ಪೂನಾ ಒಪ್ಪಂದ

ಪೂನಾ ಒಪ್ಪಂದ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ. ಗೋಪಿನಾಥ್
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ: ೨೦೨೪

‘ದಲಿತರಿಗೆ ಗಾಂಧೀಜಿ ಮಾಡಿದ ಚಾರಿತ್ರಿಕ ವಂಚನೆ’ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡು ಬಂದಿರುವ ‘ಪೂನಾ ಒಪ್ಪಂದ’ ಎನ್ನುವ ಕೃತಿಯು ೧೯೩೨ರ ಸೆಪ್ಟೆಂಬರ್ ೨೪ರಂದು ನಡೆದ ಒಪ್ಪಂದದ ಬಗ್ಗೆ ಸವಿವರವಾದ ಮಾಹಿತಿ ನೀಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರರ ಜೀವನದ ಎರಡು ಪ್ರಮುಖ ಘಟನೆಗಳಾಗಿ ಪೂನಾ ಒಪ್ಪಂದ ಮತ್ತು ಸಂವಿಧಾನ ರಚನೆಯ ಸಂದರ್ಭಗಳನ್ನು ಕಾಣಬಹುದು. ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ, ‘ಅಸ್ಪೃಶ್ಯರು ಹಿಂದೂಗಳಲ್ಲ, ಅವರು ಮುಸ್ಲಿಮರಂತೆ ಪ್ರತ್ಯೇಕ ಅಸ್ಮಿತೆಯುಳ್ಳವರು ಎಂಬುದನ್ನು ಸಾಕ್ಷ್ಯಾಧಾರಗಳ ಸಮೇತ ಬಾಬಾಸಾಹೇಬರು ಸಾಬೀತು ಮಾಡಿದರು ಮತ್ತು ಸಾಮಾಜಿಕವಾಗಿ ವಿಭಿನ್ನರಾದ ಅಸ್ಪೃಶ್ಯರಿಗೆ, ತಮ್ಮ ಪ್ರತಿನಿಧಿಗಳನ್ನು ತಾವೇ ಆರಿಸಿಕೊಳ್ಳುವ ‘ಪ್ರತ್ಯೇಕ ಚುನಾಯಕಗಳು’ (Separate Electorates) ಬೇಕೆಂದು ವಾದಿಸುತ್ತಾರೆ. ಬಾಬಾ ಸಾಹೇಬರ ವಾದವನ್ನು ಬ್ರಿಟೀಷರು ಒಪ್ಪಿಕೊಂಡರೂ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿದ್ದ ಗಾಂಧೀಜಿಯವರು ಒಪ್ಪುವುದಿಲ್ಲ. 

ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾಯಕಗಳನ್ನು ನೀಡುವುದನ್ನು ಉಗ್ರವಾಗಿ ವಿರೋಧಿಸುತ್ತಾರೆ. ಇದರ ಫಲವಾಗಿ , ಅಸ್ಪೃಶ್ಯರಿಗೆ ಒಂದು ಓಟುಳ್ಳ ಪ್ರತ್ಯೇಕ ಚುನಾಯಕಗಳ ಬದಲು, ಎರಡು ಓಟುಗಳುಳ್ಳ ವಿಶೇಷ ಚುನಾಯಕಗಳು ದೊರೆಯುತ್ತದೆ. ಒಂದು ಓಟಿನ ಮೂಲಕ ೭೮ ಕ್ಷೇತ್ರಗಳಲ್ಲಿ ತಮ್ಮ ಪ್ರತಿನಿಧಿಗಳನ್ನೂ, ಮತ್ತೊಂದು ಓಟಿನ ಮೂಲಕ ಇವರ ಕ್ಷೇತ್ರಗಳಲ್ಲಿ ಇತರರನ್ನು ಆರಿಸುವ ಅವಕಾಶವು ಅಸ್ಪೃಶ್ಯರಿಗೆ ದೊರೆಯುತ್ತದೆ. ಆದರೆ, ಇದನ್ನೂ ವಿರೋಧಿಸಿದ ಗಾಂಧೀಜಿಯವರು ಅಮರಣಾಂತ ಉಪವಾಸ ಹೂಡುತ್ತಾರೆ; ಅಸ್ಪೃಶ್ಯರ ನಿರ್ವಿವಾದಿತ ನಾಯಕರಾಗಿ ಬೆಳೆದಿದ್ದ ಬಾಬಾಸಾಹೇಬರು ಭೀಕರ ಒತ್ತಡಕ್ಕೆ ಒಳಗಾಗುತ್ತಾರೆ. ಆಗ ಹುಟ್ಟಿಕೊಂಡ ಹೊಂದಾಣಿಕೆ ಸೂತ್ರದ ಫಲವಾಗಿ ಮೀಸಲಾತಿ ಕ್ಷೇತ್ರಗಳು ಜಾರಿಗೆ ಬಂದವು. ಇದುವೇ ‘ಪೂನಾ ಒಪ್ಪಂದ’.

ಪುಸ್ತಕದ ಪ್ರಾರಂಭದಲ್ಲೇ ಒಂದೆಡೆ “ಪೂನಾ ಒಪ್ಪಂದ ಭಾರತದ ಇತಿಹಾಸದಲ್ಲಿಯ ಒಂದು ಚಾರಿತ್ರಿಕವಾದ ಘಟನೆ. ಇನ್ನೇನು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲು ಜಾತಿಗಳ ಕಪಿಮುಷ್ಟಿಯಿಂದ ಮುಕ್ತರಾಗಿ ಈ ಮಣ್ಣಿನ ಮಕ್ಕಳು ಸ್ವಾತಂತ್ರ್ಯ ಪಡೆಯುತ್ತಾರೇನೋ ಎನ್ನುತ್ತಿರುವಾಗಲೇ ಅವರು ಪಡೆದ ಸ್ವಾತಂತ್ರ್ಯವನ್ನು ಕಸಿದುಕೊಂಡ ಒಪ್ಪಂದವೇ ‘ಪೂನಾ ಒಪ್ಪಂದ’. ಇದು ಬಲಾತ್ಕಾರವಾಗಿ ಈ ದೇಶದ ದಲಿತರ ಮೇಲೆ ಹೇರಿದ ಕಟ್ಟಳೆ. ಅನೇಕ ಸಾವಿರ ವರ್ಷಗಳವರೆಗೆ ಈ ದೇಶದ ಶೂದ್ರ ಮತ್ತು ಅತಿ ಶೂದ್ರರ ಮೇಲೆ ಹೇಗೆ ಮನುಸ್ಮೃತಿಯನ್ನು ಹೇರಲಾಗಿತ್ತೋ ಹಾಗೆಯೇ ಪೂನಾ ಒಪ್ಪಂದವನ್ನು ಸಹ ಹೇರಲಾಯಿತು. ಮನುಸ್ಮೃತಿ ಮತ್ತು ಪೂನಾ ಪ್ಯಾಕ್ಟ್ ನಡುವೆ ಒಂದೇ ಒಂದು ಅಂತರವಿದೆ. ಅದಾವುದೆಂದರೆ ‘ಪೂನಾ ಪ್ಯಾಕ್ಟ್’ ಎಂಬ Pills ಗೆ ಸಿಹಿ ಲೇಪನವಿದೆ. ಇವೆರಡೂ ಈ ದೇಶದ ಅಸಹಾಯಕರಾದ ದಲಿತರ ಮೇಲೆ ಉದ್ದೇಶಪೂರ್ವಕವಾಗಿ ಬಲತ್ಕಾರದಿಂದ ಹೇರಿದ್ದಕ್ಕಾಗಿಯೇ ಶತಮಾನದುದ್ದಕ್ಕೂ ಭಾರತ ಗುಲಾಮಗಿರಿಯಲ್ಲಿ ಕೊಳೆಯಬೇಕಾಯಿತು. ಸ್ವಾತಂತ್ರ್ಯ ಬಂದು ೭ ದಶಕಗಳು ಗತಿಸಿ ಹೋದರೂ ಬಡತನ, ಶೋಷಣೆ ಕ್ರೌರ್ಯ ಇವ್ಯಾವುವೂ ಬಹುಜನರ ಮೇಲೆ ಕಡಿಮೆಯಾಗಿಲ್ಲ ಮತ್ತು ಆಗುವುದೂ ಇಲ್ಲ ಏಕೆಂದರೆ, ಬಹುಜನರ ಸ್ವಾತಂತ್ರ್ಯದ ಕೀಲಿ ಕೈಯನ್ನು ಪೂನಾ ಒಪ್ಪಂದದ ಮುಖಾಂತರ ಕಸಿದುಕೊಳ್ಳಲಾಗಿದೆ. ಇದು ಇಂಡಿಯಾದ ದುರ್ವಿಧಿ.” ಎಂದು ಈ ಕೃತಿಗೆ ಮುನ್ನುಡಿ ಬರೆದ ಡಾ. ಶಿವರುದ್ರ ಕಲ್ಲೋಳಿಕರ ಇವರು ಬರೆದಿದ್ದಾರೆ.

ಈ ಕೃತಿಯ ಲೇಖಕರಾದ ಎಂ. ಗೋಪಿನಾಥ ತಮ್ಮ ಮಾತಿನಲ್ಲಿ ಒಂದೆಡೆ “ಪೂನಾ ಒಪ್ಪಂದ ಫಲವಾಗಿ ಹುಟ್ಟಿಕೊಂಡ ಚಮಚಾಯುಗದಿಂದ ಮುಕ್ತಿ ಪಡೆಯಲು ಎಸ್ ಸಿ/ ಎಸ್ ಟಿ/ ಒಬಿಸಿ ಗಳನ್ನೆಲ್ಲಾ ಒಳಗೊಂಡ ಒಂದು ರಾಜಕೀಯ ಹೋರಾಟವು ಮಾತ್ರವೇ ಏಕೈಕ ಮಾರ್ಗ ಎಂಬುದನ್ನು ಬಾಬಾ ಸಾಹೇಬರು ತಮ್ಮ ಜೀವಿತ ಕಾಲದಲ್ಲೇ ತೋರಿದರು. ಆದರೆ ಬಾಬಾ ಸಾಹೇಬರ ಅನುಯಾಯಿಗಳು ಅದನ್ನು ಅರಿಯಲು ವಿಫಲರಾದರು. ೧೯೭೦ರ ದಶಕದಲ್ಲಿ, ಭಾರಿ ಸದ್ದು ಮಾಡಿದ ದಲಿತ ಚಳುವಳಿಯಲ್ಲಿದ್ದ ಬುದ್ದಿ ಜೀವಿಗಳಿಗೂ ಸಹ ‘ಭೀಮಮಾರ್ಗ’ವು ಅರ್ಥವಾಗಲಿಲ್ಲ. ಇದರ ಪರಿಣಾಮವಾಗಿ ದಲಿತ ನಾಯಕರೂ ಸಹಾ ಚಮಚಾ ರಾಜಕಾರಣಕ್ಕೆ ಬಲಿಯಾದರು.” ಎಂದು ನೋವನ್ನು ವ್ಯಕ್ತಪಡಿಸುತ್ತಾರೆ.

ಪೂನಾ ಒಪ್ಪಂದ ಎನ್ನುವ ಈ ಪುಟ್ಟ ಕೃತಿಯು ೧೭೯೯ರ ಮೇ ೪ರ ಟಿಪ್ಪೂ ಸುಲ್ತಾನನ ಅಂತ್ಯದೊಂದಿಗೆ ಪ್ರಾರಂಭವಾಗುತ್ತದೆ. ಸುಮಾರು ೫೦ ಪುಟಗಳ ಈ ಪುಟ್ಟ ಪುಸ್ತಕವು ನಮ್ಮ ದೇಶದಲ್ಲಿ ನಡೆದ ಚಾರಿತ್ರಿಕ ಘಟನೆಯೊಂದನ್ನು ಸಮರ್ಥವಾಗಿ ಓದುಗರೆದುರು ತೆರೆದಿಡುತ್ತಿದೆ.