ಪುರಿ ಜಗನ್ನಾಥ ಸ್ವಾಮಿಯ ನೈವೇದ್ಯ

ಪುರಿ ಜಗನ್ನಾಥ ಸ್ವಾಮಿಯ ನೈವೇದ್ಯ

ಅಮ್ಮ ಹೇಳುತಿದ್ದಳು ‘ಶ್ರೀಕೃಷ್ಣ ಪರಮಾತ್ಮ ಬೆಳಗಿನ ಸ್ನಾನವನ್ನು ರಾಮೇಶ್ವರದಲ್ಲಿ ಮಾಡಿದರೆ, ಬದರಿನಾಥದಲ್ಲಿ ದ್ಯಾನ ಮಾಡಿ ಪುರಿಯಲ್ಲಿ ಉಂಡು, ದ್ವಾರಕೆಯಲ್ಲಿ ಮಲಗುತ್ತಾನಂತೆ.  ಅಷ್ಟು ಮಹತ್ವ ಇದೆ ಜಗನ್ನಾಥ ಪುರಿ ನೈವೇದ್ಯ. ಅಲ್ಲಿ ನೈವೇದ್ಯದ ಕ್ರಿಯೆಯನ್ನು *ಮಹಾಭೋಗ* ಎನ್ನುತ್ತಾರೆ. ಅದೇಕೆ ಮಹಾಭೋಗ ಎನ್ನುತ್ತಾರೆ ಅಂದರೆ  ಆದು ಸರ್ವ ಶಕ್ತ ವಿಷ್ಣುವಿನ ಪ್ರಸಾದ. ನಾರದ ಮುನಿಯು ಲಕ್ಷ್ಮಿಯನ್ನು ವಿನಂತಿಸಿ ವಿಷ್ಣುವಿನ ತಟ್ಟೆಯಿಂದ ಪಡೆದ ದುರ್ಲಭ ಮಹಾಪ್ರಸಾದ ಅದು. 

ಈ ಮಹಾ ಪ್ರಸಾದವನ್ನು  ಅರಮನೆಯಿಂದ ಹಾಗೂ ದೇವಾಲಯದಲ್ಲಿ ತಯಾರಿಸಿ ಅರ್ಪಿಸಲಾಗುತ್ತದೆ. ಪ್ರತಿ ದಿನ ಜಗನ್ನಾಥನಿಗೆ  56 ಬಗೆಯ ಸಾಂಪ್ರದಾಯಿಕ ಅಡುಗೆಯನ್ನು ಸಿದ್ದಪಡಿಸಲಾಗುತ್ತದೆ. ಇದನ್ನು ಸಿದ್ಧಪಡಿಸಲೆಂದೇ  ಸುಮಾರು 500 ಸಂಖ್ಯೆಯ ಅಡುಗೆಯವರು, ಅವರಿಗೆ 300 ಸಹಾಯಕರು ಮತ್ತು 200 ಕೆಲಸಗಾರರು ಸಿದ್ದರಾಗಿರುತ್ತಾರೆ.  ಮಹಾ ಪ್ರಸಾದದ ತಯಾರಿಕೆಗೆ ಸೌದೆ ಒಲೆಯನ್ನು ಮಾತ್ರ ಬಳಸಲಾಗುತ್ತದೆ. ಜಗನ್ನಾಥನ ಅಡುಗೆ ಮನೆಯಲ್ಲಿ  ಉರಿಯುವ ಅಗ್ನಿಯನ್ನು *ವೈಷ್ಣವ ಅಗ್ನಿ*  ಎನ್ನುತ್ತಾರೆ ಹಾಗೂ ಎಂದೋ ಹಚ್ಚಿದ ಒಲೆ ಇಂದಿಗೂ ಆರಿಲ್ಲವಂತೆ . ಅಡಿಗೆಯವರು ಅಂದಿನ ಅಗತ್ಯಕ್ಕೆ ತಕ್ಕಂತೆ ಮಡಿಯಲ್ಲಿ ಮಹಾಪ್ರಸಾದವನ್ನು ತಯಾರಿಸಿ ಅದನ್ನು ಸಣ್ಣ ಮಣ್ಣಿನ ಕುಡಿಕೆಯಲ್ಲಿ  ತುಂಬಿ ಮೈಲಿಗೆಯಾಗದಂತೆ  ಅರ್ಚಕರಿಗೆ ತಲುಪಿಸುತ್ತಾರೆ.

ಅಡುಗೆಯಲ್ಲಿ ವ್ಯತ್ಯಾಸ ಅಥವಾ ಮೈಲಿಗೆಯಾದರೆ ಅಡುಗೆಯ ಬಳಿ ನಾಯಿಯೊಂದು  ಕಾಣಿಸಿಕೊಳ್ಳುತ್ತದಂತೆ. ಆಗ ಮಾಡಿದ ಅಡುಗೆಯನ್ನು ನೆಲದಲ್ಲಿ ಹೂಳಿ ಬೇರೆ ಅಡುಗೆ ಮಾಡುತ್ತಾರಂತೆ. ಈ ನಾಯಿಯನ್ನು  *ಕುಟುಮಚಂಡಿ*  ಎಂಬ ತಾಂತ್ರಿಕ ದೇವತೆ ಎನ್ನಲಾಗುತ್ತದೆ.  ಅಲ್ಲಿಯ ಅಡಿಗೆಯವರು ಹೇಳುವ ಪ್ರಕಾರ "ನಾವು  ಭೋಗದ ಅಡುಗೆಯನ್ನು  ತಯಾರಿಸುವ ಕಾರ್ಯ ಮಾತ್ರ ಮಾಡುತ್ತಿದ್ದು ಅದಕ್ಕೆ ರುಚಿ, ಸುಗಂಧ  ನೀಡುವುದು  ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಗೆ ಸೇರಿದ್ದು. ಆಕೆ ಅಡುಗೆ ಮನೆಯಲ್ಲಿ ಸದಾ ಓಡಾಡುತ್ತಾ ಇರುತ್ತಾಳಂತೆ. ಆಕೆಯ ಗೆಜ್ಜೆ ಸದ್ಧು ನಮಗೆ  ಕೇಳುತ್ತದೆ "  ಎನ್ನುತ್ತಾರೆ ಅಡುಗೆಯವರು. ಅಲ್ಲಿಯ ಮಹಾಭೋಗದ ಅಡುಗೆ ದಿವ್ಯರುಚಿ ಹಾಗೂ ಸುಗಂಧ ವಿಶಿಷ್ಟವಾಗಿರತ್ತದಂತೆ. 56  ಬಗೆಯ ಅಡುಗೆಗೆ ಅವರದ್ದೇ ಆದ ಒಂದು ನಂಬುಗೆ ಇದೆ. *ಶ್ರೀಕೃಷ್ಣ  ಗೋವರ್ಧನ ಗಿರಿಯನ್ನು  ಎತ್ತಿ ಹಿಡಿದು  ಏಳು ದಿನಗಳ ಕಾಲ  ನಿರಾಹಾರನಾಗಿ ಹಾಗೇ ಇದ್ದನಂತೆ, ಅವನು ಸಾಮಾನ್ಯವಾಗಿ ಪ್ರತಿ ದಿನ ಎಂಟು ವಿಧಗಳ ಆಹಾರವನ್ನು ಸೇವನೆ ಮಾಡುತ್ತಿದ್ದನಂತೆ. ಇದರ ನೆನಪಿಗಾಗಿ ಏಳು ದಿನಗಳ ಆಹಾರವನ್ನು  ದಿನಕ್ಕೆ ಎಂಟರಂತೆ  56 ವಿಧದಲ್ಲಿ ತಯಾರಿಸಿ  ಬಡಿಸಲಾಗುತ್ತದಂತೆ*  ಎಂದು. ಈ ಮಹಾ ಪ್ರಸಾದದ ಹೆಸರೇ  *ಛಪ್ಪನ್ (ಐವತ್ತಾರು) ಮಹಾ ಭೋಗ ಪ್ರಸಾದ* ಎಂದು. ಯಾರು ಜಗನ್ನಾಥಪುರಿಗೆ ಹೋಗುತ್ತೀರೋ ತಪ್ಪದೆ ಆ ಮಹಾಪ್ರಸಾದ  ಸ್ವೀಕರಿಸಿ. ನೀರು ಸೇರಿಸದ ಮಹಾಪ್ರಸಾದವನ್ನು  ನಿರ್ಮಾಲ್ಯ ಮಹಾಪ್ರಸಾದ ಅಥವಾ ಕೈವಲ್ಯ ಮಹಾಪ್ರಸಾದ ಎಂದು ಹೇಳುತ್ತಾರೆ. ಇದನ್ನು ಭಕ್ತರು ಮನೆಗೆ ಕೊಂಡೊಯ್ದು ಇಟ್ಟುಕೊಂಡಿರುತ್ತಾರೆ.  ಸಾವಿನ ಹೊಸ್ತಿಲಲ್ಲಿರುವವರಿಗೆ  ಕೈವಲ್ಯ ಪ್ರಸಾದವನ್ನು ನೀಡುವುದರಿಂದ  ಸಾವಿನ ನಂತರ ವೈಕುಂಠದಲ್ಲಿ ಸ್ಥಾನ ಪಡೆಯುತ್ತಾರಂತೆ ಎಂಬ ನಂಬಿಕೆ. ಇಷ್ಟೊಂದು ಮಹತ್ವವಿದೆ ಜಗನ್ನಾಥ ಪುರಿಯ ಮಹಾ ನೈವೇದ್ಯಕ್ಕೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣದಿಂದ ಸಂಗ್ರಹಿತ