ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೬)
*****ಭಾಗ ೬
ಅಂದು ಅಲ್ಲೇ ಮಲಗಿದ್ದೆ. ನನಗೀಗ ಮಲಗಲು ಹೆಚ್ಚು ಸಿದ್ಧತೆ ಬೇಕಾಗಿರಲಿಲ್ಲ. ಎಲ್ಲಿಯಂದರಲ್ಲಿ, ಮಲಗುವ ಸಾಮರ್ಥ್ಯ ಬೆಳೆಸಿಕೊಂಡಿದ್ದೆ. ಆದರೆ ಮಲಗಿದಾಗಲೂ ಒಂದು ಕಣ್ಣು ತೆರೆದೇ ಮಲಗಿರುತ್ತಿದ್ದೆ. ಮಾರನೆಯ ದಿನ ಬೆಳಗ್ಗೆ ಎದ್ದು ಹೊರಡಲು ಸಿದ್ಧನಾಗಿ ಕುಳಿತೆ. ನಾನೆಂದೂ ಅಂತಹ ಪ್ರಯಾಣ ಮಾಡಿದವನಲ್ಲ. ಏನೇನು ಸಿದ್ಧತೆಗಳು ಬೇಕೆಂದು ನನಗೆ ತಿಳಿದಿರಲಿಲ್ಲ. ಎಲ್ಲವೂ ಬೇರೆಯಾರಾದರೂ ಮಾಡಬಹುದು, ಇಲ್ಲವಾದರೆ ಹೇಗೋ ಅನುಸರಿಸಿಕೊಂಡು ಹೋಗೋಣವೆಂದು ಹಾಗೇ ಹೊರಡಲು ಸಿದ್ಧನಾದೆ.
ಯಾರಿಗೂ ಏನನ್ನೂ ಹೇಳುವ ಅವಕಾಶ ಸಿಕ್ಕಲಿಲ್ಲ. ಹಾಗೆಯೇ ಹೊರಟು ಸುರಂಗಮಾರ್ಗವಾಗಿ ಊರ ಹೊರಬಿದ್ದು ಮೊದಲೇ ನೇಮಿಸಿದ್ದ ಸ್ಥಳಕ್ಕೆ ಹೋದೆ. ಕುದುರೆ ಕಾದಿತ್ತು, ಜೊತೆಗೆ ಒಬ್ಬ ಭಟನೂ ಇದ್ದ. ಮಾತಿಲ್ಲದೆ ಅವನೊಡನೆ ಹೊರಟೆ. ಸ್ವಲ್ಪ ಪ್ರಯಾಣದ ನಂತರ ಮಹಾಮಂತ್ರಿಗಳೊಡನೆ ಕೂಡಿ ಅಲ್ಲಿಂದ ಒಟ್ಟಿಗೆ ಹೋರಟೆವು.
ನಾವು ಸುಮಾರು ಹದಿನೈದು ಜನ ಒಟ್ಟು. ದಿನ ನಿತ್ಯ ಸಂಜೆ ಯಾವುದಾದರು ನದಿ, ತೊರೆ ಅಥವ ಸರೋವರದ ಬಳಿ ಬಿಡಾರ ಊರುವುದು. ಮುಂಜಾವು ಎದ್ದು ಪ್ರಯಾಣ ಮುಂದುವರೆಸುವುದು. ಊರೂರುಗಳಲ್ಲಿ ಊಟ ಉಪಹಾರಗಳ ವ್ಯವಸ್ಥೆ ಹೇಗೋ ಅಗುತ್ತಿತ್ತು. ಮರಾಠ, ಮಾಳವ ಪ್ರದೇಶಗಳನ್ನು ಹಾಯ್ದು ಕೊನೆಗೆ ನರ್ಮದೆಯ ತೀರವನ್ನು ತಲುಪಿದೆವು. ಇಷ್ಟು ಪ್ರಯಾಣ ಸುಮಾರು ಒಂದು ಮಾಸ ಸಮಯ ತೆಗೆದುಕೊಂಡಿತ್ತು. ನರ್ಮದೆಯ ತೀರದಲ್ಲಿ ಒಂದು ಸಣ್ಣ ಪಟ್ಟಣವಾದ ವರಾಹಪುರಿ ನಮ್ಮ ಗುರಿಯಾಗಿತ್ತು.
ಊರಿನಿಂದ ಹಲವು ಕ್ರೋಶಗಳ ಹಿಂದೆಯೇ ಪರ್ವತಗಳಲ್ಲಿದ್ದ ಒಂದು ಗುಹೆ ಹೊಕ್ಕೆವು. ಇಲ್ಲಿ ಎಲ್ಲರೂ ಊರು ಸೇರುವ ಯೋಜನೆ ಹೂಡಿದೆವು. ಎಲ್ಲರೂ ಒಟ್ಟಿಗೆ ಹೋಗುವಂತಿಲ್ಲ. ಇಬ್ಬಿಬ್ಬರಾಗಿ, ಸಾಧ್ಯವಾದರೆ ಯಾರಾದರೂ ಹೆಂಗಸರೊಡಗೂಡಿ ಇಲ್ಲವಾದರೆ ನಮ್ಮಲ್ಲೆ ಯಾರಾದರು ಹೆಣ್ಣು ವೇಷ ಧರಿಸಿ ರಾತ್ರಿ ಸಮಯಗಳಲ್ಲಿ ಊರು ತಲುಪುವ ಯೋಜನೆಯಾಗಿತ್ತು. ಅದೇ ಊರಿನಲ್ಲಿದ್ದ ನಮ್ಮ ಪಡೆಯ ಒಬ್ಬ ಗೂಢಚಾರನ ಮನೆ ನಮ್ಮ ಕೇಂದ್ರವಾಗುವುದಿತ್ತು.
ಬಂದ ಹಲವು ದಿನಗಳಲ್ಲಿ ನಾವೆಲ್ಲರೂ ನಮ್ಮ ಈ ಕೇಂದ್ರವನ್ನು ಹೇಗೋ ತಲುಪಿದೆವು. ಗೂಢಚಾರರು ತಂದ ಸುದ್ಧಿಗಳಿಂದ ಯಾರಿಗೂ ನಾವು ಬಂದ ವಿಚಾರ ತಿಳಿದಿಲ್ಲವೆಂಬುದು ಖಚಿತವಾಯಿತು. ಮಹಾಮಂತ್ರಿಗಳು ಸ್ವಲ್ಪ ದಿನಗಳ ಕಾಲ ನಮ್ಮೊಡನೆಯೇ ಇದ್ದು ನನಗೆ ಇನ್ನಷ್ಟು ನಿರ್ದೇಶನ ನೀಡಿ ವಾತಾಪಿಗೆ ಹಿಂತಿರುಗಿದರು. ನಾನು ನನ್ನ ವಿಶ್ಲೇಷಣಾ ಕಾರ್ಯವನ್ನು ಆರಂಭಿಸಿದೆ. ನನಗೆ ಕೆಲಸ ಮಾಡಲು ಮನೆಯ ನೆಲಮಾಳಿಗೆಯಲ್ಲಿ ಒಂದು ಸಣ್ಣ ಕತ್ತಲು ಕೋಣೆ ಕೊಡಲಾಗಿತ್ತು. ಮೇಲಿನಿಂದ ನೋಡಿದರೆ ಕಂಬಳಿ ಹಾಸಿದ್ದ ನೆಲ. ಕಂಬಳಿಯ ಕೆಳಗೆ ಒಂದು ಗುಪ್ತ ದ್ವಾರ. ಅದು ನನ್ನ ತಲೆಯ ಮೇಲೆ ತೆರೆಯುತ್ತಿತ್ತು. ಗಾಳಿ ಬರಲು ನಾಲ್ಕಾರು ಸಣ್ಣ ಕಿಂಡಿಗಳು ಬಿಟ್ಟರೆ ಹೊರ ಪ್ರಪಂಚಕ್ಕೆ ಸಂಪರ್ಕವೇ ಇರಲಿಲ್ಲ. ನನಗಾದರೋ ಬಿಡುವಿಲ್ಲದ ಕೆಲಸ.
ಹತ್ತಾರು ಗೂಢಚಾರರು ಸಂದೇಶಗಳನ್ನು ತಂದು ಕೊಡುತ್ತಿದ್ದರು. ಎಲ್ಲವನ್ನೂ ದಿನಕ್ಕೆ ಎರಡು ಬಾರಿ ನನ್ನ ಗೂಡಿನೊಳಕ್ಕೆ ಮೇಲಿನಿಂದ ಹಾಕುತ್ತಿದ್ದರು. ಇವೆಲ್ಲವನ್ನೂ ಓದಿ, ಒಗ್ಗೂಡಿಸಿ, ಸತ್ಯಾಸತ್ಯಗಳನ್ನು ಬೇರ್ಪಡಿಸಿ, ವರದಿ ಬರೆದು, ಅದನ್ನು ಗುಪ್ತ ಲಿಪಿಗೆ ಬದಲಿಸಿ ಮೇಲಕ್ಕೆ ಹಿಂತಿರುಗಿಸುವುದು ನನ್ನ ಕೆಲಸ. ಮೇಲಿನವರು ಅದನ್ನು ನಾ ನಾ ಮಾರ್ಗಗಳಲ್ಲಿ ವಾತಾಪಿಗೆ ಕಳುಹಿಸುತ್ತಿದ್ದರು. ಹೀಗೆಯೇ ನಾಲ್ಕು ಮಾಸಗಳು ಕಳೆದವು. ನನಗೆ ಹರ್ಷರಾಜನ ಚರಿತ್ರೆ, ಇತಿಹಾಸಗಳ ಬಗ್ಗೆ ಎಲ್ಲ ವಿವರಗಳು ತಿಳಿದುಹೋದವು. ತಿಳಿದಂತೆ ನಾನು ಅದರ ವರದಿ ಗುಪ್ತ ಲಿಪಿಯಲ್ಲಿ ತಲುಪಿಸುತ್ತಿದ್ದೆ. ಹರ್ಷರಾಜನ ಜೀವನದ ಬಗ್ಗೆ ಬೇಕಾದಷ್ಟು ಮಾಹಿತಿ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು.
ಹರ್ಷವರ್ಧನನ ತಂದೆ ಪ್ರಭಾಕರವರ್ಧನ ಸ್ಥಾನೇಶ್ವರದ ಅರಸನಾಗಿದ್ದನು. ಪ್ರಭಾಕರವರ್ಧನನ ಹಿರಿಯ ಪುತ್ರ ರಾಜ್ಯವರ್ಧನ; ಹರ್ಷವರ್ಧನ ಕಿರಿಯ ಪುತ್ರ. ರಾಜ್ಯವರ್ಧನ-ಹರ್ಷವರ್ಧನರ ಸಹೋದರಿಯಾದ ರಾಜ್ಯಶ್ರ್‍ಈ ಮೌಖಾರಿ ದೇಶದ ರಾಜ ಗೃಹವರ್ಮನ ವಧುವಾಗಿದ್ದಳು. ಪ್ರಭಾಕರವರ್ಧನನು ಮುಪ್ಪಿನಿಂದ ಮರಣಹೊಂದಿದ ದಿನವೇ ಆ ಸಮಯದಲ್ಲಿ ಮಾಳವ ದೇಶದ ರಾಜನು ಗೌಡದೇಶದ ರಾಜ ಶಶಾಂಕನನ್ನೋಡಗೂಡಿ ಹರ್ಷನ ಶ್ಯಾಲ ಗೃಹವರ್ಮನನ್ನು ಯುದ್ಧದಲ್ಲಿ ಸೋಲಿಸಿ, ಅವನನ್ನು ಕೊಂದು ಅವನ ಪತ್ನಿಯಾದ ರಾಜ್ಯಶ್ರೀಯನ್ನು ಕನ್ಯಾಕುಬ್ಜದಲ್ಲಿ ಬಂಧಿಸಿದ ಸುದ್ಧಿ ಸ್ಥಾನೇಶ್ವರವನ್ನು ಮುಟ್ಟಿತು.
ಪ್ರಭಾಕರವರ್ಧನನ ಹಿರಿಯ ಪುತ್ರ ಹಾಗು ಹರ್ಷರಾಜನ ಹಿರಿಯ ಭ್ರ್‍ಆತೃವಾದ ರಾಜ್ಯವರ್ಧನ ಕೋಪಗೊಂಡು, ಹರ್ಷವರ್ಧನನನ್ನು ಸ್ಥಾನೇಶ್ವರದಲ್ಲಿಯೇ ಉಳಿಯಲು ಒಪ್ಪಿಸಿ, ತಾನೊಬ್ಬನೇ ಸೈನ್ಯದೊಡನೆ ಶಶಾಂಕ ರಾಜನ ಮೇಲೆ ದಂಡೆತ್ತಿ ಯುದ್ಧಕ್ಕೆ ಹೋದನು. ತಂದೆಯನ್ನು ಕಳೆದುಕೊಂಡು, ಶ್ಯಾಲನ ಸಂಹಾರವಾಗಿರುವುದು ತಿಳಿದು ಸಹೋದರಿ ಬಂಧಿತಳಾಗಿರುವುದನ್ನು ಕೇಳಿ, ಭ್ರ್‍ಆತೃ ಯುದ್ಧಕ್ಕೆ ಹೋದಾಗ ಕುಮಾರ ಹರ್ಷವರ್ಧನನಿಗೆ ಕಾಲ ಕಳೆಯಲಾಗದೆ ಮದವೇರಿದ ಆನೆಯಂತಾದನು. ಸ್ವಲ್ಪವೇ ಕಾಲದಲ್ಲಿ ರಾಜ್ಯವರ್ಧನನ ಸೇನಾಧಿಪತಿಯೊಬ್ಬನು ಶೋಕಭಾವದಲ್ಲಿ ಬಂದು "ರಾಜ್ಯವರ್ಧನನು ಮಾಳವ ಸೈನ್ಯವನ್ನು ಸುಲಭವಾಗಿ ಸೋಲಿಸಿದರೂ ಗೌಡರಾಜ ಅವನನ್ನು ಸಂಧಾನಕ್ಕೆಂದು ಕರೆದು ವಂಚನೆಯಿಂದ ಅವನ ಸಂಹಾರ ಮಾಡಿದನು" ಎಂದು ಹೇಳಲು, ಕುಮಾರ ಹರ್ಷನು ಕಿಡಿಕಿಡಿಯಾದನು.
"ಗೌಡ ರಾಜನನ್ನು ಬಿಟ್ಟು ಇಂತಹ ಹೀನ ಕೃತ್ಯವನ್ನು ಬೇರೆ ಯಾರು ಮಾಡಲು ಸಾಧ್ಯ? ಅಗ್ನಿಪುತ್ರನಾದ ದೃಷ್ತದ್ಯುಮ್ನನು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟ ದ್ರೋಣರನ್ನು ಕೊಂದಂತೆ! ಗಂಗಾನದಿಯ ನೊರೆಯಂತೆ ಅಕಳಂಕಿತನಾದ ಹಾಗು ಪರಶುರಾಮನ ವೀರ್ಯವನ್ನು ಮನಸ್ಸಿಗೆ ತರಿಸುವಂತಹ ನನ್ನ ಭ್ರಾತೃವನ್ನು ಕೊಲ್ಲುವ ಸಂಚು ಆ ಅನಾರ್ಯನನ್ನು ಬಿಟ್ಟು ಬೇರೆ ಯಾರ ಮನದಲ್ಲಿ ಬರಲು ಸಾಧ್ಯ? ಗ್ರೀಷ್ಮ ಋತುವಿನ ಸೂರ್ಯ ರಾಜೀವಪುಷ್ಪಗಳ ಸರೋವರಗಳನ್ನು ಬತ್ತಿಸುವಂತೆ ಸ್ನೇಹದಲ್ಲಿ ಕೈಯೊಡ್ಡಿ ನನ್ನ ಅರಸನ ಪ್ರಾಣ ಹೇಗೆ ತಾನೆ ತೆಗೆದಾನು? ಇವನ ಶಿಕ್ಷೆ ಏನಾದೀತು? ಯಾವ ಹುಳುವಾಗಿ ಪುನರ್ಜನಿಸುವನು? ಯಾವ ನರಕಕ್ಕೆ ಬಿದ್ದಾನು? ಯಾವ ಭ್ರಷ್ಟನೂ ಮಾಡದಂತಹ ಕೃತ್ಯವಿದು! ಈ ಪಾಪಿಯ ಹೆಸರನ್ನು ನನ್ನ ಜಿಹ್ವೆಗೆ ತಂದರೇ ನನ್ನ ಜಿಹ್ವೆ ಕಶ್ಮಲವಾಗುವುದು. ಸಣ್ಣ ಗೆದ್ದಲು ಚಂದನದ ಮರವನ್ನು ಕೊರೆಯುವಂತೆ ಯಾವ ವಿಧದಿಂದ ಈ ಕಠಿಣ ಪ್ರಾಣಿ ನನ್ನೊಡೆಯನ ಪ್ರಾಣ ತೆಗೆದ? ಸಿಹಿಯ ಲೋಭದಲ್ಲಿ ನನ್ನ ಭ್ರಾತೃವಿನ ಜೇನುತುಪ್ಪದಂತಹ ಪ್ರಾಣ ತೆಗೆದ ಮೂರ್ಖ, ಬರುತ್ತಿರುವ ಜೇನು ನೊಣಗಳ ಸಮೂಹವನ್ನು ನೋಡಲಿಲ್ಲವೇ? ಈ ದುರುಳ ಪಥಕ್ಕೆ ಬೆಳಕು ಚೆಲ್ಲಿ ಈ ಗೌಡರ ದುಷ್ಟ ತನ್ನ ಮನೆಯ ದೀಪದ ಕಜ್ಜಲದಂತೆ ಕೇವಲ ಮಲಿನ ನಾಚಿಕೆಗೇಡನ್ನೇ ಸಂಪಾದಿಸಿದ್ದಾನೆ. ಉತ್ತಮ ರತ್ನಗಳನ್ನು ಕೆಡಿಸುವ ಇಂತಹ ಕಶ್ಮಲ ರತ್ನವ್ಯಾಪಾರಿಗಳಿಗೆ ಶಿಕ್ಷೆ ಕೊಡುವುದು ಯಾರಿಗೆ ಸೂಕ್ತವಲ್ಲ? ಇವನ ಗತಿ ಇನ್ನೇನಾದೀತು?" ಎಂದೆಲ್ಲ ಹೇಳಿ ತನ್ನ ಕ್ರೋಧ ತೋಡಿಕೊಂಡನಂತೆ.
ಇತ್ತ ರಾಜ್ಯವರ್ಧನನ ಮರಣದಿಂದ ಸಿಂಹಾಸನ ಬರಿದಾಯಿತು. ಅತ್ಯಾದರಣೀಯರಾದ ಮಹಾಮಂತ್ರಿ ಭಂಧಿ ಪಂಡಿತರು "ದೇಶದ ಅನುಲೇಖ ಇಂದು ನಿರ್ಧಾರವಾಗಬೇಕಾಗಿದೆ. ಮಹಾರಾಜನು ಯುದ್ಧದಲ್ಲಿ ಮರಣ ಹೊಂದಿದ್ದಾನೆ, ಆದರೆ ಮಹಾರಾಜನ ಸಹೋದರನಾದ ರಾಜಕುಮಾರನು ಸಕಲ ಗುಣ ಸಂಪನ್ನನಾಗಿರುವನು. ರಾಜಕುಮಾರ ಮಹಾರಾಜನ ವಂಶದವನೇ ಆದರಿಂದ ಪ್ರಜೆಗಳಿಗೆ ಇವನ ಮೇಲೆ ನಂಬಿಕೆಯೂ ಇರುತ್ತದೆ. ಹಾಗಾಗಿ ರಾಜಕುಮಾರನೇ ರಾಜ್ಯಭಾರ ವಹಿಸಿಕೊಳ್ಳಬೇಕೆಂಬುದು ನನ್ನ ಅನಿಸಿಕೆ" ಎಂದು ಹೇಳಿ ಮಂತ್ರಿವರ್ಗದವರೆಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ಸೂಚಿಸಲು ಆಜ್ಞೆಮಾಡಿದರು. ಅವರೆಲ್ಲರೂ ಭಂಧಿ ಪಂಡಿತರ ಸಲಹೆ ಒಪ್ಪಿ ಹರ್ಷವರ್ಧನನನ್ನು ಸಿಂಹಾಸನಕ್ಕೇರಿಸಲು ಇಚ್ಛಿಸಿದರು.
ಅದಕ್ಕೆ ಪ್ರತಿಯಾಗಿ ಹರ್ಷರಾಜನು "ನಿಮ್ಮ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ. ಆದರೆ ಭೂಮಿಯನ್ನು ಎತ್ತಿ ಹಿಡಿದಿರುವ ನಾಗರಾಜನನನ್ನೇ ಹಕ್ಕುದಾರನಾಗಿ ನೋಡುತ್ತಿರುವೆ. ಗ್ರಹಗಳು ಸುತ್ತುತ್ತಿರಲು ಅವುಗಳನ್ನು ನಿಲ್ಲಿಸಲು ನನ್ನ ಭ್ರೂಹಗಳು ಏಳುತ್ತವೆ. ಬಾಗದ ಪರ್ವತಗಳ ಕೇಶಗಳನ್ನೇ ಹಿಡಿದು ಬಗ್ಗಿಸುವ ಬಯಕೆ ನನಗೆ. ಆ ಆದಿತ್ಯನ ಕೈಗಳಿಗೇ ಶಂಖಗಳನ್ನು ಕೊಡುವ ಮನೋರಥ. ರಾಜನೆಂಬ ಬಿರುದಿನಿಂದಲೇ ಉದ್ರಿಕ್ತನಾಗಿ ವ್ಯಾಘ್ರನನ್ನೂ ನನ್ನ ಕಾಲುಮಣೆ ಮಾಡಿಕೊಳ್ಳಬೇಕೆನಿಸುತ್ತದೆ. ನನ್ನ ಮನವು ಕ್ರೋಧದಿಂದ ತುಂಬಿ ಶೋಕಕ್ಕೆ ಸ್ಥಳವೇ ಇಲ್ಲವಾಗಿದೆ. ಶಿಕ್ಷಾರ್ಹನಾದ ಗೌಡರಾಜ ಬದುಕಿರುವುದು ನನ್ನ ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿದೆ. ನಾನು ನಪುಂಸಕನಂತೆ ಅದರ ಒಣಗಿಸಿಕೊಂಡು ಅಳಲಾರೆ. ಆ ಕ್ರೂರ ಪ್ರಾಣಿಯ ಪತ್ನಿಯರ ಈಕ್ಷಣದಲ್ಲಿ ಆಶ್ರುಗಳ ಮಳೆ ಸುರಿಸದಿದ್ದರೆ ನಾನು ಆಚಮಾನವಾದರು ಹೇಗೆ ಮಾಡಲಿ? ಆದರೂ ಆ ಗೌಡರಾಜನ ಚಿತೆಯ ಧೂಮಕ್ಕಾಗಿ ಸ್ವಲ್ಪ ಆಶ್ರು ಕಾದಿರಿಸಿದ್ದೀನಿ. ನನ್ನೊಡೆಯನ ಪಾದದ ಧೂಳಿನ ಸಾಕ್ಷಿಯಾಗಿ ಪ್ರತಿಜ್ಞೆ ಮಾಡುವೆ - ಬರುವ ಕೆಲವೇ ದಿನಗಳಲ್ಲಿ ಗೌಡರನ್ನು ನಿರ್ಮೂಲ ಮಾಡಿ ಅವರ ಬೆಂಬಲಿಗರನ್ನು ಬಂಧಿಸದಿದ್ದರೆ ಪತಂಗ ಹುಳುವಿನಹಾಗೆ ಎಣ್ಣೆಯ ಅಗ್ನಿಯಲ್ಲಿ ಹಾರಿ ಪ್ರಾಣ ತ್ಯಜಿಸುತ್ತಿನಿ." ಎಂಬ ಘೋರ ಪ್ರತಿಜ್ಞೆ ಮಾಡಿದನು. ತನ್ನ ಸಹೋದರಿಯನ್ನು ವಿಧವೆಯಾಗಿಸಿ, ಬಂಧಿಸಿ, ತನ್ನ ಸಹೋದರನನ್ನು ಕೊಂದ ವೈರಿ ಇನ್ನು ಜೀವಂತವಾಗಿರಲು ಸಿಂಹಾಸನವನ್ನೇರಿ ರಾಜನಾಗಲು ನಿರಾಕರಿಸಿ, ರಾಜನ ಕುಮಾರನೆಂದೇ ರಾಯಭಾರ ಹೊತ್ತು ಶಿಲಾದಿತ್ಯನೆಂಬ ಬಿರುದು ಪಡೆದನು.
ಮೊದಲು ಮಾಳವರನ್ನು ಸದೆಬಡೆಯಲು ಹರ್ಷನು ಮಹಾಮಂತ್ರಿ ಭಂಧಿಯನ್ನು ಒಂದು ಅಪಾರ ಸೈನ್ಯದೊಡನೆ ಕಳುಹಿಸಿದನು. ಸ್ವಲ್ಪ ಕಾಲದ ನಂತರ ಭಟನೊಬ್ಬನು ಭಂಧಿ ಪಂಡಿತರು ಮಾಳವ ರಾಜನ ಸೈನ್ಯವನ್ನು ಸೋಲಿಸಿ ಶರಣಾಗತರಾಗುವಂತೆ ಮಾಡಿ ಹತ್ತಿರದಲ್ಲಿಯೇ ಬಿಡಾರ ಊರಿರುವರೆಂದು ಓಲೆ ತಂದು ಹರ್ಷನ ಮುಂದಿಟ್ಟನು. ಈ ಸುದ್ಧಿ ಕೇಳುತ್ತಲೇ ಹರ್ಷನ ಭ್ರಾತೃ ಹಂತದ ಶೋಕ ಮತ್ತೆ ಎಚ್ಚೆದ್ದು, ಭಂಧಿಯನ್ನು ಕಾಯ್ದು ತನ್ನ ಅಂತಃಪುರದಲ್ಲಿ ಕುಳಿತನು. ನಾಲ್ಕಾರು ಸಮಂತರೊಡನೆ ವ್ರಣಗೊಂಡ ಭಂಧಿ ರಾಜನನ್ನು ನೋಡಲು ಬಂದರು. ಅವರನ್ನು ಕಂಡ ಕೂಡಲೆ ರಾಜನು ತೊಡರುತ್ತ ಬಂದು ಅವರನ್ನು ಆಶ್ಲೇಷಿಸಿ ಆಶ್ರುಗಳನ್ನು ಸುರಿಸ ತೊಡಗಿದನು.
ಕೊನೆಗೊಮ್ಮೆ ಇಬ್ಬರು ಸಾಂತ್ವನಗೊಂಡ ನಂತರ ಹರ್ಷನು ರಾಜ್ಯಶ್ರೀಯ ವಿಷಯವನ್ನು ಕುರಿತು ಮಂತ್ರಿಗಳನ್ನು ಕೇಳಿದನು. ಆಗ ಅವರು "ಮಹಾರಾಜ, ರಾಜ್ಯವರ್ಧನನ ಮರಣದನಂತರ ಕನ್ಯಾಕುಬ್ಜವನ್ನು ಗುಪ್ತನೆಂಬ ರಾಜನು ಗ್ರಹಿಸಿದನು ಎಂದು ಜನರ ಮಾತುಗಳಿಂದ ತಿಳಿದುಬಂದಿತು. ಆಗ ಮಹಾರಾಣಿ ರಾಜ್ಯಶ್ರೀ ಬಂಧನದಿಂದ ತಪ್ಪಿಸಿಕೊಂಡು ತನ್ನ ಸಖಿಯರೊಡನೆ ವಿಂಧ್ಯಾ ಪರ್ವತಗಳ ಕಾಡಿಗೆ ಹೊರಟುಹೋದಳಂತೆ. ಅಂದಿನಿಂದ ಹತ್ತಾರು ಶೋಧಕ ವೃಂದಗಳು ಮಹಾರಾಣಿಯನ್ನು ಹುಡುಕಿಕೊಂಡು ಹೋಗಿದ್ದಾರೆ. ಆದರೆ ಯಾರಿಗೂ ಮಹಾರಾಣಿ ಸಿಕ್ಕಲಿಲ್ಲ" ಎಂದು ಹೇಳಿದರು.
ಅದಕ್ಕೆ ಪ್ರತಿಯಾಗಿ ಹರ್ಷವರ್ಧನನು "ಉಳಿದವರಿಗೆ ಸಿಕ್ಕದಿದ್ದರೇನು, ನಾನೇ ಬಿಟ್ಟ ಕೆಲಸಗಳನ್ನು ಬಿಟ್ಟು ವಿಂಧ್ಯಾಚಲಕ್ಕೆ ಹೋಗಿ ರಾಜ್ಯಶ್ರೀಯನ್ನು ಹುಡುಕುವೆ. ಗೌಡರಾಜನ ವಿರುದ್ಧ ನೀವೇ ಹೋಗಿ ಹೋರಾಡಬೇಕು" ಎಂದು ಹೇಳಿ ರಾಜ್ಯದ ಕೆಲಸಗಳಿಗೆ ಜನರನ್ನು ನೇಮಿಸಿ ಕುದುರೆ ಏರಿ ಒಂದು ಸಣ್ಣ ಸೈನಿಕರ ಗುಂಪಿನೊಡನೆ ರಾಜ್ಯಶ್ರೀಯನ್ನು ಹುಡುಕಲು ವಿಂಧ್ಯಾಚಲಕ್ಕೆ ತೆರಳಿದನು. ವಿಂಧ್ಯಾಚಲದಲ್ಲಿ ಭಿಲ್ಲ ಮುಖಂಡನೊಬ್ಬನ ಸಹಾಯದಿಂದ ದಿವಾಕರಮಿತ್ರನೆಂಬ ಬೌದ್ಧ ಭಿಕ್ಕುವಿನ ಬಳಿ ಹೋದನು. ದಿವಾಕರಮಿತ್ರನು ಹರ್ಷರಾಜನನ್ನು ಅಗ್ನಿ ಪ್ರವೇಷ ಮಾಡಲು ಹೊರಟಿದ್ದ ರಾಜ್ಯಶ್ರೀಯ ಬಳಿ ಕರೆದೊಯ್ದು ಭ್ರಾತೃ-ಭಗಿನೀಯರ ಸಂಗಮಕ್ಕೆ ಕಾರಣನಾದನು.
ನಂತರ "ಜಂಬೂದ್ವೀಪದಾದ್ಯಂತ ಎಲ್ಲ ರಾಜರಿಗೆ ಎರಡು ವಿಕಲ್ಪಗಳನ್ನು ಹೇಳಿ. ಕಪ್ಪ ಕಾಣಿಕೆ ಸಲ್ಲಿಸುವುದು ಇಲ್ಲವಾದರೆ ಯುದ್ಧಕ್ಕೆ ಸಿದ್ಧವಾಗುವುದು. ಅವರು ಬೇಕಾದರೆ ತಲೆ ಬಾಗಲಿ ಇಲ್ಲವಾದರೆ ಧನಸ್ಸು ಬಾಗಿಸಲಿ. ತಮ್ಮ ಕರ್ಣಗಳನ್ನು ನನ್ನ ಆಜ್ಞೆಯಿಂದ ಅಲಂಕರಿಸಲಿ ಇಲ್ಲವಾದರೆ ತಮ್ಮ ಧನಸ್ಸು ದೊರಕದಿಂದ ಅಲಂಕರಿಸಿಕೊಳ್ಳಲಿ. ತಮ್ಮ ತಲೆಯಮೇಲೆ ನನ್ನ ಪಾದದ ಧೂಳು ಹೊತ್ತುಕೊಳ್ಲಲಿ ಇಲ್ಲವಾದರೆ ಕಿರೀಟಗಳನ್ನು ಧರಿಸಲಿ. ನನ್ನ ಭ್ರ್‍ಆತೃವಿನ ಹಂತಕರಿಗೆ ಶಿಕ್ಷೆ ವಿಧಿಸಿ, ಸುತ್ತ ಮುತ್ತಲಿನ ದೇಶಗಳಿನ್ನೂ ನಮ್ಮ ಹಿಡಿತಕ್ಕೆ ತಂದುಕೊಳ್ಳುವ ವರೆಗು ನಾನು ನನ್ನ ಬಲಗೈಯಿಂದ ಊಟಮಾಡುವುದಿಲ್ಲ" ಎಂದು ಮತ್ತೊಂದು ಪ್ರತಿಜ್ಞೆ ಮಾಡಿ ಎಲ್ಲರಿಗೂ ಯುದ್ಧಕ್ಕೆ ಸಿದ್ಧರಾಗುವ ಆಜ್ಞೆಮಾಡಿದನು. ಅಂತೆಯೇ ಐದು ಸಹಸ್ರ ಆನೆ, ಎರಡು ಸಹಸ್ರ ರಥ ಹಾಗು ಐವತ್ತು ಸಹಸ್ರ ಪಧಾತಿಗಳ ಸೈನ್ಯದೊಡನೆ ಪೂರ್ವದಿಂದ ಪಶ್ಚಿಮದವರೆಗು ಎಲ್ಲರನ್ನೂ ಸದೆಬಡೆದನು. ಆರು ವರ್ಷಗಳ ಯುದ್ಧಾನಂತರ ಇಡೀ ಉತ್ತರಾಪಥವನ್ನು ತನ್ನ ಆಧೀನಕ್ಕೆ ತಂದುಕೊಂಡು ಅರವತ್ತು ಸಹಸ್ರ ಆನೆಗಳು ಹಾಗು ಒಂದು ಲಕ್ಷ ರಥಗಳ ಸೈನ್ಯ ಮಾಡಿಕೊಂಡು ಉತ್ತರಾಪಥೇಶ್ವರನೆಂಬ ಬಿರುದು ಹೊಂದಿ ಕೊನೆಗೆ ಸಿಂಹಾಸನವನ್ನೇರಿದನು.
ಹರ್ಷರಾಜನು ತನ್ನ ಆಸ್ಥಾನವನ್ನು ಊರಿಂದ ಊರಿಗೆ ರಾಜ್ಯಾದ್ಯಂತ ಸಾಗಿಸುತ್ತಿರುವನು. ಈತನ ಮೂಲ ರಾಜಧಾನಿ ಸ್ಥಾನೇಶ್ವರವಾದರೂ ಇವನು ಕನ್ಯಾಕುಬ್ಜದಿಂದಲೂ ರಾಜ್ಯಭಾರ ನಡೆಸುತ್ತಿದ್ದನು. ರಾಜನು ತನ್ನ ಎಲ್ಲ ಪ್ರಜೆಗಳಿಗೆ ಸಮಾನವಾಗಿ ಹತ್ತಿರವಾಗಿರಲು, ಹಾಗು ಸಾಮಂತ ರಾಜರು ಮತ್ತು ಪಾಳೆಯಗಾರರಿಂದ ಕಾಲಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಪಡೆಯಲು ಹೀಗೆ ಮಾಡುತ್ತಿದ್ದನಂತೆ.
ಕ್ರಮೇಣ ಹರ್ಷರಾಜನು ದಕ್ಷ ಪ್ರಶಸಕನಾದನು. ಧರ್ಮರಾಜನಾಗಿ ಆಳುತ್ತಿದ್ದ ಈತನಿಗೆ ಊಟ ನಿದ್ದೆಗಳೂ ಮರೆತುಹೋದವಂತೆ. ಬೌಧ ಧರ್ಮದಿಂದ ಹೆಚ್ಚಾಗಿ ಪ್ರೇರಿತನಾದ ಈತ ಜೀವಂತ ಪ್ರಾಣಿಗಳನ್ನು ಕೊಲ್ಲುವುದು ಹಾಗು ಪ್ರಾಣಿಗಳನ್ನು ಆಹಾರವಾಗಿ ತಿನ್ನುವುದನ್ನು ನಿಷೇಧಿಸಿದನು. ಧಾರ್ಮಿಕ ಸಹಿಷ್ಣುತೆ ಹಾಗು ರಾಯಭಾರ ಸಂಬಂಧಗಳಿಗೆ ಸುಪ್ರಸಿದ್ಧನಾಗಿದ್ದನು. ನಮ್ಮ ಧರ್ಮದವನಾದರೂ ಬೌದ್ಧರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದನು. ಅಂತೆಯೇ ದೇವಾಲಯಗಳೊಂದಿಗೆ ಬೌದ್ಧ ಸ್ತೂಪ ವಿಹಾರಗಳನ್ನೂ ಕಟ್ಟಿಸುತ್ತಿದ್ದನು. ಹಾಗಾಗಿ ಅವನು ಪ್ರಜೆಗಳ ಕಣ್ಮಣಿಯಾಗಿದ್ದನು. ಅವನ ಸೈನ್ಯವು ಸಂಪೂರ್ಣವಾಗಿ ಅವನ ಬೆಂಬಲಕ್ಕೆ ನಿಂತಿರುತ್ತಿತ್ತು.