ಪುನರ್ಜನ್ಮ

ಪುನರ್ಜನ್ಮ

ಪುಸ್ತಕದ ಲೇಖಕ/ಕವಿಯ ಹೆಸರು
ರವೀಂದ್ರ ಶೆಟ್ಟಿ ಕುತ್ತೆತ್ತೂರು
ಪ್ರಕಾಶಕರು
ದಿಗಂತ ಸ್ಟೇಶನರ್ಸ್ ಎಂಡ್ ಪಬ್ಲಿಷರ್ಸ್, ಯೆಯ್ಯಾಡಿ, ಮಂಗಳೂರು-೫೭೫೦೦೮
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ: ೨೦೦೩

ಕಥೆಗಳ ರಚನೆಯಲ್ಲಿ ಆಸಕ್ತಿ ಹೊಂದಿರುವ ರವೀಂದ್ರ ಶೆಟ್ಟಿ ಕುತ್ತೆತ್ತೂರು ಅವರ ಚೊಚ್ಚಲ ಕಥಾ ಸಂಕಲನೇ 'ಪುನರ್ಜನ್ಮ'. ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿರುವ ೧೦ ಉತ್ತಮ ಕಥೆಗಳನ್ನು ಆರಿಸಿ ಪುಟ್ಟ ಪುಸ್ತಕವನ್ನಾಗಿಸಿ ಓದುಗರ ಕೈಗಿರಿಸಿದ್ದಾರೆ. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ಕೆ. ಆನಂದ ಶೆಟ್ಟಿ ಇವರು. ಅವರ ಅಭಿಪ್ರಾಯದಂತೆ "ರವೀಂದ್ರ ಶೆಟ್ಟಿಯವರು ಬರೆದ ಹಲವಾರು ಕಥೆಗಳು ವಿವಿಧ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಗಮನ ಸೆಳೆದಿದೆ. ಇದೀಗ 'ಪುನರ್ಜನ್ಮ' ಕಥಾ ಸಂಕಲನದ ಪ್ರಕಟಣೆ ಮೂಲಕ ಓದುಗ ವಲಯವನ್ನು ವಿಸ್ತರಿಸ ಹೊರಟ ಪ್ರಯತ್ನ ಶ್ಲಾಘನೀಯ.

ಪ್ರಥಮ ಸಂಕಲನದಲ್ಲಿ ಇರಬಹುದಾದ ಸಹಜ ಸಣ್ಣ ಪುಟ್ಟ ದೋಷಗಳು 'ಪುನರ್ಜನ್ಮ' ದಲ್ಲಿ ಕೂಡಾ ಇದ್ದರೂ ಕಥೆಗಾರ ಸರಳ ನಿರೂಪಣೆಯಿಂದ ಸಾಮಾನ್ಯ ಓದುಗರು ಅರ್ಥೈಸಿಕೊಳ್ಳಬಹುದಾದ ರೀತಿಯಲ್ಲಿ ಕತೆ ಬರೆದಿರುವುದು ಹೆಚ್ಚಿನವರನ್ನು ಆಕರ್ಷಿಸಬಹುದಾಗಿದೆ.

ಸಂಕಲನದ ಎಲ್ಲಾ ೧೦ ಕಥೆಗಳು ತಮ್ಮ ನಿತ್ಯ ಬದುಕಿನ ವಿವಿಧ ಮಗ್ಗಲುಗಳನ್ನು ಅನಾವರಣಗೊಳಿಸುತ್ತವೆ. ಮೊದಲ ಕಥೆ 'ಪುನರ್ಜನ್ಮ' ವಾಸ್ತವ-ನಂಬಿಕೆಗಳ ಕುರಿತಾಗಿದ್ದು ಯಾವುದೇ ರೀತಿಯ ವೈಭವೀಕರಣ ಇರುವುದಿಲ್ಲ. 'ಕುಳ್ಳರು' ಪತ್ರಿಕಾ ವರದಿಯೊಂದರ ಮೇಲೆ ಬೆಳಕು ಚೆಲ್ಲಿದ್ದರೆ, 'ಗೋರಿ ಕಟ್ಟುವವರು' ಕಥೆ ಸರಕಾರದ ಕಾರ್ಯವೈಖರಿ ಮತ್ತು ಕೆಲವರ ಜೀವನ ನಿರ್ವಹಣೆಗೆ ಕಲ್ಲು ಹಾಕುವ ಒಳನೋಟ ಒಳಗೊಂಡಿದೆ. 

'ಋಣಾನುಬಂಧ' ದಲ್ಲಿ ಭಾವನೆಗಳ ಅನಾವರಣವಾಗಿದ್ದರೆ ಬದುಕಿಗೆ ಬಹಳ ಹತ್ತಿರವಾಗಿದೆ. 'ತಿರುವು', 'ಸಂಕ್ರಾಂತಿ' ಯುವಶಕ್ತಿಯಿಂದ ಬದಲಾವಣೆ ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದ್ದು 'ಆಜಾದರ ಸ್ಮರಣೆಯಲ್ಲಿ...' ಉತ್ತಮ ಸಾಹಿತ್ಯ ಕೃತಿಗಳಿಂದ ಮನುಷ್ಯನ ವ್ಯಕ್ತಿತ್ವದಲ್ಲಿ ಪರಿವರ್ತನೆ ಆಗಬಹುದು ಎಂಬ ಸಂದೇಶ ಇದೆ. ‘ಸಾವಿನ ದವಡೆಯಿಂದ' ಕಥೆ ವಾಸ್ತವದಿಂದ ಬಹಳ ದೂರ ಇದ್ದಂತೆ ಕಂಡು ಬರುತ್ತದೆ. ‘ಪರಿವರ್ತನೆ'ಯಲ್ಲಿ ಮಾನವೀಯ ಸ್ಪಂದನವನ್ನು ಬಹಳ ಸುಂದರವಾಗಿ ಪ್ರಸ್ತುತ ಪಡಿಸಲಾಗಿದೆ. ಕೊನೆಯ ಕಥೆ '೨೧ನೇ ಶತಮಾನದ ಕಡೆಗೆ' ಈಗೀಗಿನ ದಾಳಗಳಿಗೆ ಮುನ್ನೋಟದಂತಿದೆ."

ಕಥೆಗಾರ ರವೀಂದ್ರ ಶೆಟ್ಟಿಯವರು ತಮ್ಮ ಮಾತು 'ನಿಮ್ಮೊಂದಿಗೆ' ಯಲ್ಲಿ "... ಮುಂದೆ ಪತ್ರಿಕೆಯೊಂದರ ಸಂಪರ್ಕದಲ್ಲಿ ಕಥೆಗಳನ್ನು - ಬರಹಗಳನ್ನು ಆಸಕ್ತಿಯಿಂದ ವೀಕ್ಷಿಸಿದೆ. ಕೆಲವು ಕಥೆಗಳನ್ನು ಬರೆದು ಕೊಟ್ಟರೂ ವಿಷಾದ ಪತ್ರವೇ ಉತ್ತರ ನೀಡಿತು. ಮರಳಿ ಯತ್ನವ ಮಾಡು ಎಂಬಂತೆ 'ಇಪ್ಪತ್ತೊಂದನೆಯ ಶತಮಾನದ ಕಡೆಗೆ...' ಎಂಬ ಸಣ್ಣ ಕಥೆಯನ್ನು ಸಾಪ್ತಾಹಿಕ ವಿಭಾಗಕ್ಕೆ ನೀಡಿದೆ. ಏನಾಗುತ್ತದೋ ಏನೋ ಎಂಬ ಭಯ. ಶಂ.ನಾ.ಖಂಡಿಗೆಯವರ ಸ್ವೀಕೃತಿ ಪತ್ರದೊಂದಿಗೆ ನೇರ-ಪ್ರಾಮಾಣಿಕ ವಿಮರ್ಶೆ ಸಿಕ್ಕಾಗ ಮನಸ್ಸಿಗಾದ ಸಂತಸ ಅಷ್ಟಿಷ್ಟಲ್ಲ. ಮುಂದೆ ಬರವಣಿಗೆ ವೇಗವನ್ನು ಪಡೆಯಿತು. ಈ ನಡುವೆ ಆಕಾಶವಾಣಿ ಮಂಗಳೂರು ಕೇಂದ್ರದಲ್ಲಿ ನನ್ನ ತುಳು ಕಥೆಯೂ ಪ್ರಸಾರವಾಯಿತು. ಪತ್ರಿಕೆಗಳ, ಪತ್ರಕರ್ತ ಮಿತ್ರರ, ಸಹೃದಯೀ ಓದುಗರ, ವಿಮರ್ಶಕರ, ಸಹೋದ್ಯೋಗಿಗಳ, ಮಿತ್ರರ ನಿರಂತರ ಪ್ರೋತ್ಸಾಹ ಇಂದು ನನ್ನನ್ನು ಕಥಾ ಸಂಕಲನ ಪ್ರಕಟಿಸುವವರೆಗೆ ಎಳೆದು ತಂದಿತು" ಎಂದು ತಾವು ಸಾಗಿ ಬಂದ ಹಾದಿಯನ್ನು ಬಣ್ಣಿಸಿದ್ದಾರೆ.

೧೦ ಕಥೆಗಳು ೫೬ ಪುಟಗಳನ್ನು ಹೊಂದಿರುವ ಪುಟಾಣಿ ಪುಸ್ತಕವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದು. ಕಥೆಗಳೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ವಿದ್ಯಾಧಿದೇವತೆ ಶಾರದಾಂಬೆಯ ಚರಣ ಕಮಲಗಳಿಗೆ ರವೀಂದ್ರ ಶೆಟ್ಟಿಯವರು ತಮ್ಮ ಈ ಕಥಾ ಸಂಕಲನವನ್ನು ಅರ್ಪಿಸಿದ್ದಾರೆ.