ಪೂರ್ಣಚಂದ್ರನಿಗೆ ಮುಖವಾಡವಿಲ್ಲ

ಪೂರ್ಣಚಂದ್ರನಿಗೆ ಮುಖವಾಡವಿಲ್ಲ

ಪುಸ್ತಕದ ಲೇಖಕ/ಕವಿಯ ಹೆಸರು
ಫಕೀರ (ಶ್ರೀಧರ ಬನವಾಸಿ ಜಿ.ಸಿ.)
ಪ್ರಕಾಶಕರು
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಭುವನೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೪೦.೦೦, ಮುದ್ರಣ: ೨೦೨೧

ಫಕೀರ ಕಾವ್ಯನಾಮದ ಶ್ರೀಧರ ಬನವಾಸಿ ಇವರು ಬರೆದ ಕವನ ಸಂಕಲನ ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ' ಎಂಬ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಪ್ರದೀಪಕುಮಾರ್ ಹೆಬ್ರಿ ಇವರು. ಇವರು ಶ್ರೀಧರರ ಕವನಗಳನ್ನು ಬಹಳ ಸೊಗಸಾಗಿ ಅನಾವರಣ ಮಾಡುತ್ತಾ ಮುನ್ನುಡಿಯನ್ನು ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಗಿ…

ತಮ್ಮ ಕೃತಿಗಳ ಮೂಲಕ ಕನ್ನಡನಾಡಿನ ಓದುಗರಿಗೆ ಈಗಾಗಲೇ ಪರಿಚಿತರಾಗಿರುವ ಕವಿ ಶ್ರೀಧರ ಬನವಾಸಿ ಅವರು ತಮ್ಮ `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಕ್ಕೆ ಮುನ್ನುಡಿ ಅಪೇಕ್ಷಿಸಿ ಕರೆ ಮಾಡಿದಾಗ ನಿಜಕ್ಕೂ ಅಚ್ಚರಿಯಾಯಿತು. ನಾನವರನ್ನು ನೋಡಿದ್ದು ಕೇವಲ ಒಂದು ಬಾರಿ ಆದರೂ ಕೃತಿ ಬಿಡುಗಡೆ ಸಮಾರಂಭಕ್ಕೆ ನಾವಿಬ್ಬರೂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂದರ್ಭದಲ್ಲಿ. ಆದರೆ ಶ್ರೀಧರ್ ಅವರ ಕುರಿತಂತೆ ಈ ಮೊದಲೇ ಬಹುವಾಗಿ ಕೇಳಿದ್ದೆ. ಅವರೊರ್ವ ಭರವಸೆಯ ಗಟ್ಟಿ ಬರಹಗಾರ ಎಂಬುದು ಅವರ ಹಲವಾರು ಕೃತಿಗಳಿಂದ ಹಾಗೂ ನಾಡಿನ ಹಿರಿಯ ಬರಹಗಾರರಿಂದ ತಿಳಿದಿದ್ದೆ. ಮೂವತ್ತಾರರ ಹರೆಯದಲ್ಲೇ ಅರವತ್ಮೂರರ ಸಾಧನೆ ಮಾಡಿರುವ ಶ್ರೀಧರ ಸಾಹಿತ್ಯ ಸಂಸ್ಕೃತಿಗೆ ನಿತ್ಯ ಹಸಿರಾಗಿರುವವರು. ಇಂಜಿನಿಯರಿAಗ್ ಪದವೀಧರರಾಗಿಯೂ ಸಾಹಿತ್ಯ–ಮಾಧ್ಯಮ ಕ್ಷೇತ್ರದತ್ತ ಆಕರ್ಷಿತರಾದವರು. ಅದರಲ್ಲೇ ತಮ್ಮ ಬದುಕನ್ನೂ ಕಂಡುಕೊಂಡವರು. ತಮ್ಮ `ಬೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ತಮ್ಮ ಸಾಹಿತ್ಯದ `ಬೇರು’ ಗಟ್ಟಿಮಾಡಿಕೊಂಡವರು. ಇವರ ಮೊದಲ ಕೃತಿ ಬಂದಿದ್ದು 2012ರಲ್ಲಿ. ಅಂದರೆ ಅವರ ಸಾಹಿತ್ಯ ಕೃಷಿಗೆ ಇದೀಗ ದಶಮಾನೋತ್ಸವ ಸಂಭ್ರಮ. ಅವರು ಕಾವ್ಯ ಬದುಕನ್ನು ಆರಂಭ ಮಾಡಿದ್ದು ಒಂಬತ್ತನೇ ತರಗತಿಯಲ್ಲಿರುವಾಗ ಎಂದು ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ `ಕಾವ್ಯ’ ಅವರ ರಕ್ತಕ್ಕೆ ಅಂಟಿಕೊAಡು ಬಂದದ್ದು ಎಂದು ಧಾರಾಳವಾಗಿ ಹೇಳಬಹುದು. 

ಇಷ್ಟೆಲ್ಲಾ ಹಿರಿಮೆಗಳ ನಡುವೆ ಶ್ರೀಧರ ಬನವಾಸಿಯವರು ಅವರ `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಕ್ಕೆ ನನ್ನಿಂದ ಮುನ್ನುಡಿ ಅಪೇಕ್ಷಿಸಿದಾಗ `ಗೀರು’ವನ್ನು `ಮೇರು’ವಾಗಿಸುವಲ್ಲಿ ಅವರು ನನ್ನಿಂದ ಮುನ್ನುಡಿಯನ್ನಾಗಿಸಿ ಸಾಹಿತ್ಯ ಕ್ಷೇತ್ರದಲ್ಲಿ ನನ್ನ ಪಾಡಿಗೆ ಒಂದಷ್ಟು ಬೆಳೆ-ಕಳೆ-ಕೆಳೆ ಕಾಣುತ್ತಾ ‘ನೆಲೆ’ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನನಗೆ ‘ಮೇರು ಗೌರವ’ ತೋರಿದ್ದಾರೆಂದು ಅನಿಸಿತು. ಒಂದಷ್ಟು ಸಂಕೋಚವೂ ಕಾಡಿತು. `ಸಾಹಿತ್ಯ ಗೀರು’ವಾಗಿರುವ ನಾನು ಶ್ರೀಧರ್ ಅವರ ಕವನ ಸಂಕಲನಕ್ಕೆ ಮುನ್ನುಡಿ ಬರೆಯುವುದರ ಮೂಲಕ ‘ಮೇರು’ ಸ್ಥಾನ ಪಡೆಯುವುದಾದರೆ ಏಕಾಗಬಾರದು ಎಂಬ ಭಾವನೆಯಿಂದಲೇ ಶ್ರೀಧರ ಬನವಾಸಿ ಅವರ `ಸಾಹಿತ್ಯ ದೀಕ್ಷೆ’ಗೆ ನನ್ನ ಮುನ್ನುಡಿಯ ನುಡಿಗಳನ್ನು ಉಚ್ಚರಿಸುತ್ತಿರುವೆ. `ಸಾಹಿತ್ಯ ಚಿನ್ಮಯಿ’ಯಾಗಿ ನಮ್ಮೆದುರು ಪ್ರಜ್ವಲ ಪ್ರಕಾಶದಿಂದ ಶೋಭಿಸುತ್ತಿರುವ ಶ್ರೀಧರ ಅವರಿಗೆ ಮೊದಲು ಹಾರ್ದಿಕ ಅಭಿನಂದನೆ ಸಲ್ಲಿಸುತ್ತಿರುವೆ. 

ಬಸವಣ್ಣನವರು ನಡೆ-ನುಡಿ-ಶುದ್ಧತೆಯನ್ನು ಪ್ರತಿಪಾದಿಸಿದವರು. ಶ್ರೀಧರ ಅವರು ನಡೆ-ನುಡಿ-ಶುದ್ಧತೆಯನ್ನು ಬದುಕ ಮಂತ್ರವಾಗಿಸಿ ಬಾಳುತ್ತಿರುವವರು. ನಾನೇರಿದ ಎತ್ತರವನ್ನು ಅರಿತಿದ್ದರೂ `ಎನಗಿಂತ ಕಿರಿಯರಿಲ್ಲ’ ಎಂಬ ಅವರ ಮುಗ್ಧತೆಯ ಪ್ರತಿಬಿಂಬದಂತಿರುವ ಅವರ ಮೆಲುಮಾತು ಹಾಗೂ ಹೂನಗುವಿನಲ್ಲೇ! ನಾನವರ ವ್ಯಕ್ತಿತ್ವವನ್ನು ದರ್ಶಿಸಬಹುದು. ತಮ್ಮ ನಿಲುವು ಹಾಗೂ ಬರಹ ಎರಡರಿಂದಲೂ ಎಂಥವರನ್ನೂ ಗಾರುಡಿಯ ಮೋಡಿಗೆ ಒಳಪಡಿಸುವ ಕುಸುರಿತನ ಶ್ರೀಧರ ಅವರಲ್ಲಿದೆ. 

ಶ್ರೀಧರ ಬನವಾಸಿ ಅವರು `ಫಕೀರ’ ಕಾವ್ಯನಾಮದಲ್ಲಿ ತಮ್ಮ ಕವನ ಸಂಕಲನವನ್ನು ಹೊರತರುತ್ತಿದ್ದಾರೆ. `ಫಕೀರ’ ಎಂದರೆ ಮುಸಲ್ಮಾನ ಸನ್ಯಾಸಿ, ಸಾಧು ಎಂಬ ಸಾಮಾನ್ಯ ಅರ್ಥವಿದೆ. ಇದರೊಡನೆ `ಅಕಿಂಚನ’ ಎಂಬ ವಿಶೇಷಾರ್ಥವೂ ಇದೆ. `ಅಂಕಿಚನ’ ಎಂದರೆ ಕೈಯಲ್ಲಿ ಏನೂ ಇಲ್ಲದವನು ಎಂದರ್ಥ. ನಮ್ಮೀ `ಫಕೀರ’ನೂ ಕೈಯಲ್ಲಿ ಏನೂ ಇಲ್ಲದವನು. ಆದರೆ ಎಲ್ಲವನ್ನೂ ಹೃದಯದಲ್ಲಿ ಧಾರಾಳವಾಗಿ ತುಂಬಿಟ್ಟುಕೊಂಡು ಮನಸಾರೆ ನೀಡುತ್ತಿರುವವನು. ಹಾಗಾಗಿಯೇ ಈ `ಫಕೀರ’ನ ಒಂದು ದಶಕದ ಕೃತಿಗಳು ಸಮಾಜಕ್ಕೆ ದಾರಿದೀಪವಾಗಿ ಬೆಳಗಿವೆ, ಬೆಳಗುತ್ತಲೇ ಇವೆ. ಹೊಟ್ಟೆಯ ಹಸಿವನ್ನು ನೀಗುವಲ್ಲಿ ಹೆಚ್ಚು ಉತ್ಸಾಹ ತೋರದೆ, ಮನದ ಬಯಕೆಗಳನ್ನು ಆರೋಗ್ಯಪೂರ್ಣವಾಗಿ ಈಡೇರಿಸುವಲ್ಲಿ `ಕೃತಿ–ಕಾವ್ಯಧಾರೆ’ ಹರಿಸುತ್ತಿರುವ ಶ್ರೀಧರ ಬನವಾಸಿ ಅವರು `ಪೂರ್ಣಚಂದ್ರ’ರು. ಅವರಿಂದ ಸಮಾಜ ಯಥೇಚ್ಛವಾಗಿ ಪಡೆದಿರುವಾಗ ಮುಖವಾಡ ಎಲ್ಲಿಂದ ಬಂತು? ಹಾಗಾಗಿ ಶ್ರೀಧರ ಬನವಾಸಿ ಅವರ ಕೃತಿಗಳು `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಎಂಬುದನ್ನು ಸ್ಪಷ್ಟವಾಗಿ ತೋರಿವೆ ಎಂಬುದು ನನ್ನ ಅನಿಸಿಕೆ. ಅಂತಹ ಕೃತಿಗಳ ಸಾಲಿಗೆ ಹೊಸ ಸೇರ್ಪಡೆಯೇ ಅವರ ಈ ಕವನ ಸಂಕಲನ. 

`ಕವನ’ ಎಂದಾಕ್ಷಣ ಮನಸ್ಸಿಗೆ ಹಿರಿಯ ಕವಿಗಳ ಹಲವಾರು ಮಾತುಗಳೆಲ್ಲ ನೆನಪಿಗೆ ಬರುತ್ತವೆ. ಎಲ್ಲವನ್ನೂ ಒಗ್ಗೂಡಿಸಿ ಹೇಳುವುದಾದರೆ `ಸಾಹಿತ್ಯದ ಮೂಲದ್ರವ್ಯ ಜೀವನವೇ ಆಗಿದೆ. ಸಾಹಿತಿಯು ಬರವಣಿಗೆಯ ಮಾಧ್ಯಮದ ಮೂಲಕ ತನ್ನ ಆಲೋಚನೆಗಳಿಗೆ ಆಕೃತಿಯನ್ನು ನೀಡುತ್ತಾನೆ. ಅದರಲ್ಲೂ `ಕಾವ್ಯ’ ಬರೆವಣಿಗೆಯಲ್ಲೇ ಅತ್ಯಂತ ಸಶಕ್ತವಾದ ಸಂವಹನದ ಶಕ್ತಿಯನ್ನು ಹೊಂದಿದೆ. ಕವಿತೆಗೆ ಓದುಗನನ್ನು ತನ್ನ ಆತ್ಮೀಯ ತೆಕ್ಕೆಯಲ್ಲಿ ಅಪ್ಪಿಕೊಳ್ಳಬಲ್ಲ, ತನ್ನ ವಿಶಿಷ್ಟವಾದ ಧ್ವನಿಯಿಂದ ವಿಸ್ಮಯ ಪ್ರಪಂಚವನ್ನು ತೆರೆದು ಬೆರಗುಗೊಳಿಸಬಲ್ಲ, ತನ್ನ ಯಾತನೆಗಳ ಮೂಲಕ ಓದುಗನನ್ನೂ ಸಂವೇದನೆಗಳಿಂದ ಬಿಡುಗಡೆ ಮಾಡಬಲ್ಲ ಅದ್ಭುತವಾದ ಶಕ್ತಿಯಿದೆ. ಈ ಶಕ್ತಿಯನ್ನು ಕವಿಯಾದವನು ಆವಾಹಿಸಿಕೊಳ್ಳಬೇಕು. ಜೀವನಕ್ಕೆ ಏಷ್ಟು ತೀವ್ರವಾಗಿ ಸ್ಪಂದಿಸುತ್ತಾನೋ ಅದಕ್ಕಿಂತ ತೀವ್ರವಾಗಿ ಶಬ್ದಗಳಲ್ಲಿ ಗ್ರಹಿಸಿ ಅಷ್ಟೇ ಗಾಢವಾದ ಅಭಿವ್ಯಕ್ತಿಯಲ್ಲಿ ತನ್ನೊಳಗಿನ ಜಗತ್ತನ್ನು ಬಿಚ್ಚಿಡಬೇಕು. ಇದೊಂದು ರೀತಿಯಲ್ಲಿ ಕಾವ್ಯದ ತಪಸ್ಸು ಅಕ್ಷರ ಪೂಜೆ. ಇದು ಸಾಮಾನ್ಯ ಮನಸ್ಥಿತಿಗೆ ಸಿದ್ದಿಸುವಂಥದ್ದಲ್ಲ. ಈ `ಸಿದ್ಧಿ’ಗೆ ಅತ್ಯಂತ ಅವಶ್ಯವಾಗಿ ಇರಲೇಬೇಕಾದ ಎರಡು ಪರಿಕರಗಳೇ ಅಂತಃಕರಣ ಮತ್ತು ಸತ್ಯಾಭಿವ್ಯಕ್ತಿಯ ಪ್ರಬಲ ಶಕ್ತಿ. 

ಕಾವ್ಯಕ್ಕೆ ಅನುಭವವೇ ಮೂಲದ್ರವ್ಯ ಎಂಬ ಮಾತು ಇದೆ. ಆದರೆ ತನ್ನ ಅನುಭವವನ್ನು ಹೇಳಿಬಿಡುವ ಆತುರದಲ್ಲಿ ಕಾವ್ಯಕ್ಕೆ ಸೂಕ್ಷ್ಮತೆ ಸಾಧಿಸಲಾಗದು. ಸಹೃದಯನು ದ್ರವಿಸಿದಾಗ ಮಾತ್ರ ಕವಿತೆ ತನ್ನ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ಆಗ ಕವಿ ಕೂಡ ಸಾರ್ಥಕತೆಯನ್ನು ಪಡೆಯುತ್ತಾನೆ. ಶ್ರೀಧರ ಬನವಾಸಿ ಅವರ `ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಸಂಕಲನದ ಕವಿತೆಗಳು ತಮ್ಮ ಜನ್ಮಸಾರ್ಥಕತೆಯನ್ನು ಕಂಡುಕೊAಡಿವೆ. ಕವಿಯೂ ಸಾರ್ಥಕತೆಯನ್ನು ಅನುಭವಿಸಿದ್ದಾನೆಂದು ನಾವು ನಿಖರವಾಗಿ ಹೇಳಬಹುದು. ಬದುಕನ್ನು ಬಗೆದು ನೋಡುವ ಚಿಕಿತ್ಸಕ ದೃಷ್ಟಿ, ಪ್ರಕೃತಿ ಪ್ರೇಮ, ವಿಶ್ವಾನುಕಂಪ... ಇವು ಕವಿಗಿರಬೇಕಾದ ಮೂಲದ್ರವ್ಯ. ಇವು ಕವಿ ಶ್ರೀಧರ ಬನವಾಸಿ (ಫಕೀರ) ಅವರಲ್ಲಿ ಸಮೃದ್ಧವಾಗಿವೆ. ಗ್ರಹಿಕೆಯಲ್ಲಿನ ಸೂಕ್ಷ್ಮ ಪ್ರಜ್ಞೆಯನ್ನು ಅವರು ಅಭಿವ್ಯಕ್ತಿಯಲ್ಲಿ ಸಾಧಿಸಿ ತೋರಿದ್ದಾರೆಂಬುದು ನಿರ್ವಿವಾದ. 

41 ಕವನಗಳಿಂದ ಈ ಸಂಕಲನದ ಮೊದಲ ಕವಿತೆ `ಆತ್ಮಕತೆಯ ನೆಪದಲ್ಲಿ’ ಕವಿಗೆ ತಾನು ಬದುಕಿನಲ್ಲಿ ಕಂಡುಂಡ ಎಲ್ಲವನ್ನೂ `ಆತ್ಮಕತೆಯ ನೆಪದಲ್ಲಿ’ ಸುಂದರವಾಗಿ ದಾಖಲಿಸುವಾಸೆ. ಒಂದು ಪ್ರಾಮಾಣಿಕ ಆತ್ಮಕತೆಯೆಂದರೆ ಸಾವಿರದ ಸಾವಿರದ ನೆನಪುಗಳು, ತಲ್ಲಣಗಳು, ಯೋಚನೆಗಳು, ಆನಂದದ ರಸದೂಟ ಬಲ್ಲವನೇ ಬಲ್ಲ ಅದರ ರುಚಿಯ! ಬದುಕಿನಲ್ಲಿ ಎದುರಾಗುವ ಎಲ್ಲವನ್ನೂ ಮಾತು, ಮೌನ, ಸಂಭ್ರಮ, ಹೋರಾಟ, ಸಾವು, ಗೆಲುವುಗಳ ಮೂಲಕ ಎದುರಿಸಿ ಗುರಿ ಸೇರುವ ತವಕದಲ್ಲಿರುವಾಗ `ಕೊರೊನಾ’ ಬದುಕಿನ ದಾರಿಯನ್ನೇ ಬದಲಿಸಿದ ಯಾತನೆ ಅವರಲ್ಲಿದೆ. `ಗೆಲುವು’ ಗೆದ್ದ ಕಾರಣದಿಂದಲ್ಲದೆ `ಇದ್ದ’ ಕಾರಣದಿಂದ ಎಂದಾದಾಗ ಅವರ ಪಿಸುನುಡಿಯದು.

“ಅಷ್ಟು ದಿನಗಳ ನಿರೀಕ್ಷೆಗಳು
ಒಂದು ಅಂತಿಮ ನಿಲ್ದಾಣವನ್ನು ತಲುಪಿದ್ದವು
ಉಸಿರು ಬಿಗಿ ಹಿಡಿದು ತಾಳ್ಮೆಯ ತಪವ ಮಾಡುತ
ಒಳಗಿನ ಭಾವನೆಗಳನ್ನು ಅದುಮಿಕೊಂಡು
ಅನುಭವಿಸಿದ ಯಾತನೆ
ಬದುಕಿನ ಪರೀಕ್ಷೆಯನು
ಪ್ರಶ್ನೆಪತ್ರಿಕೆ ಇಲ್ಲದೇ ಬರೆದು ಗೆದ್ದಂತೆ!”

ಸವಾಲುಗಳೇ ಇಲ್ಲದಿರುವ ಬದುಕಿನಲ್ಲಿ ಸ್ವಾರಸ್ಯಗಳು ಇರುವುದಿಲ್ಲ. ನಮ್ಮ ಹಿರಿಯರ `ಈಸಬೇಕು, ಇದ್ದು ಜೈಸಬೇಕು’ ಎಂಬ ಮಾತಿನಲ್ಲೇ ಕವಿಗೆ ವಿಶ್ವಾಸ, ಎದುರಾಳಿಯಿಲ್ಲದೇ ಸಿಕ್ಕ ಗೆಲುವೊಂದು ಗೆಲುವೇ? ಎಂಬುದವರ ನಿಲುವು. ಹಾಗಾಗಿಯೇ ಗೆಲ್ಲಬಯಸುತ್ತಾರೆ. ಬದುಕಿನ ನೆನಪುಗಳನ್ನು ಆತ್ಮಕಥೆಯ ನೆಪದಲ್ಲಿ ದಾಖಲಿಸ ಬಯಸುತ್ತಾರೆ.

ಆದರೆ ಅವರಿಗೆ `ನೆನಪುಗಳು ಭಯ ಹುಟ್ಟಿಸುತ್ತಿವೆ’ಯೆಂಬ ಭೀತಿಯೂ ಕಾಡುತ್ತಿದೆ. ಈ ಭೀತಿಯನ್ನು ಹೋಗಿಸುವಲ್ಲಿ ಉರಿವ ಸೂರ್ಯನ ಮುಖದಲ್ಲಿ ಸುಶಾಂತ ಬಿಂಬವು `ಬುದ್ಧ’ನೆಂಬ ಅಹಿಂಸೆಯ ಅವತಾರವಾಗಿ ಕಾಣಿಸಿದೆ. ಆದರೆ ಎಂತಹ `ದಾರ್ಶನಿಕ’ರು `ಅಗ್ನಿಶಿಖೆಯ ಮಾಯೆ’ಯಾಗಿ ಕಾಡುತ್ತಿದೆಯೆಂಬ ಆತಂಕವೂ ಆವರಿಸಿಕೊಂಡಂತಿದೆ. `ಮಾಯೆ’ಗೆ ಮನಸೋಲದವರಾರು? ಮಾಯೆಯನ್ನು ಗೆದ್ದವರಾರು? ನಾವೆಲ್ಲರೂ ‘ಮಾಯಾಪಾಶದ ಬಂಧಿಗಳೇ! ಈ ಮಾಯೆಯ ಎದುರು ಸಜ್ಜನಿಕೆ ಸತ್ಸಂಗ ಸದಭಿರುಚಿಗಳೆಲ್ಲವೂ ಮರೆಯಾಗಿ ಮಾನವ `ದೇವ’ನಾಗುವ ಬದಲು ದಾನವನೇ ಆಗುತ್ತಾನೆಂದು

`ಪೂರ್ಣವಿರಾಮ’ ಹಾಕುವ ಬಯಕೆಯಲ್ಲಿ ಕವಿ ಸಂಕಲನದ ಕೊನೆಯ ಪದ್ಯದಲ್ಲಿ ಪ್ರಾಯಶ್ಚಿತ್ತಕ್ಕೆ ಪೂರ್ಣವಿರಾಮ ಸಿಗುವವರೆಗೂ ಬದುಕ ಸವೆಸಲೇ?” ಎಂದು ಕೇಳುತ್ತ, ಪೂರ್ಣವಿರಾಮ ಹಾಕಲಾಗದ ಸಂಕಟದಲ್ಲಿದ್ದಾರೆ. `ಅಶೋಕವನದ ಸೀತೆ’ಯಾಗಿ ಅತ್ತ ಜಿಂಕೆಯೂ ಸಿಗದ ಇತ್ತ ರಾಮನೂ ಇಲ್ಲದ ದುಃಖದಲ್ಲಿ ಬೆಂದಿದ್ದಾರೆ. ನೂರಾರು ಮುಖಗಳ ನಡುವೆ. ‘ಒಳಗಿನ ವ್ಯಕ್ತಿ’ಯನ್ನು ಕಾಣುವ ಹಂಬಲದಲ್ಲಿ `ತೂತು ಮಡಿಕೆಯ ದ್ರವ್ಯ’ ಸೋರಿ ಹೋಗುವಂಥದ್ದು, ಸೇರುವಂಥದ್ದಲ್ಲವೆಂಬ ಖಚಿತ ನಿಲುವನ್ನು ಹೊಂದಿದ್ದಾರೆ. `ಪೂರ್ಣಚಂದಿರನಿಗೆ ಮುಖವಾಡ’ವಿಲ್ಲದಿದ್ದರೂ ಪೂರ್ಣಚಂದ್ರನಾಗುವ ತನಕ ಮಾನವ ತನ್ನ ಬದುಕೆನುವ ಮುಖವಾಡದೊಳಗೇ ತನ್ನ ಇರವು ಹಾಗೂ ಅರಿವನ್ನು ತೋರುತ್ತಿರಬೇಕೆಂದು ನಿರ್ಧರಿಸಿ ಈ ಸಂಕಲನದ ನಲ್ವತ್ತೊಂದು ಕವನಗಳಿಂದ ಮುಖವಾಡದೊಳಗಿನ ಬದುಕು ಮತ್ತು ಮುಖವಾಡ ಕಳಚಿದಂತೆ ಸಿಗಬಹುದಾದ ಒಳಿತುಗಳ ಅನಾವರಣ ಮಾಡಿದ್ದಾರೆ.”