ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೮)
*****ಭಾಗ ೮
ಪುಲಿಕೇಶಿ ಮಹಾರಾಜನು ಸಾಧಿಸಿದ ದಿಗ್ವಿಜಯದಿಂದ ಅವನು ತಲಾ ತೊಂಬತ್ತೊಂಬತ್ತು ಸಹಸ್ರ ಗ್ರಾಮಗಳ ಮೂರು ಮಹಾರಾಷ್ಟ್ರಕಗಳ ಒಡೆಯನಾಗಿದ್ದನು. ಇದರಿಂದಾಗಿ ಅರಸನು ಪರಮೇಶ್ವರನೆಂಬ ಬಿರುದನ್ನೂ ಹೊಂದಿದನು. ಕರ್ನಾಟ್ಟ ದೇಶ, ಮರಾಠದೇಶ, ಆಂಧ್ರದೇಶ ಕೂಡಿದಂತೆ ಇಡೀ ದಕ್ಷಿಣಾಪಥದ ಒಡೆಯನಾಗಿದ್ದನು.
ಮಹಾರಾಜ, ಮಹಾಮಂತ್ರಿ, ಸೇನಾಧಿಪತಿ ಸಮೇತರಾಗಿ ಎಲ್ಲ ಸಾಮಂತರೂ ಸೈನ್ಯಗಳೊಡನೆ ವಾತಾಪಿಗೆ ಹಿಂತಿರುಗಿದರು. ನಾನೂ ಅವರೊಡನೆಯೇ ವಾತಾಪಿ ನಗರಕ್ಕೆ ಹಿಂತಿರುಗಿದೆ. ನನ್ನ ಗೂಢಚರ್ಯೆಯ ಕೆಲಸ ಸಧ್ಯಕ್ಕೆ ಮುಗಿದಿತ್ತಾದ್ದರಿಂದ ನನ್ನ ಗೂಢಚಾರನ ವೇಷದ ಅಗತ್ಯ ಇನ್ನಿರಲಿಲ್ಲ. ನನ್ನ ಶ್ಮಶ್ರುಗಳನ್ನು ಕ್ಷೌರಿಕನಿಗೆ ಅರ್ಪಿಸಿ, ನನ್ನ ಕಂಚುಕ ಪಗಡಿಗಳನ್ನು ತ್ಯಜಿಸಿ, ಪುನಃ ನನ್ನ ಹಳೆಯ ಶ್ವೇತ ವರ್ಣದ ಕಚ್ಚೆ ಪಂಚೆ ಹಾಗು ಶಿರದಲ್ಲಿ ಜಟೆ ಧರಿಸಿದೆ. ಇನ್ನೇನು ಅಜ್ಞಾತವಾಸದ ಅವಶ್ಯಕತೆಯೂ ಇರಲಿಲ್ಲ. ಮನೆಗೆ ಹಿಂತಿರುಗಿ ಮಾತಾ-ಪಿತರನ್ನು ಮತ್ತೆ ಕಂಡು ಸಂತೋಷವಾಯಿತು. ಅವರಿಗೂ ಬಹಳ ದಿನಗಳ ನಂತರ ನನನ್ನು ಕಂಡು ಹರ್ಷವಾಯಿತು. ಮನ ಮುಟ್ಟುವ ಪುನರ್ಮಿಲನ - ಅಮ್ಮ ಬಿಕ್ಕಿ ಬಿಕ್ಕಿ ಅತ್ತರು. ನಾನೂ ಮನೆಯ ಜೀವನದ ಆನಂದವನ್ನು ಮತ್ತೆ ಕಾಣುವಂತಾಯಿತು.
ಈ ಸಮಯದಲ್ಲಿ ಪುಲಿಕೇಶಿ ಅರಸನು ಹರ್ಷರಾಜನ ಮೇಲೆ ತಾನು ಸಾಧಿಸಿದ ದಿಗ್ವಿಜಯ ಸ್ಮರಣೆಗೆಂದು ದೇವಾಲಯವೊಂದನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿದನು. ಅಂತೆಯೇ ಅರಸನ ವಂಶಜರ ಮೊದಲ ರಾಜಧಾನಿಯಾದ, ಹತ್ತಿರದಲ್ಲಿಯೇ ಮಲಪ್ರಭಾ ನದಿಯ ತೀರದಲ್ಲಿದ್ದ ಅಯ್ಯವೊಳೆ ನಗರದಲ್ಲಿ ದೇವಾಲಯವನ್ನು ಕಟ್ಟಿಸುವ ಯೋಜನೆ ಹೂಡಿದನು. ಇದನ್ನು ಕಾರ್ಯರೂಪಕ್ಕೆ ತರಲು ಅರಸನು ಮಂತ್ರಿ ಹಾಗು ಕವಿಯಾದ ರವಿಕೀರ್ತಿಯನ್ನು ಕರೆಸಿ ಹೀಗೆ ಹೇಳಿದನು:
"ಮಂತ್ರಿ ರವಿಕೀರ್ತಿ, ನಾವು ನಮ್ಮ ಮುದ್ರೆಯನ್ನು ಇತಿಹಾಸದಮೇಲೆ ಒತ್ತಲು ಇಚ್ಚಿಸಿದ್ದೇವೆ. ಅಂತೆಯೇ, ನಮ್ಮ ಮೂಲ ರಾಜಧಾನಿಯಾದ ಅಯ್ಯವೊಳೆಯಲ್ಲಿ ದೇವಾಲಯವೊಂದನ್ನು ನಿರ್ಮಿಸಿ. ಬರುವ ಪೀಳಿಗೆಗಳಿಗೆ ನಮ್ಮ ಶೌರ್ಯ, ದಿನಾಂಕ, ಖ್ಯಾತಿ ಹಾಗು ವೈಭವಗಳನ್ನು ನೆನಪಿಗೆ ತರಿಸುವಂತಹ ಸ್ಮಾರಕವೊಂದನ್ನು ರಚಿಸಿ. ಈ ಮಂದಿರವು ನಮ್ಮ ದಿಗ್ವಿಜಯದ ಸಂಕೇತವಾಗಿರಲಿ. ಎಷ್ಟು ವೆಚ್ಚವಾದರೂ ಸರಿ, ನಮ್ಮ ಬೊಕ್ಕಸದಿಂದ ಕೊಡಲಾಗುವುದು. ಈ ಕಾರ್ಯವನ್ನು ಸಾಧಿಸಲು ನೀವೇ ಸಮರ್ಥ ವಾಸ್ತುಶಿಲ್ಪಿ"
ಮಂತ್ರಿ ರವಿಕೀರ್ತಿಯು "ಅಪ್ಪಣೆಯಂತಾಗಲಿ, ದೊರೆ. ಆದರೆ ನನ್ನದೊಂದು ಸಣ್ಣ ಕೋರಿಕೆ" ಎಂದರು
"ಏನದು" ಅರಸ ಪ್ರಶ್ನಿಸಿದನು.
"ಬ್ರಾಹ್ಮಣ ಧರ್ಮದ ದೇವತೆಗಳೊಂದಿಗೆ ನನ್ನ ಮೆಚ್ಚಿನ ದೇವನಾದ ಜಿನೇಂದ್ರನ ಮೂರ್ತಿಯೊಂದನ್ನು ಆ ಸ್ಮಾರಕ ದೇವಾಲಯದಲ್ಲಿ ಇರಿಸುವ ಅನುಮತಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಧಾರ್ಮಿಕ ಸಹಿಷ್ಣುತೆಗೂ ಸಂಕೇತವಾಗಲಿ" ಎಂದು ಮಂತ್ರಿ ಕೋರಿಕೊಂಡರು.
ಜೈನ ಶ್ರಾವಕರು ಅರಸನ ಪೂರ್ವದಿನಗಳಲ್ಲಿ ಅವನು ಮಂಗಳೇಶನನ್ನು ಸೋಲಿಸಿ ಚಾಲುಕ್ಯಾಧಿಪತಿಯಾಗಲು ಹೆಚ್ಚು ಬೆಂಬಲ ನೀಡಿದ್ದರೆಂಬುದು ಎಲ್ಲರೂ ಅರಿತಿದ್ದರು. ಹಾಗಾಗಿ ಶ್ರಾವಕರು ನಮ್ಮ ರಾಜ್ಯದಲ್ಲಿ ವಿಶಾಲ ಪ್ರಾಧಿಕಾರ ಹಾಗು ಪ್ರಭಾವಗಳನ್ನು ಹೊಂದಿದ್ದರು. ಜೈನ ಸನ್ಯಾಸಿಗಳ ಕಾರಣವಾಗಿಯೇ ಅರಸನ ಸಹೋದರನಾದ ಕುಬ್ಜ ವಿಷ್ಣುವರ್ಧನನಿಗು ಹಾಗು ಗಂಗಾಪಾದಿ ರಾಜ ದುರ್ವಿನೀತನ ಪುತ್ರಿಗೂ ವಿವಾಹವಾಗಿ, ಪುಲಿಕೇಶಿ ಅರಸನು ಅವರ ಪ್ರತಿ ತನ್ನ ಋಣವನ್ನು ಅರಿತಿದ್ದನು. ಅದಕ್ಕಾಗಿ "ಹಾಗೆಯೇ ಆಗಲಿ" ಎಂದು ಸಮ್ಮತಿಸಿ "ನಾಳೆಯ ದಿನವೇ ನಿಮ್ಮ ಶಿಲ್ಪಕಲೆಯ ಮೇರುಕೃತಿಗೆ ಸಂಕಲ್ಪ ಹಾಗು ನಾಂದಿ" ಎಂದು ಹೇಳಿ ರವಿಕೀರ್ತಿಯನ್ನು ಅಯ್ಯವೊಳೆಗೆ ಕಳುಹಿಸಿಕೊಟ್ಟನು.
ರವಿಕೀರ್ತಿ ಅಯ್ಯವೊಳೆಗೆ ನಿರ್ಗಮಿಸಿದರು. ಅಲ್ಲಿ ಭವ್ಯ ಮಂದಿರ ನಿರ್ಮಾಣದ ಕಾರ್ಯದಲ್ಲಿ ತೊಡಗಿದರು. ಆ ಸಮಯದಲ್ಲಿ ಪುಲಿಕೇಶಿ ಅರಸನು ಉತ್ತಮ ಪ್ರಶಾಸಕನಾಗಲು ಯತ್ನಿಸುತ್ತಿದ್ದನು. ಅರಸನ ಪ್ರಭಾವವು ಧಾರ್ಮಿಕ ಕಟ್ಟಲೆಗಳಿಂದ ಸೀಮಿತವಾಗಿತ್ತು. ರಾಜ್ಯದ ಭಾಗಗಳನ್ನು ಆಯಾ ಸಾಮಂತರಾಜರು ಆಳಿಕೊಂಡು ಕಾಲ ಕಾಲಕ್ಕೆ ಕಪ್ಪ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. ರಾಜನ ಶಾಸನ ಸಹಾಯಕ್ಕೆ ಮಂತ್ರಿವರ್ಗದವರು, ಮಹಾರಾಣಿ ಹಾಗು ಯುವರಾಜರು ಸಹಕರಿಸುತ್ತಿದ್ದರು. ರಾಜ್ಯವನ್ನು ವಿಷಯ, ರಾಷ್ಟ್ರ, ಭೋಗ ಕಾಂಪನ ಹಾಗು ಗ್ರಾಮಗಳಾಗಿ ವಿಭಾಜಿಸಲಾಗಿತ್ತು. ಅಲ್ಲಿಯ ಆಡಳಿತಕ್ಕೆ ಅರಸನು ಪ್ರಬಲ ಹಾಗು ಸಮರ್ಥ ಸಾಮಂತರನ್ನು ನೇಮಿಸಿದನು. ಇವರಲ್ಲಿ ಹಲವರು ಹೆಂಗಳೆಯರೂ ಇದ್ದರು. ಗ್ರಾಮ ಮಟ್ಟದಲ್ಲಿ ಊರ ಗಾವುಂಡರು ಅರಸನ ಪ್ರತಿನಿಧಿಯಾಗಿದ್ದರು. ಸೈನ್ಯ ಹಾಗು ನಾವಸೇನೆಯನ್ನೂ ಮಹಾರಾಜನು ಕಾಲ ಕಾಲಕ್ಕೆ ಸಂಯೋಜಿಸಿ ಇಟ್ಟಿದ್ದನು. ನಾಡು ಸಮೃದ್ದವಾಗಿದ್ದು ಜನರು ಸುಖಸಂತೋಷಗಳಿಂದ ಕೂಡಿದ್ದರು. ಪುಲಿಕೇಶಿ ಅರಸ ನೀಡಿದ ಸುರಕ್ಷೆಯ ನೆರಳಲ್ಲಿ ಎಲ್ಲರೂ ಭೀತಿಹೀನರಾಗಿದ್ದರು. ಸತ್ಯ, ಧರ್ಮ, ನ್ಯಾಯಗಳೇ ಚಾಳುಕ್ಯ ರಾಷ್ಟ್ರದ ಕಂಬಗಳಾಗಿದ್ದವು.
ಯುದ್ಧದ ಪೂರ್ವದಲ್ಲಿ ನಾನು ಮಾಡಿದ ಕೆಲಸ ಮಹಾಮಂತ್ರಿಗಳಿಗೆ ಹಿಡಿಸಿತ್ತು. ಈಗಲೂ ನಾನು ಅವರ ಕೈಯ ಕೆಳಗೇ ಕಾರ್ಯ ನಿರ್ವಹಿಸುತ್ತಿದ್ದೆ. ಕಾಲ ಕಳೆದಂತೆ ಮಹಾಮಂತ್ರಿಗಳು ನನ್ನ ಕಾರ್ಯದಿಂದ ಇನ್ನಷ್ಟು ಸಂತುಷ್ಟರಾಗಿದ್ದರು. ಅವರಿಗೆ ನನ್ನ ಮೇಲೆ ಹೆಚ್ಚು ಭರವಸೆ ಬಂದು ಅವರ ಹತ್ತಿರದ ವೃಂದದಲ್ಲಿ ನನ್ನನ್ನು ಎಣಿಸುತ್ತಿದ್ದರು. ಸಧ್ಯಕ್ಕೆ ನಾನೂ ತೃಪ್ತನಾಗಿ ಮನೆಯಲ್ಲಿದ್ದುಕೊಂಡು ಅರಮನೆಯಲ್ಲಿ ಕೆಲಸ ಮಾಡುತ್ತಿದ್ದೆ.
ಹಾಗೆಯೇ ನನ್ನ ವೃತ್ತಿ ಬದಲಾವಣೆಯಾಗಿತ್ತು. ಈಗ ನಾನು ಗೂಢಚಾರ ವಿಶ್ಲೇಷಣೆಗಳನ್ನು ಬಿಟ್ಟಿದ್ದೆ. ಈ ಕಾರ್ಯಗಳು ಈಗಿರಲಿಲ್ಲವೆಂದಲ್ಲ ಆದರೆ ನಾನು ಕಾಯಕ ಪಥದಲ್ಲಿ ಪ್ರಗತಿ ಹೊಂದಿದ್ದೆ. ಈಗ ಮಹಾಮಂತ್ರಿಗಳು ನನ್ನನ್ನು ವಿಶೇಷ ಕಾರ್ಯಗಳಿಗೆ ನೇಮಿಸಿದ್ದರು. ಅರಸ ಪುಲಿಕೇಶಿ ದಕ್ಷಿಣಾಪಥೇಶ್ವರನೆನಿಸಿ ಚಕ್ರವರ್ತಿಯಾಗಿದ್ದ. ಹಾಗಾಗಿ ಸುತ್ತ ಮುತ್ತಲಿನ ದೇಶಗಳಲ್ಲೇ ಅಲ್ಲದೆ ದೂರ ದೂರದ ದೇಶಗಳಲ್ಲೂ ರಾಯಭಾರಿ ಸಂಬಂಧಗಳನ್ನು ಬೆಳೆಸುವ ಅಗತ್ಯವಿತ್ತು. ನನ್ನ ಸಂಸ್ಕೃತ ನೈಪುಣ್ಯತೆ ಹಾಗು ಜಂಬೂದ್ವೀಪವನ್ನು ಒಗ್ಗೂಡಿಸುವ ಶಕ್ತಿ ಸಂಸ್ಕೃತವೇ ಆದ ಕಾರಣ, ಮಹಾಮಂತ್ರಿಗಳು ನನ್ನನ್ನು ಕಾಮರೂಪ ದೇಶಕ್ಕೆ ರಾಯಭಾರಿಯಾಗಿ ಕಳುಹಿಸಲೆಂದು ಶಿಕ್ಷಣ ನೀಡಲಾರಂಭಿಸಿದ್ದರು. ನನ್ನನ್ನು ತಮ್ಮ ವಿಚಾರ ಸಭೆಯಲ್ಲಿಯೂ ಸೇರಿಸಿಕೊಳ್ಳುತ್ತಿದ್ದರು.
ಹೀಗೆ ಶ್ರೀಮುಖ ಸಂವತ್ಸರವು ಭವ, ಭವವು ಯುವ ಸಂವತ್ಸರಕ್ಕೆ ತಿರುಗಿದವು. ಮಂತ್ರಿ ರವಿಕೀರ್ತಿಯು ಸ್ಮಾರಕ ದೇವಾಲಯವು ಸಂಪೂರ್ಣವೆಂಬ ಸುದ್ಧಿಯೊಂದಿಗೆ ಅಯ್ಯವೊಳೆಯಿಂದ ವಾತಾಪಿ ನಗರಕ್ಕೆ ಹಿಂತಿರುಗಿದರು. ಎಲ್ಲ ಸಾಮಂತರಾಜರು ಹಾಗು ಪಾಳೆಯಗಾರರಿಗೆ ಓಲೆ ಕಳುಹಿಸಲಾಯಿತು. ದೇವಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಸಮಾರಂಭಕ್ಕೆ ಎಲ್ಲರಿಗೂ ನಿಮಂತ್ರಣ ನೀಡಲಾಗಿತ್ತು. ಅಂತೆಯೇ ನಿಯಮಿತ ದಿನದಂದು ಎಲ್ಲರೂ ಅಯ್ಯವೊಳೆಯಲ್ಲಿ ನೆರೆದಿದ್ದರು.
ಮಂತ್ರಿ ರವಿಕೀರ್ತಿಯು ಯಾರೂ ಕಾಣದಂತಹ ಭವ್ಯ ದೇವಾಲಯವನ್ನು ನಿರ್ಮಿಸುವ ಪ್ರಯತ್ನವನ್ನು ಈ ಪ್ರಯೋಗದ ಮೂಲಕ ಮಾಡಿದ್ದರು. ದೇವಾಲಯವು ಒಂದು ಸಣ್ಣ ಗುಡ್ಡದಮೇಲೆ ನಿಂತಿದೆ. ಎತ್ತರಿಸಿದ ಜಗಲಿಯೊಂದರ ಮೇಲೆ ದೇವಾಲಯದ ಕಟ್ಟಡವನ್ನು ಕಟ್ಟಲಾಗಿದೆ. ಮೆಟ್ಟಲು ಹತ್ತಿ ಹೋದರೆ ಭಕ್ತರು ಮುಖಮಂಟಪದೊಳಗೆ ಇರುತ್ತಾರೆ. ವಿಶಾಲವಾದ ಮುಖಮಂಟಪದ ಛಾವಣಿಯನ್ನು ಕಂಬಗಳು ಎತ್ತಿ ಹಿಡಿದಿವೆ. ಗರ್ಭಗುಡಿಯಲ್ಲಿ ಜಿನೇಂದ್ರನ ಕಲ್ಲಿನ ಪ್ರಥಿಮೆ ಇರಿಸಲಾಗಿದೆ. ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾಪಥವಿದೆ. ದೇವಾಲಯದ ಸುತ್ತಲೂ ಸುಂದರ ಕೆತ್ತನೆಗಳನ್ನು ಹೊತ್ತ ಕಂಬಗಳುಳ್ಳ ಜಗಲಿ ಇದೆ.
ಮುಖಮಂಟಪ ಹಾಗು ಗರ್ಭಗುಡಿಗಳ ಮಧ್ಯೆ ಒಂದು ವಿಶಾಲ ಅಂತರಾಳವಿದೆ. ಅಂತರಾಳದಲ್ಲಿ ಅರ್ಧ ಲಲಿತಾಸನದಲ್ಲಿ ಕುಳಿತ ಚಾಳುಕ್ಯ ಕುಲದೇವಿಯಾದ ಕೌಶಿಕಾಂಬಿಕೆಯ ಬಹುಸುಂದರ ಕಲ್ಲಿನ ವಿಗ್ರಹವಿದೆ. ಆದಿಸ್ಥಾನದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ದೇವಾಲಯದ ಎಲ್ಲ ಕಕ್ಷಗಳಲ್ಲಿ ಹಲವಾರು ದೇವಾದೇವಿಯರ ಸುಂದರ ಶಿಲಾ ಪ್ರಥಿಮೆಗಳಿವೆ. ಮೆಟ್ಟಲು ಹತ್ತಿ ದೇವಾಲಯದ ಛಾವಣಿಯ ಮೇಲೆ ಹೋದರೆ ಗರ್ಭಗೃಹದ ಮೇಲೆ ಮತ್ತೊಂದು ಗರ್ಭಗುಡಿಯಲ್ಲಿ ತೀರ್ಥಂಕರನ ಮತ್ತೊಂದು ಪ್ರಥಿಮೆಯನ್ನು ಕಾಣಬಹುದು. ಛಾವಣಿಯಿಂದ ಇಡೀ ಅಯ್ಯವೊಳೆ ಊರಿನ ನೋಟವನ್ನೂ ಕಾಣಬಹುದು. ಪುಲಿಕೇಶಿ ಅರಸನ ಪಿತಾಮಹ ಕಟ್ಟಿಸಿದ ದೇವಾಲಯಗಳು, ಹಾಗು ಹಿಂದಿನ ಕಾಲದ ಅರಮನೆ ಎಲ್ಲವೂ ಕಾಣಿಸುತ್ತವೆ.
ಪ್ರತಿಷ್ಠಾಪನೆಗೆ ಬ್ರಾಹ್ಮಾಣರ ಹಾಗು ಜೈನ ಶ್ರಾವಕರ ಮಂತ್ರಗಳು ಮೊಳಗುತ್ತಿದ್ದವು. ರಾಷ್ಟ್ರದ ಪದವೀಧರರಲ್ಲದೆ ಸಾಮಾನ್ಯ ಜನರೂ ಆ ದಿವ್ಯ ನೋಟವನ್ನು ಕಾಣಲೆಂದು ಅಂದು ಅಲ್ಲಿ ನೆರೆದಿದ್ದರು. ಆಡಂಬರ ಅಭಿಶೇಕಗಳೊಂದಿಗೆ ದೇವತೆಗಳ ಪ್ರತಿಷ್ಠಾಪನೆಯಾಯಿತು.
"ಜೈ ಕೌಶಿಕಾಂಬಿಕೆ", "ಜೈ ಚಾಲುಕ್ಯೇಶ್ವರ" ಎಂಬ ಘೋಷಣೆಗಳು ಗಗನಕ್ಕೇರುದವು.