ಪುಟ್ಟ ಕಥೆ - ಸ್ಥಿತ ಪ್ರಜ್ಞತೆ

ಒಂದು ಮನೆಗೆ ಬೆಂಕಿ ಬಿದ್ದಿದೆ. ಜನರು ಸುತ್ತಲೂ ಜಮಾಯಿಸಿ ನೋಡುತ್ತಿದ್ದಾರೆ. ಮಾಲೀಕರು ದೂರದಲ್ಲಿ ನಿಂತು ಅಳುತ್ತಿದ್ದಾರೆ. ತುಂಬಾ ಸುಂದರವಾದ ಮನೆ. ಹತ್ತು ದಿನಗಳ ಹಿಂದೆ ಯಾರೋ ದುಪ್ಪಟ್ಟು ಬೆಲೆಗೆ ಕೇಳಿದರೂ ಮಾರಿರಲಿಲ್ಲ. ಅದಕ್ಕೇ ಬೇಸರವಾಗಿದೆ.
ಅಷ್ಟರಲ್ಲಿ ಹಿರಿಯ ಮಗ ಬಂದ. "ಗೊತ್ತಿಲ್ಲವೇನಪ್ಪಾ ? ಮೂರು ಪಟ್ಟು ಬೆಲೆ ಸಿಕ್ಕಿದ್ದಕ್ಕೆ ಆ ಮನೆಯನ್ನು ನಿನ್ನೆಯೇ ಮಾರಿದ್ದೇನೆ. ಹೇಳಲು ನನಗೆ ಸಮಯವಿರಲಿಲ್ಲ" ಎಂದ.
ಕೂಡಲೇ ದುಃಖ, ನೋವು ಮಾಯವಾಗಿತ್ತು. ಅವರು ಸಂತೋಷದಿಂದ, ತುಂಬಿದ ಹೃದಯದಿಂದ ನಿಟ್ಟುಸಿರು ಬಿಟ್ಟರು. ನಂತರ ಅವರು ಸುಟ್ಟು ಹೋಗುತ್ತಿದ್ದ ಮನೆಯನ್ನು ವೀಕ್ಷಿಸಲು ಪ್ರಾರಂಭಿಸಿದರು ಮತ್ತು ಅಲ್ಲಿ ನೆರೆದಿದ್ದವರ ಸಂಭಾಷಣೆಯಲ್ಲಿ ಪಾಲ್ಗೊಂಡರು...! ಆ ಮನೆಯೊಂದಿಗಿನ ಒಂದು ಕ್ಷಣದ ಹಿಂದಿನ ಬಾಂಧವ್ಯ ಮಾಯವಾಗಿದೆ. ಈಗ ನಿಜ ಹೇಳಬೇಕೆಂದರೆ, ಅವನು ಅಲ್ಲಿದ್ದ ಇತರರಂತೆ ಪರಿಸ್ಥಿತಿಯನ್ನು ಸ್ವಲ್ಪ ಆನಂದಿಸುತ್ತಿದ್ದಾನೆ.
ಅಷ್ಟರಲ್ಲಿ ಎರಡನೇ ಮಗ ಬಂದ, ನೀವು ಸಹಿ ಮಾಡದೆ ಮಾರಾಟವನ್ನು ಹೇಗೆ ಪೂರ್ಣಗೊಳಿಸಬಹುದು? ನಿಮಗೆ ಅಷ್ಟೂ ತಿಳಿಯುವುದಿಲ್ಲವೇ?" ಎಂದನು. ಅಷ್ಟೇ, ಮತ್ತೆ ದುಃಖ ಬಂತು.
ಅಷ್ಟರಲ್ಲಿ ಮೂರನೆ ಮಗ ಬಂದು, "ಅಪ್ಪ ಪ್ರಾಮಾಣಿಕ ವ್ಯಕ್ತಿ, ಮಾತಿನ ಮೇಲೆಯೇ ಮಾರಾಟ ನಡೆದಿದೆ ಎಂದೂ, ಅರ್ಧ ಹಣವನ್ನೂ ಸಹ ಕೊಟ್ಟಿದ್ದಾರೆ" ಎಂದನು ಮತ್ತೆ ಅವನ ಮುಖದಲ್ಲಿ ಸಂತೋಷ ಮ(ಅ)ರಳಿತು.
ವಾಸ್ತವವಾಗಿ, ಏನೂ ಬದಲಾಗಿರಲಿಲ್ಲ. ನನ್ನದು ಎಂದುಕೊಂಡಾಗ ದುಃಖ ಬರುತ್ತಿದೆ. ಇಲ್ಲ ಎಂದುಕೊಂಡಾಗ ಸಂತೋಷ ಬರುತ್ತದೆ. ಸುಖಗಳು ಮತ್ತು ದುಃಖಗಳು ನಮ್ಮ ಆಂತರಿಕ ಭಾವನೆಗಳು. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ನಾವು ಬೆಳೆಸಿಕೊಂಡರೆ, ನಾವು ಶಾಂತಿಯಿಂದ ಬದುಕಬಹುದು. ಏನಂತೀರಿ?
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ