ಪುನರ್ವಸು

ಪುನರ್ವಸು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಜಾನನ ಶರ್ಮಾ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೪೫೦.೦೦, ಮುದ್ರಣ: ಮಾರ್ಚ್ ೨೦೨೨

ಲೇಖಕ ಡಾ. ಗಜಾನನ ಶರ್ಮ ಅವರ ಕಾದಂಬರಿ-ಪುನರ್ವಸು. ಭಾರಂಗಿ ಎಂಬುದು ಲೇಖಕರ ಊರು. ಲಿಂಗನಮಕ್ಕಿಯಲ್ಲಿ ಶರಾವತಿಗೆ ಅಣೆಕಟ್ಟು ಕಟ್ಟುವಾಗ ಮುಳುಗಿದ ಭಾರಂಗಿ ಊರವರ ಬದುಕಿನ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಶರಾವತಿಯ ಹಿನ್ನೀರನ್ನು ಊರವರು ಶರಾವತಿ ಎಂದು ಕರೆಯುವುದಿಲ್ಲ ಬದಲಾಗಿ ‘ಮುಳುಗಡೆ ಹೊಳೆ’ ಎಂದೇ ಕರೆಯುವುದು. ಪ್ರಾಯಶಃ ತಮ್ಮವರ ಬದುಕನ್ನು ಮುಳುಗಿಸಿದ ಸಾತ್ತ್ವಿಕ ಸಿಟ್ಟು, ಅದಕ್ಕೆಂದೇ ಊರವರು ಹೀಗೆ ಮಾತನಾಡುತ್ತಾರೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಆಣೆಕಟ್ಟು ನಿರ್ಮಾಣ ನಂತರ ಬೇರೊಬ್ಬರು ನೀರಿನ ಲಾಭ ಪಡೆಯುತ್ತಾರೆ. ಆದರೆ, ಅದಕ್ಕೂ ಮೊದಲು ರೈತರ ಜಮೀನು, ಅವರ ಅಸ್ತಿತ್ವ ಮುಳುಗಡೆಯಾಗುತ್ತದೆ. ಒಬ್ಬರ ತ್ಯಾಗ, ಇನ್ನೊಬ್ಬರ ಭೋಗ ಎಂಬುದು ‘ಪುನರ್ವಸು’ ಕಾದಂಬರಿಯ ವಸ್ತು.

ಪ್ರದೇಶ ಮುಳುಗಡೆಯು ಲೇಖಕರಿಗೆ ಪ್ರಗತಿಯೋ? ಪರಿಸರವೋ? ಕೆಲವರ ಮುಳುಗಡೆಯೋ? ಹಲವರ ಉನ್ನತಿಯೋ? ಎಂಬ ಸಂಶಯ ಕಾಡಿದ್ದು ಕಾದಂಬರಿ ರಚನೆಗೆ ಪ್ರೇರಣೆಯಾಗಿದೆ. ಗೊತ್ತಿಲ್ಲದ ಕಾಲದಿಂದ ಕಟ್ಟಿಕೊಂಡು ಬಂದಿದ್ದ ಬದುಕು ಕಣ್ಣೆದುರೇ ಕಣ್ಮರೆಯಾಗುವಾಗಿನ ತಲ್ಲಣಗಳನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ. ಇದು ಕೇವಲ ಮುಳುಗಡೆಯ ಕಥೆಯಲ್ಲ; ಬದುಕು ಕಳೆದುಕೊಂಡ ಒಂದಿಷ್ಟು ಜನರ ವ್ಯಥೆಯೂ ಅಲ್ಲ. ಬದಲಿಗೆ ವಸುಂಧರೆಯ ವಸುವನ್ನು ಪುನಃ ಪುನಃ ಹೀರಲು ಮುನ್ನುಗ್ಗುವ ಮನುಷ್ಯನ ಕಥೆ. ಕೊನೆಗೆ ಕೆಲವರ ಕತ್ತಲು ಹಲವರಿಗೆ ಬೆಳಕಾದ ‘ಪುನರ್ವಸು'ವನ್ನು ಒಪ್ಪಿಕೊಳ್ಳುವುದೇ ಅನಿವಾರ್ಯತೆಯೋ, ಪ್ರಾಯೋಗಿಕತೆಯೋ ಆಗಿ ಸಾಗುವ ನಮ್ಮ ಮನೋಮಂಥನದ ಕಥೆ ಎಂದು ಲೇಖಕರು ಹೇಳಿದ್ದಾರೆ. 

ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಪತ್ರಕರ್ತ ಜೋಗಿ ಇವರು. ಅವರು ಅಭಿಪ್ರಾಯ ಪಡುವಂತೆ “ ವಿಶ್ವೇಶ್ವರಯ್ಯನವರ ಕಾಲಘಟ್ಟ, ಆ ಕಾಲದ ಕಾಡು, ನಿರ್ಮಾನುಷ ಜೋಗದ ಪರಿಸರ, ಸುತ್ತಮುತ್ತಲ ಹಳ್ಳಿಗಳು, ಕೃಷ್ಣರಾವ್ ವಸುಧಾರ ದಾಂಪತ್ಯ, ಕಡಾಂಬಿ, ಫೋರ್ಬ್ಸ್ ಮುಂತಾದ ಅಧಿಕಾರಿಗಳ ಶ್ರದ್ಧೆ, ತುಂಗಕ್ಕಯ್ಯ, ದತ್ತಪ್ಪ ಹೆಗಡೆ, ಶರಾವತಿ, ಭವಾನಿಯಂಥ ಪಾತ್ರಗಳು, ಲೇಖಕರು ವಿವರಿಸುವ ಮರಗಿಡಗಳು, ಪರಿಸರ-ಇವೆಲ್ಲವೂ ಅನನ್ಯ ಇಲ್ಲಿ ಅನುಭವ ಮತ್ತು ನೆನಪು ಮಿತಗೊಂಡು ಕಾಲಾತೀತವಾದ ರಸಾನುಭೂತಿಯನ್ನು ಒದಗಿಸುತ್ತದೆ ಅನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.

ಕಾದಂಬರಿಯಲ್ಲಿ ಲೇಖಕರು ಎರಡು ಮಹತ್ವದ ಮಜಲುಗಳನ್ನು ದಾಟಿದ್ದಾರೆ. ಒಂದು, ನಮಗೆ ಈವರೆಗೆ ಗೊತ್ತಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿಕೊಟ್ಟದ್ದು. ಎರಡು, ಶರಾವತಿಯ ಪರಿಸರದ ಜೊತೆಗೇ ಬದುಕನ್ನು ಹೆಣೆದದ್ದು. ಇವೆರಡೂ ಅವರನ್ನು ವಿಶಿಷ್ಟವಾದ ಕಥನಕಾರರನ್ನಾಗಿ ಮಾಡಿದೆ. 

ಇಡೀ ಕತೆಯಲ್ಲಿ ಮನೋಲಹರಿಯಷ್ಟೇ ಗಾಢವಾಗಿ ವ್ಯಾವಹಾರಿಕ ವಿವರಗಳೂ ಬರುತ್ತವೆ. ಆ ವಿವರಗಳ ಒಳಗೆ ಈ ವಿವರಗಳು ಸೇರಿಕೊಳ್ಳುವ ಬಗೆ ಸೊಗಸಾಗಿದೆ. ಇಂಥ ಕತೆಗಳು ಕನ್ನಡದಲ್ಲಿ ಅಪರೂಪ. ಇಂಗ್ಲಿಷಿನಲ್ಲಿ ಅನೇಕರು ಹೀಗೆ ವಾಸ್ತವ ಮತ್ತು ಕಲ್ಪನೆಯನ್ನು ಬೆಸೆಯುವ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕಥಾ ಸಾಕ್ಷ್ಯಚಿತ್ರದಂತಿದೆ.” ಎಂದಿದ್ದಾರೆ.

ಸುಮಾರು ೫೪೦ ಪುಟಗಳಷ್ಟು ಬೃಹತ್ ಗಾತ್ರದ ಪುಸ್ತಕವನ್ನು ಓದಲು ಸ್ವಲ್ಪ ತಾಳ್ಮೆ ಬೇಕು. ಆದರೆ ಒಮ್ಮೆ ನೀವು ಪುಸ್ತಕದ ಕಥಾ ವಸ್ತುವಿಗೆ ಅಂಟಿಕೊಂಡಿರೆಂದರೆ ಅದು ಬಿಡಿಸಲಾಗದ ಬಂಧ. ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಒಂದೆರಡು ಕಡೆ ಸ್ವಲ್ಪ ಬ್ರೇಕ್ ಬಿದ್ದಂತೆ ಅನಿಸಿದರೂ ನಿಮ್ಮ ನಿರಂತರ ಓದಿಗೆ ಅಷ್ಟೇನೂ ಭಂಗ ಬರಲಾರದು. ಗಜಾನನ ಶರ್ಮ ಅವರು ಈ ಕೃತಿಯನ್ನು “ಮುಳುಗಡೆಯ ಮಹಾ ವಿಪತ್ತಿಗೆ ಸಿಲುಕಿ ಬಿಕ್ಕಳಿಸುತ್ತ ಬೇರಿನಿಂದ ಬೇರ್ಪಟ್ಟು ಊರು ತೊರೆದ ಸಂತ್ರಸ್ತರಿಗೆ ಇಂದಿಗೂ ನೋವಿನ ನಡುಗುಡ್ಡೆಗಳಲ್ಲಿ ಮುಳುಗೇಳುತ್ತಿರುವ ಹಿನ್ನೀರಿನ ಹತಭಾಗ್ಯರಿಗೆ" ಅರ್ಪಿಸಿದ್ದಾರೆ.