ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೭)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೭)

ಬರಹ

*****ಭಾಗ ೧೭

ಕೆಲವೇ ಕ್ಷಣಗಳು ಕಳೆದಿರಬೇಕು; ನನಗೆ ಪುನಃ ಜ್ಞಾನ ಬಂದಾಗ ನಾನಿನ್ನೂ ಅಲ್ಲಿಯೇ ಬಿದ್ದಿದ್ದೆ, ಆದರೆ ನನ್ನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ನನ್ನನ್ನು ಸುತ್ತುವರಿದ ಭಟರು ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಂತಿತ್ತು. ನನಗೂ ಕಣ್ಣು ಬಿಡಲು ಸಾಧ್ಯವಾಗಲಿಲ್ಲ; ಶಿರವು ನೋವಿನಿಂದ ಸಿಡಿದುಹೋಗುತ್ತಿದ್ದಂತಿತ್ತು. ಅಲುಗಾಡದೆ ಹಾಗೆಯೇ ಬಿದ್ದಿದ್ದೆ.

ಒರ್ವ ಭಟ ಘರ್ಜಿಸಿದ "ಎಳೆದುಕೊಂಡು ನಡೆಯಿರಿ ಅವನನ್ನು. ಅರಮನೆಯ ಕಾರಾಗೃಹಕ್ಕೆ ತಳ್ಳಿ. ನಾಯಕನು ಅವನನ್ನು ನಾಳೆ ವಿಚಾರಿಸುವನಂತೆ. ಅಲ್ಲಿಯ ವರೆಗೆ ಅವನಿಗೆ ದಿನಕ್ಕೆ ಒಂದು ಹೊತ್ತು ಆಹಾರ ಮಾತ್ರ ಕೊಡಬೇಕೆಂದು ಆಜ್ಞೆ ಬಂದಿದೆ."

ಅಂತೆಯೇ ನನ್ನ ಕೈಗಳನ್ನು ಮಾತ್ರ ಬಿಚ್ಚಿ ಇಬ್ಬರು ಭಟರು ನನ್ನ ತೋಳುಗಳನ್ನು ತಮ್ಮ ಹೆಗುಲಿನ ಮೇಲೆ ಇರಿಸಿ ನನಗೆ ಆಧಾರ ನೀಡಿದರು. ಕಾಲು ಕಟ್ಟಿದ್ದಂತೆಯೇ ನನ್ನನ್ನು ಊರಿನೊಳಗೆ ಎಳೆದು ಒಯ್ದರು. ಇಷ್ಟು ಹೊತ್ತಿಗೆ ಆ ದಿವಾಕರ ಪೂರ್ವದಲ್ಲಿ ಉದಿಸುತ್ತಿದ್ದ; ಜನ ಸಂಚಾರ ಆರಂಭವಾಗುತ್ತಿತ್ತು. ನನ್ನನ್ನು ಒಂದು ಸಣ್ಣ ಕತ್ತಲೆ ಕಾರಾಗೃಹಕ್ಕೆ ತಳ್ಳಿ, ಕಾಲಿಗೆ ಕಟ್ಟಿದ ಹಗ್ಗಗಳನ್ನು ಬಿಚ್ಚಿ. ಬಾಗಿಲನ್ನು ಬೀಗ ಹಾಕಿದರು.

ತಲೆಯ ಪೆಟ್ಟಿನಿಂದಲೋ ಏನೋ ಅಂದು ನಾನು ಹೆಚ್ಚಾಗಿ ನಿದ್ದೆಯೇ ಮಾಡಿದೆ. ಯಾರೂ ಆಹಾರ-ನೀರುಗಳನ್ನೂ ತಂದು ಕೊಡಲಿಲ್ಲ. ರಾತ್ರಿಯಾಗಿದ್ದಿರಬಹುದು ಎಂದುಕೊಂಡೆ, ಕೊನೆಗೆ ಕಾರಾಗೃಹದ ಬಾಗಿಲು ತೆರೆದ ಶಬ್ಧವಾಯಿತು. ಭಟನೊಬ್ಬ ಸ್ವಲ್ಪ ಅನ್ನ ನೀರುಗಳನ್ನು ತಂದಿದ್ದ. "ಇದನ್ನು ತಿನ್ನು, ನಂತರ ನಾಯಕನು ನಿನ್ನೊಡನೆ ಮಾತನಾಡಬೇಕು ಎಂದು ಹೇಳಿದ್ದಾನೆ" ಎಂದು ಹೇಳಿ ಅಲ್ಲಿಯೇ ನಿಂತ.

"ನೀವು ಯಾರು? ನನ್ನನ್ನೇಕೆ ಬಂಧಿಸಿರುವಿರಿ?" ಅವನನ್ನು ಕುರಿತು ಕೇಳಿದೆ. ಅವನೇನು ಉತ್ತರಿಸಲಿಲ್ಲ.

ಅವನು ನನಗಾಗಿ ಕಾಯುತ್ತಿದ್ದಾನೆಂದು ಅರಿತು ಬೇಗನೇ ಅವನು ತಂದಿದ್ದ ಭೋಜನವನ್ನು ತಿಂದೆ. ಬಳಿಕ ಅವನು ನನ್ನ ಕೈಗಳನ್ನು ಪುನಃ ಕಟ್ಟಿ ಕಾರಾಗೃಹದಿಂದ ಹೊರಟೆವು. ಬಾಗಿಲಲ್ಲಿ ನಿಂತಿದ್ದ ಮತ್ತೊಬ್ಬ ಭಟ ನನ್ನ ಹಿಂದೆಯೇ ಬಂದ. ನನಗಾಗಿ ಇಷ್ಟು ಕಾವಲು ಏಕೆಂದು ನನಗೆ ಅರ್ಥವಾಗಲಿಲ್ಲ. ಮೆಟ್ಟಲುಗಳನ್ನು ಹತ್ತಿ ಹೋಗಿ ದೀಪ ಉರಿಯುತ್ತಿದ್ದ ಒಂದು ಸಣ್ಣ ಕೋಣೆಯೊಳಗೆ ನನ್ನನ್ನು ತಳ್ಳಿ, ಬಾಗಿಲಾಚೆ ಇಬ್ಬರು ಭಟರೂ ನಿಂತರು.

ಸ್ವಲ್ಪವೇ ಹೊತ್ತಿನಬಳಿಕ ಒರ್ವ ದಳಪತಿಯಂತೆ ವೇಷಭೂಷಣಗಳನ್ನು ತೊಟ್ಟ ವ್ಯಕ್ತಿ ಕೋಣೆಗೆ ಬಂದ. ಭಟರು ಅವನಿಗೆ ತಲೆ ಬಾಗುವುದನ್ನು ನೋಡಿ ಇವನೇ ಅವರ ನಾಯಕನಿರಬೇಕೆಂದು ಊಹಿಸಿದೆ. ಅವನು ಸಿಡುಕುತ್ತಲೇ ಬಂದು ಕೆಲ ಕ್ಷಣಗಳ ಕಾಲ ನನ್ನನ್ನೇ ದಿಟ್ಟಿಸಿ ನೋಡತೊಡಗಿದ. ಬಳಿಕ

"ಹೂಂ... ಇದೇನು ಹೊಸ ವೇಷವೋ?" ಎಂದು ಪ್ರಾಕೃತ ಭಾಷೆಯಲ್ಲಿ ಕೇಳಿದ

"ವೇಷ? ಇದೇ ನನ್ನ ರೂಪ. ನಾನಿರುವುದೇ ಹೀಗೆ - ಯಾವ ವೇಷವನ್ನೂ ಧರಿಸಿಲ್ಲ ನಾನು. ನೀವುಗಳು ಯಾರು? ನನ್ನನ್ನೇಕೆ ಬಂಧಿಸಿದ್ದೀರಿ?" ಎಂದು ನನಗೆ ತಿಳಿದ ಪ್ರಾಕೃತ ಹಾಗು ಸಂಸ್ಕೃತಗಳ ಮಿಶ್ರಿತ ಭಾಷೆಯಲ್ಲಿ ಪ್ರತಿ ಪ್ರಶ್ನೆ ಕೇಳಿದೆ

"ಬಾಯಿಕಟ್ಟು! ಪ್ರಶ್ನೆ ನಾನು ಕೇಳುವೆ, ನೀನು ಉತ್ತರ ಮಾತ್ರ ಹೇಳು" ಎಂದು ಘರ್ಜಿಸಿದ. ಕೆಲ ಕ್ಷಣಗಳ ಬಳಿಕ "ನೀನು ನಿಜವಾದ ಬ್ರಾಹ್ಮಣನೆಂದು ನಾನು ಒಪ್ಪುವುದಿಲ್ಲ. ಗುಪ್ತವೇನು ಇಲ್ಲದಿದ್ದರೆ ನಿನ್ನನ್ನು ಹುಡುಕಿಕೊಂಡು ಬಂದಾಗ ಏಕೆ ತಪ್ಪಿಸಿಕೊಂಡು ಓಡಿದೆ" ಎಂದ.

ನನ್ನ ಬಳಿ ಇದಕ್ಕೆ ಉತ್ತರವಿರಲಿಲ್ಲ. ಸ್ವಲ್ಪ ಮೌನ ತಾಳಿದ ಬಳಿಕ ಪುನಃ ಅವನೇ "ಗೂಢಚಾರರಿಗೆ ನಮ್ಮ ರಾಜ್ಯದಲ್ಲಿ ಒಂದೇ ಶಿಕ್ಷೆ - ಮರಣದಂಡನೆ" ಎಂದ. ದೀಪದ ಬೆಳಕಿನಲ್ಲ ನನ್ನ ಮುಖಭಾವವನ್ನೇ ದಿಟ್ಟಿಸಿ ನೋಡುತ್ತಿದ್ದಂತಿತ್ತು.

ನನಗೆ ಒಂದು ಕ್ಷಣ ಕಸಿವಿಸಿಯಾದರೂ ಉದಾಸೀನದಿಂದಲೇ ಉತ್ತರಿಸಿದೆ "ಹೌದೇ? ನನಗೇಕೆ ಹೇಳುತ್ತಿದ್ದೀರಿ?"

ಅವನು ಕಿಡಿಕಿಡಿಯಾದ "ಆಟಗಳು ಸಾಕು. ನೀನು ಪುಲಿಕೇಶಿಯ ಗೂಢಚಾರನೆಂದು ನಮಗೆ ತಿಳಿದಿದೆ. ಈಗ ನಮ್ಮ ರಾಜ್ಯಕ್ಕೇಕೆ ಬಂದಿರುವೆ?"

"ಗೂಢಚಾರ? ನಾನು? ನಿಮಗೆಲ್ಲೋ ಮರುಳು. ನಾನು ಮಹಾಚೀನ ಯಾತ್ರಿಕನೊಬ್ಬನ ಭಾಷಾನುವಾದಕಾರ. ಬೇಕಿದ್ದರೆ ಅವನನ್ನೇ ಕೇಳಿ ನೋಡಿ" ಎಂದೆ

"ಮುಚ್ಚು ಬಾಯಿ. ನಮಗೆ ಯಾರನ್ನೂ ಕೇಳುವ ಅಗತ್ಯವಿಲ್ಲ. ಸತ್ಯವನ್ನು ಹೇಳಿದರೆ ಪೀಡೆರಹಿತ ಸಾವು, ಇಲ್ಲವಾದರೆ ಪೀಡೆಯೊಂದಿಗೆ ಸಾವು" ಎಂದು ಅರಚಿದ.

"ನಾನಾದರೋ ಬ್ರಾಹ್ಮಣ. ಬ್ರಾಹ್ಮಣ ಎಲ್ಲಿಯಾದರೂ ಗೂಢಚಾರನಾಗಲು ಸಾಧ್ಯವೇ?" ಎಂದು ಅವನೊಂದಿಗೆ ತಿಳುವಳಿಕೆ ಪ್ರಯತ್ನಿಸಿದೆ.

"ನಮಗೊಂದು ಈ ರೀತಿಯ ಸನ್ನಿವೇಷ ತಿಳಿದಿದೆ. ದಕ್ಷಿಣದಲ್ಲಿ ಪುಲಿಕೇಶಿಯ ರಾಜ್ಯದಲ್ಲಿ ಅವನ ಬೇಟೆ ತಪ್ಪಿಸಿ, ಸೆರೆಗೊಳಗಾಗಿ, ನಂತರ ಕಾರಾಗೃಹದಿಂದಲೇ ಗೂಢಚಾರನಾಗಿ ಹೊರಬಂದು, ವೇಷ ಬದಲಾಯಿಸಿಕೊಂಡು ನರ್ಮದಾ ತೀರದ ವರಾಹಪುರಿಯಲ್ಲಿದ್ದು ನಮ್ಮ-ಪುಲಿಕೇಶಿಯ ನಡುವಿನ ಯುದ್ಧದಲ್ಲಿ ನಮ್ಮ ವಿರುದ್ಧ ಗೂಢಚರ್ಯೆಯ ಕೆಲಸ ಮಾಡಿದ ಒಬ್ಬ ಬ್ರಾಹ್ಮಣನ ವಿಚಾರ ನಮಗೆ ತಿಳಿದಿದೆ" ಎಂದು ದೊಡ್ಡ ಕತೆಯನ್ನೇ ಹೇಳಿಬಿಟ್ಟ.

ನನಗೀಗ ಅರ್ಥವಾಯಿತು. "ಹಾಗಾದರೆ ..." ನಾನು ಅರ್ಧಕ್ಕೆ ವಾಕ್ಯ ನಿಲ್ಲಿಸಿದೆ.

"ನೀನು ಆ ಗೂಢಚಾರ ಬ್ರಾಹ್ಮಣ ಎಂದು ನಮಗೆ ಗೊತ್ತು. ನಾವು ಹರ್ಷ ಚಕ್ರವರ್ತಿಯ ಪಡೆಯವರು" ಎಂದ.

ನನ್ನ ಗುಟ್ಟು ರಟ್ಟಾಗಿದೆ ಎಂದು ನನಗೆ ಗೊತ್ತಾಯಿತು. ಇವರೊಂದಿಗೆ ವಾದ ಮಾಡಿ, ನಾನು ಆ ಗೂಢಚಾರನಲ್ಲ ಎಂದು ಪ್ರಮಾಣ ಮಾಡಿಸಲೂ ಸಾಧ್ಯವಿರಲಿಲ್ಲ. ನನ್ನ - ಯಾವುದೇ ಗೂಢಚಾರನ - ಬೆಂಬಲಕ್ಕೆ ಯಾವ ರಾಜ್ಯದವರೂ ಬರುವುದಿಲ್ಲವೆಂದೂ ಅರಿತಿದ್ದೆ. ಮುಂದ ನನ್ನ ಪಾಡೇನು ಎಂದು ಯೋಚಿಸತೊಡಗಿದೆ.

"ಈಗ ಹೇಳು. ಇಲ್ಲಿಗೇಕೆ ಬಂದಿರುವೆ? ಈಗೇನು ಕುತಂತ್ರದ ಯೋಜನೆ ಹಾಕುತ್ತಿದ್ದಾನೆ ನಿಮ್ಮ ಮಹಾರಾಜ? ಹೇಳು" ಮತ್ತೆ ಅರಚಿದ.

ನಾನು ಗೂಢಚಾರನೆಂದು ಒಪ್ಪಿಕೊಳ್ಳಲಿಲ್ಲ. ನನ್ನ ವಿಷಯ ಕುರಿತು ವಾತಾಪಿಯಲ್ಲೇ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಇನ್ನು ಇವನಿಗೆ ಹೇಗೆ ತಿಳಿಯಿತು ಎಂದು ನನಗೆ ಅರ್ಥವಾಗಲಿಲ್ಲ. "ನಾನು ಮೊದಲೇ ಹೇಳಿದಂತೆ ಮಹಾಚೀನಾ ದೇಶದ ಪ್ರಯಾಣಿಕನೊಡನೆ ಅವನ ಭಾಷಾಂತರಕಾರನಾಗಿ ಬಂದಿರುವೆ ಅಷ್ಟೆ. ಬೇರೇನೂ ನನಗೆ ತಿಳಿಯದು" ಎಂದೆ.

"ಸರಿ. ಯಾರಲ್ಲಿ" ಎಂದು ಕಾವಲುಗಾರರನ್ನು ಕೂಗಿದ. "ಇವನು ಹೇಳುವವನಲ್ಲ. ಇವನನ್ನು ಕರೆದೊಯ್ದು ಊರಾಚೆ ಗಂಗಾನದಿಯ ತೀರದಲ್ಲಿರುವ ದೇಶದ್ರೋಹಿಗಳ ಹಾಗು ಗೂಢಚಾರರ ಕಾರಾಗೃಹಕ್ಕೆ ತಳ್ಳಿ. ಹಲವು ದಿನಗಳು ಅಲ್ಲಿ ಕೊಳೆತರೆ ಬುದ್ಧಿ ಬಂದೀತು. ಈ ಬಾರಿ ಆ ಪುಲಿಕೇಶಿಯ ಕುತಂತ್ರವೇನೆಂದು ತಿಳಿದ ನಂತರ ಇವನಿಗೆ ಮರಣ ವಿಧಿಸುವವರಾಗೋಣ" ಎಂದು ಹೇಳಿ ಹೊರಟು ಹೋದ.

ಅಂತೆಯೇ ಭಟರು ಕೋಣೆಯೊಳಗೆ ಬಂದು ನನ್ನ ತಲೆ ಮತ್ತೆ ಕುಕ್ಕಿದರು. ಈ ಬಾರಿ ನಾನು ಅದಕ್ಕೆ ಸಿದ್ಧನಾಗಿದ್ದೆ. ಕುಕ್ಕುವ ಕ್ಷಣದಲ್ಲಿ ಸ್ವಲ್ಪ ತಲೆ ತಗ್ಗಿಸಿ ಕೇವಲ ಸೂಕ್ಷ್ಮ ಏಟು ಬಿತ್ತು. ಆದರೂ ಮೂರ್ಛೆ ಬಿದ್ದವನಂತೆ ನಟಿಸಿದೆ. ನನ್ನ ಕೈಕಾಲುಗಳನ್ನು ಪುನಃ ಕಟ್ಟಿ ಕುದುರೆಯ ಮೇಲೆ ನನ್ನನ್ನು ಎಸೆಯಲಾಯಿತು. ನಾಲ್ಕು ಭಟರೊಂದಿಗೆ ಊರಾಚೆಯ ಕಾರಾಗೃಹಕ್ಕೆ ಪಯಣ ಸಾಗಿತು.