ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು

ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು

ಬರಹ

[:http://sampada.net/node/750|ಈ ಬರಹಕ್ಕೆ] ಇಷ್ಟು ಪ್ರತಿಕ್ರಿಯೆ ಬಂದದ್ದು ಅಚ್ಚರಿಯೇನೂ ಆಗಿಲ್ಲ. ಇನ್ನೂ ಕೆಲವು ಸಂಗತಿಗಳನ್ನು ನೋಡಿ:
೧. ನಮಗೆ ಉಪಯುಕ್ತವೆನಿಸಿದ ಪುಸ್ತಕಗಳನ್ನು ಇಟ್ಟುಕೊಳ್ಳಲು ಬಯಸುತ್ತೇವೆ. ನಮ್ಮ ಚಟುವಟಿಕೆಗಳು ಬೇರೆ ಆದಂತೆ ಸಂಗ್ರಹಗೊಂಡ ಪುಸ್ತಕಗಳು ಭಾರವೆನಿಸತೊಡಗುತ್ತವೆ. ಆದರೂ ಇಟ್ಟುಕೊಂಡೇ ಇರುತ್ತೇವೆ!
೨. ಪುಸ್ತಕಗಳನ್ನು ಇಟ್ಟುಕೊಳ್ಳುವುದಕ್ಕೆ ಪುಸ್ತಕಗಳ ಮೌಲ್ಯ ಮತ್ತು ಉಪಯುಕ್ತತೆಗಳಿಗಿಂತ ನಮ್ಮ ಭಾವುಕತೆಯೇ ಬಹಳಷ್ಟು ಸಾರಿ ಕಾರಣವಾಗಿರುತ್ತದೆ. ಇದು ನನ್ನ ಎಸ್ ಎಸ್ ಎಲ್ ಸಿ ಪಠ್ಯ; ಈ ಪುಸ್ತಕ ನಾನು ದೆಹಲಿಗೆ ಮೊದಲು ಹೋದಾಗ ತೆಗೆದುಕೊಂಡದ್ದು; ಇದು ನನ್ನ ಗೆಳತಿ ಕೊಟ್ಟದ್ದು ಇತ್ಯಾದಿ. ಸೆಂಟಿಮೆಂಟಾಲಿಟಿಗೆ ಸಾವಿಲ್ಲವಾದ್ದರಿಂದ ಬೇಡದ ಪುಸ್ತಕಗಳು ಬೇಡದ ಅತಿಥಿಗಳಂತೆ ಉಳಿದೇ ಬಿಡುತ್ತವೆ.
೩. ಪುಸ್ತಕವನ್ನು ಸಂಪತ್ತು ಅಂದುಕೊಂಡವರಿದ್ದಾರೆ. ಆದರೆ ಈಗಿನ ನಮ್ಮ ಮನೆಯ ಮಕ್ಕಳು ಕನ್ನಡದ ಪುಸ್ತಕ ಓದುವುದಿರಲಿ, ಮುಟ್ಟುವುದು ಕೂಡ ಅಪರೂಪ. ಮಕ್ಕಳು ಹಾಗೆ ಬೆಳೆದಿರುವುದಕ್ಕೆ ಅಪ್ಪ ಅಮ್ಮಂದಿರಾದ ನಾವೇ ಕಾರಣ, ಅಲ್ಲವೆ. ಓದದ ಮಕ್ಕಳಿದ್ದರೆ ಪುಸ್ತಕಗಳು ಸಂಪತ್ತಲ್ಲ, ಕಸದ ರಾಶಿಯಾಗಿ ಕಾಣುವುದು ತಪ್ಪಿದ್ದಲ್ಲ. ಹಾಗಂತ ಮಕ್ಕಳು ಓದುವುದಿಲ್ಲ ಅಂತಲ್ಲ, ಅವರ ಓದಿನ ಪ್ರಯಾರಿಟಿಗಳು ಬೇರೆ, ನಾವು, ಹಿರಿಯ ತಲೆಮಾರಿನವು ಪುಸ್ತಕ ಸಂಗ್ರಹಿಸುವಾಗ ಇದ್ದ ಪ್ರಯಾರಿಟಿಗಳು ಬೇರೆ.
೩. ಕ್ಲಾಸಿಕ್ ಗಳನ್ನು ಎಷ್ಟು ಬಾರಿ ಬೇಕಾದರೂ ಓದಬಹುದು ಅನ್ನುವ ವಾದ ಇದೆಯಲ್ಲ, ನಮ್ಮ ಮನೆಯಲ್ಲಿ ಕಳೆದ ಐವತ್ತು ವರ್ಷಗಳಿಂದ ಇರುವ ಕ್ಲಾಸಿಕ್‌ಗಳಲ್ಲಿ ಶೇ ೧ ಭಾಗವನ್ನೂ ಎರಡನೆಯ ಮೂರನೆಯ ಬಾರಿ ಓದಿಲ್ಲ.
೪. ನಾವು ಯಾವುದೇ ಪುಸ್ತಕ ಗಮನವಿಟ್ಟು ಓದಿದ ನಂತರವೂ ಅದರ ಸ್ಥೂಲ ಅರ್ಥ, ಮನಸ್ಸಿನಲ್ಲಿ ಉಂಟಾದ ಆನಂದದ ಸ್ಥೂಲ ನೆನಪು ಉಳಿದಿರುತ್ತದೆ. ಅಷ್ಟೇ ದಕ್ಕುವುದು. ನಮ್ಮದಾಗುವುದು. ಅದಕ್ಕೆ ಕಾರಣವಾದ ಪುಸ್ತಕ ನಮ್ಮ ಬಳಿ ಇದ್ದರೂ ಅಷ್ಟೆ, ಇರದಿದ್ದರೂ ಅಷ್ಟೆ.
೫. ನಾಡಿಗ್ ಅವರು ಹೇಳುವಂತೆ ತಾಂತ್ರಿಕ ವಿಷಯಗಳ ಪುಸ್ತಕ ಕೌಶಲದ ಕಲಿಕೆಗೆ ಅಗತ್ಯ. ಅದು ಕಸುಬುದಾರನೊಬ್ಬನಿಗೆ ಹತ್ಯಾರಗಳು ಅಗತ್ಯವಾಗಿರುವಂತೆ. ಕಸುಬನ್ನೇ ಬದಲಾಯಿಸಿದಾಗ ಆ ಕಸುಬಿನ ಹತ್ಯಾರಗಳೂ ಬೇಡವಾಗುತ್ತವಷ್ಟೆ. ಅಡುಗೆ ಭಟ್ಟರಿಗೇಕೆ ಹಾರೆ ಪಿಕಾಸಿ ನೇಗಿಲು? ಹಾಗೆ ನಾವು ಕಸುಬು ಬದಲಿಸಿದಾಗಲೂ ಹಳೆಯ ಕಸುಬಿನ ಕೌಶಲದ ಪುಸ್ತಕಗಳು ಯಾಕೆ ಸುಮ್ಮನೆ ರಾಶಿಯಾಗಿ ಇರಬೇಕು?
೬. ಯಾವುದೇ ವ್ಯಾಮೋಹ ಬಿಡುವುದು ಕಷ್ಟವಾದಂತೆ ಪುಸ್ತಕ ಸಂಗ್ರಹದ ವ್ಯಾಮೋಹ ಬಿಡುವುದು ಕೂಡ ಕಷ್ಟವೇ.
೭. ಸಾಹಿತ್ಯ, ಕತೆ, ಕಾದಂಬರಿ, ಕವಿತೆ ಇತ್ಯಾದಿಗಳು ಕಾಲಾತೀತವೆಂದರೂ ಅವುಗಳ ಮೂಲಕ ಭಾವವನ್ನು ಪರಿಷ್ಕರಿಸಿಕೊಳ್ಳುವುದು ಸಾಧ್ಯವಿದ್ದರೂ, ಅವುಗಳ ಭಾವ ಒಮ್ಮೆ ನಮ್ಮ ಮನಸ್ಸಿಗೆ ಇಳಿದಮೇಲೆ ಅಚ್ಚಾದ ಹಾಳೆಗಳನ್ನು ಇಟ್ಟುಕೊಳ್ಳುವ ಅಗತ್ಯವೇನು?
೮. ಹಾಗೆ ಓದಿ, ವಿಚಾರವನ್ನು ಕೇಳಿ ಬದಲಾಗುವುದಕ್ಕಿಂತ ನಮಗೆ ಬದುಕಿನಿಂದ ದೊರೆಯುವ ಅನುಭವಗಳಿಂದ ಬದಲಾಗುತ್ತೆವೆ ಅಷ್ಟೆ ಅಲ್ಲವೆ. ಆದ್ದರಿಂದಲೇ ಸಮಾಜವನ್ನು ಬದಲಾಯಿಸಲು ಬರೆಯುತ್ತೇನೆ, ಓದಿನಿಂದ ಜನ ಸಂಪನ್ನರಾಗುತ್ತಾರೆ ಅನ್ನುವುದೆಲ್ಲ ಸುಳ್ಳು ಭ್ರಮೆಗಳು. ಜಗತ್ತಿನ ಕೆಡುಕಿಗೆ ಓದಿ ಬುದ್ಧಿವಂತರಾದವರೇ ಹೆಚ್ಚು ಕಾರಣ ಅಲ್ಲವೆ? ಭ್ರಷ್ಟತನ, ಮೊಸ ಇವೆಲ್ಲ ಕೇವಲ ಓದಿನಿಂದ, ಮಾತಿನಿಂದ ಬದಲಾಗುವಂತಿದ್ದರೆ ಜಗತ್ತು ಹೀಗೆ ಯಾಕೆ ಇರುತ್ತಿತ್ತು? ಓದಿನಿಂದ ಬದಲಾಗದ ನಾವು ಪುಸ್ತಕ ಕೂಡಿಟ್ಟುಕೊಂಡು ಬದಲಾಗುತ್ತೇವಾ?