ಪುರುಷಾರ್ಥ!
ಇಂದು ಸುಂದರ ಬದುಕಿಗೆ ಕಾರಣವಾದ ಪುರುಷಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ. ಪುರುಷಾರ್ಥಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಇವುಗಳನ್ನು ಸುಂದರ ಜೀವನದ ನೀತಿ ಮಾರ್ಗಗಳೆಂದು ಕರೆಯುತ್ತಾರೆ. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಜೀವನ ಸಂತೋಷದಿಂದ ಸಾಗುತ್ತದೆ. ಪ್ರತಿಯೊಂದನ್ನೂ ತಿಳಿದುಕೊಳ್ಳೋಣ. ಇದರ ಅನುಷ್ಠಾನ ಕಷ್ಟವಾಗಬಹುದು. ಆದರೆ ಬದುಕು ಸುಂದರವಾಗುತ್ತದೆ.
ಧರ್ಮ: ಧರ್ಮ ಎಂದರೆ ಸತ್ಯ ವಸ್ತುವನ್ನು ತಿಳಿಯುವುದು. ಸತ್ಯ ಎಂದರೆ ಯಾವುದು ಶಾಶ್ವತವಾಗಿ ಇರುತ್ತದೆಯೋ?. ಯಾವುದನ್ನು ಯಾವುದರಿಂದಲೂ ಬದಲು ಮಾಡಲು ಸಾಧ್ಯವಿಲ್ಲವೋ?. ಯಾವುದು ಈ ಜಗತ್ತಿಗೆ ಆಧಾರವೋ? ಯಾವುದು ಪರಿಪೂರ್ಣವೋ?. ಅದು ಸತ್ಯ. ಇದನ್ನು ಅರಿಯುವುದೇ ಧರ್ಮ. ಇದನ್ನು ಅರಿಯಬೇಕಾದರೆ ಬಸವಣ್ಣ ಹೇಳಿದಂತೆ "ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ" ಇರಬೇಕು. ಬಹಿರಂಗ ಶುದ್ಧಿ ಎಂದರೆ, ನಮ್ಮ ದೇಹದ ಹೊರಮೈ, ಮನೆ, ವಸ್ತ್ರ ಮತ್ತು ಸ್ಥಳ ಶುಚಿಯಾಗಿರಬೇಕು. ಇದರಿಂದ ಯಾವುದೇ ಕಾಯಿಲೆ ಬರುವುದಿಲ್ಲ. ಹಾಗೆಯೇ ಅಂತರಂಗ ಶುದ್ಧಿ ಎಂದರೆ, ಮನಸ್ಸು, ಭಾವ ಮತ್ತು ಬುದ್ಧಿ ಶುಚಿಯಾಗಿರಬೇಕು. ಯಾವುದೂ ಹೊಲಸಾಗಿರಬಾರದು. ಹೊಲಸಾಗದಂತೆ ನೋಡಿಕೊಳ್ಳಬೇಕು. ನೋಡುವುದರಿಂದ, ಕೇಳುವುದರಿಂದ ಮತ್ತು ಮಾಡುವುದರಿಂದ ಕಸದ ಹೊಲಸು ಮನಸ್ಸನ್ನು ಪ್ರವೇಶ ಮಾಡುತ್ತದೆ. ಕಸ ಬಿದ್ದ ತಕ್ಷಣ ತೆಗೆಯುವುದರಿಂದ ಶುದ್ಧವಾಗುತ್ತದೆ. ಹೀಗೆ ಶುದ್ಧವಾಗಿದ್ದರೆ ಮಾತ್ರ ಸತ್ಯ ವಸ್ತು ಅರಿಯಲು ಸಾಧ್ಯ. ಇದೇ ಧರ್ಮ. ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ಧರ್ಮ ಶ್ರೇಷ್ಠ, ನಿನ್ನದು ಕಡಿಮೆ ಎಂದು ಏನು ಹೇಳಲಾಗುತ್ತದೆಯೋ ಅದು ಧರ್ಮವಲ್ಲ. ಮನಸ್ಸು, ಭಾವ, ಬುದ್ಧಿ ಹೊಲಸಾಗಿರುವುದರ ಸಂಕೇತ.
ಅರ್ಥ: ಬದುಕಿಗೆ ಸಂಪತ್ತು ಬೇಕು. ಯಾವುದು ಇದ್ದರೆ ಬದುಕು ಅರಳುತ್ತದೆ...? ಶ್ರೀಮಂತವಾಗುತ್ತದೆ....? ಅಂತಹ ಸಂಪತ್ತು ಬೇಕು. ಅಂತಹ ಸಂಪತ್ತು ಯಾವುದೆಂದರೆ ಅನ್ನ, ನೀರು, ಗಾಳಿ, ಬೆಳಕು ಮತ್ತು ವಸ್ತ್ರ. ಇವುಗಳಲ್ಲಿ ಕೊರತೆ ಇರಬಾರದು. ಹಸಿವಾದವರು ಬಂದರೆ ಅನ್ನ ನೀಡುವಷ್ಟು, ದಾಹದಿಂದ ಬಳಲಿದವರಿಗೆ ನೀರು ಕೊಡುವಷ್ಟು, ದುಃಖಿತರಾದವರಿಗೆ ಆಶ್ರಯ ನೀಡುವಷ್ಟು, ಇರಬೇಕು. ಸುಂದರ ಮಾತು ಸಂಪತ್ತೇ. ಯಾವ ಮಾತಿನಿಂದ ಇನ್ನೊಬ್ಬರ ಮನಸ್ಸು ನಲಿಯುತ್ತದೆಯೋ?. ಮಧುರವಾಗುತ್ತದೆಯೋ?. ಅಂತಹ ಮಾತನಾಡುವ ಹೃದಯ ಶ್ರೀಮಂತಿಕೆ ಸಂಪತ್ತು. ನಿಜವಾದ ಸಂಪತ್ತು. ಆದರೆ ಅನ್ನ, ನೀರು, ಗಾಳಿ, ಬೆಳಕು ಮತ್ತು ವಸ್ತ್ರ ಇಲ್ಲದಿದ್ದರೆ ಬದುಕು ಶ್ರೀಮಂತವಾಗುವುದಿಲ್ಲ. ಅಂದರೆ ಬದುಕೆ ಉಳಿಯುವುದಿಲ್ಲ. ಇವೆ ನಿಜವಾದ ಸಂಪತ್ತು.
ಕಾಮ: ಇದನ್ನು ತಪ್ಪಾಗಿ ತಿಳಿಯಬಾರದು. ಕಾಮ ಎಂದರೆ ಮಧುರ ಭಾವ. ನೋಡಿದಾಗ, ಕೇಳಿದಾಗ, ರಸ ಸವಿದಾಗ ಮತ್ತು ಮುಟ್ಟಿದಾಗ ಮಧುರ ಭಾವ ಉಂಟಾಗುವುದೇ ಕಾಮ. ಇದು ಸಂತೋಷ ಕೊಡುತ್ತದೆ. ಹಾಗಾಗಿ ಸುಖ ಸಂತೋಷವೇ ಕಾಮ. ಇದನ್ನು ಎಲ್ಲರೂ ಬಯಸುವುದರಿಂದ ಕಾಮ ಎಂದು ಕರೆದರು. ವಸ್ತುಗಳ ಸೌಂದರ್ಯ ಸವಿಯುವ ಹೃದಯ ಇರಬೇಕು. ಮಾಧುರ್ಯ ಅನುಭವಿಸುವ ಹೃದಯ ಇರಬೇಕು. ಯಾರಾದರೂ ಹಾಡು ಹಾಡಲಿ ಆ ಹಾಡಿನಲ್ಲಿರುವ ಮಾಧುರ್ಯ ಸವಿಯಬೇಕು. ಅದು ಸಂತೋಷ ಸುಖ ನೀಡುತ್ತದೆ. ಅದೇ ರೀತಿ ನೋಡಿ ಸಂತೋಷ ಪಡಬೇಕು. ಕೇಳಿ ಸಂತೋಷಪಡಬೇಕು. ಮತ್ತು ಮಾಡಿ ಸಂತೋಷಪಡಬೇಕು. ಜೀವನ ಅಂದರೆ ಸಂತೋಷ ಪಡುವುದು. ಆಗ ಜೀವನ ಮಧುರವಾಗುತ್ತದೆ. ಯಾಕೆ ತಲೆಕೆಡಿಸಿಕೊಳ್ಳೋದು? ಜಗತ್ತಿನಲ್ಲಿ ಕಲ್ಲು , ಮುಳ್ಳು, ಕಸ ಇರುವುದೇ. ಆದರೆ ಜಗತ್ತಿನಲ್ಲಿ ಒಳ್ಳೆಯದು ಇಲ್ಲವೇನು? ಊರು ಇರುವಲ್ಲಿ ಗಟಾರ, ಚರಂಡಿ, ಡಸ್ಟ್ ಬಿನ್ ಇರುವುದು. ಊರು ಬಿಟ್ಟರೆ ಎಲ್ಲಿದೆ ಚರಂಡಿ, ಗಟಾರ?. ಪಶು ಪಕ್ಷಿಗಳು ಚರಂಡಿ ಗಟಾರ ಮಾಡುವುದಿಲ್ಲ. ಮಾನವ ಮಾಡುತ್ತಾನೆ. ಜಗತ್ತು ಬಹಳ ಸುಂದರ. ಪ್ರೇಮದ ದೃಷ್ಟಿಯಿಂದ ನೋಡಿದರೆ ಸಂತೋಷ ಕೊಡುತ್ತದೆ. ಅದನ್ನೇ ಕಾಮ ಎಂದಿರುವುದು. ಯಾವುದನ್ನು ಪ್ರೀತಿಸುತ್ತೀರಿ ಅದು ಸಂತೋಷ ಕೊಡುತ್ತದೆ. ಪ್ರೀತಿಸದಿದ್ದರೆ ತಾಪ ಉಂಟಾಗುತ್ತದೆ. ಸರಳತೆಯಲ್ಲಿ ಎಂತಹ ಸುಂದರ ಜೀವನ ನಡೆಸಿದವರಿದ್ದಾರೆ..? ಆಂಟೆಸ್ತನೀಸ್ ಎನ್ನುವ ಸಂತ ಸುಮಾರು 2500 ವರ್ಷಗಳ ಹಿಂದೆ, ಗ್ರೀಸ್ ದೇಶದ ಅಥೆನ್ಸ್ ಪಟ್ಟಣದಲ್ಲಿ ವಾಸವಾಗಿದ್ದನು. ಆತ ವಾಸವಿದ್ದುದ್ದು ಸಣ್ಣ ಕುಟೀರ. ಅದರಲ್ಲಿ ಒಂದು ಚಾಪೆ, ಒಂದು ನೀರು ತುಂಬಿಸಲು ಗಡಿಗೆ, ಅಡುಗೆ ಮಾಡಲು ಎರಡು ಪಾತ್ರೆ, ಒಂದು ಊಟ ಮಾಡುವ ಬಟ್ಟಲು, ಒಂದು ಹಣತೆ ಹಾಗೂ ನಾಲ್ಕು ತುಂಡು ಬಟ್ಟೆಗಳು. ಇಷ್ಟು ಬಿಟ್ಟರೆ ಬೇರೇನೂ ಇರಲಿಲ್ಲ. ಈತನ ಮಾತು ಕೇಳಲು ನೂರಾರು ಜನ ಸೇರುತ್ತಿದ್ದರು. ಆಗ ಒಬ್ಬ ಸಿರಿವಂತ ಈತನ ಜನ ಮಣ್ಣನೆ ನೋಡಿ ಈ ಸಂತ ಹೇಗಿದ್ದಾನೆ? ನೋಡಬೇಕೆಂದು ಬಂದನು. ನೋಡಿದ, ಏನಿಲ್ಲ ಸಣ್ಣ ಕುಟೀರ, ಒಂದು ಚಾಪೆ, ಒಂದು ಗಡಿಗೆ, ಒಂದೆರಡು ಪಾತ್ರೆ, ಒಂದು ಹಣತೆ ಮತ್ತು ನಾಲ್ಕು ತುಂಡು ಬಟ್ಟೆ. ಶ್ರೀಮಂತ ಕೇಳಿದ ಇಷ್ಟು ವಸ್ತುವಿನಲ್ಲಿ ನೀವೇಗೆ ಜೀವನ ಸಾಗಿಸುತ್ತೀರಿ?. ನಾವು ವಾರ ವಾರ ಸಾಮಾನುಗಳನ್ನು ತರುತ್ತೇನೆ. ಮುಗಿಯುವುದರೊಳಗೆ ಮತ್ತಷ್ಟು ತರುತ್ತೇವೆ. ಆದರೂ ನಮಗೆ ಕೊರತೆ ಕಾಣಿಸುತ್ತದೆ. ನೀವು ಇಷ್ಟ ಪಟ್ಟರೆ ನಾನು ಎಲ್ಲಾ ಕೊಡಿಸುತ್ತೇನೆ ಎಂದನು. ಆಗ ಆಂಟೆಸ್ತನೀಸ್ ಹೇಳಿದ ಮಾತು ಜಗತ್ಪ್ರಸಿದ್ಧ. ಆ ಮಾತು ಹೀಗಿದೆ. "With these few things, I have become the richest man in the world. I need nothing. That is my richness" ಈ ಸಣ್ಣ ಪುಟ್ಟ ವಸ್ತುಗಳೊಂದಿಗೆ ನಾನು ಅದ್ಭುತ ಶ್ರೀಮಂತನಾಗಿದ್ದೇನೆ. ಶ್ರೀಮಂತ ಎಂದರೆ ಯಾರು?. ಆತ ಹೇಳುವುದೇನೆಂದರೆ, ಯಾರಿಗೆ ಬಹಳ ಬೇಕಾಗುವುದಿಲ್ಲ, ಅವರೇ ಶ್ರೀಮಂತರು. ಇಷ್ಟು ಬಿಟ್ಟರೆ ನನಗೆ ಹೆಚ್ಚಿಗೆ ಬೇಕಾಗುವುದಿಲ್ಲ ಎಂದನು. ಅದೇ ನನ್ನ ಶ್ರೀಮಂತಿಕೆ. ಸಾಲುವುದಿಲ್ಲ ಅನ್ನುವವರೇ ಬಡವರು. ಬೇಕು ಅನ್ನುವವರೇ ಬಡವರು. ಮಲಗಲು ಚಾಪೆ ಇದೆ. ಕುಡಿಯಲು ನೀರಿದೆ. ಊಟ ಮಾಡಲು ಪಾತ್ರೆ ಇದೆ. ಬೆಳಕಿಗೆ ಹಣತೆ ಇದೆ. ರಕ್ಷಣೆಗೆ ಕುಟೀರ ಇದೆ. ಇನ್ನೇನು ಬೇಕು?. ಎಂದರು. ನನಗೆ ಊಟದ ಕೊರತೆ ಇಲ್ಲ. ನೀರಿನ ಕೊರತೆ ಇಲ್ಲ. ಬೆಳಕಿನ ಕೊರತೆ ಇಲ್ಲ ಮತ್ತು ನಿದ್ರೆಗೆ ಕೊರತೆ ಇಲ್ಲ. ಕೆಲಸ ಮಾಡಲು ಒಂದಿಷ್ಟು ಸಾಮಾನು ಇದೆ. ಇನ್ನೇನು ಬೇಕು? ಎಂದನು. ಈ ಮಾತು ಆ ದೇಶದಲ್ಲಿ ಪ್ರಚಲಿತನಾಗಿ ಆತನ ಅನುಯಾಯಿಗಳು ಸಾಕಷ್ಟು ಆದರು. ಆತನ ಹೆಸರಿನಲ್ಲಿ ಸಂಪ್ರದಾಯ ಶುರುವಾಯಿತು. ಆತನ ಜೀವನ ಅನುಸರಿಸಲು ಶುರು ಮಾಡಿದ ಅವರಿಗೆ ಆಂಟೆಸ್ತಿನೀಸ್ ಅನುಯಾಯಿಗಳು ಎನ್ನುತ್ತಿದ್ದರು. ಇದರ ಅರ್ಥ ಬಡವರಾಗಿ ಬದುಕಬಾರದು. ಶ್ರೀಮಂತನಾಗೇ ಬದುಕಬೇಕು. ನಮಗೂ ಬೇಕಾಗಿರೋದು ಇಷ್ಟೇ. ಆದರೆ ಅದನ್ನು ಅತಿಯಾಗಿ ಮಾಡುತ್ತಿದ್ದೇವೆ ಅದಕ್ಕೆ ದುಃಖ.
ಮೋಕ್ಷ: ಮೋಕ್ಷ ಎಂದರೆ ಬಂಧನ ಇರಬಾರದು. ಭಾವ ಬಂಧನ ಇರಬಾರದು. ಮನಸ್ಸು ಸ್ವಚ್ಚಂದವಾಗಿ ಇರಬೇಕು. ಮುಕ್ತವಾಗಿರಬೇಕು ಆಕಾಶದಂತೆ. ಯಾವುದೇ ಕಟ್ಟುನಿಟ್ಟು ಇಲ್ಲದಂತೆ ವಿಕಸಿತವಾಗಿರಬೇಕು. ಇದೇ ಮುಕ್ತಾವಸ್ಥೆ. ಎಲ್ಲಾ ಪರಿಮಿತಿ ತೆಗೆದು ಮನಸ್ಸು ಸ್ವಚ್ಛಂದವಾಗಿರಬೇಕು ಹಾಗೂ ವಿಶಾಲವಾಗಿರಬೇಕು. ಇದರಿಂದ ಸೀಮಿತ ಕಳಚಿ ಅಸೀಮತೆ ಉಂಟಾಗುತ್ತದೆ. ಅದೇ ದೇವಾನುಭವ. ಸತ್ಯಂ, ಜ್ಞಾನಂ, ಅನಂತಂ. ಅನಂತತೆ ಬಂದರೆ ಪರಿಪೂರ್ಣ. ಹಾಗಾಗಿ ನಾನು, ನನ್ನದು, ಕುಟುಂಬ, ಜಾತಿ, ಊರು, ದೇಶ, ಭಾಷೆ, ಹೆಸರು ಎನ್ನುವ ಪರಿಮಿತಿ ತೆಗೆಯಬೇಕು ಅಲ್ಲವೇ ಮಕ್ಕಳೇ. (ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನದಿಂದ ಆಯ್ದುಕೊಳ್ಳಲಾಗಿದೆ)
-ಎಂ.ಪಿ. ಜ್ಞಾನೇಶ್ , ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ