ಪುರಾಣ ಕನ್ಯೆ

‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ ಮುಸ್ಲಿಂ ವ್ಯತ್ಯಾಸ ಮಾಡುವುದಿಲ್ಲ ಎನ್ನುತ್ತಾರೆ ಲೇಖಕ ಪುರುಷೋತ್ತಮ ಬಿಳಿಮಲೆ. ಅವರು ಕಾ.ತ ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿಗೆ ಬರೆದಿರುವ ಮುನ್ನುಡಿ ನಿಮ್ಮ ಓದಿಗಾಗಿ
“ಒಂದು ರೀತಿಯಿಂದ, “ಪುರಾಣ ಕನ್ಯೆ” ಹೆಸರಿನ ಈ ಕಾದಂಬರಿಯು ಚಿಕ್ಕಣ್ಣನವರ ‘ನಿಶಬುದೆಡೆಗೆ” ಕೃತಿಯ ಮುಂದುವರಿಕೆಯ ಹಾಗೆ ಕಾಣುತ್ತದೆ. ಈ ಎರಡು ಕೃತಿಗಳ ಕೇಂದ್ರದಲ್ಲಿ ವೈವಿಧ್ಯಮಯ ಪ್ರಾಣ, ಐತಿಹ್ಯ, ನಂಬುಗೆ, ಕತೆ ಮತ್ತು ಆಚರಣೆಗಳನ್ನು ಒಡಲಲ್ಲಿ ಧರಿಸಿಕೊಂಡ ಕಾಳಮ್ಮನ ಕೊಪ್ಪಲು ಹಾಗೂ ಕಟ್ಟಿ ಕೊಪ್ಪಲುಗಳಿವೆ. ಚಿಕ್ಕನವರು ಹುಟ್ಟಿ ಬೆಳೆದ ಕಾಳಮ್ಮನ ಕೊಪ್ಪಲಿನಲ್ಲಿ ಏಕ ಕಾಲಕ್ಕೆ ಹತ್ತಾರು ಘಟನೆಗಳು ನಡೆಯುತ್ತಲೇ ಇರುವುದನ್ನು "ನಿಶಬುದದೆಡೆಗೆ" ಸರಳವಾಗಿ ಆದರೆ ಗಾಢವಾಗಿ ಆತ್ಮಚರಿತ್ರೆಯ ರೂಪದಲ್ಲಿ ಕಟ್ಟಿಕೊಡುತ್ತದೆ. ಊರೆಂದರೆ ಹಾಗೆ, ಅಲ್ಲೊಂದು ಜಾತ್ರೆ, ಮೆರವಣಿಗೆ ತೆಗೆಯೋರು, ದೊಡ್ಡ ಗಲಾಟೆಗಳನ್ನು ಮಾಡಿಕೊಳ್ಳದೆ ಕಲೆತು ಮಾತಾಡುವ ವಿವಿಧ ಜಾತಿಯ ಜನರು, ಗುಡ್ಡರು, ದೀವಟಿಕೆ ಹಿಡಿಯೋರು, ಬಸವನಬಿಡೋರು, ಕುರಿಮಂದೆಗಳ ಹೊಡೆಯೋರು, ಬಯಲಾಟ ಕುಣಿಯೋರು, ಶಾಲೆಗೆ ಹೋಗೋರು, ಮದುವೆ ಮಾಡೋರು, ಕೃಷಿಕರು, ಕತೆ ಹೇಳೋರು, ಕತೆಗಳಿಗೆ ತಲೆ ಆಡಿಸೋರು, ಹಬ್ಬ ಮಾಡೋರು- ಹೀಗೆ ಅದೊಂದು ನೂರಾರು ಚಟುವಟಿಕೆಗಳ ಕೇಂದ್ರ ದೂರದಿಂದ ನೋಡುವವರಿಗೆ ಜಡವಾಗಿರುವಂತೆ ತೋರುವ ಹಳ್ಳಿಯೊಂದು ಚಿಕ್ಕಣ್ಣನಂತಾ ಲೇಖಕರಿಗೆ ಅತ್ಯಂತ ಸೃಜನಶೀಲ ಚಟುವಟಿಕೆಗಳ ಕೇಂದ್ರವಾಗಿ ಕಾಣುತ್ತದೆ. ನಿಸರ್ಗದ ಭಾಗವಾಗಿರುವ ಪಶು, ಪಕ್ಷಿ, ನದಿ, ಬೆಟ್ಟ ಇತ್ಯಾದಿಗಳೂ ಕೂಡ ತಮ್ಮದೇ ರೀತಿಯಲ್ಲಿ ಊರಿನೊಡನೆ ಸಂಬಂಧ ಸಾಧಿಸಿರುತ್ತವೆ. ಹೀಗೆ ಇಡೀ ಊರಿನ ಚೈತನ್ಯವನ್ನು ಅನೇಕ ವಿಷಯಗಳ ಮೂಲಕ ‘ನಿಶಬುದದೆಡೆಯಲ್ಲಿ’ ದಾಖಲಿಸ ಹೊರಟು ಯಶಸ್ವಿಯಾಗಿರುವ ಚಿಕ್ಕಣ್ಣನವರು 'ಪುರಾಣ ಕನ್ಯೆ' ಯಲ್ಲಿ ಕಟ್ಟಿಕೊಪ್ಪಲಿನ ಕಥನ ಲೋಕವನ್ನು ಅನಾವರಣ ಮಾಡುತ್ತಾ ಅದನ್ನು ಸುಂದರವಾದ ಕಾದಂಬರಿಯಾಗಿಸಿದ್ದಾರೆ.
ಈ ಬಗೆ ಕನ್ನಡಕ್ಕೆ ಸ್ವಲ್ಪ ಹೊಸತು ಎಂಬುದನ್ನು ನಾವು ಅರ್ಥ ಮಾಡಿಕೊಳದೇ ಹೋದರೆ, ನಮಗೆ ಪುರಾಣ ಕನ್ಯೆಯ ಮಹತ್ವ ತಿಳಿಯದೇ ಹೋಗಬಹುದು. ಸಾಮಾನ್ಯವಾಗಿ ಕನ್ನಡದ ಓದುಗರಿಗೆ 'ಪುರಾಣ' ಎಂದರೆ ಸಂಸ್ಕೃತದಲ್ಲಿ ರಚಿತವಾದ 18 ಮಹಾಪುರಾಣಗಳು, ಅದರಲ್ಲಿ ಮತ್ಸ್ಯ ಮಾರ್ಕಂಡೇಯ, ಭಾಗವತ, ವರಾಹ, ವಿಷ್ಣು, ವಾಯು, ಪದ್ಮ, ಗರುಡ, ಸ್ಕಂದ ಮೊದಲಾದುವು ಮತ್ತು ಅವುಗಳ ಉಪಕತೆಗಳು ಸೇರ್ಪಡೆಯಾಗುತ್ತವೆ. ಈ ಪಟ್ಟಿಗೆ ಕೆಲವರು ರಾಮಾಯಣ, ಮಹಾಭಾರತ, ಭಾಗವತ ಮತ್ತಿತರ ಮಹಾಕಾವ್ಯಗಳನ್ನು ಸೇರಿಸುವುದೂ ಉಂಟು, ಇಂಥ ವೈದಿಕ-ಶಿಷ್ಟ ಇರಾಣಗಳಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಅನೇಕರು ಪೌರಾಣಿಕ ಕಾದಂಬರಿಗಳನ್ನು ಬರೆದಿದ್ದಾರೆ. ದೇವುಡು ನರಸಿಂಹಶಾಸ್ತ್ರಿಗಳ ಮಹಾಬ್ರಾಹ್ಮಣ, ಮಹಾಕ್ಷತ್ರಿಯ ಮತ್ತು ಮಹಾದರ್ಶನ, ತ.ರಾ. ಸುಬ್ಬರಾಯರ ಬೆಳಕು ತಂದ ಬಾಲಕ, ಅನುಪಮ ನಿರಂಜನರ ಮಾಧವಿ, ಶಂಕರ ಮೊಖಾಷಿ ಪುಣೇಕರರ ಅವಧೇಶ್ವರಿ, ಸತ್ಯಕಾಮರ ಋಷಿಪಂಚಮಿ, ಬೆಂಕಿಯ ಮಗಳು, ವಿಪ್ರಯೋಗ ಮತ್ತು ವಿಚಿತ್ರವೀರ್ಯ, ಎಸ್. ಎಲ್. ಭೈರಪ್ಪನವರ ಪರ್ವ ಮತ್ತು ಉತ್ತರಾಯಣ- ತಕ್ಷಣಕ್ಕೆ ನೆನಪಿಗೆ ಬರುವ ಕೆಲವು ಮಹತ್ವದ ಕೃತಿಗಳು. ಇವರಲ್ಲದೆ, ಹೆಚ್.ವಿ. ಸಾವಿತ್ರಮ್ಮ, ರಂ. ಶ್ರೀ. ಮುಗಳಿ, ಸಮೇತನಹಳ್ಳಿ ರಾಮರಾಯ, ನಳಿನಿಮೂರ್ತಿ, ಎ. ಪಂಕಜ, ಅದ್ಯರಾಮಾಚಾರ್ಯ, ಕೆ. ಎಸ್. ನಾರಾಯಣಾಚಾರ್ಯ, ಎಸ್.ವಿ, ಪ್ರಭಾವತಿ, ಶ್ರೀನಿವಾಸ ಉಡುಪ, ಜನಾರ್ದನ ಗುರ್ಕಾರ್, ಜ.ಹೊ. ನಾರಾಯಣ ಸ್ವಾಮಿ ಮೊದಲಾದವರು ವಿವಿಧ ಪುರಾಣಗಳನ್ನು ಆಧರಿಸಿ ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಮುಖ್ಯಾಂಶವೆಂದರೆ ಕನ್ನಡದಲ್ಲಿ ಈವರೆಗೆ ಬಂದಿರುವ ಈ ಕಾದಂಬರಿಗಳೆಲ್ಲವೂ ಸಂಸ್ಕೃತ ಪುರಾಣಗಳನ್ನು ಆಧರಿಸಿಯೇ ರಚಿತವಾಗಿದೆ ಎಂಬುದನ್ನು ನಮ್ಮ ನಡುವೆಯೇ ಪ್ರಚಲಿತದಲ್ಲಿರುವ ಜನಪದ ಪ್ರರಾಣಗಳನ್ನೋ, ಜನಪದ ಮಹಾಕಾವ್ಯಗಳನ್ನೋ ಆಧರಿಸಿ ಒಳ್ಳೆಯ ಕಾದಂಬರಿ ಇದುವರೆಗೆ ಪ್ರಕಟವಾದದ್ದೇ ಇಲ್ಲ. 'ಪುರಾಣಕನ್ಯೆ'ಯ ಮೂಲಕ ಕಾ.ತ ಚಿಕ್ಕಣ್ಣನವರಿಗೆ ಅಂಥದ್ದೊಂದು ಮಿತಿಯನ್ನು ಮೀರಲು ಸಾಧ್ಯವಾಗಿದೆ ಮತ್ತು ಮೀರಿದ್ದಾರೆ. ಆದುದರಿಂದ ಈ ಕಾದಂಬರಿಗೆ ಐತಿಹಾಸಿಕ ಮಹತ್ವವೂ ಇದೆ. ಇಲ್ಲಿಯ ಪುರಾಣ ಕನ್ಯೆ 18 ಮಹಾಪುರಾಣಗಳಿಂದ ಇಳಿದು ಬಂದವಳಲ್ಲ, ಬದಲು ನೆಲದಡಿಯಿಂದ ಎದ್ದು ಬಂದವಳು. ಈ ಕುರಿತು ಚಿಕ್ಕಣ್ಣನವರಿಗೆ ಬಹಳ ಖಚಿತವಾದ ಸೈದ್ಧಾಂತಿಕ ತಿಳಿವಳಿಕೆಯಿದೆ. ತಾಂತ್ರಿಕವಾಗಿ ಕಾದಂಬರಿಯುದ್ದಕ್ಕೂ ಇದನ್ನು ಪ್ರೊಫೆಸರ್ ಸಂಜೀವಪ್ಪನವರು ಪ್ರಕಟಿಸುತ್ತಾ ಹೋಗುತ್ತಾರೆ; ಅವರು ಊರಿನ ಪ್ರತಿಯೊಂದು ಕತೆಗಳ ಹಿಂದಿನ ಜೀವ ಚೈತನ್ಯವನ್ನು ಕಾದಂಬರಿಯ ಮುಖ್ಯ ಪಾತ್ರ ನೀಲವೇಣಿಗೆ ದಾಟಿಸುತ್ತಾರೆ. ಕಾದಂಬರಿಯ ಕೊನೆಯಲ್ಲಿ ಬರುವ ಜನಪದ ರಾಮಾಯಣದ ಬಗ್ಗೆ ಪ್ರೊಫೆಸರ್ ಹೇಳುವುದು ಹೀಗೆ- 'ರಾಮಾಯಣ' ಕತೆಯನ್ನೇ ಗಮನಿಸು, ರಾಮಾಯಣದ ವೈದಿಕ ಮನಸ್ಸು ಸೀತೆಯನ್ನು ಅಗ್ನಿಯಿಂದ ಸುಟ್ಟು ಬಂದು ತನ್ನ ಪವಿತ್ರತೆಯನ್ನು ಸಾಬೀತುಪಡಿಸು ಅಂತ ಶ್ರೀರಾಮನಿಂದ ಹೇಳಿಸುತ್ತದೆ, ಆದರೆ ಇನ್ನೊಂದು ಬಗೆಯ ರಾಮಾಯಣದ ಜನಪದ ಮನಸ್ಸು ಸೀತೆಯ ಪಾವಿತ್ರ್ಯವನ್ನು ಸಾಬೀತು ಪಡಿಸಲು 'ಒಣಗಿರೊ ಜಂನೇರಳೆ ಮರವನ್ನು ತಬ್ಬಿ ಚಿಗುರುವಂಗೆ ಮಾಡು' ಅಂತ ಹೇಳುತ್ತದೆ.
ನೋಡು - ಇರೋದು ಒಂದೇ ಕತೆ. ಆದರೆ ಒಂದು ಸುಟ್ಟುಕೋ ಅನ್ನುತ್ತದೆ, ಇನ್ನೊಂದು ಚಿಗುರು ಅನ್ನುತ್ತದೆ. ಸುಡೋದು, ನಾಶ. ಚಿಗುರೋದು ಜೀವ. ಮರ ಚಿಗುರಿದರೆ ಹಣ್ಣು ಬುಡುತ್ತದೆ, ಬುಟ್ಟು ಹೋದ ಹಕ್ಕಿ ಪಕ್ಷಿಗಳು, ದುಂಬಿ ಜೀರುಂಡೆಗಳು, ಮತ್ತೆ ಒಂದು ಕೊಡುತ್ತವೆ. ಅಲ್ಲಿ ಜೀವ ಜಗತ್ತೇ ಪುನರ್ ನಿರ್ಮಾಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ, ಕಾದಂಬರಿಕಾರ ತನ್ನ ಕತೆಗಳಿಗೆ ತಾನೇ ವಿಮರ್ಶಕ - ಕೆಲಸ ಮಾಡುತ್ತಿರುವ ಅಂಶ ಗೊತ್ತಾಗುತ್ತದೆ. ಕಾದಂಬರಿಯ ಆರಂಭದಲ್ಲಿ ನೀರು ಸಮುದಾಯದ ಒಳಗೆ ನಿಂತು ಹೋರಾಡಿದ ವ್ಯಕ್ತಿಗಳು ಪುರಾಣವಾಗಿ ಬುಡ್ತಾರೆ. ಇದರ ಅರಿವಿರಬೇಕು' ಎಂಬ ಮಾತು ಪ್ರಸ್ತಾವನೆಯ ಹಾಗೆ ಬರುತ್ತದೆ. ಈ ವೈಚಾರಿಕ ಸೇರಿಕೊಂಡಿರುವ ಇತರ ಕಥನಗಳನ್ನು ಬಹಳ ಮುತುವರ್ಜಿಯಿಂದ ಸಾಹಿತ್ಯದಲ್ಲಿ ಮರು ಸೃಷ್ಟಿಸಿದಾಗ, ಅವು ಓದುಗನಿಗೆ ಹೊಸ ಅನುಭವವನ್ನು ನೀಡಬಲ್ಲವು.
ಪ್ರಸ್ತುತ ಕಾದಂಬರಿಯಲ್ಲಿ ಅನೇಕ ಕತೆಗಳಿದ್ದರೂ, ಅತ್ತಿಕುಪ್ಪೆ ಮಾಳವ್ವನ ಕಥನವು ಉಳಿದೆಲ್ಲವನ್ನೂ ಮೀರಿ ಬೆಳೆಯುತ್ತದೆ. ಮಾಳವ್ವನದು ಒಂದು ದುಃಖಾಂತ ಕತೆ. ಅವಳೊಂದಿಗೆ ಇರುವ ಕಾಳವ್ವ, ಬಾಣ್ತವ್ವ ಮತ್ತಿತರರ ಕತೆಯಾದರೂ ಅಷ್ಟೆ ಇಲ್ಲಿ ಸುಖಾಂತ ಕಥನಗಳೇ ಇಲ್ಲ. ಮಾಳವ್ವ ತನ್ನ ಎಳೆಯ ವಯಸ್ಸಿನಲ್ಲಿಯೇ ದೊಡ್ಡದೊಂದು ಹೋರಾಟ ಮಾಡಿ ಸತ್ತು ಹೋಗಿದ್ದಾಳೆ. ಅವಳ ವೀರತ್ವದಲ್ಲಿ ಒಂದು ಬಗೆಯ ಕ್ರಿಯಾತ್ಮಕ ಗುಣಧರ್ಮವಿದೆ. ಆಕೆ ಜನರ ಕಣ್ಣಲ್ಲಿ ದೈವವಾಗುವುದಕ್ಕೆ ಅವಳು ಬೇರಾವುದೋ ದೇವರ ಅವತಾರವಾಗಿರುವುದು ಕಾರಣ ಅಲ್ಲ. ಮಾಳವ್ವನಿಗೆ ಯಾವುದೇ ಪೂರ್ವಜನ್ಮದ ಪುಣ್ಯವಿಶೇಷಗಳಿಲ್ಲ. ಆಕೆ ಅವಳ ಅಮ್ಮನ ಗರ್ಭದಲ್ಲಿರುವಾಗ ಯಾವುದೇ ಶುಭಶಕುನಗಳು ಸಂಭವಿಸುವುದಿಲ್ಲ ಅಥವಾ ಅವಳು ಜನಿಸುವಾಗ ದೇವತೆಗಳು ಪುಷ್ಪವೃಷ್ಟಿ ಮಾಡುವುದೂ ಇಲ್ಲ. ಅವಳ ಸಾಮಾಜಿಕ ಸ್ಥಾನಮಾನಗಳು (ಉದಾಹರಣೆಗೆ ಅರಸು ಕುಮಾರಿಯಾಗಿರುವುದು ಇತ್ಯಾದಿ) ಅವಳ ವೀರತ್ವವನ್ನು ನಿರ್ಧರಿಸುವುದಿಲ್ಲ ಆಕೆ ಎಲ್ಲರಂತೆ ಜನಿಸುತ್ತಾಳೆ, ಬೆಳೆಯುತ್ತಾ ಬೆಳೆಯುತ್ತಾ ತನ್ನ ಸುತ್ತಲಿನ ಪುರುಷ ಕೇಂದ್ರಿತ ಸಮಾಜ ತಂದೊಡ್ಡುವ ಬಗೆಬಗೆಯ ಒತ್ತಡಗಳಿಗೆ ಒಳಗಾಗುತ್ತಾಳೆ. ಅದರಲ್ಲಿ ಲೈಂಗಿಕ ಶೋಷಣೆಯೂ ಒಂದು. ಆದರೆ ಆಕೆ ಪುರುಷಾಧಿಪತ್ಯಕ್ಕೆ ಬಲಿಯಾಗದೆ, ಈ ಪ್ರಾಮಾಣಿಕತೆ, ಬುದ್ಧಿಮತ್ತೆ ಮತ್ತು ಎದುರಾಗುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾಳೆ ಮತ್ತು ಅದೇ ಕಾರಣಕ್ಕೆ ಅಪಾಪ್ತ ವಯಸ್ಸಿನಲ್ಲಿ ಸಾಯುತ್ತಾಳೆ. ಅತ್ಯಾಚಾರದಂಥ ಜೀವನದ ಅತ್ಯಂತ ಕ್ಲಿಷ್ಟಕರ ಸಂದರ್ಭಕ್ಕೆ ಆಕೆ ತೋರಿದ ಕ್ರಿಯಾತ್ಮಕತೆಯೇ ಅವಳನ್ನು ಊರಿನ ಜನರ ಕಣ್ಣಲ್ಲಿ ಒಂದು ದೈವವಾಗಿಸಿದೆ. ಹುಟ್ಟಿನಿಂದಲೇ ದೇವರಾಗಿರುವವರಿಗಿಂತ ಈಕೆ ಭಿನ್ನ, ವೈದಿಕ ದೇವರುಗಳು ಸಾಮಾನ್ಯವಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಒಪ್ಪಿಕೊಂಡು ಅದನ್ನು ಕಾನೂನುಬದ್ದಗೊಳಿಸುತ್ತಾರೆ. ಆದರೆ ಮಾಳವ್ವನಂಥ ಮಹಿಳೆಯರು ಸಮಾಜದ ಒಳಗಿನ ಹುಳುಕುಗಳನ್ನು ಬಯಲಿಗೆಳೆಯುತ್ತಾರೆ. ತನ್ನ ಸಾವಿಗೆ ಆನಂತರವು ಹೋರಾಟ ಮುಂದುವರೆಸಲು ಕರೆಕೊಡುತ್ತಾಳೆ. ತನ್ನ ಹಾಗೆ ಲೈಂಗಿಕ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳ ರಕ್ಷಣೆಯ ಕೆಲಸವನ್ನು ತಾನೇ ನಿರ್ವಹಿಸುತ್ತಾಳೆ. ಕಾದಂಬರಿಯಲ್ಲಿ ನಿರೂಪಿತವಾಗಿರುವಂತೆ- 'ಈ ಹೆಣ್ಣು ಕೇಡು ಬಗೆದೋರ ಪಾಲಿಗೆ ಕುಲಕಂಟಕಳಾದ ಶಕ್ತಿದೇವತೆಯಾಗಿ, ಕಟ್ಟೆ ಕೊಪ್ಪಲಿನ ಇತಿಹಾಸಕ್ಕೊಂದು ಮುಕುಟವಾಗಿ ನಿಂತಳಲ್ಲ!"
‘ಪುರಾಣ ಕನ್ಯೆ' ಕಾದಂಬರಿಯು ಇಂತದ್ದೊಂದು ಅನನ್ಯವೂ ವಿಶಿಷ್ಟವೂ ಆದ ಸಾಂಸ್ಕೃತಿಕ ಲೋಕವನ್ನು ಸ್ಥಳೀಯ ಭಾಷೆಯಲ್ಲಿ ಕಟ್ಟಿಕೊಡುತ್ತಾ ಜನರ ದೈವವೊಂದರ ಕಲ್ಪನೆ ಇನ್ನಷ್ಟು ಸ್ಪುಟಗೊಳ್ಳುವಂತೆ ಮಾಡುತ್ತದೆ. ಈ ದೈವಗಳು ಹಿಂದೂ, ಮುಸ್ಲಿಂ ವ್ಯತ್ಯಾಸ ಮಾಡುವುದಿಲ್ಲ. ದರ್ಗಾ ಮತ್ತು ಗುಡಿಗಳಿರುವುದೇ ಮನುಷ್ಯರ ಕಷ್ಟಗಳನ್ನು ಕಡಿಮೆ ಮಾಡುವುದಕ್ಕೇ ವಿನಾ ಹೆಚ್ಚು ಮಾಡುವುದಕ್ಕಲ್ಲ. ತುರುಕರು ಬಾಣ್ತವ್ವನಿಗೆ ಹಜರತ್ ಸೈಯದ್ ಜಜ್ಜಾಬಿ ಮಾಸಾಹೇಬರ ಸ್ಥಾನಮಾನ ನೀಡಿ ಗೌರವಿಸುತ್ತಾರೆ. ಶಿವರಾತ್ರಿ ಸಮೀಪದಲ್ಲಿ ಎರಡು ದಿವಸ ಪರಸೆ ಮಾಡುತ್ತಾರೆ. ಆದರೆ, ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸ ಅಲ್ಲ ಎಂಬುದನ್ನು ಕಾದಂಬರಿಯಲ್ಲಿ ಸಾಂಕೇತಿಕವಾಗಿ ಹೇಳಲಾಗಿದೆ~ 'ತಾನು ಹುಡುಕೋದಿಕ್ಕೆ ಬಂದಿರೊ ಕತೆಯೂ ಆ ಮೊಲದಂಗೆ ಜಿಗಿತಾ ಕೈಗೆ ಸಿಗದೆ ಹೋಗುತ್ತಿರಬೌದು, ‘ಪ್ರೊಫೆಸರರ ಮಾತು ನೆನಪಾಯಿತು. - ‘ನೀನು ಹೋಗ್ತಾಯಿರೋದು ವಿಜ್ಞಾನಿಯಾಗಲ್ಲ; ಜನಪದರ ಜ್ಞಾನದೊಳಗಿರೋ ಪುರಾಣ ಕಥೆಗಳ ತಿಳಿಯೊ ವಿದ್ಯಾರ್ಥಿಯಾಗಿ ನೋಡು, ನೀನು ಹೇಳಿರೋ ಕಟ್ಟೆ ಕೊಪ್ಪಲು, ಅಲ್ಲಿನ ಆರಾಧನಾ ಕತೆಗಳನ್ನ ವಿಶ್ವವಿದ್ಯಾಲಯದ ಸಂಶೋಧನಾ ಪರಿಭಾಷೆಲಿ ನೋಡೋದಕ್ಕೆ ಹೋಗಬೇಡ, ನಮ್ಮ ಜನಪದರು ಒಂದು ಕತೇನ ಹೆಂಗೆ ತಮ್ಮ ಪರಿಸರ ಜ್ಞಾನದಿಂದ ರೂಪಿಸಿಕೊಳ್ತಾರೆ ಅಂತ ನಾವು ತಿಳ್ಕೊಂಡಿರಬೇಕು. ನೀನು ಮೊದಲು ಹಳ್ಳಿಯೊಳಾಗಿ ಹೋಗಿ ಅಲ್ಲಿನ ಜ್ಞಾನ ಸಂಪಾದನೆ ಮಾಡ್ಕೊ ಅಜ್ಜಅಜ್ಜಿಯರನ್ನು ಪರಿಚಯ ಮಾಡ್ಕೊ ಅವರು ಏನು ಹೇಳ್ತಾರೆ ಕೇಳು. ಆಮ್ಯಾಲೆ ನಿನ್ನ ಪಾಯಿಂಟ್ ಆಫ್ ವ್ಯೂವ್ ಏನು ಅಂತ ನೋಡುವೆಯಂತೆ', ಈ ಕಿವಿಮಾತು ಓದುಗರಿಗೂ ಹೌದು.
ಚಿಕ್ಕಣ್ಣನವರು ಕಾದಂಬರಿಯಲ್ಲಿ ಅನಗತ್ಯವಾದ ಯಾವ ಪಾತ್ರಗಳನ್ನೂ ತಂದು ತುರುಕಿಲ್ಲ. ಪ್ರೊ. ಸಂಜೀವರನ್ನು, ನೀಲವೇಣಿ, ಕುರಿಮಯ್ಯ, ಆನಂದ, ಮುದಿಗೊರವಯ್ಯ, ಕಣಗಲಮ್ಮ, ಪೂಜಾರಪ್ಪ, ರಂಗಸ್ವಾಮಿ, ದಾಸಯ್ಯ ಮೊದಲಾದ ಪಾತ್ರಗಳು ಕಾದಂಬರಿಯ ಕೇಂದ್ರ ಉದ್ದೇಶಕ್ಕಾಗಿ ಮಾತ್ರ ದುಡಿಯುತ್ತವೆ. ಅದರಲ್ಲಿಯೂ ಕಣಗಲಮ್ಮ ಪ್ರಧಾನ ಕತೆಗಾರ್ತಿ. ಅವಳ ಕಥನ ಕಲೆ ಅದ್ಭುತವಾದುದು. ‘ಕಣಗಲಮ್ಮ ಪ್ರಧಾನ ಕತೆಗಾರ್ತಿ, ಅವಳ ಕಥನ ಕೆಲ ಅಧ್ಭುತವಾದುದು. ‘ಕಣಗಲಮ್ಮನ ಕತೆ ಒಮ್ಮೊಮ್ಮೆ ಚುಂಚನ ಕಟ್ಟೆಯ ಸೀತೆ ಬಚ್ಚಲ ನೀರಿನಂಗೆ ನಿಧಾನವಾಗಿಯೂ ಒಮ್ಮೊಮ್ಮೆ ಧನುಸ್ಸುಗೋಡಿ ಜಲಪಾತದಂಗೆಯೂ ಹರೀತ್ತಿತ್ತಲ್ಲ. ಅದು ಹೆಂಗೇ ಹರಿದರೂ ಲಯ ಮಾತ್ರ ತಪ್ಪಿದ್ದಿಲ್ಲ’ ಎಂಬ ಮಾತು ಕಾದಂಬರಿಯಲ್ಲಿಯೇ ಬರುತ್ತದೆ. ಹೀಗೆ ಬಗೆ ಬಗೆಯ ಕತೆಗಳು ಮೈ ಚೆಲ್ಲಿಕೊಂಡು ಬೆಳೆಯುವ ಈ ಕಾದಂಬರಿಯು ಕೊನೆಯಾಗುವಾಗ - ‘ಅತಿಕುಪ್ಪೆ’, ಅಳಿದು ಹೋದ ಈಚಲುವನ, ಆ ತೋಪು, ಹರಿಯೊ ಆ ಯೋಗವತಿ ತೊರೆ, ತೊರೆಯ ದಂಡೆ ಬದಿ ಬೆಳೆದು ತೂಗಾಡೊ ಮರಗಿಡ ಪೊದೆಗಳ ಸೊಂಪಾದ ಸಾಲು, ಮಾಸಿಹೋದ ಮಾಳವ್ವನ ಆ ಗುಡಿ, ಅದರ ಸುತ್ತಲಿನ ಆ ಕುರುಚಲು ಗಿಡಗಂಟಿಗಳು, ದ್ವಾಪರ ಯುಗ ನೆನಪಿಸೋ ಪಾಳುಬಿದ್ದ ಆ ಪಾಂಡವರ ಗುಡಿ, ಗುಡಿಬಳಿಯ ಆ ಸರ್ಪಗಳ ಕಾಳಗ, ಬೆಟ್ಟಳ್ಳಿ ಬೆಟ್ಟ, ಕಾಳವ್ವ' ಇತ್ಯಾದಿಗಳೆಲ್ಲ ಮನಸಿನೊಳಗೆ ಉಳಿದು ಬಿಡುತ್ತವೆ. ಈ ಅರ್ಥದಲ್ಲಿ ಕಾದಂಬರಿಯು ಉಂಟು ಮಾಡುವ ಪರಿಣಾಮ ಅಸಾಧಾರಣವಾದುದು.
ಹೊಸ ವಸ್ತು, ತಂತ್ರ, ವಿನ್ಯಾಸ ಮತ್ತು ನಿರೂಪಣೆಯ ಲವಲವಿಕೆಯಿಂದ ರಂಜಿಸುವ ಈ ಕಾದಂಬರಿಯನ್ನು ಓದುವುದೆಂದರೆ, ತತ್ವಶಾಸ್ತ್ರವೊಂದರ ನವೀನ ಅಧ್ಯಾಯಕ್ಕೆ ಪ್ರವೇಶ ಪಡೆದಂತೆ. ಚಿಕ್ಕಣ್ಣನವರಿಗೆ ಅಭಿನಂದನೆಗಳು”