ಪುಟ್ಟ ತಮ್ಮನ ಕಗ್ಗ
ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ. ಅನಾಯಾಸವಾಗಿ ಮೂಡಿ ಬಂದಿರುವ ಚಿಂತನೆಗಳು ನಮ್ಮ ಮನ ಬೆಳಗಿಸುತ್ತವೆ.
"ನನ್ನ ನುಡಿ"ಯಲ್ಲಿ ಇವು “ಮಿಣುಕು ದೀಪಗಳ ಬೆಳಕ ಹಚ್ಚುವ" ಪ್ರಯತ್ನವೆಂದು ಇವುಗಳ ರಚನಾಕಾರ ಅನಂತ ಭಟ್ ಪೊಳಲಿ ಬರೆದಿದ್ದಾರೆ: “ಈ ಕೃತಿಯು ಒಂದು ಭಾವನಾತ್ಮಕವಾದ ವಿಷಯಗಳ ಸಂಗ್ರಹವಾಗಿದೆ. ಡಿ.ವಿ.ಜಿ.ಯವರ “ಮಂಕುತಿಮ್ಮನ ಕಗ್ಗ”ದ ಪ್ರಭಾವವು ಇದರ ಮೇಲೆ ಬೀರಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಬಂದಿರುವ ವಿಚಾರಗಳೆಲ್ಲವೂ ಸ್ವಾನುಭವದ ಅಗ್ಗಿಷ್ಟಿಕೆಯಲ್ಲಿ ಸ್ಫುಟಗೊಂಡು ಬೆಳಗುವ, ನೈತಿಕ, ತಾತ್ವಿಕ, ವೈಚಾರಿಕ ಹಾಗೂ ಧಾರ್ಮಿಕ ಸಂದೇಶಗಳೆಂಬ ಬಂಗಾರದ ತುಣುಕುಗಳು. ಇಲ್ಲಿ ತೆರೆದಿಟ್ಟಿರುವ ವಿಚಾರಗಳೆಲ್ಲವು ಇಂದಿನ ಹಾಗೂ ಮುಂದಿನ ಯುವ ಪೀಳಿಗೆಗೆ ದಾರಿದೀಪವೆನಿಸಬಹುದು. ಅವರಿಗೆ ಇದು ತಮ್ಮ ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವಲ್ಲಿ ಸಹಾಯಕವಾಗಬಹುದೆಂಬುದು ನನ್ನ ಆಶಯ.
ಇಂದಿನ ಸಮಾಜದ ಆಗುಹೋಗುಗಳು ಏರುಪೇರುಗಳ ನಡುವೆ ಜೀವನವನ್ನು ಸುಗಮವಾಗಿ ಸಾಗಿಸಲು ಜನರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಂಸಾರಿಕವಾಗಿ ದೃಢತೆಯನ್ನು ಸಾಧಿಸುವುದು ಸುಲಭ ವಿಚಾರವಲ್ಲ. ದೈವಿಕವಾದ ಭಕ್ತಿಶ್ರದ್ಧೆಗಳೊಂದಿಗೆ ಜೀವನದಲ್ಲಿನ ಹಲವು ಸಂಕೀರ್ಣ ಘಟ್ಟಗಳನ್ನು ನಿರಾತಂಕವಾಗಿ ದಾಟುವಲ್ಲಿ, ಹಿರಿಯ ಕಿರಿಯರಾದಿಯಾಗಿ ಎಲ್ಲರಿಗೂ ಈ "ಕಗ್ಗ"ವು ಸಹಾಯಕವಾಗ ಬಹುದೆಂಬುದು ನನ್ನ ಅನಿಸಿಕೆ.”
ಅನಂತ ಭಟ್ ಪೊಳಲಿ ಅವರ ತಮ್ಮ ಹಾಗೂ ಕರ್ನಾಟಕ ಬ್ಯಾಂಕಿನ ಚೇರ್-ಮನ್ ಆಗಿದ್ದ ದಿವಂಗತ ಪಿ. ಜಯರಾಮ ಭಟ್ ಅವರು “ಸನ್ನುಡಿ”ಯಲ್ಲಿ ಹೀಗೆ ಬರೆದಿದ್ದಾರೆ: “ಪುಟ್ಟ ತಮ್ಮನ ಕಗ್ಗ”ದ ಮೂಲಕ ಹೊರಹೊಮ್ಮಿರುವ ಸಣ್ಣ ಪದ್ಯಗಳ ಗಾತ್ರ ಕಿರಿದಾದರೂ ಅವುಗಳ ಅರ್ಥ ಬಹು ಹಿರಿದು. ಸಣ್ಣಸಣ್ಣ ಕಿರು ಹಣತೆಗಳಂತಿರುವ ಈ ಪದ್ಯಗಳು ಮನಮನಗಳಲ್ಲಿ ವಿಶ್ವಾಸದ ಧೈರ್ಯದ ಬೆಳಕನ್ನು ತುಂಬಬಲ್ಲ ಅಪಾರ ಸಾಮರ್ಥ್ಯದ ಹನಿಗವಿತೆಗಳು. ಜೀವನಾನುಭವದ ರಸಪಾಕದಿಂದ ಮೂಡಿಬಂದ ಉಪದೇಶಾಮೃತದಂತಿರುವ ಈ ನುಡಿಗಳು ಕಿರಿಯರಿಗೆ ದಾರಿದೀಪಗಳಾಗಿ ಅವರ ಬದುಕಿಗೆ ಹೊಸ ಅರ್ಥವನ್ನು ತೋರಿಸುವ ಸಾಮರ್ಥ್ಯ ಉಳ್ಳವುಗಳಾಗಿವೆ. ಈ ಪದ್ಯಗಳನ್ನು ಓದಿದಾಗ ಇವು ಮನಸ್ಸಿಗೆ ಮುದ ನೀಡುವುದರೊಂದಿಗೆ ಹೊಸ ಉತ್ಸಾಹವನ್ನು ತುಂಬುತ್ತವೆ. ಹಿರಿಯರಾದ ನನ್ನ ಅಣ್ಣನವರು ‘ಪುಟ್ಟ ತಮ್ಮ”ನ ನೆಪದಲ್ಲಿ ಜಗತ್ತಿಗೆ ಈ ಪುಟ್ಟ ಕವಿತೆಗಳ ಮೂಲಕ ಪಾಠ ಹೇಳುತ್ತಾರೆ. ಶಿಕ್ಷಕರಾಗಿ ಅವರು ಸಂಪಾದಿಸಿದ ವಿಪುಲವಾದ ಹಾಗೂ ಅರ್ಥಪೂರ್ಣವಾದ ಅನುಭವವನ್ನು ಜಗತ್ತಿಗೆ ಈ ಕಿರು ಪದ್ಯಗಳ ಮೂಲಕ ಹಂಚಿದ್ದಾರೆ."
ಹೆಸರಾಂತ ಯಕ್ಷಗಾನ ಅರ್ಥಧಾರಿಗಳಾದ ನಿತ್ಯಾನಂದ ಕಾರಂತ ಪೊಳಲಿ ಅವರು “ನಲ್ನುಡಿ"ಯಲ್ಲಿ ಅನಂತ ಭಟ್ ಅವರನ್ನು ಪರಿಚಯಿಸುವ ಪರಿ ಹೀಗಿದೆ: "ಪ್ರತಿಭೆ ಅನಂತ ಭಟ್ಟರ ವಂಶಕ್ಕೇ ದೈವದತ್ತವಾಗಿ ಬಂದ ಬಳುವಳಿ. ಇವರು ರಾಜ ಪುರೋಹಿತ ಪೊಳಲಿ ದಿ. ದೊಡ್ಡ ವಾಸುದೇವ ಭಟ್ಟರ ಹಿರಿಯ ಪುತ್ರ. ವಾಸುದೇವ ಭಟ್ಟರು ಧಾರ್ಮಿಕ, ಅಧ್ಯಾತ್ಮಿಕ, ಲೌಕಿಕ ಸಮನ್ವಯಕಾರರಾಗಿ ಹಳೆಯ ಮತ್ತು ಹೊಸ ಪದ್ಧತಿಗಳನ್ನು ಝರಡಿಯಲ್ಲಿ ಗಾಳಿಸಿ ಉತ್ತಮವಾದುದನ್ನು ಒಟ್ಟು ಸೇರಿಸಿ ಆಚರಿಸಿಕೊಂಡು ಬಂದ ವಿಚಾರವಂತ. ಅನಂತ ಭಟ್ಟರು ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುವ ಜೊತೆ ತಂದೆಯಿಂದ ಪೌರೋಹಿತ್ಯದ ಪಾಠವನ್ನು ಅರಗಿಸಿಕೊಂಡು ನಿವೃತ್ತರಾದ ಬಳಿಕ ಪುರೋಹಿತರಾಗಿ ಸಮಾಜದ ಗೌರವಕ್ಕೆ ಪಾತ್ರರಾದವರು. … “ಪುಟ್ಟ ತಮ್ಮನ ಕಗ್ಗ" ಇವರ ಮಹೋನ್ನತ ಕೃತಿ. ಬಹಳ ಜನ ಕೂಟ ಬಂಧುಗಳು ಮೆಚ್ಚಿರುತ್ತಾರೆ. ಅಡೆತಡೆಯಿಲ್ಲದೆ ಪದ್ಯಗಳು ಸಾಗಿ ಬರುತ್ತವೆ. ಲೋಕಾನುಭವ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಶಬ್ದಗಳೆಲ್ಲ ಸ್ವಾಭಾವಿಕವಾಗಿ ಸೇರಿಕೊಂಡಿವೆ. ಅಚ್ಚುಕಟ್ಟುತನವಿದೆ..."
“ಪುಟ್ಟ ತಮ್ಮನ ಕಗ್ಗ”ದ ಮುಕ್ತಕಗಳಿಗೆ ಯಾವ ವಿವರಣೆಯೂ ಅಗತ್ಯವಿಲ್ಲ. ಈ ಸರಳ ಪದ್ಯಗಳ ಸಂದೇಶ ಅಷ್ಟು ಸ್ಪಷ್ಟ. ನಿಮ್ಮ ಬದುಕಿನಲ್ಲಿ ನೆಮ್ಮದಿ ತುಂಬಿಕೊಳ್ಳಲು ಹಿತವಚನ ಬೋಧನೆಯ 201 ಪದ್ಯಗಳಿಂದ ಆಯ್ದು 10 ಪದ್ಯಗಳು ಇಲ್ಲಿವೆ.
ಬಂಧು ಬಳಗವದೆಲ್ಲ / ಬಂದು ಹೋಗುವರೆಲ್ಲ
ಅಂದ ಚಂದವದೆಲ್ಲ / ಕುಂದಿ ಹೋಗುವುದು
ಬಂದ ಸತಿಸುತರೆಲ್ಲ / ಒಂದಾಗಿರುವುದಿಲ್ಲ!
ಬಂಧನವ ಬಿಟ್ಟು ನಡೆ - ಪುಟ್ಟ ತಮ್ಮ (4)
ಬದುಕು ಬೋಧಿಯ ವೃಕ್ಷ / ನೆಲವು ಅದಕಾಧಾರ /
ಸುತ್ತಲಿಳಿದಿಹವು ಅರಿವೆಂಬ ಬಿಳಲುಗಳು /
ಬುದ್ಧನೋ? ಶುದ್ಧನೋ? ಬದ್ಧನಾಗುತ ಸಾಗಿ
ಸಿದ್ಧಿಯನು ಪಡೆ ತಪದಿ - ಪುಟ್ಟ ತಮ್ಮ (7)
ಜೀವನವು ನೀರ ಮೇಲಿನ ಗುಳ್ಳೆಯಂತಿಹುದು
ಯಾವ ಕ್ಷಣದಲು ಒಡೆದು ಚೂರಾಗಬಹುದು
ಜೀವನದ ತುಂಬೆಲ್ಲ ಬೇವು ಬೆಲ್ಲಗಳಿಲ್ಲ!
ದೇವನನು ಮನದಿ ನೆನೆ - ಪುಟ್ಟ ತಮ್ಮ (8)
ನಶ್ವರದ ದೇಹಕೀ ಕೋಪ ತಾಪಗಳೇಕೆ?
ಹುರಿದು ಮುಕ್ಕುವುವು / ಷಡ್ವೈರಿವರ್ಗಗಳು /
ಅವುಗಳಿಗೆ ದಾಸನಾಗದೆ / ಮನಸ್ಥಿಮಿತದಲಿ
ನಿನ್ನ ನೀನಿರಿಸಿಕೋ - ಪುಟ್ಟ ತಮ್ಮ (11)
ಹಿರಿಯರನು ಗೌರವಿಸಿ / ಕಿರಿಯರನು ಸಂತೈಸಿ
ಎಲ್ಲರೊಡಗೂಡಿ ಸಂತಸದಿ ಬಾಳುವುದು /
ಸುಖ ಶಾಂತಿ ನೆಮ್ಮದಿಯ ಜೀವನವೆ ಸಮ್ಮತವು
ಪುರುಷಾರ್ಥ ಸಾಧನೆಯು - ಪುಟ್ಟ ತಮ್ಮ (15)
ವಿದ್ಯೆಯನು ಕಲಿಯುವುದು / ಬುದ್ಧಿಯನು ತಿಳಿಯುವುದು
ನಿದ್ದೆಯಿಲ್ಲದೆ ಓದಿ ಹೆಸರು ಗಳಿಸುವುದು
ಶ್ರದ್ಧೆಯಿಂ ಕರ್ತವ್ಯ ಪಾಲನೆಯನೆಸಗುವುದು
ಬುದ್ಧಿವಂತರ ಲಕ್ಷಣವು - ಪುಟ್ಟ ತಮ್ಮ (20)
ಬೇವು ಬೆಲ್ಲದೊಳಿರುವ ಕಹಿಸಿಹಿಯನೆಣಿಸದಿರು
ಜೀವನದ ಕಷ್ಟ ಸುಖಗಳದೆ ಪ್ರತಿರೂಪ /
ಬೇವನ್ನು ಸುಖದಲ್ಲಿ, ಬೆಲ್ಲವನು ಕಷ್ಟದಲಿ
ಉಣಬಲ್ಲವನೆ ಜಾಣ - ಪುಟ್ಟ ತಮ್ಮ (29)
ಆಕಾಶದಲಿ ಗಾಳಿಪಟವು ಹಾರಲು ಅದಕೆ
ಬೇಕಾಗಿರುವುದೊಂದು ಸೂತ್ರದಾಧಾರ /
ಸೂತ್ರ ಹರಿಯಲು ಗಾಳಿಪಟವು ಮರೆಯಾಗುವುದು
ಜೀವನವು ಗಾಳಿಪಟ - ಪುಟ್ಟ ತಮ್ಮ (32)
ಲೋಕದಾ ಡೊಂಕನ್ನು ತಿದ್ದಹೋಗಲು ಬೇಡ!
ನಿನ್ನ ಮನವನು ನೀನು ತಿದ್ದಿಕೊಳ್ಳು!
ಚೆನ್ನಾಗಿ ತನುಮನವ ಒಳ್ಳಿತಿಗೆ ಸವೆಸುವುದು
ಚಿನ್ನದಂತಹ ಕಾರ್ಯ - ಪುಟ್ಟ ತಮ್ಮ (37)
ಎಂಟು ಗೇಣಿನ ಚಿಕ್ಕ ದೇಹವಿದು ಇದರೊಳಗೆ
ನೆಂಟನಂತಿಹ ನಿನ್ನ ಆಟ - ಉಸಿರಾಟ
ಗಂಟೆ ಬಾರಿಸಿದೊಡನೆ / ತಂಟೆ ಮಾಡದೆ ಹೊರಟು
ಗಂಟು ಮೂಟೆಯ ಕಟ್ಟು - ಪುಟ್ಟ ತಮ್ಮ (41)