ಪುರಾಣ ಕಥಾಕೋಶ

ಅದೂರು ಕೆಳಗಿನಮನೆ ಅಪ್ಪೋಜಿರಾವ್ ಜಾದವ್ ಸಂಕಲಿಸಿದ ‘ಪುರಾಣ ಕಥಾಕೋಶ’ ಎನ್ನುವ ಕೃತಿಯನ್ನು ರಚಿಸಿದ್ದಾರೆ ಮೋಹನ ಕುಂಟಾರ್. ಪುರಾಣದ ಕಥೆಗಳ ಬಗ್ಗೆ ಎಷ್ಟೇ ತಿಳಿದುಕೊಂಡರೂ ಇನ್ನಷ್ಟು ತಿಳಿಯಲು ಇದ್ದೇ ಇರುತ್ತದೆ. ಪುರಾಣದ ಯಾವುದೇ ಪಾತ್ರವನ್ನು ಬೇಕಾದರೂ ನೀವು ತೆಗೆದುಕೊಳ್ಳಿ, ಅದಕ್ಕೊಂದು ಸೂಕ್ತವಾದ ಹಿನ್ನಲೆ, ಕಥೆ ಇದ್ದೇ ಇರುತ್ತದೆ. ಈ ರೀತಿಯ ಪುರಾಣ ಕಥೆಗಳನ್ನು ಓದಲು ಬಹಳ ಚೆನ್ನಾಗಿರುತ್ತದೆ. ಈ ಕೃತಿಯ ಬಗ್ಗೆ ಖ್ಯಾತ ಬರಹಗಾರ ಹಾಗೂ ವಿಮರ್ಶಕ ಡಾ. ತಾರಾನಾಥ ವರ್ಕಾಡಿಯವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ.
ವರ್ಕಾಡಿಯವರ ಬೆನ್ನುಡಿ ‘ಕೆಳಗಿಡುವ ಮುನ್ನ..’ ದಲ್ಲಿ ಅವರು ಬರೆದ ಕೆಲವು ಸಾಲುಗಳು… “ತನ್ನ ಅಜ್ಜ ಬರೆದ ಕಥೆಗಳು ಕಾಲನ ಕುಲುಮೆಯಲ್ಲಿ ಕರಗಿ ಹೋದಗಂತೆ ಅವುಗಳನ್ನು ಪುಸ್ತಕದ ರೂಪದಲ್ಲಿ ಶಾಶ್ವತಗೊಳಿಸಿದ ಡಾ. ಮೋಹನ ಕುಂಟಾರ್ ಅವರು ಪ್ರಶಂಸನೀಯರು. ಈ ಪುಸ್ತಕದಲ್ಲಿ ಎರಡು ಸಂಗತಿಗಳು ನನಗೆ ಅತ್ಯಂತ ಪ್ರಿಯವೆನಿಸಿದವು. ಒಂದು, ವಿಸ್ತೃತ ಪುರಾಣ ಕಥೆಗಳನ್ನು ಅಡಕ ಶೈಲಿಯಲ್ಲಿ ನಿರೂಪಿಸಿದ ಅಜ್ಜನ ಕಥನಕ್ರಮ. ಇನ್ನೊಂದು, ಅಜ್ಜನ ಹೊತ್ತಗೆಗೆ ಮೊಮ್ಮಗ ಬರೆದ ಸಮೀಚೀನ ಮೊದಲ ಮಾತು.
ಅಜ್ಜನ ಅರಿವು ಅನುಭವಗಳ ಆಳ ಹರುಹುಗಳನ್ನು ತಿಳಿಯಬೇಕಾದರೆ ಈ ಪುಸ್ತಕವನ್ನು ಓದಬೇಕು. ಕೇವಲ ನಾಲ್ಕನೆಯ ಇಯತ್ತೆಗೆ ಶಾಲೆಯ ಓದು ಮುಗಿಸಿದ ಅಜ್ಜ ಬರೆದ ಕಥೆಗಳನ್ನು ಓದಿದರೆ, ಆ ಅಜ್ಜನ ಒಳಗೆ ಅದೆಂತಹ ಪ್ರತಿಭೆಯ ಆತ್ಮವಿತ್ತೆಂದು ಗ್ರಹಿಸಬಹುದು. ವಿವಿಧ ಪುರಾಣಗಳಿಂದ ಬಗೆ ಬಗೆಯ ಕಥೆಗಳನ್ನಾಯ್ದು, ಅವುಗಳನ್ನು ಸರಳವಾಗಿ, ಸಂಕ್ಷಿಪ್ತವಾಗಿ ಕಟ್ಟಿಕೊಟ್ಟ ರೀತಿ ಬೆರಗು ಮೂಡಿಸುವಂಥದ್ದು. ಇದು ತನಕ ಬೆಳಕು ಕಂಡ ಪುರಾಣ ಪುಸ್ತಕಗಳಲ್ಲಿ ಪ್ರಕಟಗೊಳ್ಳದ ಹಲವು ಕಥೆಗಳನ್ನು ಅಜ್ಜ ಹೇಳಿದ್ದಾರೆ. ಅವರ ವಿಸ್ತಾರವಾದ ಓದಿಗೆ ಇದುವೇ ನಿದರ್ಶನ. ವ್ಯವಧಾನರಹಿತ ಪುರಾಣ ಕುತೂಹಲಿಗಳಿಗೆ ಅಜ್ಜನ ಪುರಾಣಯಾನ ಅತ್ಯುಪಯುಕ್ತವಾಗಬಹುದು. ಎಳೆಯರಿಗೂ ಹಳೆಯರಿಗೂ ಪುರಾಣದ ಹಲವಾರು ಕಥೆಗಳನ್ನು ಪರಿಚಯಿಸಲು ಈ ಕೃತಿ ಸಶಕ್ತವಾಗಿದೆ. ಅಜ್ಜನ ಯಕ್ಷಗಾನದ ಆಸಕ್ತಿ, ಅಧ್ಯಯನ, ಅಧ್ಯಾಪನಗಳು ಅವರನ್ನು ಬಹಳ ಎತ್ತರಕ್ಕೆ ಬೆಳೆಸಿದೆ. ಲಹರಿ ಮೂಡಿದಾಗಲೆಲ್ಲ ಬರೆದಿಟ್ಟ ಕಥೆಗಳನ್ನು ಒಟ್ಟು ಸೇರಿಸಿ ಪ್ರಕಟಿಸುವ ಡಾ. ಮೋಹನ ಕುಂಟಾರ್ ಅವರು ಪುರಾಣ ಪ್ರಿಯರಿಗೆ ಮಹದುಪಕಾರ ಮಾಡಿದ್ದಾರೆ. ಹಿರಿಯ ಜೀವ ಬರೆದ ಕಿರಿಯ ಪುಸ್ತಕ ಓದಿ ಕೆಳಗಿಡುವ ಮುನ್ನ ಇಷ್ಟೆಲ್ಲಾ ಹೇಳಬೇಕಾಯಿತು.”