ಪೂರ್ವಜರ ನೆನಪುಗಳ ದಾಖಲಾತಿಯ ಚಾರಿತ್ರಿಕ ಮೌಲ್ಯ

ಪೂರ್ವಜರ ನೆನಪುಗಳ ದಾಖಲಾತಿಯ ಚಾರಿತ್ರಿಕ ಮೌಲ್ಯ

“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ” - ನನ್ನ ತಂದೆಯವರ ಬಗ್ಗೆ ನಾನು ಬರೆದು ಪ್ರಕಟಿಸಿದ ಪುಸ್ತಕ (2004ರಲ್ಲಿ). “ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್” - ನನ್ನ ದೊಡ್ಡಪ್ಪನವರ ಬದುಕಿನ ಸಾಧನೆಗಳ ಕುರಿತು ನಾನು ಬರೆದು, ಕಾಂತಾವರ ಕನ್ನಡ ಸಂಘ “ನಾಡಿಗೆ ನಮಸ್ಕಾರ: ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ”ಇಲ್ಲಿ ಪ್ರಕಟಿಸಿದ ಪುಸ್ತಕ (2009ರಲ್ಲಿ). ಇವು ಪ್ರತಿಯೊಬ್ಬರಿಗೂ ಮಾದರಿಯಾಗಬಲ್ಲ ಆ ಧೀಮಂತ ವ್ಯಕ್ತಿಗಳ ಆದರ್ಶ ಬದುಕಿನ ಹಾಗೂ ಮರೆಯಬಾರದ ನೆನಪುಗಳ ದಾಖಲಾತಿ ಪುಸ್ತಕಗಳು.

ಇಂತಹ ದಾಖಲಾತಿ ಪುಸ್ತಕಗಳು ಯಾಕೆ ಬೇಕು? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. ಭಾವನಾತ್ಮಕವಾಗಿ ಉತ್ತರಿಸುವುದಾದರೆ, ನಾವು ಗೌರವಿಸುವ ನಮ್ಮ ಪೂರ್ವಜರ ನೆನಪುಗಳನ್ನು ಹಲವು ತಲೆಮಾರುಗಳಿಗೆ ದಾಟಿಸಲಿಕ್ಕಾಗಿ ದಾಖಲಿಸಿದ್ದೇವೆ ಎಂಬ ಉತ್ತರ ಸೂಕ್ತ.

ಅದಕ್ಕಿಂತ ಮಿಗಿಲಾಗಿ, ಒಂದು ಕುಟುಂಬದ ಪೂರ್ವಜರು ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು ಎಂದರೆ ಇತರರು ನಂಬಲಿಕ್ಕಿಲ್ಲ. ಪೂರ್ವಜರ ಪ್ರಾಮಾಣಿಕತೆ, ಸತ್ಯಸಂಧತೆ, ನಿಸ್ವಾರ್ಥತೆ, ದೂರದೃಷ್ಟಿ, ಶ್ರಮಜೀವನ, ಕಷ್ಟ ಸಹಿಸುವ ಗುಣ ಇವೆಲ್ಲಾ ನಂತರದ ತಲೆಮಾರಿನವರಿಗೆ ಕಟ್ಟುಕತೆಗಳಂತೆ ಕಂಡೀತು. ಅವು ಸತ್ಯಕತೆಗಳೆಂದು ಮುಂದಿನ ತಲೆಮಾರಿನವರು ನಂಬಬೇಕಾದರೆ, ಇಂತಹ ದಾಖಲಾತಿಗಳು ಮುಖ್ಯವಾಗುತ್ತವೆ.  

ಆದರೆ ಇಂತಹ ಪುಸ್ತಕಗಳು ಅದಕ್ಕಿಂತಲೂ ಮಿಗಿಲಾದ ಉದ್ದೇಶಗಳನ್ನು ಸಾಧಿಸುತ್ತವೆ. ಪಿಜ್ಜ - ಅಜ್ಜ - ಮಗಂದಿರು, ಮಗಳಂದಿರು - ಅವರ ಮಕ್ಕಳು - ಮೊಮ್ಮಕ್ಕಳು - ಮರಿಮಕ್ಕಳು - ಹೀಗೆ ತಲೆಮಾರಿನಿಂದ ತಲೆಮಾರಿಗೆ ಕುಟುಂಬ ಬೆಳೆಯುತ್ತದೆ. ಆದರೆ, ಈಗಿನ ತಲೆಮಾರಿನವರಿಗೆ ಹಿಂದಿನ ಎರಡು ತಲೆಮಾರಿನವರ ಬದುಕು ಮತ್ತು ಸಾಧನೆಗಳ ಮಾಹಿತಿ ತಿಳಿದಿರಬಹುದು, ಅಷ್ಟೇ. ಅದಕ್ಕಿಂತ ಹಿಂದಿನ ತಲೆಮಾರಿನವರ ಬಗ್ಗೆ ಏನೂ ತಿಳಿದಿರುವುದಿಲ್ಲ. ಇದೊಂದು ನಷ್ಟ - ಕುಟುಂಬದ “ಸಂಪತ್ತ”ನ್ನೇ ಕಳೆದುಕೊಂಡಂತಹ ತುಂಬಲಾಗದ ನಷ್ಟ. ಇಂತಹ ಪುಸ್ತಕಗಳು ಯಾವುದೇ ಕುಟುಂಬಕ್ಕೆ ಅಂತಹ ನಷ್ಟ ಆಗದಂತೆ ಮಾಡುತ್ತವೆ.

ನಮ್ಮ ಪೂರ್ವಜರ ಬದುಕು ಮತ್ತು ಸಾಧನೆಗಳ ಮಾಹಿತಿ ಕಳೆದುಕೊಳ್ಳುವುದು ತುಂಬಲಾಗದ ನಷ್ಟ. ಯಾಕೆಂದರೆ, ಪ್ರತಿಯೊಬ್ಬ ಮನುಷ್ಯನಿಗೂ ಬದುಕಿನ ಯಾವುದೋ ಹಂತದಲ್ಲಿ ತನ್ನ “ಮೂಲ”ದ ಪ್ರಶ್ನೆ ಎದುರಾಗುತ್ತದೆ. ಆ ಪ್ರಶ್ನೆಗೆ ಉತ್ತರ ಸಿಕ್ಕಿದರೆ, ಬದುಕಿಗೊಂದು ನೆಲೆ ಸಿಗುತ್ತದೆ; ಬದುಕಿನ ಹೊಸತೊಂದು ಆಯಾಮವೇ ಸಿಕ್ಕೀತು. ಅದರಿಂದಾಗಿ ಬದುಕಿನ ಆ ಕಾಲಘಟ್ಟದ ತಳಮಳ ಮಾಯವಾಗಿ ನಿರಾಳವಾದೀತು.

ಎರಡನೆಯದಾಗಿ, “ಸಮುದಾಯದಲ್ಲಿ ನೆನಪು” ಉಳಿಸಲಿಕ್ಕಾಗಿ ಇಂತಹ ಪುಸ್ತಕಗಳು ಅಪ್ಪಟ ದಾಖಲೆಗಳಾಗಿ ಕೆಲಸ ಮಾಡುತ್ತವೆ. ಉದಾಹರಣೆಗೆ, ನನ್ನ ತಂದೆಯವರು ಅಡ್ಡೂರಿನಲ್ಲಿ ರಸ್ತೆಗಾಗಿ ಸುಮಾರು ಒಂದು ಎಕರೆ ಜಮೀನನ್ನು ದಾನವಾಗಿ ಕೊಟ್ಟಿದ್ದಾರೆ; ಬೇರೊಂದು ಜಾತಿಯ ಆರು ಕುಟುಂಬಗಳಿಗೆ ಮನೆಕಟ್ಟಲು ಜಾಗ ದಾನ ನೀಡಿದ್ದಾರೆ. ಅವರು ತಮ್ಮ ಜೀವಿತ ಕಾಲದಲ್ಲಿ, ಅಡ್ಡೂರಿನಲ್ಲಿ ಗ್ರಂಥಾಲಯವೊಂದನ್ನು ನಡೆಸುತ್ತಿದ್ದರು. ಯಾವುದೇ ಪ್ರಜ್ಞಾವಂತ ಸಮಾಜವು, ಪೂರ್ವಜರ ಇಂತಹ ತ್ಯಾಗಗಳನ್ನು, ಒಳ್ಳೆಯ ಕೆಲಸಗಳನ್ನು  ನೆನಪಿಟ್ಟುಕೊಂಡು, ಅವರನ್ನು ಯಾವತ್ತೂ ಗೌರವಿಸಬೇಕು. ಇಂತಹ ಪುಸ್ತಕಗಳಿಂದ ಅಂತಹ ಪುಣ್ಯದ ಕೆಲಸಕ್ಕೆ ಸಹಾಯ.

ಅಂತೂ ನಮ್ಮ ಹಿರಿಯರ ಬದುಕಿನ ಮಾಹಿತಿ ಸಂಗ್ರಹಿಸಿ, ಅಚ್ಚುಕಟ್ಟಾಗಿ ಸಂಪಾದಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಬೆಲೆ ಕಟ್ಟಲಾಗದ ಕೆಲಸ.

ಈ ಕಾಯಕದ ಬೆಲೆ ಗೊತ್ತಾಗುವುದು ಮುಂದಿನ ಮೂರನೇ ತಲೆಮಾರಿಗೆ (ಅಂದರೆ ನಮ್ಮ ಮೊಮ್ಮಕ್ಕಳಿಗೆ) - ಅವರ ಬದುಕಿನಲ್ಲಿ ಮೂಲಭೂತ ಪ್ರಶ್ನೆಗಳು, ಸವಾಲುಗಳು ಮತ್ತು ಸಂಕಷ್ಟಗಳು ಎದುರಾದಾಗ. ಆಗ, ಯಾರದೋ ಬದುಕಿನಿಂದ ಪ್ರೇರಣೆ ಪಡೆಯುವ ಬದಲಾಗಿ, ತಮ್ಮದೇ ಅಜ್ಜ-ಅಜ್ಜಿಯರ ಬದುಕಿನಿಂದ ಅವರಿಗೆ ಇಂತಹ ದಾಖಲಾತಿ ಪುಸ್ತಕಗಳಿಂದ ಪ್ರೇರಣೆ ದಕ್ಕಿದರೆ, ಇವುಗಳ ಪ್ರಕಟಣೆ ಸಾರ್ಥಕ, ಅಲ್ಲವೇ?