ಪುಟ್ಟ ಹಣತೆಯ ಸಮಷ್ಟಿಗೆ ನಮನ....
ಅದು ಮಣ್ಣಿನದೊ ಹಿತ್ತಾಳೆಯದೊ ಅಥವಾ ಬೆಳ್ಳಿಯದೊ - ಪುಟ್ಟದಾದ ಹಣತೆ. ಮಾಮೂಲಿನ ಪುಟ್ಟ ತೆಪ್ಪದ-ನಾವೆಯಾಕಾರದ ಜತೆಗೆ, ಕ್ರಿಯಾಶೀಲ ಮನಗಳ ಕೌಶಲ್ಯವೂ ಬೆರೆತು ತರಹಾವರಿಯ ಆಕಾರಗಳು ಸಾಕಾರವಾದ ಕಲಾಕೃತಿಯಂತಹ ಪುಟ್ಟ ದೀಪ್ತಿಕೆ. ಈ ಪುಟ್ಟ ನಾವೆ ನೀರಲ್ಲಿ ಚಲಿಸುವ ಬದಲು ತಾನು ನಿಂತಲ್ಲೆ ನಿಂತು ಸುತ್ತಲ ಕತ್ತಲ ಜಗದ ಚಾಲನೆಗೆ ಬೆಳಕಾಗಿ ಪ್ರೇರಣೆ ನೀಡುವುದು ಇದರ ವಿಶೇಷ.. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆನ್ನುವ ಮಾತು ಬಂದಿದ್ದೆ ಇದರಿಂದೇನೊ ಎನ್ನುವಷ್ಟರ ಮಟ್ಟಿಗೆ ಇದರ ವ್ಯಾಪ್ತಿ, ಆಳ, ಅಗಲ. ಏನು ಕಾಣದ ಗಾಢಾಂಧಕಾರದಲ್ಲೂ ಬರಿಯ ಪುಟ್ಟ ಬತ್ತಿಯೊಂದನ್ನು ಉರಿಸಿ ಸುತ್ತೆಲ್ಲ ಪ್ರಕಾಶ ಚೆಲ್ಲಿ ಬೆಳಕಾಗಿಸುವ ಇದರ ಸಾಮರ್ಥ್ಯದ, ಬೆಲೆಯ ಅರಿವಾಗುವುದು ಬೆಳಕಿಲ್ಲದ ಹೊತ್ತಲ್ಲಿ ನಾವೆಷ್ಟು ಅಸಹಾಯಕರೆಂದು ಗೊತ್ತಾದಾಗಲೆ. ಅದಕೆಂದೆ ಇದಕೊಂದು ವಿಶೇಷ ಸ್ಥಾನ ನಮ್ಮ ಸಾಂಪ್ರದಾಯಿಕ ಬದುಕಿನಲ್ಲಿ. ಜತೆಗೆ ಅಗಾಧ ಶಕ್ತಿಯ, ನಮ್ಮ ಹಿಡಿತಕ್ಕೆ ಸಿಗದ ಬೆಳಕಿನಂತಹ ಮಹಾನ್ ಶಕ್ತಿಯನ್ನು ಹೀಗೊಂದು ಪುಟ್ಟ ನಾವೆಯ ಚೌಕಟ್ಟಿನಲ್ಲಿ ಬಂಧಿಸಿ, ನಮಗೆಷ್ಟು ಬೇಕೊ ಅಷ್ಟು, ನಮಗೆಲ್ಲಿಗೆ ಬೇಕೊ ಅಲ್ಲಿಗೆ, ನಮಗೆ ಯಾವಾಗ ಬೇಕೊ ಆವಾಗ ಸೃಜಿಸಿಕೊಳ್ಳುತ್ತ ಅದರ ಮೇಲೆ ತಾತ್ಕಾಲಿಕವಾಗಿಯಾದರು ಪರಮಾಧಿಕಾರವನ್ನು ಸ್ಥಾಪಿಸುವುದು ಸಾಧ್ಯವಾಗುತ್ತಿತ್ತೆ?
ಆದರೆ ಈ ಪುಟ್ಟ ಹಣತೆಯನ್ನೆ ತುಸು ಹತ್ತಿರದಿಂದ ವಿಶ್ಲೇಷಿಸಿ ನೋಡಿದರೆ ಮೇಲ್ನೋಟಕ್ಕೆ ಕಾಣದ ಅದೆಷ್ಟೊ ಒಳ ಗೂಢಾರ್ಥಗಳು, ಸಾಂಕೇತಿಕತೆಗಳು ಅನಾವರಣವಾಗುತ್ತವೆ. ಅದರಲ್ಲಿ ನನಗೆ ಅತೀವ ವಿಸ್ಮಯ ತಂದ ಸಂಗತಿ - ಈ ಪುಟ್ಟ ದೀಪಿಕೆಯ ತತ್ವದಲ್ಲಡಗಿರುವ ಅದ್ಭುತ ಸಮಷ್ಟಿ ತತ್ವ. ಸ್ವಲ್ಪ ಗಮನವಿಟ್ಟು ನೋಡಿ - ಇದರಲ್ಲಿರುವ ಮೂರು ಮುಖ್ಯ ಅಂಗಭಾಗಗಳನ್ನು. ದೀಪವೊಂದು ಜ್ಯೋತಿಯಾಗಿ ಬೆಳಗಲಿಕ್ಕೆ ಬೇಕಾದ್ದು ಮುಖ್ಯವಾಗಿ ಈ ಮೂರೆ - ಎಣ್ಣೆಯನ್ನು ಹಿಡಿದಿಡಬಲ್ಲ ಹಣತೆಯ ಪಾತ್ರ, ಆ ಪಾತ್ರದೊಳಗೆ ತುಂಬಿಕೊಳ್ಳಲೊಂದಿಷ್ಟು ಎಣ್ಣೆ, ಇವೆರಡರ ಸಖ್ಯದಲ್ಲಿ ಉರಿಯಲು ಉರುವಲಾಗುವ ಬತ್ತಿ. ಮೂಲತಃ ಎಣ್ಣೆಯೆನ್ನುವುದು ತೈಲದ ರೂಪದಲೆಲ್ಲೊ ಭೂಗರ್ಭದಲ್ಲಿ ನೆಲೆಯಾಗಿ ತನ್ನ ಪಾಡಿಗೆ ತಾನು ಹರಿದುಕೊಂಡೊ, ಸುರಿದುಕೊಂಡೊ ಚಂಚಲ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿರುವ ಶಕ್ತಿ ಪೇಯ.. ಆದರದು ಅಡಗಿಕೊಂಡ ಕಡೆಯ ಕತ್ತಲಿನಲ್ಲಿ ಕರಗಿಹೋದ ಶಕ್ತಿಮೂಲವೆ ಹೊರತು ತಾನಾಗಿ ಪ್ರಕಟವಾಗುವ ಜ್ಯೋತಿಯಾಗುವುದಿಲ್ಲ. ಇನ್ನು ಹಣತೆಯದಾದರು ಅದೇ ರೀತಿಯ ಜಡತೆಯ ಸ್ಥಿತಿ. ತೈಲದಂತೆ ಅಲ್ಲಿಲ್ಲಿ ಹರಿಯದೆ, ಚಂಚಲವಿರದೆ ಒಂದೆಡೆ ನಿಶ್ಚಲವಾಗಿದ್ದರು ಸಹ ಅದೂ ಬೆಳಕಾಗಲಾರದು ಎಣ್ಣೆಯ ಸಹಯೋಗವಾಗುವವರೆಗೆ. ಸರಿ ಹೇಗೊ ಮಾಡಿ ಅವೆರಡನ್ನು ತಂದು ಸೇರಿಸಿ ಒಂದೆಡೆ ಕೂರಿಸಿದರೆ ಸಾಕೆ , ಆಗಲಾದರೂ ಬೆಳಕಾದೀತೆ..? ಎಂದರೆ - ಅದೂ ಇಲ್ಲ..! ಎಲ್ಲಿಯತನಕ ಇವೆರಡನ್ನು ಬಳಸುವ ಉರುವಲಾಗಿ ಬತ್ತಿಯೊಂದು ಹೊತ್ತಿಕೊಳ್ಳುವುದಿಲ್ಲವೊ ಅಲ್ಲಿಯವರೆಗೂ ಜ್ಯೋತಿರೂಪದ ಬೆಳಕು ಪ್ರಕಟವಾಗುವುದಿಲ್ಲ. ಹೀಗೆ ಬೇರೆ ಬೇರೆಯಾಗಿದ್ದಾಗ ಗಮ್ಯ, ಉದ್ದೇಶ ಗೊತ್ತಿರದಂತೆ ಅತಂತ್ರವಾಗಿದ್ದಂತೆ ಕಾಣುವ ಈ ಮೂರು ಸರಳ ಸತ್ವಗಳು, ಸೂಕ್ತ ರೀತಿಯಲ್ಲಿ ಒಂದೆಡೆ ಸೇರಿದ್ದೆ ತಡ, ಬದುಕಿಗೇನೊ ಉದ್ದೇಶ, ಗಮ್ಯದ ಪ್ರತೀಕ್ಷೆ ಸಿಕ್ಕಂತೆ ಪರಸ್ಪರ ಸಮಷ್ಟಿಯ ಸಹಯೋಗದಲ್ಲಿ ಏಕರೂಪಿ ಬೆಳಕಾಗಿ ಪ್ರಕಟವಾಗಿಬಿಡುತ್ತವೆ - ಸುತ್ತಲಿನ ತಮವನ್ನೆ ನುಂಗಿ ತಮ್ಮ ಅಸ್ತಿತ್ವವನ್ನು ಪ್ರತಿಷ್ಟಾಪಿಸುತ್ತ.
ಈ ಬದುಕಿನಲ್ಲೂ ಅದೇ ಸರಳ ತತ್ವ ನಿಗೂಢವಾಗಿ ಅಂತರ್ಗತವಾಗಿರುವುದು ನಿಸರ್ಗದ ಮತ್ತೊಂದು ಸೋಜಿಗ. ತಮ್ಮ ಬದುಕಿನಲ್ಲಿ ಪ್ರತಿಯೊಬ್ಬರು ಜಡವಾಗಿ ಕೂತ ಖಾಲಿ ಹಣತೆಯಾಗಿಯೊ, ಚಂಚಲತೆಯಿಂದ ಗುರಿಯಿಲ್ಲದೆ ಅಡ್ಡಾದಿಡ್ಡಿ ಸಾಗುವ ತೈಲದಂತೆಯೊ, ಹಣತೆಯೂ ಇರದೆ - ಎಣ್ಣೆಯೂ ಇರದೆ ಅನಾಥವಾಗಿ ಬಿದ್ದೆಲ್ಲೊ ಒದ್ದಾಡುವ ಬತ್ತಿಯಾಗಿಯೊ ಇದ್ದುಕೊಂಡ ಅನಾಥ ಪ್ರಜ್ಞೆಯಲ್ಲಿ ಸಿಕ್ಕಿ ದಿಕ್ಕೆಟ್ಟವರಂತೆ ನರಳಿಕೊಂಡೆ ಬದುಕು ಸಾಗಿಸುವುದು ಎಲ್ಲರ ಅನುಭವಕ್ಕೆ ಬರುವ ಸತ್ಯ. ಯಾವ ಸಮಯದ, ಯಾವ ಯೋಗಾಯೋಗದಲ್ಲೊ ಈ ಮೂರು ಒಂದೆಡೆ ಸಂಗಮವಾಗುವ ಸಂಘಟನೆ ಸಂಭವಿಸಿದಾಗ ಇದ್ದಕ್ಕಿದ್ದಂತೆ ದಿಕ್ಕೆಟ್ಟ ನಾವೆ ತನ್ನ ಗತಿ ಬದಲಿಸಿಕೊಂಡು ಸರಿಯಾದ ಗುರಿಯತ್ತ ಸಾಗುವ ಹಾಗೆ, ಎಲ್ಲಾ ಸುಗಮವಾಗಿ ಚಲಿಸತೊಡಗುತ್ತದೆ - ಹಣತೆ, ಎಣ್ಣೆ, ಬತ್ತಿ ಮೂರು ಒಂದಾಗಿ ಸರಿ ಸಮಷ್ಟಿಸಿದ ಹೊತ್ತು. ಆ ಸಮಷ್ಟಿ ಹೊಂದಾಣಿಕೆ ಆಗದ ಹೊರತು ಜೀವನ ಜ್ಯೋತಿಯ ಪ್ರಕಾಶ ಅನಾವರಣಗೊಳ್ಳುವುದಿಲ್ಲ. ಇದರ ಅರಿವಿದ್ದರೆ ಪ್ರತಿಯೊಬ್ಬರು ತಂತಮ್ಮ ಹೊಂದಾಣಿಕೆಯ ಹಣತೆ, ತೈಲ, ಬತ್ತಿಗಳಿಗಾಗಿ ಅವಾಗಿಯೆ ಬರುವತನಕ ಕಾದು ಕೂರದೆ, ಅವೆಲ್ಲಿದೆಯೆಂದು ಹುಡುಕಿಕೊಂಡು ಹೋಗುತ್ತಾರೆ - ಆದಷ್ಟು ಶೀಘ್ರದಲ್ಲಿ ಸಮಷ್ಟಿಸಿ ಜ್ಯೋತಿಯಾಗಿಸುವ ಹವಣಿಕೆಯಲ್ಲಿ. ಆ ಹವಣಿಕೆಯ ಸಂಕೇತವೆ ದೀಪಾವಳಿ ಹಬ್ಬದ ರೂಪದಲ್ಲಿ ಬಂದು, ಆ ಹುಡುಕಾಟವನ್ನು ನೆನಪಿಸುವ ಪ್ರೇರಣೆಯಾಗುವುದು - ಹಣತೆಯನ್ನು ಹಚ್ಚಿಡುವ ಸಾಂಕೇತಿಕ ರೂಪದಲ್ಲಿ. ಅದರಿಂದಲೆ ದೀಪಾವಳಿಗು ಹಣತೆಯ ಜ್ಯೋತಿಗೂ ಈ ವಿಶಿಷ್ಟವಾದ ಅನೋನ್ಯತೆಯ ಸಂಬಂಧ.
ಈ ಹಣತೆಯ ಸಾಂಕೇತಿಕತೆಯಲ್ಲಿ ಮತ್ತೊಂದು ಆಧ್ಯಾತ್ಮಿಕ ದೃಷ್ಟಿಕೋನವೂ ಇದೆ. ಹಣತೆಯೆನ್ನುವುದು ಜಡ ಸ್ಥಿತಿಯಲ್ಲಿರುವ ಪರಬ್ರಹ್ಮದ ಸಂಕೇತವಿದ್ದಂತೆ. ತೈಲವೆನ್ನುವುದು ಚಂಚಲಶೀಲ ಶಕ್ತಿಯ ಸಂಕೇತ. ಆ ಶಕ್ತಿಯ ಚಂಚಲತೆಯನ್ನಧಿಗಮಿಸುವ ಪಾತ್ರವನ್ನೊದಗಿಸುವ ಪರಬ್ರಹ್ಮ ರೂಪಿ ಹಣತೆ, ತೈಲದಿಂದ ತುಂಬಿಕೊಂಡಾಗ ಒಂದು ರೀತಿಯಲ್ಲಿ ಶಿವ ಶಕ್ತಿಯರ ಮಿಲನವಾದ ಲೆಕ್ಕ. ಅದರಿಂದಾಗಿಯೆ ಶಕ್ತಿಯ ಚಂಚಲತೆಯೆಲ್ಲ ಕಳೆದುಹೋಗಿ ತೈಲರೂಪಿ ಶಕ್ತಿಯೆಲ್ಲ ಒಂದೆಡೆ ಹಣತೆಯೊಳಗೆ ಸಾಂದ್ರೀಕೃತವಾಗಿಬಿಡುತ್ತದೆ. ಆದರೆ ಆ ಮಿಲನದಲಿನ್ನು ಜ್ಯೋತಿಯ ಸುಳಿವಿರುವುದಿಲ್ಲ - ಸಾಧಕನೆನ್ನುವ ಬತ್ತಿ ಉರಿಯುವ ಉರುವಲಾಗಿ ಜತೆಯಾಗುವ ತನಕ. ಮೂರು ಜತೆ ಸೇರಿದ ಮೇಲಷ್ಟೆ ತಾಳಮೇಳದಲ್ಲಿ ಜ್ಯೋತಿರೂಪಿ ಬೆಳಕಾಗುವ ಸಂಯೋಜನೆ. ಹೀಗಾಗಿ ಈ ದೀಪಾವಳಿಯ ಹಣತೆ ಪರಬ್ರಹ್ಮತ್ವದ, ದೈವತ್ವದ, ಏಕತ್ವದ ಮೂರ್ತರೂಪ.
ಆ ಹಣತೆಯ ಜ್ಯೋತಿ ಎಲ್ಲರ ಬಾಳಿನ ಬೆಳಕಾಗುವ ನಿರಂತರ ಪ್ರಕ್ರಿಯೆಗೆ ಈ ದೀಪಾವಳಿ ಮತ್ತಷ್ಟು ತೈಲ ಸುರಿಯುವ ಹೊನಲಾಗಲಿ ಎಂಬ ಆಶಯದೊಡನೆ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇನೆ - ಈ ಪುಟ್ಟ ಕವನಗಳ ಮೂಲಕ :-)
01. ಈ ದೀಪಾವಳಿಗೆ..
02. ಹಗಲ ಸಾಲ ಇರುಳ ಬಾಲ..
01. ಈ ದೀಪಾವಳಿಗೆ
___________________
ಮನದ ಬಗ್ಗಡವೆಲ್ಲಾ ಸೋಸಿ
ಶೋಧಿಸಿ ಗುಡಿಸಿ ಸಾರಿಸಿ
ತೊಳೆದೆಲ್ಲವ ಫಳಫಳ ಗುಟ್ಟು
ಹಚ್ಚೆ ದೀಪ ರಂಗವಲ್ಲಿಯನಿಟ್ಟು ||
ದೀಪದ ಬೆಳಕೆ ಬೆಳಗು ರಾತ್ರಿ
ಪಾತ್ರೆ ತುಂಬಿದಂಧಕಾರ ಖಾತ್ರಿ
ನುಂಗಲಾಗದ ತಿಮಿರ ವಿಶಾಲ
ಇರಲೊಂದೆಡೆ ಪುಟ್ಟ ಪಾತ್ರೆ ಸಕಲ ||
ಹಣತೆ ಮಣ್ಣಿನದೊ ಹೊನ್ನಿನದೊ
ಎದೆ ತುಂಬ ಎಣ್ಣೆಯಷ್ಟೆ ಸುರಿದು
ಬತ್ತಿಯನುರಿಸುವ ಹತ್ತಿಯ ಜಾಲ
ಮಿಕ್ಕೆಲ್ಲ ಬಿಡು ಅಲಂಕರಣ ಗಾಳ ||
ಬತ್ತಿಯಾಗುರಿಯಲೊಲ್ಲೆ ಸರಳ
ಎಣ್ಣೆಗದ್ದದ್ದಿ ಉಸಿರ ಹಿಡಿದೆ ಕಾಲ
ನೂಕಿರುವೆ ಹಚ್ಚಿ ಹಣತೆ ಜ್ಯೋತಿ
ಒಂದಲ್ಲ ನೂರು ಹಚ್ಚುತದೆ ಪ್ರಣತಿ ||
ಎಂದಾದರೊಮ್ಮೆ ಉರಿದು ಕರಿದು
ಬೀಳಬೇಕು ನಿಜ ಬದುಕೆ ಬರಿದು
ಬತ್ತಿಯಿನ್ನೊಂದ ಹಚ್ಚಿದರದೆ ಹತ್ತಿ
ಸತ್ತೆ ಬದುಕುವದೆ ಎಣ್ಣೆಯ ಜ್ಯೋತಿ ||
02. ಹಗಲ ಸಾಲ ಇರುಳ ಬಾಲ..
______________________
ದೀಪಾವಳಿಯ ಈ ಹಗಲ ಬೆಳಕು
ಉರಿದೆಲ್ಲ ಮುಗಿಸಿಬಿಟ್ಟಿದೆಯಲ್ಲಾ
ಮಿಗಿಸದೇನನು ರಾತ್ರಿಯೌತಣಕೆ
ಹಚ್ಚದೆ ವಿಧಿಯಿಲ್ಲದೆಣ್ಣೆ ಬತ್ತಿಯ್ಹಣತೆ ||
ತಂದಿಕ್ಕಿದ್ದು ನಿಜ ಸಾಲು ಹಣತೆಗಳು
ಸೂರ್ಯನಿಗೆದುರಾಡದೆ ಕಾದ ಮಲ್ಲಿ
ರಾತ್ರಿಯ ಹಗಲಾಗಲೆಲ್ಲಿ ಹಚ್ಚಿದರು
ದೂರದ ತಾರೆಯ ಮಿಣುಕ ಮಿರಿಸುತೆ ||
ಜತನದಲೆತ್ತಿಟ್ಟು ಎಣ್ಣೆ ಬತ್ತಿ ಹಣತೆಗಳ
ಕಾಯಲು ಹೇಳಿ ಕತ್ತಲ ಕಾವಲಿಗಿಟ್ಟು
ಆಗಾಧ ದ್ಯುತಿಯೆದುರ ಇರುವೆ ಸಾಲಿಗೆ
ಸಾಂತ್ವನ ಹೇಳಿ ಬಂದೆ ಮತ್ತದೆ ಬಯಲಿಗೆ ||
ಅಲ್ಲೇನೊ ಮೆರವಣಿಗೆ ಬೆಳಕಿಗು ನಾಚಿಕೆ
ಕತ್ತಲಲ್ಲದ ಮಬ್ಬು ಮೋಡಗಳ ನಿಲುಕೆ
ಖರ್ಚ ಮಾಡಲು ಬಿಡದೆ ಬೆಳಕಿಗಡ್ಡ ಸಾರಿ
ರಾತ್ರಿಗೊಂದಷ್ಟು ಠೇವಣಿ ಇಡುತಿಹ ಲೆಕ್ಕ ||
ಎಲ್ಲೊ ಮೋಡ ಎಲ್ಲೊ ಮಳೆ ಉಳಿತಾಯ
ಆ ಬೆಳಕೆ ಇನ್ನೆಲ್ಲೊ ದಾಯವಾಗಿ ಹಣತೆಗೆ
ಇರುಳನುರಿಸುತಿವೆ ಬತ್ತಿಯ ಹೊತ್ತಿಸುತ
ಮುಗಿಯದಿರುಳ ಹೊಸ ಹಣತೆ ಮೆಟ್ಟುತ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ....
ನಾಗೇಶರೆ, ಪುಟ್ಟಹಣತೆಯ ಬಗ್ಗೆ ಅಬ್ಬಾ...ಲಲಿತಾ ಸಹಸ್ರನಾಮದ ಪ್ರಭಾವ ಕಾಣಿಸುತ್ತಿದೆ. ನಾನೂ ಹಣತೆ ಬಗ್ಗೆ ಚಿಂತಿಸಿದ್ದೆ!...............
ಈ ಬದಿಯಿಂದ ಹಚ್ಚುತ್ತಾ ಹೋದ ಹಾಗೇ ಆ ಬದಿಯಿಂದ ಗಾಳಿ ಆರಿಸುತ್ತಾ ಬರುತ್ತಿತ್ತು :( ನೇರ ಅಂಗಡಿಗೆ ಹೋಗಿ ಸೀರಿಯಲ್ ದೀಪಗಳನ್ನು ತಂದು, ಎಕ್ಸ್ಟೆನ್ಶನ್ ವಯರ್ ಸಿಕ್ಕಿಸಿ ಸ್ವಿಚ್ ಹಾಕಿದೆ. ಜೋರಾಗಿ ಮಳೆ ಜತೆ ಪುನಃ ಗಾಳಿ ಧಾಳಿ ಮಾಡಿದರೂ ಹಣತೆ ಜಗಮಗಿಸುತ್ತಿತ್ತು. :)
In reply to ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ.... by ಗಣೇಶ
ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ....
ಗಣೇಶ್ ಜಿ ನಮಸ್ಕಾರ. ಈ ಬಾರಿ ದೀಪಾವಳಿಗೆ ಸಿಂಗಪುರದಲ್ಲು ಮಳೆಯಾಟ ಸ್ವಲ್ಪ ಜಾಸ್ತಿಯಾಗಿದೆ. ಲಿಟಲ್ ಇಂಡಿಯ ರಸ್ತೆಯ ಸೀರಿಯಲ್ ಸೆಟ್ಸ್, ಲೈಟಿಂಗ್ಸ್, ಗಜ ಲಕ್ಷ್ಮಿಯ ಲೈಟಿಂಗ್ - ಎಲ್ಲವು ಮಳೆಯಲ್ಲಿ ಜಾಸ್ತಿಯೆ ನೆಂದುಕೊಂಡರು ಆರದೆ ಸ್ವಸ್ಥವಾಗಿ ಕೆಲಸ ನಿಭಾಯಿಸಿಕೊಂಡಿವೆ. ನೀವು ತಂದು ಹಾಕಿದ ಸಿರಿಯಲ್ ಸೆಟ್ಟಿಗು ಕರೆಂಟಿರುವತನಕ ಭಯವಿಲ್ಲ ಬಿಡಿ, ಆರುವುದಿಲ್ಲ :-)
ಶ್ರೀ ಲಲಿತಾ ಸಹಸ್ರ ನಾಮದ ಛಾಯೆಯೇನು ಬಂತು - ನೂರಕ್ಕೆ ನೂರು ಶೇಕಡ ಅದರದೆ ಪ್ರಭಾವ. ಶ್ರೀಧರರು ಆ ಸರಣಿಯಲ್ಲಿ ವಿವರಿಸಿದ್ದ ಎಷ್ಟೊ ಆಧ್ಯಾತ್ಮಿಕ ವಿಷಯಗಳನ್ನೆ ಆಧರಿಸಿ, ಪರಿಭ್ರಮಣ ಕಾದಂಬರಿಯಲ್ಲಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ನೋಡುವ ಪ್ರಯತ್ನ ನಡೆಸಲು ಸಾಧ್ಯವಾದದ್ದು ಶ್ರೀಧರರು ಸಹಸ್ರನಾಮದ ಮೂಲಕ ನೀಡಿದ ಜ್ಞಾನದ ಮೂಲಕವೆ. ಅದರ ಛಾಯೆ ಈ ಹಣತೆಯ ಬರಹದಲ್ಲೂ ಇಣುಕಿದೆಯಷ್ಟೆ :-)
ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ....
ನಾಗೇಶ್ ಅವರೆ ದೀಪಾವಳಿಯ ಶುಭಾಶಯಗಳು
ನೀವು ದೀಪಾವಳಿಗೆ ಹಣತೆ,ತೈಲ ಬತ್ತಿ ಯ ಹಿಂದೆ ಅಡಗಿರುವ ತತ್ವದ ಸಾರವನುಣಬಡಿಸಿದರೆ,ಗಣೇಶರು ಹಣತೆ ಹಚ್ಚುವ ಕುರಿತು ಚಟಾಕಿ ಸಿಡಿಸಿದ್ದಾರೆ.
ವಂದನೆಗಳು..........ರಮೇಶ ಕಾಮತ್
In reply to ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ.... by swara kamath
ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ....
ಕಾಮತ್ ಸಾರ್ ನಮಸ್ಕಾರ. ತಮಗೂ ದೀಪಾವಳಿಯ ಶುಭಾಶಯಗಳು. ನೀವು ಗಮನಿಸಿದ್ದೀರೊ,ಮಿಲ್ಲವೊ - ಗಣೇಶ್ ಜೀ ಹಚ್ಚಿರುವ ದೀಪಕ್ಕು ನನ್ನ ದೀಪಕ್ಕು ಒಂದೆ ವ್ಯತ್ಯಾಸ - ನಾನು ಆರುನೂರು ಪದಗಳನ್ನು ಬಳಸಿ ಹೇಳಲು ಒದ್ದಾಡುವುದನ್ನು ಅವರು ಆರೇ ಪದಗಳಲ್ಲಿ ಹೇಳಿ ಮುಗಿಸಿಬಿಟ್ಟಿರುತ್ತಾರೆ..!
In reply to ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ.... by nageshamysore
ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ....
>>ನಾನು ಆರುನೂರು ಪದಗಳನ್ನು ಬಳಸಿ ಹೇಳಲು ಒದ್ದಾಡುವುದನ್ನು ಅವರು ಆರೇ ಪದಗಳಲ್ಲಿ ಹೇಳಿ ಮುಗಿಸಿಬಿಟ್ಟಿರುತ್ತಾರೆ..!
-ಕಾಮತ್ರೆ, ಮೂರ್ತಿಯವರೆ,
"ಗಣೇಶರು ಒದ್ದಾಡಿ ಆರು ಪದ ಬರೆಯುವುದರೊಳಗೆ ಉಳಿದವರು ಆರುನೂರು ಪದ ಬರೆಯುವರು" ಎಂದು ನಾಗೇಶರು ಬರೆದದ್ದು. ಕೊಂಡಿ, ಚಿತ್ರ ಎಲ್ಲಾ ಸೇರಿಸಿ ಹೆಚ್ಚೆಂದರೆ ಆರು ಲೈನ್ ಬರೆದು ಸಂಪದಕ್ಕೆ ಏರಿಸಿಯೇ ಬಿಡುವೆ.. ಜತೆಗೆ ಏದುಸಿರು ಬಿಡುವೆ.. :)
ಅದೇ ನಾಗೇಶರು ಪುಟಗಟ್ಟಲೆ ಕಾದಂಬರಿ ಬರೆದು.. ಅದೂ ಅಲ್ಲದೇ ಬೇರೆ ಬೇರೆ ವಿಷಯದ ಬಗ್ಗೆಯೂ ಸಮಯೋಚಿತ ಲೇಖನ/ಕವನಗಳನ್ನು ಸೇರಿಸುವ ವೇಗ ನೋಡಿ ದಂಗಾಗಿದ್ದೇನೆ! ಹೀಗೇ ಅವರಿಂದ ಕವನ, ಕತೆ ,ಕಾದಂಬರಿ....ಎಲ್ಲವೂ ಹರಿದು ಬರುತ್ತಲಿರಲಿ ಎಂದು ಹಾರೈಸುವೆ.
In reply to ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ.... by ಗಣೇಶ
ಉ: ಪುಟ್ಟ ಹಣತೆಯ ಸಮಷ್ಟಿಗೆ ನಮನ....
ಒಟ್ಟಾರೆ ಆರೊ, ಆರು ನೂರೊ - ಬರಬೇಕಾದ್ದೆಲ್ಲವು ಎಲ್ಲ ಕಡೆಯಿಂದಲು ನಿರಂತರವಾಗಿ ಹರಿದು ಬರುತ್ತಿರಲಿ ಅನ್ನೋಣ ಬಿಡಿ. ವೇಗಕ್ಕಿಂತ ಗುಣಮಟ್ಟ ಮುಖ್ಯವಾದರೂ, ಈ ಕಾಲದಲ್ಲಿ ಸ್ವಲ್ಪ ಓಡುವುದು ಅನಿವಾರ್ಯವಾದರೂ ಅಂತಿಮವಾಗಿ ಸ್ಥಿರವಾಗಿ ನಿಲ್ಲುವುದು ಗುಣಮಟ್ಟವುಳ್ಳವು ಮಾತ್ರ. ಸಾರಾಂಶದಲ್ಲಿ ಎರಡನ್ನು ಹೊಂದಾಣಿಸಿಕೊಂಡು ಹೋಗಲಿಕ್ಕೆ ಸಾಧ್ಯವಾದರೆ ಸಾಕೆನ್ನಬಹುದೇನೊ :-)