ಪುಟ್ಟ ಆಮೆಗೊಂದು ಉದ್ಯೋಗ
ಅಂಚೆಕಚೇರಿಗೆ ಕೆಲವು ಅಂಚೆಯಾಳುಗಳು ಬೇಕಾಗಿದ್ದಾರೆಂಬ ಸುದ್ದಿ ಪುಟ್ಟ ಆಮೆಗೆ ತಿಳಿಯಿತು. “ಓ, ಪತ್ರಗಳ ಬಟವಾಡೆ ಆಸಕ್ತಿಯ ಕೆಲಸ. ನಾನು ಹೋಗಿ ಅರ್ಜಿ ಹಾಕ್ತೇನೆ” ಎಂದು ಹೊರಟಿತು ಪುಟ್ಟ ಆಮೆ.
ಅಂಚೆ ಕಚೇರಿಗೆ ಪುಟ್ಟ ಆಮೆ ಹೋದಾಗ, ಅಲ್ಲಿ ಅರ್ಜಿ ಹಾಕಲು ಕಾಂಗರೂ ಕೂಡ ಕಾದಿತ್ತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ ಇಬ್ಬರಿಗೂ ಒಂದೊಂದು ಹಸುರು ಟೊಪ್ಪಿ ಕೊಟ್ಟರು. ಪುಟ್ಟ ಆಮೆಯದು ಪುಟ್ಟ ತಲೆ. ಹಾಗಾಗಿ ಅದಕ್ಕೆ ಪುಟ್ಟ ಟೊಪ್ಪಿ - ಅರ್ಧ ಸೇಬು ಹಣ್ಣಿನ ಗಾತ್ರದ್ದು. ಹಸುರು ಟೊಪ್ಪಿ ತಲೆಗಿಟ್ಟ ಪುಟ್ಟ ಆಮೆ ಚಂದ ಕಂಡಿತು.
ಮರುದಿನ ಬೆಳಗ್ಗೆ ಪುಟ್ಟ ಆಮೆ ಮತ್ತು ಪುಟ್ಟ ಕಾಂಗರೂ ಪತ್ರಗಳ ಬಟವಾಡೆಗೆ ಹೊರಟರು. ಪುಟ್ಟ ಕಾಂಗರೂ ಜಿಗಿಯುತ್ತ ಮುಂದುಮುಂದಕ್ಕೆ ಸಾಗಿ ಆ ದಿನ ನೂರು ಪತ್ರಗಳನ್ನು ಬಟವಾಡೆ ಮಾಡಿತು. ಆದರೆ ತೆವಳುತ್ತ ಸಾಗಿದ ಪುಟ್ಟ ಆಮೆ ಆ ದಿನ ಒಂದೇ ಒಂದು ಪತ್ರ ಬಟವಾಡೆ ಮಾಡಿತು.
ಸಂಜೆಯ ಹೊತ್ತಿಗೆ ಅವರಿಬ್ಬರೂ ಅಂಚೆ ಕಚೇರಿಗೆ ಹಿಂತಿರುಗಿದರು. ಪುಟ್ಟ ಕಾಂಗರೂವಿನ ಹೊಟ್ಟೆಯ ಮೇಲಿದ್ದ ಅಂಚೆಚೀಲ ಖಾಲಿಯಾಗಿತ್ತು. ಆದರೆ ಪುಟ್ಟ ಆಮೆಯ ಬೆನ್ನಿನಲ್ಲಿದ್ದ ಅಂಚೆಚೀಲ ಭರ್ತಿಯಾಗಿಯೇ ಇತ್ತು.
ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ ಹೇಳಿದರು, “ಪುಟ್ಟ ಕಾಂಗರೂ ಮಾತ್ರ ನಮ್ಮ ಉದ್ಯೋಗಕ್ಕೆ ಸೇರಲಿ. ಪುಟ್ಟ ಆಮೆ, ಉದ್ಯೋಗಕ್ಕಾಗಿ ನೀನು ಬೇರೆಲ್ಲಿಗಾದರೂ ಹೋಗು.”
“ನನಗೆ ಉದ್ಯೋಗ ಸಿಕ್ಕೇ ಸಿಗುತ್ತದೆ” ಎನ್ನುತ್ತಾ ಹಸುರು ಟೊಪ್ಪಿಯನ್ನು ಪೋಸ್ಟ್ ಮಾಸ್ಟರಿಗೆ ಪುಟ್ಟ ಆಮೆ ವಾಪಾಸು ಕೊಟ್ಟಿತು.
ಅಲ್ಲಿಂದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ಪುಟ್ಟ ಆಮೆಗೆ ಪುಟ್ಟ ಮಂಗ ಎದುರಾಯಿತು. ಅಗ್ನಿಶಾಮಕ ದಳಕ್ಕೆ ಕೆಲವು ಫೈರ್-ಮ್ಯಾನ್ ಬೇಕಾಗಿದ್ದಾರೆಂದೂ, ತಾನು ಅರ್ಜಿ ಹಾಕುತ್ತೇನೆಂದೂ ಮಂಗ ತಿಳಿಸಿತು. "ಹಾಗೇನು? ನಾನೂ ಅರ್ಜಿ ಹಾಕುತ್ತೇನೆ” ಎಂದು ಪುಟ್ಟ ಆಮೆಯೂ ಮಂಗನೊಂದಿಗೆ ಮುಂದೆ ಸಾಗಿತು.
ಇವರಿಬ್ಬರೂ ಬಂದಾಗ, ಅಗ್ನಿಶಾಮಕ ದಳದ ದಳಪತಿ ಕರಡಿ, ಇಬ್ಬರಿಗೂ ಒಂದೊಂದು ಕೆಂಪುಬಾಲ್ದಿ ಕೊಟ್ಟರು. ಪುಟ್ಟ ಆಮೆಗೆ ಕೊಟ್ಟ ಪುಟ್ಟ ಬಾಲ್ದಿ ಎಷ್ಟು ಚಿಕ್ಕದಾಗಿತ್ತೆಂದರೆ ಅದೊಂದು ಟೀ-ಕಪ್‌ನಂತಿತ್ತು. ಅದೇನಿದ್ದರೂ, ಪುಟ್ಟ ಬಾಲ್ದಿಯನ್ನು ಕೈಯಲ್ಲಿ ಹಿಡಿದುಕೊಂಡ ಪುಟ್ಟ ಆಮೆ ನಿಜವಾದ ಫೈರ್-ಮ್ಯಾನ್‌ನಂತೆ ಕಂಡಿತು.
ಹಠಾತ್ತನೇ ಫೈರ್ ಅಲಾರ್ಮ್ ಸದ್ದು ಮಾಡಿತು. ಹತ್ತಿರದ ಮರದಲ್ಲಿದ್ದ ಕಾಗೆ ಗೂಡಿಗೆ ಬೆಂಕಿ ಬಿದ್ದಿತ್ತು. ಪುಟ್ಟ ಆಮೆ ಮತ್ತು ಪುಟ್ಟ ಮಂಗ ತಕ್ಷಣವೇ ಮರ ಹತ್ತಿ, ಬೆಂಕಿ ನಂದಿಸಬೇಕೆಂದು ದಳಪತಿ ಆದೇಶ ನೀಡಿದರು.
ಆದರೆ ಮರ ಹತ್ತಲು ಪುಟ್ಟ ಆಮೆ ಪ್ರಯತ್ನಿಸಿದಾಗೆಲ್ಲ ಅದು ಕೆಳಗೆ ಜಾರುತ್ತಿತ್ತು. ಅದು ಮರಕ್ಕೆ ಮತ್ತೆಮತ್ತೆ ಸುತ್ತು ಬಂದರೂ ಅದಕ್ಕೆ ಮರ ಹತ್ತಲಾಗಲಿಲ್ಲ. ಪುಟ್ಟ ಮಂಗ ಸಲೀಸಾಗಿ ಮರ ಹತ್ತಿ, ಬೇಗನೇ ಬೆಂಕಿ ನಂದಿಸಿತು.
“ಇದುವೇ ನಿಮ್ಮ ಪರೀಕ್ಷೆ" ಎಂದರು ದಳಪತಿ ಕರಡಿ. “ಇಲ್ಲಿ ಪುಟ್ಟ ಮಂಗ ಮಾತ್ರ ಉದ್ಯೋಗಕ್ಕೆ ಸೇರಲಿ. ಪುಟ್ಟ ಆಮೆ, ಉದ್ಯೋಗಕ್ಕಾಗಿ ನೀನು ಬೇರೆಲ್ಲಿಗಾದರೂ ಹೋಗು” ಎಂದರು.
“ನನಗೆ ಉದ್ಯೋಗ ಸಿಕ್ಕೇ ಸಿಗುತ್ತದೆ” ಎನ್ನುತ್ತಾ ಕೆಂಪು ಬಾಲ್ದಿಯನ್ನು ದಳಪತಿ ಕರಡಿಗೆ ಪುಟ್ಟ ಆಮೆ ವಾಪಾಸು ಕೊಟ್ಟಿತು. ಅವತ್ತಿನ ನಂತರ, ಪುಟ್ಟ ಆಮೆ ಎಲ್ಲಿಗೆ ಹೋಯಿತೆಂದು ಯಾರಿಗೂ ತಿಳಿಯಲಿಲ್ಲ.
ಅದೊಂದು ದಿನ ಆ ಊರಿಗೆ ಸರ್ಕಸ್ ತಂಡ ಬಂತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ, ಪುಟ್ಟ ಕಾಂಗರೂ, ದಳಪತಿ ಕರಡಿ ಮತ್ತು ಪುಟ್ಟ ಮಂಗ ಸರ್ಕಸ್ ನೋಡಲು ಹೋದರು.
ದೊಡ್ಡ ನೇರಳೆ ಬಣ್ಣದ ಪರದೆಯನ್ನು ಪಕ್ಕಕ್ಕೆ ಸರಿಸಿದಾಗ, ವೇದಿಕೆಯ ದೃಶ್ಯ ಕಂಡು ಎಲ್ಲರೂ ಬೆರಗಾದರು. ಅಲ್ಲಿ ಹಲವು ಪ್ರಾಣಿಗಳು ಒಂದರ ಮೇಲೊಂದು ನಿಂತಿದ್ದವು. ಆನೆ, ಅದರ ಬೆನ್ನಿನಲ್ಲಿ ಹುಲಿ, ಅದರ ಮೇಲೆ ಚಿಂಪಾಂಜಿ, ಅದರ ತಲೆಯ ಮೇಲೊಂದು ನರಿ ನಿಂತಿದ್ದವು!
ಒಮ್ಮೆಲೇ, ಚುರುಕು ನೋಟದ ಪುಟ್ಟ ಮಂಗ ಘೋಷಿಸಿತು, “ಅಲ್ಲಿ ನೋಡಿ! ಕೆಳಗಿರುವುದು ಪುಟ್ಟ ಆಮೆಯಲ್ಲವೇ?”
ಎಲ್ಲರೂ ಕಣ್ಣು ಹಿಗ್ಗಿಸಿ ನೋಡಿದರು. ಅರೇ, ಅವೆಲ್ಲ ಪ್ರಾಣಿಗಳ ಕೆಳಗೆ ಪುಟ್ಟ ಆಮೆಯಿತ್ತು! ಅದು ಆನೆ ಮತ್ತು ಬೇರೆಲ್ಲ ಪ್ರಾಣಿಗಳನ್ನು ಬೆನ್ನ ಮೇಲೆ ಹೊತ್ತು ಕೊಂಡಿತ್ತು! ಆಮೆ ಆಕ್ರೊಬಾಟ್ (ಸರ್ಕಸ್ ತಂಡದ ಸದಸ್ಯ) ಆಗಿತ್ತು.
ಅಂತೂ ಪುಟ್ಟ ಆಮೆಗೆ ಉದ್ಯೋಗವೊಂದು ಸಿಕ್ಕಿತ್ತು. ಪೋಸ್ಟ್ ಮಾಸ್ಟರ್ ಉಷ್ಟ್ರ ಪಕ್ಷಿ, ದಳಪತಿ ಕರಡಿ, ಪುಟ್ಟ ಕಾಂಗರೂ ಮತ್ತು ಪುಟ್ಟ ಮಂಗನಿಗೆ ಬಹಳ ಖುಷಿಯಾಯಿತು. ಅವರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟುತ್ತಾ ಕೂಗಿದರು, “ಶಹಬ್ಬಾಷ್ ಪುಟ್ಟ ಆಮೆ."
ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಲಿಕ್ಸಿನ್