ಪುನರ್ಮಿಲನ : ’ಬಂಕುಮ’ಚಂದ್ರರ ಕಥೆ

ಪುನರ್ಮಿಲನ : ’ಬಂಕುಮ’ಚಂದ್ರರ ಕಥೆ

ಬರಹ

ಇದು ’ಬಂಕುಮ’ಚಂದ್ರರ ಕಥೆ.
ಒಂದಾನೊಂದು ಕಾಲದಲ್ಲಿ,
’ನಮ್ಮ ಸಂಸಾರ, ಆನಂದಸಾಗರ’, ಎನ್ನುತ್ತಾ ಚಂದಾಗಿ ಬಾಳುತ್ತಿದ್ದರು ’ಬಂ(ಗಾರಪ್ಪ) ಕು(ಮಾರ) ಮ(ಧು)’ಚಂದ್ರರು.
ಪಸಂದಾಗಿ ಆಳುತ್ತಿದ್ದರು.
ಅದೊಂದು ಕೆಟ್ಟ ಗಳಿಗೆಯಲ್ಲಿ ’ಬಂ-ಕು’ ಮಧ್ಯೆ ದ್ವೇಷ ಅಂಕುರಿಸಿತು.
’ಹೋದರೆಹೋಗು, ನನಗೇನು? ಕೋಪದಿ ತಾಪದಿ ಫಲವೇನು?’ ಎಂದು ಒಬ್ಬರಿಂದೊಬ್ಬರು ದೂರಾದರು.
’ಮಾತೊಂದ ಹೇಳುವೆನು, ಹತ್ತಿರ ಹತ್ತಿರ ಬಾ’, ಎಂದು ’ಬಂ’ ಪಿತನು ಕಿರಿ(ಕಿರಿ) ’ಮ’ಗನನ್ನು ಹತ್ತಿರಕ್ಕೆ ಸೆಳೆಯಲಾಗಿ ’ಬಂ-ಮ’
’ಜೊತೆಯಲಿ, ಜೊತೆಜೊತೆಯಲಿ’ ಸಾಗತೊಡಗಿದರು.
’ಮಧು’ಮಯ ಚಂದ್ರನ ’ಮಧು’ಮಯ ಹಾಸವೆ ಮೈತಳೆದಂತೆ ನೀ ಕಂಡೆ’, ಎಂದು ’ಬಂ’ಪಿತನು ಕಿರಿ(ಕಿರಿ) ’ಮ’ಗನನ್ನು ಹೊಗಳಿದರೆ
ಆ ’ಮ’ಗನು ’ಬಂ’ಪಿತನನ್ನು, ’ ಬಾಳಿನ ಹಿರಿಯಾ, ಎನ್ನಯ ಒಡೆಯಾ, ಕನ್ನಡ ಕುಲವರಾ ನೀ ’ಬಂ’ದೇ’, ಎಂದು ಹಾಡಿ ಹೊಗಳತೊಡಗಿದನು.
ಅತ್ತ, ಹಿರಿ(ಹಿರಿ ’ಹಿಗ್ಗಿ’ದ) ’ಕು’ಮಾರನೋ,
’ಮದನೋ ಮನ್ಮಥೋ ಮಾರಃ ಪ್ರದ್ಯುಮ್ನೋ ಮೀನಕೇತನಃ
ಕಂದರ್ಪೋ ದರ್ಪಕೋ ಅನಂಗಃ ಕಾಮಃ ಪಂಚಶರಸ್ಮರಃ’
ಎಂಬ ’ಮ-ದನ-ಕು-ಮಾರ-ಅಭಿಧಾನ ಲಕ್ಷಣ’ಗಳನ್ನೆಲ್ಲ ತನ್ನ ಪೂರ್ವವೃತ್ತಿಯ ’ನಟನಾಚಾತುರ್ಯ’ದಿಂದ ಬಳಸಿಕೊಂಡು ಜನನಾಯಕನಾಗಿಬಿಟ್ಟನು.
ಇತ್ತ ’ಬಂ’ಗಾರ ಹೊಳಪು ಕಳಕೊಳ್ಳತೊಡಗಿತು.
’ಮ’ಧುಚಂದ್ರಕ್ಕೆ ಅಮಾವಾಸ್ಯೆ ಆವರಿಸಿತು.
’ಅಮರಾ ’ಮಧು’ರಾ ಪ್ರೇಮಾ; ’ಮಧು’ರ’ಮಧು’ರವೀ ಮಂಜುಳಗಾನ’, ಎಂಬಿತ್ಯಾದಿಯಾಗಿ ಪ್ರವಹಿಸುತ್ತಿದ್ದ ’ಬಂ-ಮ’ಹಾನದಿಯೀಗ ನಿಂತ ನೀರಾಯಿತು.
ಜೊತೆಗೆ,
’ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ, ಕಪಟನಾಟಕ ಸೂತ್ರಧಾರಿ ನೀನೇ’, ಎಂದು (ಹಿರಿ)’ಕು’ಮಾರನು ’ಬಂ’ಪಿತನನ್ನು ಹೀಗಳೆಯುತ್ತಿರಲಾಗಿ, ನಾನಾ ವೇಷ ಧರಿಸಿ ಅದಾಗಲೇ ಸುಸ್ತಾಗಿದ್ದ ’ಬಂ’ಪಿತನಿಗೆ, ’ಮೋಸಹೋದೆನಲ್ಲಾ, ತಿಳಿಯದೆ ಮೋಸಹೋದೆನಲ್ಲಾ; ಕ್ಲೇಶನಾಶವನು ಮಾಡುವಂಥ ಈ ಶ್ರೀ’ಕು’ಮಾರನನು ಸ್ಮರಿಸದೆಯೇ’, ಅಂತ ಅನ್ನಿಸತೊಡಗಿತು.
ಜೊತೆಗೆ,
ಎಪ್ಪತ್ತೈದರಲ್ಲೂ ಇಪ್ಪತ್ತೈದರಂಥ ಅಧಿಕಾರದ ಆಸೆ ಬೇರೆ!
ಪರಿಣಾಮ, ’ಬಾ ಬೇಗ ಮನಮೋಹನಾ, ಸು’ಕುಮಾರಾ!’ ಎಂದು ’ಬಂ’ಪಿತನು ಹಾಡತೊಡಗಿದನು. (ಯಾವ ಮೋಹನ ಮುರಲಿ ಕರೆಯಿತೊ ಪಿತನ ಪಕ್ಕಕೆ ಸುತನನು!)

’ಹಿಡಕೋ, ಬಿಡಬೇಡಾ, ರಂಗನ ಪಾದ’, ಎಂಬ ಪದವು ’ಬಂ’ಪಿತನಿಗೆ, ’ಹಿಡಕೋ, ಬಿಡಬೇಡಾ, ಮಗನ ಪಾದ’, ಎಂದು ಭಾಸವಾಗಿ, ಆತ, ’ಒಂದಾಗಿ ಬಾಳುವಾ; ಒಲವಿಂದ ಆಳುವಾ. ಸಹಜೀವನ ಸವಿಜೇನಿನ ಸದನಾ’, ಎಂದು ಹಾಡುತ್ತ (ಹಿರಿ)’ಕು’ಮಾರನೆಡೆಗೆ (ಯಾರಿಗೂ ಗೊತ್ತಾಗದಂತೆ ತಂಪು ಕಣ್ಣಡಕದೊಳಗಿಂದ) ಕಣ್ಣು ಹಾಯಿಸಿದ.
ಜನರ ಕಣ್ಣೆದುರಿಗೆ ಆತ ’ಕುಮಾರ’ನಿಗೆ, ’ಮನೆಯೊಳಗಾಡೋ (ಕುಮಾರ್‌) ಗೋವಿಂದ, ನೆರೆ-ಮನೆಗಳಿಗೇಕೆ ಪೋಗುವೆಯೋ ಮುಕುಂದ: ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ’, ಎನ್ನುತ್ತಿದ್ದರೂ, ಪ್ರೈವೇಟಿನಲ್ಲಿ, ’ಯಾರು ಬಿಟ್ಟರು ’ಕೈ’ಯ ನೀ ಬಿಡದಿರು ಕಂಡ್ಯ’, ಎಂದು ಪ್ರಾರ್ಥಿಸತೊಡಗಿದ.
’ಹೂವ ತರುವರ ಮನೆಗೆ ಹುಲ್ಲು ತರುವ’ ’ಕು’ಮಾರನೋ, ’ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗಿ’, ಎಂದೆನ್ನುತ್ತ ಪುನಃ ಪಿತೃ-ಭ್ರಾತೃ-ಪಕ್ಷ-ಪಾತಿ ಆದ.

ಹೀಗೆ,
ಪುನರ್ಮಿಲನ ಆಯಿತು.
ಪುನಃ ಈಗ, ’ಬಂ-ಮ ಸಂಸಾರ, ಆನಂದಸಾಗರ.’

ಮೂವರೂ ಒಟ್ಟಾಗಿ ಈಗ, ’ಬಂಗಾರ’ದೊಡವೆ ಬೇಕೇ, ಜನರೇ, ’ಬಂಗಾರ’ದೊಡವೆ ಬೇಕೇ?’ ಎಂದು ಮತದಾರ ಪ್ರಜೆಗಳನ್ನು ಕೇಳುತ್ತಿದ್ದಾರೆ.
’ನಾಡಿರುವುದು ನಮಗಾಗಿ’, ಎಂದು ಕ್ಲೈಮ್ ಮಾಡುತ್ತ ಈ (ತಾಪ)ತ್ರಯರು ಇದೀಗ ಮತ್ತೆ, ’ಒಂದಾಗಿ ಬಾಳುವಾ; ಒಲವಿಂದ (ಈ ನಾಡನ್ನು) ಆಳುವಾ’, ಎಂದು ಹಾ(ರಾ)ಡುತ್ತಿದ್ದಾರೆ.

ನೀತಿ : ಪುರಂದರದಾಸರ ಪದಗಳ ಮತ್ತು ಕನ್ನಡದ ಹಳೆಯ ಚಿತ್ರಗೀತೆಗಳ ಸೂಕ್ತ ಬಳಕೆಯು ಸಂಸಾರಕ್ಕೆ ಹಿತಕರ; ಅಸೂಕ್ತ ಬಳಕೆಯು ಹಾನಿಕರ.