ಪುಷ್ಪ ರಾಯಭಾರಿ

ಪುಷ್ಪ ರಾಯಭಾರಿ

ಕವನ

ಪುಷ್ಪ ಲೋಕದ ರಾಯ ಭಾರಿಯೆ

ನನ್ನ ಸನಿಹಕೆ ಬಂದೆಯಾ

ಪುಷ್ಪಪಾತ್ರೆಯ ಮಧುವ ಹೀರಲು

ಪ್ರೇಮ ವಾಣಿಯ ತಂದೆಯಾ||

 

ಸುಮದತೊಟ್ಟನು ಮುದದಿ

ಚುಂಬಿಸಿ

ಹೃದಯತಂತಿಯ ಮೀಟಯಾ

ಹಿಮದ ಚೆಲುವನೆ ಒಲವಧಾರೆಯ

ಉಣಿಸಿ ಮನವನು ನಲಿಸೆಯಾ||

 

ಜನಕತೋಟದಿ ಕನಕಪುಷ್ಪವು

ಏನು ಹೇಳಿತು ಹೇಳಯಾ

ಬೆನಕಮವಾಸೆ ಪಾದ ಪೂಜೆಗೆ

ನನ್ನರಮನೆಗೆ ಬಂದೆಯಾ||

 

ರಜನಿಗಂಧವ ನನ್ನ ಅಂದವ

ಹರ್ಷಚಿತ್ತದಿ ಸವಿದೆಯಾ

ಮಜವನೀಡುವ ಕುಸುಮ ದೌತಣ

ಅನ್ನಪೂರ್ಣೆಯು ಬಲ್ಲೆಯಾ||

 

ನಿತ್ಯ ಅನುಜೆಯು ಬಿಚ್ಚು ಮಲ್ಲಿಗೆ

ನಿನ್ನ ಸನಿಹವ ಬಯಸಲು

ಸಸ್ಯಶಾಮನೆ ಹೋಗು ಅವಳನು

ಮೋದದಿಂದಲಿ ಸಂತೈಸಲು||

 

ಘಮ್ಮುಘಮ್ಮನೆ ಕಂಪು ಸೂಸುತ

ಮನಕೆ ತಂಪನು ಕೊಡುವಳು

ಹಮ್ಮು ಬಿಮ್ಮನು ತೊರೆದು ಸುಮ್ಮನೆ

ಹಂಚು ಪ್ರೇಮದ ಹೊನಲನು||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್