಮನ ಪಕ್ಕದಲ್ಲಿ ಸಂತೃಪ್ತಿಯಿಂದ ಮುಗುಳ್ನಗುತ್ತಾ ಮಲಗಿಕೊಂಡಿತು.

ಪ್ರತಿ ದಿನ ರಾತ್ರಿ, ಉಳಿದವರೆಲ್ಲ ಮಲಗಿದಾಗ ಹಲಗೆಬೇಲಿಯ ಪುಟ್ಟ ತೂತಿನಲ್ಲಿ ತೂರಿ ಹೋಗುತ್ತಾ, ಪುಟಾಣಿ ಹಂದಿಮರಿ ತನ್ನ ಗುಟ್ಟಿನ ಹಬ್ಬದೂಟದ ಸಾಹಸ ಮುಂದುವರಿಸಿತು. ಆಹಾರ ತಿನ್ನುವ ಹೊತ್ತಿನಲ್ಲಿ, ಬೇರೆಯವರೆಲ್ಲ ತನ್ನನ್ನು ಪಕ್ಕಕ್ಕೆ ತಳ್ಳಿ ತಿನ್ನುತ್ತಿದ್ದಾಗ ಅದೀಗ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ, ರಾತ್ರಿ ತನಗೆ ಹಬ್ಬದೂಟ ಸಿಗುತ್ತದೆಂದು ಅದಕ್ಕೆ ಗೊತ್ತಿತ್ತು. ಕೆಲವು ಸಲ ಅದಕ್ಕೆ ರೈತ ಕುಟುಂಬದ ರಾತ್ರಿಯೂಟದಲ್ಲಿ ಉಳಿದದ್ದನ್ನೆಲ್ಲ ನಾಯಿಗಾಗಿ ಹಾಕಿಟ್ಟಿದ್ದ ಬಾಲ್ದಿ ಸಿಗುತ್ತಿತ್ತು. ಇನ್ನು ಕೆಲವೊಮ್ಮೆ, ಕುದುರೆಗಳಿಗಾಗಿ ಬಾರ್ಲಿ ಹಾಕಿಟ್ಟಿದ್ದ ಬಾಲ್ದಿ ಸಿಗುತ್ತಿತ್ತು. “ಓಹೋ, ಇವತ್ತು ನನಗೆ ವಿಶೇಷ ತಿನಿಸು” ಎಂದು ಖುಷಿಯಿಂದ ಅವನ್ನು ಚಪ್ಪರಿಸುತ್ತಿತ್ತು ಪುಟಾಣಿ ಹಂದಿಮರಿ.

ಹೀಗೆಯೇ ದಿನಗಳು, ವಾರಗಳು ಉರುಳಿದವು. ಪ್ರತಿ ದಿನ ರಾತ್ರಿ ಹಬ್ಬದೂಟ ಮಾಡುತ್ತಾ ಪುಟಾಣಿ ಹಂದಿಮರಿ ದೊಡ್ಡದಾಗಿ ದಪ್ಪವಾಗಿ ಬೆಳೆಯಿತು. ಈಗ ಹಲಗೆಬೇಲಿಯ ಪುಟ್ಟ ತೂತಿನಿಂದ ತೂರಿಕೊಳ್ಳಲು ಅದಕ್ಕೆ ಬಹಳ ಕಷ್ಟವಾಗುತ್ತಿತ್ತು.

ಪುಟಾಣಿ ಹಂದಿಮರಿಗೆ ಚೆನ್ನಾಗಿ ಗೊತ್ತಿತ್ತು - ಇನ್ನು ಕೆಲವೇ ದಿನಗಳ ನಂತರ ಹಲಗೆಬೇಲಿಯ ಪುಟ್ಟ ತೂತಿನಲ್ಲಿ ತನಗೆ ತೂರಿಕೊಳ್ಳಲು ಸಾಧ್ಯವಿಲ್ಲವೆಂದು. ಅಷ್ಟರಲ್ಲಿ ತಾನು ಗಾತ್ರದಲ್ಲಿ ದೊಡ್ಡದಾಗಿ ಬೆಳೆದಿರುವ ಕಾರಣ, ಆಹಾರ ತಿನ್ನುವ ಸಮಯದಲ್ಲಿ, ತನ್ನ ಅಣ್ಣಂದಿರು ಮತ್ತು ಅಕ್ಕಂದಿರೊಂದಿಗೆ ಸರಿಸಮವಾಗಿ ನುಗ್ಗಿ ತಾನೂ ಬೇಕಾದಷ್ಟು ತಿನ್ನಬಲ್ಲೆ ಎಂಬುದೂ ಅದಕ್ಕೆ ಗೊತ್ತಿತ್ತು. ಈಗಂತೂ ತನ್ನ ರಾತ್ರಿ ಸಾಹಸದ ಗುಟ್ಟಿನ ಖುಷಿಯಲ್ಲಿ ಅದು ಬೀಗುತ್ತಿತ್ತು.

ಚಿತ್ರ ಕೃಪೆ: : "ದ ನರ್ಸರಿ ಕಲೆಕ್ಷನ್" ಪುಸ್ತಕ