ಪುಸ್ತಕವ ತೆರೆದು ಓದುತ ನಲಿದು…

ಪುಸ್ತಕವ ತೆರೆದು ಓದುತ ನಲಿದು…

ಕವನ

ಪುಸ್ತಕವ ತೆರೆದು ಓದುತ ನಲಿಯುತಲಿ

ಕಲಿತ ವಿಷಯವು ಮಸ್ತಕದಲಿರಲಿ

ಅಜ್ಞಾನವದು ಮನದಿಂದ ದೂರವಾಗುತಲಿ

ಪುಸ್ತಕದ ಜ್ಞಾನ ಜಲದಂತೆ ಹರಿದು ಬರಲಿ

 

ಮೊದಲು ತಲೆಯ ತಗ್ಗಿಸಿ ಓದು

ಮತ್ತೆ ಲೋಕದೊಳು ತಲೆಯೆತ್ತಿ ಬಾಳು

 ಸನ್ಮಾನ ಗೌರವಗಳು ತಾನಾಗಿ ಬರುವುದು

ಬದುಕು ಬಂಗಾರವಾಗುವುದು ಕೇಳು

 

*ವಿಶ್ವ ಪುಸ್ತಕದ ದಿನ* ಜೈಕಾರ ಹಾಕಿನ್ನು

ಕೊಂಡು ಓದುವೆ ಪುಸ್ತಕವ ಅನುದಿನವುಯೆನ್ನು

ಪುಸ್ತಕದ ಕೃತಿಸ್ವಾಮ್ಯ ಇರಲಿ ಎಂದೆಂದೂ 

ಪ್ರಕಟಿಸಿದ ಪುಸ್ತಕಕೆ ಮನ್ನಣೆ ಸಿಗಲೆಂದು

 

ದೇಶ ಸುತ್ತುತಲೆ ಪುಸ್ತಕವ ನೋಡು

ಜ್ಞಾನ ಭಂಡಾರದೊಳು ಮುಂದೆ ಸಾಗು

ನಿನ್ನ ಪ್ರತಿಭೆಯನೆಲ್ಲ ಹಂಚುತಲಿ ಬೀಗು

ವಿಖ್ಯಾತನಾಗುತಲಿ ಸವಿಯಿಂದ ಬಾಗು

 

ಉತ್ತಮ ವಿಚಾರ ನೈಜತೆಯ ಕಲಿಯುತಲಿ    

ಹೋಲಿಕೆ ತುಲನೆ ಅಳತೆಯ ಮಾಡುತಲಿ

ಸಮಾಜದಿ ಒಳ್ಳೆಯ ಕಾರ್ಯಂಗಳ ಹಮ್ಮಿಕೊಳುತಲಿ

ನಿಜ ಮನುಜನಾಗಿ ಮಾನವತ್ವವ ಬೀರುತಲಿ

 

ಬರವಣಿಗೆಯ ಶ್ರಮವ ಅರ್ಥೈಸುತಲಿ

ಕಾಗುಣಿತ ದೋಷವ ತಿಳಿ ಹೇಳುತಲಿ

 ಕಲಿತೋದಿ ಪ್ರೋತ್ಸಾಹಿಸುತ ಬೆನ್ನುತಟ್ಟುತಲಿ

ಪುಸ್ತಕವೆಂಬ ಅಗಣಿತ ಗಣಿಯ ವಶಮಾಡುತಲಿ

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್