ಪುರಾತನ ಚಿತ್ರ - ವಿಚಿತ್ರ ಶಿಕ್ಷೆಗಳ ಲೋಕ !

ಪುರಾತನ ಚಿತ್ರ - ವಿಚಿತ್ರ ಶಿಕ್ಷೆಗಳ ಲೋಕ !

ಪ್ರತೀ ಬಾರಿ ಗಂಭೀರ ಅಪರಾಧಗಳು ಜರುಗಿದ ಸಂದರ್ಭದಲ್ಲಿ ಜನರ ಸಿಟ್ಟು ತಾರಕಕ್ಕೇರುತ್ತದೆ. ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ಕೊಡಬೇಕು, ಅವರನ್ನು ನಡು ರಸ್ತೆಯಲ್ಲಿ ಕಡಿದು ಕೊಲ್ಲಬೇಕು, ಎನ್ ಕೌಂಟರ್ ಮಾಡಬೇಕು, ಅರಬ್ ರಾಷ್ಟ್ರಗಳಲ್ಲಿರುವಂತೆ ಕಲ್ಲು ಹೊಡೆದು ಕೊಲ್ಲಬೇಕು, ಕೈ ಕಾಲುಗಳನ್ನು ಕತ್ತರಿಸಿ ಭಿಕ್ಷೆ ಬೇಡಿಸಬೇಕು ಎನ್ನುವ ಹಲವಾರು ಸಲಹೆಗಳು ಬರುತ್ತವೆ. ಭಾರತದಲ್ಲಿರುವ ಕಾನೂನಿನ ಪ್ರಕಾರ ಇವುಗಳಿಗೆ ಅವಕಾಶವಿಲ್ಲ. ಇಲ್ಲಿರುವುದು ಮರಣ ದಂಡನೆಯ ಶಿಕ್ಷೆ ಮಾತ್ರ ಅದೂ ಶಿಕ್ಷೆ ಪ್ರಕಟವಾದ ಬಳಿಕ ವರ್ಷಾನುಗಟ್ಟಲೆ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೊನೆಗೆ ಜೀವಾವಧಿ ಶಿಕ್ಷೆಗೆ ಸೀಮಿತಗೊಳ್ಳುವ ಸಾಧ್ಯತೆಯೂ ಇದೆ. 

ಭಾರತದಲ್ಲಿ ಮರಣ ದಂಡನೆ ಎಂದರೆ ಗಲ್ಲು ಶಿಕ್ಷೆ. ಅದೂ ಜೈಲಿನ ಖಾಸಗಿ ಕೋಣೆಯಲ್ಲಿ ಸೀಮಿತ ಅಧಿಕಾರಿ ವರ್ಗಗಳ ಎದುರು ನಡೆಯುವ ಕ್ರಮ. ಉಳಿದಂತೆ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಅಥವಾ ಬೇರೆ ಯಾವುದೇ ರೀತಿಯಲ್ಲಿ ಮರಣ ದಂಡನೆ ವಿಧಿಸುವ ಅವಕಾಶ ನಮ್ಮ ಕಾನೂನಿನಲ್ಲಿ ಇರುವುದಿಲ್ಲ. ಈ ಕಾರಣದಿಂದ ಬಹುತೇಕ ಅಪರಾಧಿಗಳಿಗೆ ಶಿಕ್ಷೆಯ ಭಯವೇ ಇಲ್ಲ. ಅವರು ಜೈಲಿನ ಕೊಠಡಿಯನ್ನೇ ತಮ್ಮ ಐಷಾರಾಮಿ ಜೀವನದ ಭಾಗವನ್ನಾಗಿಸಿಕೊಂಡಿರುತ್ತಾರೆ. 

ಆದರೆ ನಮ್ಮ ಹಿಂದಿನ ಚರಿತ್ರೆಯ ಪುಟಗಳನ್ನು ಗಮನಿಸಿದಾಗ ಆಗ ಆಳುತ್ತಿದ್ದ ರಾಜರು ಅಥವಾ ಬ್ರಿಟೀಷರು ಹಲವಾರು ಬಗೆಯ ಕಠಿಣಾತಿ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ಇಂತಹ ಕೆಲವು ಶಿಕ್ಷೆಗಳ ವಿವರಗಳನ್ನು ಓದುವಾಗಲೇ ನಮ್ಮಲ್ಲಿ ಹೆದರಿಕೆ ಹುಟ್ಟಿಸುತ್ತದೆ. ಆಗ ಚಾಟಿಯಿಂದ ಛಡಿಯೇಟು ಹೊಡೆಸುವುದು ಬಹಳ ಸಾಮಾನ್ಯ ಶಿಕ್ಷೆಯಾಗಿತ್ತು. ಚಾಟಿಯ ಒಂದೊಂದು ಏಟಿಗೆ ಚರ್ಮವೇ ಕಿತ್ತು ಬರುತ್ತಿತ್ತು. ಬೆಂಕಿಯಲ್ಲಿರಿಸಿದ ಕಬ್ಬಿಣದ ಸಲಾಕೆಯಿಂದ ಬರೆ ಹಾಕುವುದು, ಚರ್ಮ ಸುಲಿಯುವುದು, ಉಗುರುಗಳನ್ನು ಒಂದೊಂದಾಗಿ ಕಿತ್ತು ಹಾಕುವುದು, ಫಿರಂಗಿಯ ಬಾಯಿಗೆ ಕಟ್ಟಿ ಸಿಡಿಸುವುದು, ತಲೆ ಬೋಳಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡಿಸುವುದು, ಬಟ್ಟೆಗಳನ್ನು ಕಳಚಿ ಮಂಜುಗಡ್ಡೆಯ ಮೇಲೆ ಮಲಗಿಸುವುದು... ಹೀಗೆ ಹಲವಾರು ಬಗೆಯ ಶಿಕ್ಷೆಯ ಕ್ರಮಗಳು ವಿಶ್ವದ ವಿವಿಧ ದೇಶಗಳಲ್ಲಿ ಜಾರಿಯಲ್ಲಿದ್ದವು. ಅವುಗಳಲ್ಲಿ ಕೆಲವನ್ನು ಗಮನಿಸುವ.

ಮರಣದಂಡನೆ ವಿಧಿಸಲಾದ ಕೈದಿಗೆ ಈಗಲೂ ವಿದ್ಯುತ್ ಕುರ್ಚಿಯ ಮೇಲೆ ಕೂರಿಸಿ ವಿದ್ಯುತ್ ಹರಿಸುವುದು, ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವುದು, ವಿಷಾನಿಲದ ಕೊಠಡಿಯೊಳಗೆ ಬಿಡುವುದು, ತಲೆಯನ್ನು ಕತ್ತರಿಸುವುದು ಮೊದಲಾದ ಶಿಕ್ಷಾ ಕ್ರಮಗಳು ಈಗಲೂ ಜಾರಿಯಲ್ಲಿವೆ. ಈಜಿಪ್ಟ್, ಬ್ಯಾಬಿಲೋನಿಯಾ, ಇಸ್ರೇಲ್, ಪರ್ಶಿಯನ್, ಗ್ರೀಕ್, ರೋಮನ್ ಮುಂತಾದ ನಾಗರಿಕತೆಗಳಲ್ಲಿ ಹಲವಾರು ಬಗೆಯ ಶಿಕ್ಷೆಗಳ ಉಲ್ಲೇಖಗಳಿವೆ. ಕೆಲವೊಮ್ಮೆ ಸಾಮಾನ್ಯ ಬಗೆಯ ಅಪರಾಧಗಳಿಗೂ ಗಂಭೀರವಾದ ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಕಾರಣದಿಂದ ಅಪರಾಧ ಪ್ರಕರಣಗಳು ಬಹಳ ಕಡಿಮೆಯಾಗಿರುತ್ತಿದ್ದವು. 

* ಕ್ರಿಸ್ತ ಶಕ ೧೩೦೦ ರಲ್ಲಿ ದೇವರು ವಿಧಿಸಿದ ಹತ್ತು ನಿಯಮಗಳನ್ನು ಮೋಸೆಸ್ ರು ಪ್ರಚಾರಕ್ಕೆ ತಂದರು ಎಂಬುದಾಗಿ ಬೈಬಲ್ ನಲ್ಲಿ ಸೂಚಿಸಲಾಗಿದೆ. ಅದರಲ್ಲಿ ಪ್ರಾಣಕ್ಕೆ ಬದಲಾಗಿ ಪ್ರಾಣ, ಕಣ್ಣಿಗೆ ಬದಲು ಕಣ್ಣು, ಹಲ್ಲಿಗೆ ಬದಲು ಹಲ್ಲು, ಕಾಲಿಗೆ ಬದಲು ಕಾಲು ಹೀಗೆ ಅಪರಾಧಿ ಶಿಕ್ಷೆಯ ರೂಪದಲ್ಲಿ ನೀಡಬೇಕು ಎಂಬುದಾಗಿ ತಿಳಿಸಲಾಗಿದೆ.

* ರೋಮನ್ನರ ಸಾಮ್ರಾಜ್ಯದಲ್ಲಿ ಮರಣದಂಡನೆಯನ್ನು ಒಂದು ವಿಶಿಷ್ಟ ರೂಪದಲ್ಲಿ ನೀಡಲಾಗುತ್ತಿತ್ತು. ಒಂದು ಗೋಣಿ ಚೀಲದಲ್ಲಿ ಅಪರಾಧಿಯೊಂದಿಗೆ ನಾಯಿಯನ್ನೂ ಹಾಕಿ, ಮೂಟೆ ಕಟ್ಟಿ ನದಿಯ ನೀರಿಗೆ ಎಸೆಯುತ್ತಿದ್ದರು. ಕೆಲವು ವರ್ಷಗಳ ನಂತರ ಅಪರಾಧಿಯನ್ನು ಶಿಲುಬೆಯಲ್ಲಿ ಒರಗಿಸಿ, ಕೈಗಳಿಗೆ ಮೊಳೆ ಹೊಡೆದು ನೇತಾಡಿಸಲಾಗುತ್ತಿತ್ತು. ಕೆಲವೊಮ್ಮೆ ಅಪರಾಧಿಗಳನ್ನು ಹಸಿದ ಹುಲಿ ಅಥವಾ ಸಿಂಹದ ಗೂಡಿನೊಳಗೆ ಹಾಕಲಾಗುತ್ತಿತ್ತು.

* ಕ್ರಿಸ್ತ ಶಕ ೯೧೬ ರಿಂದ ೯೫೬ರವರೆಗೆ ಸ್ಕಾಟ್ಲೆಂಡ್ ದೇಶವನ್ನು ಆಳಿದ ಹೌವೆಲ್ ಡಾ ಎಂಬ ದೊರೆಯ ಶಿಕ್ಷೆಗಳು ಬಹಳ ವಿಚಿತ್ರವಾಗಿರುತ್ತಿದ್ದವು. ಒಂದು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಸಂಪತ್ತನ್ನು ಕಳ್ಳನು ದೋಚಿದ್ದರೆ ಅವನಿಗೆ ಮರಣದಂಡನೆಯೇ ಗತಿಯಾಗಿರುತ್ತಿತ್ತು. ನಿಗದಿತ ಮೊತ್ತಕ್ಕಿಂತ ಕಮ್ಮಿ ಸಂಪತ್ತು ಕದ್ದಿದ್ದರೆ ಅವನಿಂದ ೭ ಪವನ್ ಚಿನ್ನವನ್ನು ದಂಡವನ್ನಾಗಿ ವಸೂಲು ಮಾಡಲಾಗುತ್ತಿತ್ತು. ದಂಡ ಕಟ್ಟಲು ಆತನ ಬಳಿ ಚಿನ್ನ ಇಲ್ಲದೇ ಹೋದರೆ ನಿಗದಿತ ಅವಧಿಗೆ ಸೆರೆಮನೆ ವಾಸಕ್ಕೆ ದೂಡಲಾಗುತ್ತಿತ್ತು. ಆದರೆ ಆತನ ಪರವಾಗಿ ಸಂಬಂಧಿಕರು ಅಥವಾ ಸ್ನೇಹಿತರು ಹಣವನ್ನು ನೀಡಿ ಆತನನ್ನು ಬಂಧಮುಕ್ತಗೊಳಿಸಬಹುದಾಗಿತ್ತು.

ಈ ದೊರೆಯ ಮತ್ತೊಂದು ವಿಲಕ್ಷಣ ಕಾನೂನು ಹೇಗಿತ್ತೆಂದರೆ ಕಳ್ಳನೋರ್ವ ಕದಿಯುವುದಕ್ಕೆ ಮೂರು ದಿನಗಳ ಮೊದಲು ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿದ್ದುದನ್ನು ನಿರೂಪಿಸಲು ಸಾಧ್ಯವಾದರೆ ಅವನಿಗೆ ಬಂಧನ ಹಾಗೂ ಶಿಕ್ಷೆಯಿಂದ ಮುಕ್ತಿ ಸಿಗುತ್ತಿತ್ತು. ಏಕೆಂದರೆ ಆತನಿಗೆ ಬದುಕಲು ಅವಶ್ಯಕವಾದ ಆಹಾರವನ್ನು ಯಾರೂ ನೀಡದ ಕಾರಣ ಬೇರೆ ದಾರಿಯಿಲ್ಲದೇ ಕಳ್ಳತನ ಮಾಡಿದನೆಂದು ತಿಳಿಯಲಾಗುತ್ತಿತ್ತು.

ಇದೇ ರೀತಿ ಮರಣ ದಂಡನೆಗೆ ಗುರಿಯಾದ ವ್ಯಕ್ತಿ ಹಸುಗಳನ್ನು ನೀಡಿ ಶಿಕ್ಷೆಯಿಂದ ವಿನಾಯತಿ ಪಡೆಯಬಹುದಾಗಿತ್ತು. ಅಧಿಕಾರಿ ವರ್ಗದವರನ್ನು ಕೊಲೆ ಮಾಡಿದ್ದರೆ ೧೮೯ ಹಸುಗಳನ್ನೂ, ಸಜ್ಜನ ಪ್ರಜೆಗಳನ್ನು ಕೊಲೆ ಮಾಡಿದ್ದರೆ ೧೨೬ ಹಸುಗಳನ್ನೂ, ಕುಟುಂಬದ ಯಜಮಾನನನ್ನು ಕೊಂದರೆ ೮೪ ಹಸುಗಳನ್ನೂ, ಕೆಲಸದವರನ್ನು ಕೊಂದರೆ ೬ ಹಸುಗಳನ್ನು ದಂಡವಾಗಿ ನೀಡಿ ಬಂಧನದಿಂದ ಮುಕ್ತರಾಗಬಹುದಿತ್ತು.

* ಇಂಗ್ಲೆಂಡಿನಲ್ಲಿ ನಾರ್ಮನ್ನರ ಅಧಿಕಾರಾವಧಿಯಲ್ಲಿ ಯಾರಾದರೂ ರೊಟ್ಟಿ ಅಥವಾ ಮೀನನ್ನು ಕದ್ದರೆ ರೊಟ್ಟಿ ಅಥವಾ ಮೀನಿನ ಹಾರವನ್ನು ಅಪರಾಧಿಯ ಕೊರಳಿಗೆ ಹಾಕಿ, ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿಸಲಾಗುತ್ತಿತ್ತು. ಕೆಲವೊಮ್ಮೆ ಅಪರಾಧಿಯ ಮೇಲೆ ಮೊಟ್ಟೆಗಳನ್ನೂ ಎಸೆಯಲಾಗುತ್ತಿತ್ತು. ಅಪರಾಧಿಯನ್ನು ಹಿಡಿಯುವ ಸಂದರ್ಭದಲ್ಲಿ ಆತ ಅಕಸ್ಮಾತ್ ಚರ್ಚ್ ಒಳಗೆ ಹೊಕ್ಕರೆ ಆತನನ್ನು ಹೊರ ಬರುವ ತನಕ ಬಂಧಿಸಲಾಗುತ್ತಿರಲಿಲ್ಲ. ಅಪರಾಧಿ ಎಷ್ಟೇ ದೊಡ್ಡ ಅಪರಾಧವನ್ನು ಮಾಡಿದ್ದರೂ ಆತನನ್ನು ಚರ್ಚ್ ಒಳಗಡೆ ಇರುವಾಗ ಬಂಧಿಸುತ್ತಿರಲಿಲ್ಲ.

ಹಿಂದೆ ಇಂಗ್ಲೆಂಡಿನಲ್ಲಿ ಚರ್ಚ್ ನ ಫಾದರ್ ಗಳು ಏನಾದರೂ ಅಪರಾಧ ಮಾಡಿದರೆ ಅವರನ್ನು ರಾಜ, ರಾಣಿ ಅಥವಾ ಮಂತ್ರಿಗಳ ಎದುರು ಹಾಜರು ಪಡಿಸಿ ವಿಚಾರಣೆ ಮಾಡಲಾಗುತ್ತಿತ್ತು. ಅವರಿಗೆ ಗಂಭೀರವಾದ ಶಿಕ್ಷೆಯನ್ನು ವಿಧಿಸದೇ ಹಲವು ಬಾರಿ ಬೈಬಲ್ ನ ವಾಕ್ಯಗಳನ್ನು ಹಲವಾರು ಸಲ ಬರೆಯುವಂತೆ ಹೇಳಲಾಗುತ್ತಿತ್ತು.

ಮಾಟಗಾತಿ ಹಾಗೂ ಮಂತ್ರವಾದಿಗಳಿಗೆ ಕಠಿಣ ಶಿಕ್ಷೆಯನ್ನು ಪುರಾತನ ಇಂಗ್ಲೆಂಡ್ ನಲ್ಲಿ ನೀಡುತ್ತಿದ್ದರು. ಇವರನ್ನು ಸಜೀವವಾಗಿ ದಹನ ಮಾಡಲಾಗುತ್ತಿತ್ತು. ನ್ಯಾಯಾಲಯದ ಆವರಣದಲ್ಲಿ ಸುಳ್ಳು ಹೇಳಿದ ಅಪರಾಧಿಗೆ ಮುಖದ ಮೇಲೆ 'ಪಿ (P)’ ಎಂಬ ಆಂಗ್ಲ ಅಕ್ಷರವನ್ನು ಕಾಯಿಸಿದ ಕಬ್ಬಿಣದಿಂದ ಬರೆಯಲಾಗುತ್ತಿತ್ತು. 'ಪಿ' ಎಂಬ ಈ ಅಕ್ಷರವು ಸುಳ್ಳುಗಾರ (Perjurer) ಎಂಬುದನ್ನು ಸೂಚಿಸುತ್ತಿತ್ತು.

ಕಾಲ ಕ್ರಮೇಣ ಹಲವಾರು ಹೊಸ ಬಗೆಯ ಶಿಕ್ಷೆಗಳು ಜಾರಿಗೆ ಬಂದವು. ಈಗಲೂ ಕೆಲವು ರಾಷ್ಟ್ರಗಳಲ್ಲಿ ಅಮಾನವೀಯ ಶಿಕ್ಷೆಗಳು ಜಾರಿಯಲ್ಲಿವೆ. ಆದರೆ ಅಪರಾಧಿ ಮಾಡಿದ ತಪ್ಪಿಗೆ ಶಿಕ್ಷೆ ನೀಡಬೇಕಾದದ್ದು ಅತೀ ಅಗತ್ಯವಾಗಿದೆ ಅಲ್ಲವೇ?

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ