ಪುಸ್ತಕಗಳೇ ನಮ್ಮ ಒಳ್ಳೆಯ ಗೆಳೆಯರು...!

ಪುಸ್ತಕಗಳೇ ನಮ್ಮ ಒಳ್ಳೆಯ ಗೆಳೆಯರು...!

ಹೌದು, ಈ ಮಾತು ನೂರಕ್ಕೆ ನೂರು ಸತ್ಯ. ಪುಸ್ತಕಗಳ ಸಂಗದಲ್ಲಿ ನಾವು ಬಹಳಷ್ಟನ್ನು ಕಲಿಯುತ್ತೇವೆ. ಪುಸ್ತಕಗಳು ನಮ್ಮ ಉತ್ತಮ ಗೆಳೆಯರು. ಉತ್ತಮ ಪುಸ್ತಕಗಳು ನಮ್ಮನ್ನು ಎಂದೂ ನಿರಾಶೆ ಮಾಡುವುದಿಲ್ಲ, ಸಮಯವನ್ನು ಹಾಳು ಮಾಡಲು ಬಿಡುವುದಿಲ್ಲ, ನಮಗೆ ಜೀವನದ ಉದಾತ್ತ ಪಾಠಗಳನ್ನು ಕಲಿಸುತ್ತದೆ. ಪುಸ್ತಕದ ಬಗ್ಗೆ ಪ್ರೀತಿ ಇದ್ದಲ್ಲಿ ನೀವು ಖಂಡಿತಾ ನಿಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಕಳೆಯುತ್ತೀರಿ ಇದರಲ್ಲಿ ಸಂಶಯವಿಲ್ಲ. ನಿಮ್ಮ ಏಕಾಂಗಿತನದ ಉತ್ತಮ ಜೊತೆಗಾರ ಈ ಪುಸ್ತಕ.

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ? ಇಂದು ಎಪ್ರಿಲ್ ೨೩ ವಿಶ್ವ ಪುಸ್ತಕ ದಿನ. ಪುಸ್ತಕಕ್ಕಾಗಿಯೇ ಒಂದು ದಿನವಿದೆಯೇ? ಹೌದು ೧೯೯೫ರ ಎಪ್ರಿಲ್ ೨೩ರನ್ನು ಯುನೆಸ್ಕೋ ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದೇ ಇದರ ಮುಖ್ಯ ಉದ್ದೇಶ. ಇದರ ಜೊತೆ ಪುಸ್ತಕೋದ್ಯಮವನ್ನು ಬೆಂಬಲಿಸುವುದು ಹಾಗೂ ಬೆಳೆಸುವುದು ಇದರ ಆಶಯವಾಗಿದೆ. ನಮ್ಮಲ್ಲಿ ಹಾಗೂ ವಿದೇಶಗಳಲ್ಲಿ ಎಷ್ಟೋ ಮಂದಿ ಲೇಖಕರು ಕೇವಲ ಪುಸ್ತಕಗಳನ್ನು ಬರೆದೇ ಕೋಟ್ಯಾಧಿಪತಿಗಳಾಗಿದ್ದಾರೆ. ಹ್ಯಾರಿ ಪೊಟರ್ ಎಂಬ ಕಥಾ ಸರಣಿಯನ್ನು ಬರೆದ ಜೆ.ಕೆ.ರೌಲಿಂಗ್ ಎಂಬ ಮಹಿಳೆ ರಾತೋರಾತ್ರಿ ಕೋಟ್ಯಾಧಿಪತಿಯಾಗಿ ಬಿಟ್ಟಳು. ಅವಳ ಪುಸ್ತಕಗಳು ಹೊರ ಬರುತ್ತವೆ ಎಂದಾಕ್ಷಣ ಓದುಗರು ರಾತೋರಾತ್ರಿ ಪುಸ್ತಕದ ಅಂಗಡಿಯ ಎದುರು ಸರತಿ ಸಾಲಿನಲ್ಲಿ ನಿಂತರು. ಭಾರತದಲ್ಲೂ ಇದೇ ರೀತಿಯ ಪರಿಸ್ಥಿತಿ ಒದಗಿ ಬಂದರೆ ಪ್ರಕಾಶಕರು ಮತ್ತು ಲೇಖಕರು ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ.

ಕನ್ನಡದಲ್ಲೂ ಖ್ಯಾತ ಬರಹಗಾರರು ಆಗಿ ಹೋಗಿದ್ದಾರೆ. ಈಗಲೂ ಕುವೆಂಪು, ಕಾರಂತ, ತೇಜಸ್ವಿ ಪುಸ್ತಕಗಳಿಗೆ ಬಹುಬೇಡಿಕೆ ಇದೆ. ಪ್ರಸ್ತುತ ನಮ್ಮ ನಡುವೆ ಇರುವ ಎಸ್.ಎಲ್. ಭೈರಪ್ಪನವರ ಪುಸ್ತಕಗಳನ್ನೂ ಓದುಗರು ಬಹಳ ಕುತೂಹಲದಿಂದ ಕೊಂಡು ಓದುತ್ತಾರೆ. ನಮ್ಮ ಲೇಖಕರ ಪುಸ್ತಕಗಳನ್ನೂ ಸರತಿ ಸಾಲಿನಲ್ಲಿ ಕಾದು ನಿಂತು ಖರೀದಿಸುವ ಕಾಲ ಬರಬೇಕು. ಆದರೆ ಈಗೀಗ ಮುದ್ರಿತ ಪುಸ್ತಕಗಳ ಖರೀದಿಯೂ ಕಮ್ಮಿಯಾಗುತ್ತಿದೆ. ಈಗಿನ ಮಕ್ಕಳು ಪುಸ್ತಕವನ್ನು ಇ-ಪುಸ್ತಕ ರೂಪದಲ್ಲಿ ಲ್ಯಾಪ್ ಟಾಪ್ ಹಾಗೂ ಮೊಬೈಲ್ ನಲ್ಲೇ ಓದುತ್ತಿದ್ದಾರೆ. ಆದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು, ಒಂದೊಂದೇ ಪುಟವನ್ನು ಸರಿಸುತ್ತಾ ಓದುವ ಆ ದಿವ್ಯ ಅನುಭವವಿದೆಯಲ್ಲಾ ಅದನ್ನು ಅನುಭವಿಸಿದವನೇ ಧನ್ಯ.  

ಮೊದಲಾದರೆ ಮಕ್ಕಳಿಗೆ ಓದಲೆಂದೇ ಪುಸ್ತಕಗಳು, ನಿಯತಕಾಲಿಕಗಳು ಹೊರಬರುತ್ತಿದ್ದವು. ಆದರೆ ಈಗ ಪುಸ್ತಕದ ಅಂಗಡಿಯಲ್ಲಿ ಪೂರ್ತಿ ಹುಡುಕಾಡಿದರೂ ಮಕ್ಕಳ ಕಥೆಯ ಅಥವಾ ಅವರ ಜ್ಞಾನವನ್ನು ವೃದ್ಧಿಸುವ ಪುಸ್ತಕಗಳೇ ಸಿಗುವುದಿಲ್ಲ. ಆಂಗ್ಲ ಭಾಷೆಯಲ್ಲಿ ಕೆಲವಾದರೂ ಸಿಗಬಹುದು, ಆದರೆ ಕನ್ನಡದಲ್ಲಿ ಆ ರೀತಿಯ ಪುಸ್ತಕಗಳೇ ಕಡಿಮೆ. ಓದುವ ಮಕ್ಕಳೂ ಕಮ್ಮಿ. ಓದುಗರ ನಾಡಿಮಿಡಿತವನ್ನು ಅರಿತು ಬರೆದವರ ಪುಸ್ತಕಗಳು ಯಾವಾಗಲೂ ಹಾಟ್ ಸೇಲ್ ಆಗುತ್ತವೆ. ಪುಸ್ತಕ ಮಾರಿಯೂ ಲಾಭಗಳಿಸಬಹುದು ಎಂದು ಪ್ರಕಾಶಕನೂ ಅಂದುಕೊಳ್ಳಬಹುದು.  

ಪುಸ್ತಕ ದಿನಕ್ಕೆ ಸಂಬಂಧಿಸಿದ ಘೋಷವಾಕ್ಯಗಳು ಎಷ್ಟೋ ಇರಬಹುದು. ಆದರೆ ಪುಸ್ತಕವನ್ನು ಹಣ ಕೊಟ್ಟು ಕೊಂಡು ಓದುವವರು ಎಷ್ಟು ಜನ ಇದ್ದಾರೆ, ಅದೇ ದೊಡ್ದ ಪ್ರಶ್ನೆ. ಬರೆದು ಮುದ್ರಿಸಿದವರಿಗೆ ನಾವೆಷ್ಟು ಬೆಂಬಲಕೊಡುತ್ತೇವೆ ಎಂಬುದು ಮುಖ್ಯ. ತಿಂಗಳಿಗೆ ಒಂದಾದರೂ ನಿಮ್ಮ ಆಸಕ್ತಿಯ ಪುಸ್ತಕವನ್ನು ಕೊಂಡು ಓದಿರಿ. ಗೆಳೆಯರ ಜೊತೆ ವಿನಿಮಯ ಮಾಡಿ ಓದಿರಿ. ಆಗ ಒಂದು ಪುಸ್ತಕದ ವೆಚ್ಚದಲ್ಲಿ ಎರದು ಪುಸ್ತಕ ಓದಬಹುದು. ವಿಶ್ವಸಂಸ್ಥೆಯು ಶೈಕ್ಷಣಿಕ, ಸಾಮಾಜಿಕ,, ಸಾಂಸ್ಕೃತಿಕ, ವೈಜ್ಞಾನಿಕ ಆಯೋಗದ ಮೂಲಕ, ಜನರಲ್ಲಿ ಓದುವಿಕೆ, ಪ್ರಕಾಶನ, ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ಪ್ರಚಾರಕ್ಕಾಗಿ, ಪುಸ್ತಕ ಪ್ರೇಮ ಬೆಳೆಸಿಕೊಂಡು, ಉತ್ತಮ ಲೇಖನ, ಲೇಖಕರ ಗುರುತಿಸುವಿಕೆಗಾಗಿ, ಈ ದಿನವನ್ನು ಘೋಷಿಸಿತು. ಮನುಷ್ಯ ಅಳಿದರೂ ಆತನ ಕೃತಿ ಅಳಿಯದು. ಋಷಿವಾಣಿ *ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ* ಜ್ಞಾನ ದೊರೆಯುವುದು ಪುಸ್ತಕಗಳಿಂದ, ಒಳ್ಳೆಯ ನುಡಿಗಳನ್ನು ಆಲಿಸುವುದರಿಂದಲ್ಲವೇ?

ನಮ್ಮ ನಮ್ಮ ಮನೆಗಳಲ್ಲಿ ಒಂದು ಪುಟ್ಟ ಗ್ರಂಥಾಲಯ ಮಾಡಿದರೆ, ಮನೆಮಂದಿಗೆ, ಬಂದು ಹೋಗುವವರಿಗೆ ಓದಲು ಅನುಕೂಲ. ಹಳೇ ಪುಸ್ತಕ ಸಂಗ್ರಹ, ನಿಯತಕಾಲಿಕೆಗಳ ಸಂಗ್ರಹ, ಕಥೆ, ಕಾದಂಬರಿ, ಶಿಶುಸಾಹಿತ್ಯ ಎಲ್ಲಾ ನಮ್ಮ ಗ್ರಂಥಾಲಯಗಳಲ್ಲಿರಲಿ. ಶೋಕಿಗಾಗಿ ಯಾರೂ ಪುಸ್ತಕ ಸಂಗ್ರಹಿಸುವುದು ಬೇಡ. ಎರವಲು ಪುಸ್ತಕ ಪಡೆದು ಓದುವವರು ತುಂಬಾ ಜನರಿದ್ದಾರೆ. ಅದು ಕಮ್ಮಿ ಮಾಡಿ, ಹಣ ನೀಡಿ ಕೊಂಡು ಓದಿ ಲೇಖಕರಿಗೆ ಪ್ರೋತ್ಸಾಹ ನೀಡೋಣ. ಎರವಲು ತಂದ ಪುಸ್ತಕ ಪುನಃ ವಾರಸುದಾರನಿಗೆ ಮರಳಿ ಹಿಂದೆ ತಲುಪುವುದು ಬಹಳ ವಿರಳ. ಇದು ಅನುಭವದ ಮಾತು ಸಹ. ಎಷ್ಟೋ ನಾಟಕ, ಯಕ್ಷಗಾನದ ಪುಸ್ತಕಗಳು ನಮ್ಮಲ್ಲಿಂದ ಹೋದದ್ದು ಪುನಃ ಬಂದದ್ದು ಕಡಿಮೆಯೇ.

*ದೇಶ ಸುತ್ತದಿದ್ದರೂ ತೊಂದರೆಯಿಲ್ಲ, ಕೋಶವನ್ನಾದರೂ ಓದಿ ತಿಳಿಯೋಣ* ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸೋಣ. ಮೊಬೈಲ್, ಲ್ಯಾಪ್ ಟಾಪ್, ಟಿ.ವಿ. ಇದರಲ್ಲೇ ದಿನ ಕಳೆಯುತ್ತಿದ್ದಾರೆ. ಮನೆಮಂದಿ, ನಮ್ಮ ಮಕ್ಕಳು ಸಹ. ಪಠ್ಯೇತರ ಚಟುವಟಿಕೆಗಳು, ಇದರಿಂದಾಚೆ ಸಹ ಪ್ರಪಂಚ ಇದೆ ಎಂಬುದನ್ನು ಮನವರಿಕೆ ಮಾಡೋಣ.

ಪುಸ್ತಕ ಒಂದು ದಿನಕ್ಕೆ ಸೀಮಿತಗೊಳಿಸದೆ, ಇಡೀ ವರ್ಷ ಆಚರಿಸುವಂತಾಗಲಿ. ಪ್ರತಿನಿತ್ಯ ಏನನ್ನಾದರೂ ಓದೋಣ, ಓದಿದ ಜ್ಞಾನವನ್ನು ನಾಲ್ಕು ಜನಕ್ಕೆ ಹಂಚೋಣ.*ನಮ್ಮ ನಿಜವಾದ ಸ್ನೇಹಿತ ಎಂದರೆ ಒಂದೊಳ್ಳೆಯ ಪುಸ್ತಕ*

ಪುಸ್ತಕದಲ್ಲಿ ಇದ್ದದ್ದನ್ನು ಮಸ್ತಕಕ್ಕೆ ಕಳಿಸು. ಮಸ್ತಕದಲ್ಲಿ ಇರುವುದನ್ನು ಪುನಃ ಬರವಣಿಗೆಗೆ ಇಳಿಸು. ನನ್ನನ್ನು ತಲೆತಗ್ಗಿಸಿ, ಅರ್ಥೈಸಿಕೊಂಡು ಓದು, ಸಮಾಜದಲ್ಲಿ ನಿನ್ನನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವೆ. ನನಗೆ ಗೌರವ ಕೊಡು, ನಿನಗೆ ಎಲ್ಲರೂ ಗೌರವ ಕೊಡುವಂತೆ ಮಾಡುವೆ. ಈ ಜಗತ್ತೇ ನಿನ್ನ ಕೈಬಿಟ್ಟರೂ, ನಾನು ಕೈ ಬಿಡದೆ ಮೇಲಕ್ಕೆತ್ತುವೆ. ಪುಸ್ತಕ ಇರದಿರೆ ಅಕ್ಷರಕ್ಕೆ ಅರ್ಥವಾದರೂ ಇದೆಯೇ? ಪುಸ್ತಕ ಓದಿರಿ ಜ್ಞಾನವಂತರಾಗಿರಿ.

(ಸಲಹೆ- ಸಹಕಾರ)ರತ್ನಾ ಕೆ ಭಟ್, ತಲಂಜೇರಿ, ನಿವೃತ್ತ ಮುಖ್ಯೋಪಾಧ್ಯಾಯಿನಿ

ಚಿತ್ರ ಕೃಪೆ: ಅಂತರ್ಜಾಲ ತಾಣ