ಪುಟ್ಟ ಲವಂಗದ ದೊಡ್ಡ ಗುಣಗಳು

ಪುಟ್ಟ ಲವಂಗದ ದೊಡ್ಡ ಗುಣಗಳು

ಲವಂಗ ಬಹುಮುಖ್ಯ ಸಾಂಬಾರು ಬೆಳೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಅದರ ಔಷಧೀಯ, ಅಡುಗೆ, ಸುಗಂಧ ಗುಣಗಳು ಅಪಾರ. ನಮ್ಮ ಖಾದ್ಯಕ್ಕೆ ಸುಗಂಧಕಾರಕವಾಗಿಯೂ, ಹಲ್ಲು ನೋವಾದರೆ ನೋವು ನಿವಾರಕವಾಗಿಯೂ, ಬಾಯಿಯ ದುರ್ಗಂಧಕ್ಕೆ ಪರಿಹಾರವಾಗಿಯೂ ಲವಂಗ ಬಳಕೆಯಲ್ಲಿದೆ. ಲವಂಗ ಇದು ಗಿಡವೊಂದರಲ್ಲಿ ಆಗುವ ಕಾಯಿಯಲ್ಲ. ಬದಲು ಅದೊಂದು ಮೊಗ್ಗು. ಹೂವಿನ ಮೊಗ್ಗನ್ನು ಅರಳುವ ಮೊದಲೇ ಒಣಗಿಸಿದರೆ ಅದೇ ಲವಂಗ. ಇದೊಂದು ವಿಶ್ವದ ಜನಪ್ರಿಯ ಸಾಂಬಾರು ಮಸಾಲೆಗಳಲ್ಲಿ ಒಂದು. ಆಯುರ್ವೇದದಲ್ಲೂ ಲವಂಗದ ಬಳಕೆಯನ್ನು ಹೇಳಲಾಗಿದೆ. ಲವಂಗದ ಕೆಲವು ಪ್ರಮುಖ ಗುಣಗಳನ್ನು ಅರಿತುಕೊಳ್ಳುವ…

* ದಿನಕ್ಕೆರಡು ಲವಂಗವನ್ನು ಸೇವನೆ ಮಾಡಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ.

* ಲವಂಗದಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ಅದು ನಮ್ಮ ದೇಹದಲ್ಲಿರುವ ಬಿಳಿ ರಕ್ತ ಕಣಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಿಳಿ ರಕ್ತಕಣಗಳು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಸಹಾಯಕ. ರಕ್ತದಲ್ಲಿ ಬಿಳಿರಕ್ತ ಕಣಗಳ ಪ್ರಮಾಣ ಸರಿಯಾಗಿದ್ದಲ್ಲಿ, ನಮ್ಮ ದೇಹವನ್ನು ಕಾಡುವ ಹಲವು ರೋಗಗಳಿಂದ ಮುಕ್ತಿಯನ್ನು ಪಡೆಯಬಹುದು.

* ಲವಂಗದಲ್ಲಿರುವ ಪೋಷಕಾಂಶಗಳು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಗೆ ಉತ್ತೇಜನ ನೀಡುವ ಕಾರಣದಿಂದಲೇ ಆಯುರ್ವೇದದಲ್ಲಿ ಲವಂಗವನ್ನು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸುತ್ತಾರೆ. ಲವಂಗದ ಬಳಕೆ ಜೀರ್ಣಕ್ರಿಯೆಯನ್ನು ಬಲಗೊಳಿಸುತ್ತದೆ.

* ಲವಂಗದ ಬಳಕೆಯಿಂದ ವಾಂತಿ ಬರುವ (ವಾಕರಿಕೆ) ಸಮಸ್ಯೆ ಕಡಿಮೆ ಆಗುತ್ತದೆ. ಲವಂಗದಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ನೆರವಾಗುತ್ತದೆ.

* ಲವಂಗವನ್ನು ಹಾಗೆಯೇ ಜಗಿದು ನುಂಗುವುದು ಉತ್ತಮ. ಸ್ವಲ್ಪ ಖಾರವೆನಿಸಿದರೂ ಆರೋಗ್ಯದ ದೃಷ್ಟಿಯಿಂದ ಇದು ಬಹಳ ಉತ್ತಮ. ಲವಂಗವನ್ನು ಹುಡಿ ಮಾಡಿ, ಅದಕ್ಕೆ ಜೇನುತುಪ್ಪ ಸೇರಿಸಿ ಸೇವನೆ ಮಾಡಬಹುದು.

* ಲವಂಗವು ಒಂದು ರೀತಿಯ ನೈಸರ್ಗಿಕವಾಗಿ ನಮಗೆ ದೊರೆತ ಅರಿವಳಿಕೆ ಎನ್ನಬಹುದಾಗಿದೆ. ಹಲ್ಲು ನೋವು ಜೋರಾಗಿದ್ದರೆ ದಂತ ವೈದ್ಯರನ್ನು ಕಾಣುವುದಕ್ಕೂ ಮೊದಲು ನೋವು ಮತ್ತು ಬಾವಿನಿಂದ ಪರಿಹಾರ ಪಡೆಯಲು ನೋಯುತ್ತಿರುವ ಭಾಗದ ಮೇಲೆ ಲವಂಗದ ಎಣ್ಣೆಯಲ್ಲಿ ಅದ್ದಿರುವ ಹತ್ತಿಯುಂಡೆಯನ್ನು ಇರಿಸಿ. ಕೊಂಚ ಹೊತ್ತು ಕಳೆದ ಬಳಿಕ ಈ ಎಣ್ಣೆಯಂಶ ಲಾಲಾರಸದಲ್ಲಿ ಕರಗಿ ಹೋಗುವ ಕಾರಣ ಆಗಾಗ ಹೊಸ ಹತ್ತಿನುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ಇರಿಸುತ್ತಾ ಹೋಗಬೇಕು. ಇದರ ಪರಿಣಾಮದಿಂದಾಗಿ ನೋವು ತಾತ್ಕಾಲಿಕವಾಗಿ ಕಡಿಮೆ ಆಗುತ್ತದೆ. ನೋವಿನ ಶಾಶ್ವತ ಪರಿಹಾರಕ್ಕಾಗಿ ನುರಿತ ದಂತವೈದ್ಯರನ್ನು ಅವಶ್ಯ ಭೇಟಿಯಾಗಿ.

* ಲವಂಗದ ಸೇವನೆ ನಿಮ್ಮ ಯಕೃತ್ ನ ಆರೋಗ್ಯವನ್ನು ಕಾಪಾಡುತ್ತದೆ. ನಾವು ಸೇವಿಸುವ ಔಷಧಿಗಳ ಸರಿಯಾದ ವಿಲೇವಾರಿಗೆ ಲವಂಗ ನೆರವಾಗುತ್ತದೆ. ಲವಂಗದಲ್ಲಿರುವ ಯೂಜಿನಾಲ್ ಎಂಬ ಪೋಷಕಾಂಶವು ಯಕೃತ್ ಸ್ನೇಹಿ ಗುಣಗಳನ್ನು ಹೊಂದಿದ್ದು, ಇದು ಯಕೃತ್ ಕ್ಷಮತೆಯನ್ನು ಹೆಚ್ಚಿಸುತ್ತದೆ.

* ದೇಹದಲ್ಲಿರುವ ನೋವು ಮತ್ತು ಉರಿಯೂತವನ್ನು ಲವಂಗದ ಸೇವನೆ ಕಡಿಮೆ ಮಾಡುತ್ತದೆ. ಲವಂಗದಲ್ಲಿರುವ ಯುಜಿನಾಲ್ ನೋವು ನಿವಾರಕ ಗುಣವನ್ನು ಹೊಂದಿದೆ. ವಿಶೇಷವಾಗಿ ತಲೆನೋವು ಇದ್ದಾಗ ಲವಂಗದ ಎಣ್ಣೆಯನ್ನು ಬಳಸಿದರೆ ಅದು ನೋವನ್ನು ನಿವಾರಿಸುತ್ತದೆ. ಲವಂಗವನ್ನು ಹುಡಿ ಅಥವಾ ಎಣ್ಣೆಯ ರೂಪದಲ್ಲಿ ಬಳಸಬಹುದಾಗಿದೆ.

* ಒಂದು ಚಿಕ್ಕ ಚಮಚ ಲವಂಗದ ಹುಡಿ ಮತ್ತು ಕೊಂಚ ಕಲ್ಲುಪ್ಪನ್ನು ಒಂದು ಲೋಟ ಹಾಲಿಗೆ ಬೆರೆಸಿ ಕುಡಿಯಿರಿ. ಇದರಿಂದ ನಿಮ್ಮ ಮೈಕೈ ನೋವು ನಿವಾರಣೆಯಾಗುತ್ತದೆ. ನೋವಿರುವ ಭಾಗಕ್ಕೆ ಲವಂಗವನ್ನು ತೆಂಗಿನ ಎಣ್ಣೆಯಲ್ಲಿ ನೆನೆಸಿಟ್ಟು ಸ್ವಲ್ಪ ಹೊತ್ತಿನ ಬಳಿಕ ಅದನ್ನು ಅರೆದು ದಪ್ಪದ ಲೇಪ ಮಾಡಿ ಹಚ್ಚಿಕೊಳ್ಳಬಹುದು. 

* ಮೂಳೆ ಮತ್ತು ಮೂಳೆ ಸಂದುಗಳನ್ನು ಸುಸ್ಥಿತಿಯಲ್ಲಿರಿಸಲು ಲವಂಗದ ಬಳಕೆ ಉತ್ತಮ. ಮೂಳೆ ಸಂದುಗಳನ್ನು ಉತ್ತೇಜಿಸುವ ಪ್ಲೇವನಾಯ್ಡುಗಳು, ಮ್ಯಾಂಗನೀಸ್ ಮತ್ತು ಯುಜೆನಾಲ್ ನಂತಹ ಹಲವಾರು ಪೋಷಕಾಂಶಗಳನ್ನು ಲವಂಗ ಹೊಂದಿದೆ. ಈ ಪೋಷಕಾಂಶಗಳು ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುತ್ತವೆ ಹಾಗೂ ಅವು ಮೂಳೆ ಅಂಗಾಂಶಗಳ ರಚನೆಯಲ್ಲಿ ಬಳಸಲ್ಪಡುವ ಮೂಲಕ ಮತ್ತು ಆರೋಗ್ಯಕರ ಖನಿಜಗಳನ್ನು ನಮ್ಮ ಮೂಳೆಗಳಿಗೆ ಸೇರಿಸಿ, ಮೂಳೆಗಳನ್ನು ಬಲಪಡಿಸುತ್ತದೆ.

* ಲವಂಗವು ಅಪಧಮನಿಗಳ ಕಾರ್ಯವನ್ನು ಸುಧಾರಿಸುತ್ತದೆ. ನರಗಳ ಹಿಗ್ಗುವಿಕೆಯ ಗುಣವನ್ನೂ ಉತ್ತಮಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲೂ ಸಹಕರಿಸುತ್ತದೆ. ಇದರ ಸೇವನೆ ಇನ್ಸುಲಿನ್ ನಂತೆ ಕಾರ್ಯ ನಿರ್ವಹಿಸುತ್ತದೆ. ಆ ಮೂಲಕ ನಿಯಂತ್ರಿತ ಮಟ್ಟವನ್ನು ಕಾಪಾಡಲು ನೆರವಾಗುತ್ತದೆ.

* ಲವಂಗ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಧಾನಗೊಳಿಸುತ್ತದೆ. ಆದುದರಿಂದ ನೀವು ಯಾವುದಾದರೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಲವಂಗದ ಬಳಕೆಯ ಮುನ್ನ ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಮುಂದುವರೆಯಬೇಕು.

(ಆಧಾರ)

ಚಿತ್ರ ಕೃಪೆ; ಅಂತರ್ಜಾಲ ತಾಣ