ಪುರುಷ ಕುಣಿತ ಎಂಬ ಜನಪದ ಕಲೆ

ಪುರುಷ ಕುಣಿತ ಎಂಬ ಜನಪದ ಕಲೆ

ತುಳುನಾಡಿನ ಜನಪದ ಕಲೆಗಳಲ್ಲಿ ಪುರುಷ ಕುಣಿತ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿತ ಮಾಡುವುದು ಕಲೆಯ ವಿಶೇಷತೆಯಾಗಿದೆ.

ತುಳುನಾಡಿನ ಜನಪದ ಕುಣಿತಗಳಲ್ಲಿ ಆಚರಣಾತ್ಮಕ ಕುಣಿತಗಳು ಮತ್ತು ಮನೋರಂಜನಾತ್ಮಕ ಕುಣಿತಗಳೆಂಬ ಎರಡು ರೀತಿಯ ಕುಣಿತಗಳಿವೆ. ಅದರಲ್ಲಿ ಪ್ರಮುಖ ಕುಣಿತಗಳಲ್ಲಿ ಒಂದು ‘ಪುರುಷರ ಕುಣಿತ’. ಈ ಕುಣಿತ ಐವೆರ್ ಪುರುಷೆರ್, ಪುಂಡುಪುರುಷೆರ್, ಮಾಯಿದ ಪುರುಷೆರ್, ಜೋಗಿ ಪುರುಷೆರ್ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಕುಣಿತ ಆಚರಣಾತ್ಮಕವೂ, ಹೌದು ಮನೋರಂಜನೆಯೂ ಹೌದು.

ಇದರ ಹಿನ್ನೆಲೆಯೇನೆಂದರೆ ಒಬ್ಬಳು ಹೆಂಗಸು ತನಗೆ ಮಕ್ಕಳು ಇಲ್ಲದೆ ಕೊರಗುತ್ತಿರುವಾಗ ಒಂದು ಸಂದರ್ಭದಲ್ಲಿ ಕದ್ರಿಮಂಜುನಾಥ ದೇವರಿಗೆ ಹರಕೆ ಹೇಳಿಕೊಳ್ಳುತ್ತಾಳೆ. ದೇವರ ಅನುಗ್ರಹದಿಂದ ಅವಳಿಗೆ ಐದು ಜನ ಗಂಡುಮಕ್ಕಳು ಹುಟ್ಟುತ್ತಾರೆ. ಹರಕೆ ತೀರಿಸಲು ಕದ್ರಿ ಮಂಜುನಾಥನ ಸನ್ನಿಧಾನಕ್ಕೆ ಹೋದಾಗ ಆ ಐವರು ಮಕ್ಕಳು ಅದೃಶ್ಯರಾಗುತ್ತಾರೆ. ಆಗ ಅತೀವ ದು:ಖಿತಳಾದ ತಾಯಿಗೆ ಮಂಜುನಾಥ ಸ್ವಾಮಿಯು ದರ್ಶನವಾಗಿ ಅಭಯವನ್ನು ನೀಡುತ್ತಾನೆ. ಅದೇನೆಂದರೆ ‘ಪುರುಷ ಕುಣಿತ’ ಎಂಬ ಆಚರಣೆಯನ್ನು ಮಾಡಿ ಅದರಲ್ಲಿ ಐವರು ಮಕ್ಕಳನ್ನು ಕಾಣು ಎಂಬ ಮಾತನ್ನು ನೀಡಿ ಆಶೀರ್ವಾದ ನೀಡುತ್ತಾರೆ. ಆ ಮಕ್ಕಳೆ ಇಂದು ಪುರುಷ ಕುಣಿತದಲ್ಲಿ ನಾವು ಕಾಣುವ ಹಾಳೆಯ ಕಿರೀಟವನ್ನು ಸಾಂಕೇತಿಕವಾಗಿ ಧರಿಸಿರುವ ಮಕ್ಕಳಾಗಿರುತ್ತಾರೆ. ಪುರುಷ ಕುಣಿತವನ್ನು ನಾಥ ಪಂಥದ ಮೂಲತ: ಅನುಯಾಯಿಗಳಾದ ಗೌಡ ಜನಾಂಗದವರು ಹಿಂದಿನ ಕಾಲದಿಂದಲೂ ಆಚರಿಸುತ್ತಾ ಬಂದಿದ್ದಾರೆ.ಬ್ರಾಹ್ಮಣ, ಜೈನ, ದಲಿತ ಹಾಗೂ ಅನ್ಯಧರ್ಮದವರನ್ನು ಹೊರತುಪಡಿಸಿ ಉಳಿದ ಸವರ್ಣೀಯರು ಈ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಮಂಜುನಾಥಲ್ಲದೆ ದೈವವಾಗಿ ಕೊಡಮಣಿತ್ತಾಯ (ಮಾಣಿಯೆಚ್ಚಿ), ನಿಯಂತ್ರಕ ಪಾತ್ರಧಾರಿಗಳಾಗಿ 2-3 ಮುಸ್ಲಿಂ ವೇಷಧಾರಿಗಳು ಇವರನ್ನು ಸಾಯಿಬರು ಎಂದು ಕರೆಯಲಾಗುತ್ತದೆ. ಕರಡಿ, ಕಾಲೆ, ಸ್ತ್ರೀವೇಷ, ಬೈದೆರ್ಲು, ಭೂತ, ಪಂಡಿತ, ಕಳ್ಳ, ಸಿಂಗಾರಿ, ಬ್ರಾಹ್ಮಣ, ಕಿರೀಟ, ಮನ್ಸೆ, ನರ್ಸಣ್ಣ, ಕ್ರೈಸ್ತ, ಸವಾಲೆ ಬೀಸುವುದು ಇತ್ಯಾದಿ ಜಾತಿ ಸಂಬಂಧಿ, ವೃತ್ತಿ ಸಂಬಂಧಿ, ಪ್ರಾಣಿ ಸಂಬಂಧಿ, ಆಚರಣಾ ಸಂಬಂಧಿ ವೇಷಗಳಿರುತ್ತದೆ. ವಾದ್ಯ ಪರಿಕರಗಳಾಗಿ ಟಾಸೆ, ಡೋಳು, ನಾಗಸ್ಪರ, ಶ್ರುತಿ ಇರುತ್ತದೆ.

ಮೊದಲ ಚಿತ್ರದಲ್ಲಿ ಪುರುಷವೇಷ ಕುಣಿತದ ತಂಡ ಹಾಗೂ ಎರಡನೇ ಚಿತ್ರದಲ್ಲಿ ಪುರುಷವೇಷದಲ್ಲಿ ಬಳಸುವ ಕೈಗೋಲು

(ಮಾಹಿತಿ ಸಂಗ್ರಹ)