ಪುಸ್ತಕಗಳ ನಡುವೆ ಸುಳಿದಾಡುವ ಬೆಳ್ಳಿ ಮೀನು!
ಇದ್ಯಾವುದಪ್ಪಾ ಹೊಸ ಮೀನು, ಅದರಲ್ಲೂ ಪುಸ್ತಕದ ನಡುವೆ ಸುಳಿದಾಡುವುದು? ನೀರಲ್ಲಿ ಈಜಾಡುವ ಮೀನುಗಳನ್ನು ಕಂಡಿರುವ ನೀವು ಈ ಮೀನಲ್ಲದ ಮೀನಾದ ಬೆಳ್ಳಿ ಮೀನು ಅರ್ಥಾತ್ ಸಿಲ್ವರ್ ಫಿಶ್ ಅನ್ನು ಕಂಡೇ ಇರುತ್ತೀರಿ. ನೀವು ಮನೆಯನ್ನು, ಪುಸ್ತಕಗಳ ಕಪಾಟನ್ನು ಎಷ್ಟೇ ಸ್ವಚ್ಛವಾಗಿ ಇರಿಸಿದ್ದೀರಿ ಎಂದು ನಂಬಿದರೂ ನಿಮಗೆ ಈ ಪುಟ್ಟ ಜೀವಿಯ ಅಚಾನಕ್ ದರ್ಶನ ಆಗಿಯೇ ಬಿಡುತ್ತದೆ. ಪುಸ್ತಕದ ರಟ್ಟಿನ ಸಂದುಗಳಲ್ಲಿ, ನಿಮ್ಮ ಹಾಸಿಗೆಯಲ್ಲಿ, ಮಂಚದ ಸಂದುಗಳಲ್ಲಿ ಬಲು ಪುಟ್ಟದಾದ ಈ ಜೀವಿಯ ಇರುವಿಕೆ ಇದ್ದೇ ಇರುತ್ತದೆ.
ಬೆಳ್ಳಿ ಮೀನು (Silver Fish) ಇದರ ವೈಜ್ಞಾನಿಕ ಹೆಸರು Lepisma Saccharina. ನೀರಿನಲ್ಲಿರುವ ಒಂದು ಜಾತಿಯ ಮೀನಿಗೆ ನಾವು ಸಿಲ್ವರ್ ಫಿಶ್ (ಬೊಲಂಜಿರ್ ಮೀನು) ಎಂದು ಕರೆಯುವುದುಂಟು. ಅದರೆ ನಮ್ಮ ಪುಸ್ತಕದೆಡೆಯಲ್ಲಿ ಸಿಕ್ಕುವ ಬೆಳ್ಳಿ ಮೀನು 'ಮೀನು' ಜಾತಿಗೆ ಸೇರಿದ್ದಲ್ಲ. ಅದು ಕೀಟಗಳ ಗುಂಪಿಗೆ ಸೇರಿದ ಜೀವಿ. ಇದನ್ನು ನೋಡುವಾಗ ಮೀನಿನಂತೆ ಇದ್ದು ಸ್ವಲ್ಪ ಬೆಳ್ಳಿ ಬಣ್ಣವಿರುವುದರಿಂದ ಅದಕ್ಕೆ 'ಸಿಲ್ವರ್ ಫಿಶ್' ಎಂದು ನಾಮಕರಣ ಮಾಡಲಾಗಿದೆ.
ಹಲವಾರು ಸಮಯಗಳ ಕಾಲ ನೀವು ಪುಸ್ತಕಗಳನ್ನು ತೆರೆಯದೇ ಇದ್ದಾಗ ಅದರ ರಟ್ಟಿನ ಅಥವಾ ಹಾಳೆಗಳ ನಡುವೆ ಈ ಕೀಟ ಕಾಣಿಸಿಕೊಳ್ಳಬಹುದು. ಅತ್ಯಂತ ಪುಟ್ಟ ನಿರುಪದ್ರವಿ ಕೀಟ, ನಿಮ್ಮ ಜೀವಕ್ಕೆ ಏನೂ ಹಾನಿ ಮಾಡದೇ ಇದ್ದರೂ ಪುಸ್ತಕಗಳನ್ನು ಹಾಳುಗೆಡವುವ ಸಾಧ್ಯತೆ ಇದೆ. ಇವುಗಳಿಗೆ ಮೀನಿನ ಆಕಾರದ ದೇಹ, ಹುರುಪೆಗಳಿದ್ದರೂ ಕೀಟಗಳಂತೆ ಆರು ಕಾಲುಗಳಿವೆ. ದೇಹದ ಬಾಲದ ಭಾಗದಲ್ಲಿಳೆಗಳ 'ಸಿರ್ರೆ' ಎಂಬ ಒಂದು ರೀತಿಯ ಕಾಲುಗಳಂತಹ ರಚನೆ ಇದೆ. ಪುಟ್ಟ ಉದ್ದ ಸಪೂರವಾದ ಬಾಲವೂ ಇದೆ. ತಲೆಯ ಭಾಗದಲ್ಲಿ ಎರಡು ಆಂಟೆನಾಗಳಿವೆ. ಆದರೆ ಇವುಗಳಿಗೆ ಬೇರೆ ಕೀಟಗಳಂತೆ ರೆಕ್ಕೆಗಳಿಲ್ಲ.
ವಿವಿಧ ಬಗೆಯ ಬೆಳ್ಳಿ ಮೀನುಗಳು ವಿಶ್ವದಾದ್ಯಂತ ಕಂಡು ಬರುತ್ತವೆ. ಬಣ್ಣದಲ್ಲೂ ಅಲ್ಪ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಬಿಸಿಲು ಹೆಚ್ಚಾಗಿ ಬೀಳದ, ತೇವಾಂಶ ಇರುವ ಪ್ರದೇಶಗಳಾದ ಸ್ನಾನದ ಮನೆ, ಅಡುಗೆ ಮನೆ, ಬಟ್ಟೆಗಳನ್ನಿಡುವ ಅಲಮಾರು, ಕಟ್ಟಡಗಳ ನೆಲ ಅಂತಸ್ತು, ಪುಸ್ತಕಗಳು ಮೊದಲಾದ ಕಡೆಗಳಲ್ಲಿ ಇವು ವಾಸ ಮಾಡುತ್ತವೆ. ಸಿಲ್ವರ್ ಫಿಶ್ ಗಳು ನಿಶಾಚರಿಗಳು. ಹಗಲಲ್ಲಿ ಕತ್ತಲಿನ ಯಾವುದಾದರೊಂದು ಮೂಲೆಯಲ್ಲಿ ಅಡಗಿಕೊಂಡಿದ್ದು, ರಾತ್ರಿಯಾದೊಡನೆ ಹೊರ ಬರುತ್ತವೆ. ಇವುಗಳು ಬಹು ವೇಗವಾಗಿ ಚಲಿಸುತ್ತವೆ.
ಇವುಗಳ ಪ್ರಮುಖ ಆಹಾರ ಪುಸ್ತಕದ ಪುಟಗಳಲ್ಲಿರುವ ಸೆಲ್ಯುಲೋಸ್. ಭೂಮಿಯಲ್ಲಿರುವ ಬಹಳ ಜೀವಿಗಳಿಗೆ ಈ ಸೆಲ್ಯುಲೋಸ್ ಎಂಬ ಶರ್ಕರ ಪಿಷ್ಟವನ್ನು ಜೀಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಸಿಲ್ವರ್ ಫಿಶ್ ತನ್ನ ದೇಹದಲ್ಲಿರುವ 'ಸೆಲ್ಯುಲೇಸ್' ಎಂಬ ಕಿಣ್ವದ ಸಹಾಯದಿಂದ ಈ ಸೆಲ್ಯುಲೋಸ್ ಅನ್ನು ಜೀರ್ಣಿಸಿಕೊಳ್ಳುತ್ತದೆ. ಈ ಕಾರಣದಿಂದಾಗಿ ಅಕ್ಷರಗಳ ಅರಿವಿಲ್ಲದೇ ಹೋದರೂ ಅಕ್ಷರಗಳನ್ನು ಹೊಂದಿರುವ ಪುಸ್ತಕಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತದೆ. ಪುಸ್ತಕಗಳ ಹಾಳೆಗಳು ಮಾತ್ರವಲ್ಲದೇ ಹತ್ತಿ, ರೇಷ್ಮೆ, ಉಣ್ಣೆ ಬಟ್ಟೆಗಳನ್ನೂ ಸಹಾ ತಿಂದು ಚೂರು ಮಾಡುತ್ತವೆ. ಮರದ ಪೀಠೋಪಕರಣಗಳನ್ನು ಹಾಗೂ ಅಳಿದು ಉಳಿದ ಆಹಾರ ಸಾಮಾಗ್ರಿಗಳನ್ನೂ ತಿಂದು ಹಾಕುತ್ತದೆ. ಈ ಕಾರಣದಿಂದಾಗಿ ಈ ಕೀಟಗಳು ಮಾನವನಿಗೆ ನೇರವಾಗಿ ಅಷ್ಟೊಂದು ಉಪಟಳ ನೀಡದೇ ಹೋದರೂ ಮನೆಯ ವಸ್ತುಗಳನ್ನು ಹಾಳು ಮಾಡಿಬಿಡುತ್ತದೆ.
ಇವುಗಳ ಕಡಿತದಿಂದಾಗಿ ಕೆಲವರಿಗೆ ಸ್ವಲ್ಪ ಮಟ್ಟಿನ ಅಲರ್ಜಿಯಾಗುವ ಸಾಧ್ಯತೆ ಇದೆ. ಆದರೆ ಇವುಗಳು ಯಾವುದೇ ಸೂಕ್ಷ್ಮ ಜೀವಿಗಳ ವಾಹಕಗಳಲ್ಲವಾದುದರಿಂದ ಗಂಭೀರವಾದ ಯಾವುದೇ ಕಾಯಿಲೆಗಳನ್ನು ಹರಡುವ ಸಾಧ್ಯತೆ ಇರುವುದಿಲ್ಲ. ತೇವಾಂಶ ಭರಿತ ವಾತಾವರಣವಿದ್ದಲ್ಲಿ ಆಹಾರವಿಲ್ಲದೆ ವರ್ಷಾನುಗಟ್ಟಲೆ ಬದುಕಿ ಉಳಿಯುವ ಸಾಮರ್ಥ್ಯ ಇವುಗಳಿಗಿದೆ.
ಸಂತಾನೋತ್ಪತ್ತಿಯ ಸಮಯದಲ್ಲಿ ಪ್ರೌಢಾವಸ್ತೆಯ ಗಂಡು ಹಾಗೂ ಹೆಣ್ಣು ಕೀಟಗಳು ಮಿಲನವಾದ ಬಳಿಕ ಗಂಡು ಸ್ರವಿಸುವ ವೀರ್ಯದ ಚೀಲವನ್ನು ತನ್ನ ಅಂಡಕೋಶದೊಳಗೆ ಸೇರಿಸಿಕೊಳ್ಳುವ ಹೆಣ್ಣು ಕತ್ತಲಿರುವ ಸಂದುಗಳ ಅಂಚಿನಲ್ಲಿ ಬಿಳಿಯ ಬಣ್ಣದ ೮೦-೧೦೦ ಮೊಟ್ಟೆಗಳನ್ನು ಇಡುತ್ತದೆ. ಎರಡು ವಾರಗಳ ಬಳಿಕ ಆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ಪುಟ್ಟ ಪುಟ್ಟ ಮರಿಗಳು ಬೆಳೆದಂತೆ ಪೊರೆ ಕಳಚುತ್ತಾ ಹೊಸ ಚರ್ಮವನ್ನು ಧರಿಸುತ್ತಾ ಇರುತ್ತವೆ. ಈ ಉಪಟಳದ ಜೀವಿಯಿಂದ ನಮ್ಮ ಮನೆಯ ವಸ್ತುಗಳನ್ನು ರಕ್ಷಿಸಲು ಮನೆಯನ್ನು ಸ್ವಚ್ಛವಾಗಿಡುವುದೇ ಪರಿಹಾರ.
ಚಿತ್ರ ಕೃಪೆ: ಇಂಟರ್ನೆಟ್ ತಾಣ