ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೨)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೨)

ಬರಹ

*****ಭಾಗ ೧೨

ಕೆಲವೇ ದಿನಗಳಲ್ಲಿ ನಮ್ಮಿಬರ ಸ್ನೇಹ ಹೆಚ್ಚಾಯಿತು. ಕಾಲ ಕಳೆದಂತೆ ನನ್ನ ಹೊಸ ಮಿತ್ರ ತನ್ನ ಕತೆಯನ್ನು ದೀರ್ಘವಾಗಿ ಹೇಳಿದ. ಅವನ ದೇಶ ಜಂಬೂದ್ವೀಪದ ಪೂರ್ವಕ್ಕೆ ನೇಪಾಳವನ್ನು ದಾಟಿ ಹಿಮಾಚಲದಾಚೆ ಇರುವ ಮಹಾಚೀನ ಎಂಬ ಹೆಸರಿನ ದೇಶವಂತೆ. ನಾಲ್ಕು ಸಹೋದರರಲ್ಲಿ ಇವನೇ ಕಿರಿಯವ. ಇವನ ತಾತ ಮುತ್ತಾತಂದಿರು ಭಾರಿ ಮೇಧಾವಿಗಳಂತೆ. ಎಂಟು ವರ್ಷದ ವಯಸ್ಸಿಗೇ ಇವನು ಧಾರ್ಮಿಕ ವಿಷಯಗಳಲ್ಲು ಆಸಕ್ತಿ ತೋರುತ್ತಿದ್ದನಂತೆ. ಇವನು ಚಿಕ್ಕವನಾಗಿದ್ದಾಗ ಇವನ ತಂದೆಯೇ ನಾಲ್ಕು ಮಕ್ಕಳಿಗೆ ಅಲ್ಲಿಯ ಧರ್ಮಭೋಧನೆ ಮಾಡುತ್ತಿದ್ದರಂತೆ. ತಂದೆಯ ಮರಣದ ನಂತರ ಇವನ ಭ್ರಾತೃ ಬೌದ್ಧ ಧರ್ಮದಕಡೆ ತಿರುಗಿ, ಅಲ್ಲಿಯ ಒಂದು ವಿಹಾರದಲ್ಲಿ ಬೌದ್ಧ ಭಿಕ್ಕುವಾದನಂತೆ. ಹದಿಮೂರು ವರ್ಷದ ವಯಸ್ಸಿಗೆ ಇವನೂ ಬೌದ್ಧ ಧರ್ಮಕ್ಕೆ ಬದಲಾವಣೆ ಹೊಂದಿದನಂತೆ.

ಇವನ ವಯಸ್ಸು ಸುಮಾರು ಹದಿನೆಂಟು ವರ್ಷಗಳಾದಾಗ ಇವನ ದೇಶದಲ್ಲಿ ಯುದ್ಧ ಆರಂಭವಾಗಿ, ಇವನು ಪರ್ವತ ಪ್ರದೇಶದಲ್ಲಿ ಅಡಗಬೇಕಾಯಿತಂತೆ. ಅಲ್ಲಿ ಆಬ್ಧಿಧರ್ಮಕೋಶಶಾಸ್ತ್ರ ಇತ್ಯಾದಿ ಬೌದ್ಧ ತಂತ್ರಗಳ ಅಧ್ಯಯನ ಮಾಡಿದನಂತೆ. ಇಪ್ಪತ್ತರ ವಯಸ್ಸಿಗೆ ಇವನು ಬೌದ್ಧ ಭಿಕ್ಕು ಎನಿಸಿದನಂತೆ. ಆ ಗ್ರಂಥಗಳಲ್ಲಿ ಅನನ್ವಯಗಳನ್ನು ಕಂಡು, ಇದನ್ನು ಇವನ ಗುರುಗಳು ಇವನಿಗೆ ವಿವರಿಸಲಾರರಾದ ಕಾರಣ ಇವನಿಗೆ ಆ ತಥಾಗಥನ ಜನ್ಮಸ್ಥಾನಕ್ಕೇ ಬಂದು ಬೌದ್ಧಧರ್ಮಾಚರಣೆಗಳನ್ನು ಕಲಿಯಬೇಕೆಂಬ ಹಂಬಲ ಉಂಟಾಯಿತಂತೆ.

ಅಂತೆಯೇ ಹೊರಡಲು ನಾಡಿನ ರಾಜನ ಅನುಮತಿ ಕೇಳಿದಾಗ ರಾಜನು ಇವನಿಗೆ ಹೋಗುವ ಅನುಮತಿ ಕೊಡಲಿಲ್ಲವಂತೆ. ಇಪ್ಪತ್ತೇಳರ ವಯಸ್ಸಿಗೆ ರಾಜಾಜ್ಞೆಯನ್ನು ಮೀರಿ ಬುದ್ಧನ ಬೀಡಿಗೆ ಪ್ರಯಾಣ ಹೊರಟನಂತೆ. ಹಗಲೆಲ್ಲ ಅಡಗಿ ರಾತ್ರಿಯಲ್ಲಿ ರೇಶ್ಮೆ ರಸ್ತೆಯನ್ನು ಹಿಡಿದು, ಮಾರ್ಗದರ್ಶಕರು, ಜೊತೆಗಾರರು ಯಾರೂ ಇಲ್ಲದೆ ಒಬ್ಬನೇ ಪ್ರಯಾಣ ಮಾಡುತ್ತ, ಸುಮಾರು ಮಾಸಗಳ ನಂತರ ದೇಶದ ಸೀಮೆ ಪ್ರದೇಶಕ್ಕೆ ಬಂದನಂತೆ. ಆ ಸೀಮೆ ಪ್ರದೇಶದ ಸಾಮಂತ ರಾಜನೂ ಬೌದ್ಧ ಧರ್ಮ ಅನುಯಾಯಿಯಂತೆ. ಇವನನ್ನು ಆದರದಿಂದ ಕಂಡರೂ ಇವನನ್ನು ಮುಂದೆ ಸಾಗಲು ಬಿಡಲಿಲ್ಲವಂತೆ. ಆಗ ಇವನು ಅನ್ನಾಹಾರಗಳನ್ನು ತ್ಯಜಿಸಿ ಸತ್ಯಾಗ್ರಹ ನಡೆಸಿದ ನಂತರ, ಆ ರಾಜ ಇವನನ್ನು ಮುಂದೆ ಸಾಗಲು ಬಿಡಲೇಬೇಕಾಯಿತಂತೆ. ಈ ಸಾಮಂತನಿಂದ ರಾಜಾಜ್ಞೆ ಪಡೆದು, ಪರಿಚಯ ಪತ್ರಗಳನ್ನು ಹೊತ್ತು ತನ್ನ ಯಾಣವನ್ನು ಪುನರಾರಂಭಿಸಿದನಂತೆ. ಪಕ್ಷಿ ಹಾರುವಂತೆ ಅವನ ದೇಶ ಜಂಬೂದ್ವೀಪಕ್ಕೆ ಬಹು ಸಮೀಪವಾದರೂ, ಮಧ್ಯೆ ಹಿಮಾಚಲ ಪರ್ವತಗಳು ನಿಂತ ಕಾರಣ ಸಾರ್ಥಗಳು ಸಂಚರಿಸುವ ರೇಶ್ಮೆ ರಸ್ತೆಯನ್ನು ಹಿಡಿದು ನಮ್ಮ ನಾಡನ್ನೇ ಸುತ್ತಿ ಪಶ್ಚಿಮದಿಂದ ಬರಬೇಕಾಯಿತಂತೆ.

ಅಗ್ನಿ, ಕುಛ, ಬಾಲುಕ, ಛಜ, ಸುತೃಷ್ಣ, ಸಮರಖಂಡ, ಬೊಖಾರ, ಕೇಶ, ಘರ್ಮ, ಬಾಮಿಯಾಣಗಳನ್ನು ದಾಟಿ ಕೊನೆಗೆ ಕಪಿತ್ಥಕ್ಕೆ ಬಂದನಂತೆ. ಕಪಿತ್ಥದಲ್ಲಿ ಕುಶಾನ ಅರಸರ ಬೌದ್ಧ ಧರ್ಮಾಚರಣೆಗಳನ್ನು ಅಖ್ಯಾನ ಮಾಡುತ್ತ ಪರ್ವತಗಳ ಮೇಲಿನ ಹಿಮ ಕರಗುವವರೆಗು ಕಾಯ್ದು ನಿಲ್ಲಬೇಕಾಯಿತಂತೆ. ಕೊನೆಗೆ ಗ್ರೀಷ್ಮ ಋತು ಬಂದೊಡನೆ ಹಿಮವೆಲ್ಲ ಕರಗಿ ಇವನಿಗೆ ಮುಂಬರುವ ಅವಕಾಶವಾಯಿತಂತೆ. ಇಷ್ಟೆಲ್ಲ ಕಷ್ಟಪಟ್ಟು ಕೊನೆಗು ಜಂಬೂದ್ವೀಪವನ್ನು ತಲುಪಿದ್ದ. ಬಂದ ಕೂಡಲೆ ಅವನು ಇಲ್ಲಿಯ ರೀತಿ ರಿವಾಜುಗಳನ್ನು ಕಲಿಯ ತೊಡಗಿದನಂತೆ. ದೇಶದ ಹೆಸರು, ವಿಸ್ತಾರ, ಹವಾಮಾನ, ಅಳತೆಗಳು, ದಿನ-ತಿಥಿ ಇತ್ಯಾದಿಗಳು, ಆಸನಗಳು, ಒಡವೆ ವಸ್ತ್ರಗಳು, ಶುಚಿ-ಶುದ್ಧತೆಯ ಆಚರಣೆ, ಲಿಪಿ, ಪುಸ್ತಗಳು, ಹಾಗು ಶಿಕ್ಷಣ, ಬೌದ್ಧ ಧರ್ಮದ ಶಿಸ್ತು, ರಾಜ ಮನೆತನಗಳು, ಶಸ್ತ್ರಾಸ್ತ್ರಗಳು, ಅಧಿಕಾರ ಆಡಳಿತ, ಸೌಜನ್ಯತೆಯ ಆಚಾರಗಳು, ವೈದ್ಯಶಾಸ್ತ್ರ ಚಿಕಿತ್ಸೆ-ಔಷಧಿಗಳು, ಗಿಡ, ಮರ, ಭೋಜನಗಳು, ಎಲ್ಲವನ್ನೂ ಮೊದಲು ನೋಡಿ ಅಖ್ಯಾನ ಮಾಡಿದನಂತೆ.

ನಂತರ ಮತ್ತೆ ಹೊರಟು, ಲಂಘಣ, ನಾಗರಹಾರ, ಗಾಂಧಾರ, ಪುಷ್ಕಲಾವತಿ, ಉದಯನ, ತಕ್ಷಶಿಲೆ, ಸಿಂಹಪುರ, ಉರಶ ದೇಶಗಳನ್ನು ಹಾಯ್ದು ಕಾಶ್ಯಪರ ನಾಡಾದ ಕಾಶ್ಮೀರ ದೇಶವನ್ನು ಸೇರಿದನಂತೆ. ಕಾಶ್ಮೀರ ಇವನಿಗೆ ಬಹಳ ಹಿಡಿಸಿ ಸ್ವಲ್ಪ ಕಾಲ ಅಲ್ಲೇ ಇದ್ದನಂತೆ. ಬಹು ಸುಂದರ ಪ್ರದೇಶವೆಂದು ಹೊಗಳಿದ. ಕಾಶ್ಮೀರದಿಂದ ಹೊರಟು ಪೂನಚ, ರಾಜಪುರಿ, ಟಕ್ಕ, ಚೀನಪತಿ, ಮಾರ್ಗವಾಗಿ ಈಗ ಜಾಲಂಧರಕ್ಕೆ ಬಂದಿದ್ದನಂತೆ. ಇಷ್ಟೆಲ್ಲ ಅರಗಿಸಿಕೊಳ್ಳಲು ನನಗೆ ಸ್ವಲ್ಪ ಹೊತ್ತು ಬೇಕಾಯಿತು.

"ನಿನ್ನ ಕತೆಯೇನು? ನೀನೆಲ್ಲಿಯವನು? ಇಲ್ಲಿಗೆ ಹೇಗೆ ಬಂದಿರುವೆ?" ಎಂದು ಕೇಳಿದ.

ನನ್ನ ಗೂಢಚರ್ಯೆ ವೃತ್ತಿಯೊಂದನ್ನು ಬಿಟ್ಟು ನಾನೂ ನನ್ನ ಕತೆಯನ್ನು ಹೇಳಿದೆ. ಬಳಿಕ

"ನಿನ್ನ ಗುರಿ ಏನು? ಮುಂದೆ ಏನು ಮಾಡುವ ಆಶಯ ನಿನಗೆ" ನಾನು ಅವನನ್ನು ಕೇಳಿದೆ

"ಈಗಷ್ಟೆ ಈ ದೇಶದ ಪ್ರಯಾಣ ಆರಂಭಿಸಿರುವೆ. ಇನ್ನೂ ಇಲ್ಲಿಯ ರಾಜ್ಯಗಳನ್ನು, ವಿಶೇಷವಾಗಿ ನಾಳಂದಾ, ಖುಶಿನಗರ, ಕಪಿಲಾವಸ್ತು ಹಾಗು ಬೋಧಗಯ ನೋಡುವೆ. ನಂತರ ಸಮಯವಾದರೆ ದಕ್ಷಿಣಾಪಥ" ಎಂದು ಹೇಳಿದ.

ಕೊಂಚ ಹಿಂಜರಿದು "ಮಿತ್ರ ನೀನು ನನ್ನಂತೆ ದೇಶ ನೋಡಲು ಹೊರಟಿರುವೆ. ನಾವಿಬ್ಬರು ಏಕೆ ಜೊತೆಯಲ್ಲಿ ಹೋಗಬಾರದು? ನನಗಾದರೋ ಇಲ್ಲಿಯ ಭಾಷೆ ಬರುವುದಿಲ್ಲ. ನಿನಗಂತೂ ಸಂಸ್ಕೃತ ಮಾತನಾಡಲು ಬರುತ್ತದೆ. ನಿನ್ನ ಆಸೆಯೂ ಪೂರೈಸಿದಂತಾಗುತ್ತದೆ, ನನಗೂ ಜೊತೆಗಾರ ಹಾಗು ಭಾಷಾಂತರಗಾರ ಸಿಕ್ಕಿದಂತಾಗುತ್ತದೆ. ನನ್ನ ಬಳಿ ಹೇಗಿದ್ದರೂ ರಾಜಾಜ್ಞೆ ಹಾಗು ಪರಿಚಯ ಪತ್ರಗಳಿವೆ. ಎಲ್ಲೆಡೆ ಜೊತೆಗೇ ಹೋಗಬಹುದು" ಎಂದ

ನಾನು ಸ್ವಲ್ಪ ಕಾಲ ಯೋಚಿಸಿದೆ "ಸಧ್ಯಕ್ಕೆ ನಿನ್ನೊಡನೆ ಬರಲು ನನಗೇನು ಅಭ್ಯಂತರವಿಲ್ಲ. ಆದರೆ ಎಷ್ಟು ಕಾಲ ನಿನ್ನೊಡನೆ ಬರುವೆನೆಂದು ಹೇಳಲಾರೆ. ಏನಾದರೂ ಆವಿಷ್ಕರಣ ಬಂದರೆ ನಾನು ನನ್ನ ದಾರಿ ಹಿಡಿಯಬೇಕು" ಎಂದು ಉತ್ತರಿಸಿದೆ. ಇವನೊಡನೆ ನಿರಾಯಾಸವಾಗಿ ಪರ್ಯಟನೆ ಆಗುವುದೆಂದೆನಿಸಿತು. ಆದರೆ ಇವನೊಡನೆ ಒಗ್ಗದಿದ್ದರೆ ಕಟ್ಟುಬೀಳದಿರಲು ಈ ರೀತಿ ಉತ್ತರಿಸಿದ್ದೆ.

ನನ್ನ ಮಾತು ಕೇಳಿದೊಡನೆಯೇ ಕುಳಿತಿದ್ದ ಅವನು ಎದ್ದು ನಗುತ್ತ, ಚಪ್ಪಾಳೆ ತಟ್ಟುತ್ತ ಕುಣಿಯ ತೊಡಗಿದ. "ನನ್ನ ಜೀವ ಉಳಿಸಿದೆ ನೀನು. ಈಗ ನನಗೆ ಆ ಋಣ ತೀರಿಸುವ ಅವಕಾಶ ಮಾಡಿಕೊಟ್ಟಿರುವೆ. ನೀನು ಇಲ್ಲಿಯೇ ಇರು. ನಾನು ಸಂಘಾರಾಮದಿಂದ ನನ್ನ ವಸ್ತುಗಳನ್ನು ತೆಗೆದುಕೊಂಡು ಬರುವೆ. ನಾಳೆಯೇ ಇಲ್ಲಿಂದ ಹೊರಡೋಣ" ಎಂದ

ನಾನು "ಹಾಗೆಯೇ ಆಗಲಿ" ಎಂದು ಉತ್ತರಿಸಿದೆ.

ಅಂದು ರಾತ್ರಿ ಅವನು ಎಲ್ಲಿಗೋ ಹೊಡ. ನಾನು ದೇವಾಲಯದ ಜಗುಲಿಯ ಮೇಲೇ ಮಲಗಿದ್ದೆ. ಮಾರನೆಯ ದಿನ ನಾನು ನದಿಯಲ್ಲಿ ಸ್ನಾನ ಸಂಧ್ಯಾವಂದನೆ ಮುಗಿಸಿಬರುವಷ್ಟರಲ್ಲಿ ಅವನು ದೇವಾಲಯಕ್ಕೆ ಬಂದಿದ್ದ. ಕುದುರೆಗಳ ಏರ್ಪಾಡೂ ಮಾಡಿದ್ದ. ಅವನಿಗೆ ಎರಡು ಕುದುರೆಗಳು - ಒಂದು ಅವನು ಸವಾರಿ ಮಾಡಲು ಮತ್ತೊಂದು ಅವನ ವಸ್ತು-ಪುಸ್ತಕಗಳಿಗೆ. ಅವನೊಡನೆ ಇಬ್ಬರು ರಾಜಭಟರೂ ಇದ್ದರು. ಅವರು ನಮ್ಮ ಸುರಕ್ಷೆಗಾಗಿ ನಮ್ಮೊಡನೆ ಮುಂದಿನ ರಾಜ್ಯದ ವರೆಗು ಬರುವವರಿದ್ದರು. ನನಗೂ ಒಂದು ಕುದುರೆಯನ್ನು ಕರೆತಂದಿದ್ದ. ಕುದುರೆ ಏರಿ ಹೊರಟೆವು. ನನ್ನ ಮಿತ್ರ ಬ್ರಾಹ್ಮಣನಾದರೂ ನನ್ನ ಅಶ್ವಾರೋಹಣ ಚನ್ನ ಎಂದು ಹೇಳಿದ. ನಾನು ಅದಕ್ಕೆ ಏನೂ ಹೇಳಲಿಲ್ಲ. ನಮ್ಮ ಮುಂದಿನ ನಿಲುವು ಕುಲೂತ ಎಂಬ ರಾಜ್ಯವಾಗಿತ್ತು.