ಪೂರ್ವಾಗ್ರಹ ಮುಕ್ತ ಮನಸ್ಸು ಮತ್ತು ಆರೆಸ್ಸೆಸ್

ಪೂರ್ವಾಗ್ರಹ ಮುಕ್ತ ಮನಸ್ಸು ಮತ್ತು ಆರೆಸ್ಸೆಸ್

ಸರ್ವೋಚ್ಛ ನ್ಯಾಯಾಲಯದ ಜಸ್ಟಿಸ್ ಕೆ.ಟಿ. ಥಾಮಸ್ ರವರು ೨೦೧೧ರ ಆಗಸ್ಟ್ ೧ರಂದು ಎರ್‍ನಾಕುಲಮ್ ನಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದ ಕನ್ನಡ ಅನುವಾದವಿದು. ಯಾವುದೇ ವಿಚಾರದ ಕುರಿತು ಅಭಿಪ್ರಾಯಿಸುವ ಮುನ್ನ ಪೂರ್ವಾಗ್ರಹರಹಿತರಾಗಿ ವಿವೇಚಿಸಿ, ಪರಿಶೀಲಿಸಿ ನಿರ್ಧರಿಸಬೇಕು. ಅಂತಹ ಮನಸ್ಸೊಂದರ ಬಿಚ್ಚು ಮನಸ್ಸಿನ ಮಾತುಗಳಿವು:

     ಗೌರವಾನ್ವಿತ ಮೋಹನಜೀ ಭಾಗವತರೇ, ವೇದಿಕೆಯ ಮೇಲಿರುವ ಇತರ ಗೌರವಾನ್ವಿತರೇ ಮತ್ತು ಶ್ರೋತೃಗಣದ ಗೌರವಾನ್ವಿತರೇ,

     ಈ ಅತ್ಯುನ್ನತವಾದ ಪೂಜನೀಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ನನ್ನನ್ನು ಆಹ್ವಾನಿಸಿರುವುದನ್ನು ನಾನು ನಿಜವಾದ ವಿಶೇಷ ಗೌರವ ಮತ್ತು ಸವಲತ್ತು ಎಂದು ಭಾವಿಸುತ್ತೇನೆ. ನನ್ನ ಹೆಸರಿನಿಂದಲೇ ನಾನೊಬ್ಬ ಕ್ರಿಶ್ಚಿಯನ್ ಎಂದು ನಿಮಗೆ ಗೊತ್ತು. ನಾನು ಆ ಧರ್ಮದಲ್ಲೇ ಜನಿಸಿದವನು ಮತ್ತು ಅದನ್ನು ಪಾಲಿಸುತ್ತಿರುವವನು. ನಾನೊಬ್ಬ ಚರ್ಚಿಗೆ ಹೋಗುವ ಕ್ರಿಶ್ಚಿಯನ್. ಆದರೆ ನನ್ನ ಅನುಕೂಲವೆಂದರೆ ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಬಹಳಷ್ಟು ಸಂಗತಿಗಳನ್ನು ತಿಳಿದಿದ್ದೇನೆ. ನಾನು ಕ್ಯಾಲಿಕಟ್ಟಿನ ಅಡಿಷನಲ್ ಡಿಸ್ಟ್ರಿಕ್ಟ್ ಜಡ್ಜ್ ಆಗಿದ್ದಾಗ, ೧೯೭೯ರಷ್ಟು ಹಿಂದೆಯೇ ಈ ದೇಶದ ಈ ಶಿಸ್ತುಬದ್ಧ ಸಂಘಟನೆ ಬಗ್ಗೆ ಮೆಚ್ಚುಗೆಯ ಭಾವವನ್ನು ಬೆಳೆಸಿಕೊಂಡಿದ್ದೇನೆ. ಶ್ರೀ ಎ.ಆರ್. ಶ್ರೀನಿವಾಸನ್‌ರವರು ಪ್ರಧಾನ ಡಿಸ್ಟ್ರಿಕ್ಟ್ ಜಡ್ಜ್ ಆಗಿದ್ದರು. ಅವರನ್ನು ತಿಳಿದಿರುವ ಯಾರೊಬ್ಬರೇ ಆಗಲಿ, ಅವರದು ಶೇಕಡಾ ನೂರರಷ್ಟು ಪ್ರಾಮಾಣಿಕರು ಎಂದು ಒಪ್ಪುತ್ತಾರೆ; ಅವರ ಪ್ರಾಮಾಣಿಕತೆ ಪಾರದರ್ಶಕ, ಅವರ ವಿದ್ವತ್ತು ಅಸಮಾನವಾದುದು ಮತ್ತು ದೇಶದ ಕುರಿತ ಅವರ ಬದ್ಧತೆ ಪ್ರಶ್ನಾತೀತವಾದುದು. ಎಲ್ಲಕ್ಕಿಂತ ಮಿಗಿಲಾಗಿ, ಅವರು ಅನುಸರಿಸುತ್ತಿದ್ದ ಶಿಸ್ತು ಅತ್ಯಂತ ಪ್ರಶಂಸಾರ್ಹವಾದುದು. ಅವರ ನಿವೃತ್ತಿಯ ನಂತರ ನಾನು ಪ್ರಧಾನ ಡಿಸ್ಟ್ರಿಕ್ಟ್ ಜಡ್ಜ್ ಆಗಿ ಅಧಿಕಾರ ಸ್ವೀಕರಿಸಿದೆ. (ನಿವೃತ್ತರಾದ) ತಕ್ಷಣ ಶ್ರೀ ಎ.ಆರ್. ಶ್ರೀನಿವಾಸನ್‌ರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ಸದಸ್ಯರಾದರು. ನಾವು ಪರಸ್ಪರ ಬಹಳ ಸಂಗತಿಗಳ ಬಗ್ಗೆ ಸಂವಹನ ಮತ್ತು ಸಂಭಾಷಣೆಗಳನ್ನು ನಡೆಸುತ್ತಿದ್ದೆವು. ಆ ಅವಕಾಶ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಹೊರಗಿನ ಆಸಕ್ತ ಜನರಿಂದ ಮಾಡಲಾಗುತ್ತಿದ್ದ ಅನೇಕ ಅಪಪ್ರಚಾರಗಳ ಪೊಳ್ಳುತನವನ್ನು ಹೊರಹಾಕಲು ಅನುಕೂಲ ಮಾಡಿಕೊಟ್ಟಿತು. ಅಂತಹ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳು ನನ್ನ ಮನಸ್ಸಿನಿಂದ ತೆಗೆದುಹಾಕಲ್ಪಟ್ಟವು. ನಾನು ಸಂಸ್ಥೆಯ ಒಬ್ಬ ನಿಜವಾದ ಅಭಿಮಾನಿಯಾದೆ. 

     ನಾನು ಹೆಚ್ಚಿನ ಸಂಗತಿಗಳನ್ನು ವಾಸ್ತವತೆಯ ಆಧಾರದಲ್ಲಿ ಪರಿಗಣಿಸುತ್ತೇನೆ. ಪೂರ್ವಾಗ್ರಹ ಅನ್ನುವುದು ಮಾನವನ ದೌರ್ಬಲ್ಯ. ವಾಸ್ತವತೆಯ ಆಧಾರವಿಲ್ಲದೆ ಮನುಷ್ಯ ಒಂದು ವಿಚಾರವನ್ನು ಒಪ್ಪಲು ಸಿದ್ಧವಿರುವುದಿಲ್ಲ. ವಾಸ್ತವತೆಯನ್ನು ಒರೆಗೆ ಹಚ್ಚಿದಾಗ, ಮಹಾತ್ಮ ಗಾಂಧಿಯವರ ಕೊಲೆಗೆ ಆರೆಸ್ಸೆಸ್ ಕಾರಣವೆಂಬ ಲೇಪಿತ ಅಪಪ್ರಚಾರ ಅನ್ಯಾಯದ ಮತ್ತು ದಯಾಧರ್ಮರಹಿತವಾದುದೆಂದು ಗೊತ್ತಾಗುತ್ತದೆ. ನಾನು ಆ ಕುರಿತು ಹೆಚ್ಚಿನ ವಿಚಾರಗಳನ್ನು ತಿಳಿದುಕೊಂಡಿರುವೆ. ಇರಬಹುದು, ಕೊಲೆಗಾರ ಒಂದಾನೊಂದು ಕಾಲದಲ್ಲಿ ಸಂಸ್ಥೆಯ ಸದಸ್ಯನಾಗಿದ್ದನೆಂಬ ಒಂದೇ ಕಾರಣ, ರಾಷ್ಟ್ರಪಿತನ ಕೊಲೆಗೆ ಶಿಸ್ತುಬದ್ಧ ಸಂಸ್ಥೆ ಕಾರಣವೆಂದು ಆಗುವುದಿಲ್ಲ. ಹಾಗೆ ಹೇಳುವುದಾದಲ್ಲಿ, ಇಡೀ ಸಿಖ್ ಸಮುದಾಯವನ್ನು ಇಂದಿರಾಗಾಂಧಿಯವರ ಕೊಲೆಗೆ ಕಾರಣವೆಂದು ನೀವು ಹೇಳಬಲ್ಲಿರಾ? ರೋಮನ್ ನ್ಯಾಯಾಧೀಶರ ಆದೇಶದ ಮೇರೆಗೆ ರೋಮನ್ ಸೈನಿಕರು ಜೀಸಸ್ ಕ್ರಿಸ್ತನನ್ನು ಶಿಲುಬೆಗೇರಿಸಿದರೆಂದು, ಆ ಕಾಲದ ಇಡೀ ರೋಮನ್ ಸಮುದಾಯ ಜೀಸಸ್ ಕ್ರಿಸ್ತನ ಕೊಲೆ ಮಾಡಿತೆಂದು ಹೇಳಬಹುದೇ?

     ಇಂತಹ ಸಂಗತಿಗಳ ಬಗ್ಗೆ ತಿಳಿಯುವಾಗ ವಸ್ತುಸ್ಥಿತಿಯನ್ನು ಗಣಿಸಬೇಕು. ಆದ್ದರಿಂದ, ನಾನು ಮಹಾತ್ಮ ಗಾಂಧಿಯವರ ಕೊಲೆಯ ಪ್ರಕರಣದಲ್ಲಿ ಜಸ್ಟಿಸ್ ಖೋಸ್ಲರವರು ನೀಡಿದ ತೀರ್ಮಾನವನ್ನು ಓದಿದೆ; ಪಂಜಾಬ್ ಉಚ್ಛನ್ಯಾಯಾಲಯದ ಘನತೆವೆತ್ತ ನ್ಯಾಯಾಧೀಶರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮಹಾತ್ಮ ಗಾಂಧಿಯವರ ಕೊಲೆಗೆ ಸಂಬಂಧಿಸಿದಂತೆ ಸಂಪೂರ್ಣ ದೋಷಮುಕ್ತಗೊಳಿಸಿದ್ದಲ್ಲದೆ, ಕೊಲೆಯಲ್ಲಿ ಅದರ ಯಾವುದೇ ಪಾತ್ರವಿಲ್ಲವೆಂದು ತಿಳಿಸಿದ್ದಾರೆ. ಈ ಲೇಪಿತ ಅಪಪ್ರಚಾರ ದೇಶದಲ್ಲಿ ಕೊನೆಯಾಗಲೇಬೇಕು. ಇಲ್ಲದಿದ್ದಲ್ಲಿ ಅದು ನಿಜವಾಗಿಯೂ ಅನ್ಯಾಯದ ನಡೆಯಾಗುತ್ತದೆ. ಈ ದೃಷ್ಟಿಕೋನದಿಂದ, ನಾನು ಈ ಸಂಸ್ಥೆಯನ್ನು ದೂರದಿಂದ ಗಮನಿಸಿದ್ದೇನೆ. ನಾನು ಇಂದಿನ ಗೌರವಾನ್ವಿತ ಅತಿಥಿಯ ಹಿಂದಿನ ಅಧಿಕಾರಸ್ಥರೊಂದಿಗೆ ಪ್ರಯಾಣಿಸಿದ್ದೇನೆ. ಶ್ರೀ ಸುದರ್ಶನಜೀಯವರು ಚೆನ್ನೈನಿಂದ ನನ್ನ ಮನೆರುವ ನಿಲ್ದಾಣದ ಸ್ಟೇಷನ್ನಿನವರೆಗೂ ನನ್ನೊಡನಿದ್ದರು. ಆ ಸಂದರ್ಭದಲ್ಲಿ ಬಹಳ ವಿಷಯಗಳ ಬಗ್ಗೆ ಚರ್ಚಿಸಿದ್ದೆವು. ಅವರ ಶ್ರೇಷ್ಠ ವಿದ್ವತ್ತಿನ ಬಗ್ಗೆ  ಮತ್ತು ಅವರು ಸರಳ ಜೀವನದ ಬಗ್ಗೆ ಒತ್ತು ಕೊಟ್ಟಿದ್ದುದರ ಬಗ್ಗೆ ತಿಳಿದು ಆಶ್ಚರ್ಯಚಕಿತನಾದೆ. ಇದು ಈ ಸಂಸ್ಥೆಯ ಸದಸ್ಯರುಗಳ ಗುರುತುಪಟ್ಟಿ (ಹಾಲ್ ಮಾರ್ಕ್) ಎಂಬುದನ್ನು ಕಂಡುಕೊಂಡೆ - ಸರಳ ಜೀವನ ಮತ್ತು ಉದಾತ್ತ ಚಿಂತನ! ಮತ್ತು ಆನಂತರದಲ್ಲಿ, ನಿಮಗೆ ಹೇಳಲೇಬೇಕು, ಪ್ರತಿ ಕ್ರಿಸ್ ಮಸ್ ಸಂದರ್ಭದಲ್ಲಿ ಅವರು ನನಗೆ ಬೈಬಲ್ಲಿನ ಸೂಕ್ತಿಗಳಿರುವ ಮತ್ತು ಭಗವದ್ಗೀತೆಯ ಶ್ಲೋಕಗಳಿರುವ ಕ್ರಿಸ್ ಮಸ್ ಸಂದೇಶದ ಕಾರ್ಡು ಕಳಿಸುತ್ತಿದ್ದರು. ನಾನೂ ಅದೇ ರೀತಿಯಲ್ಲಿ ಸಂದೇಶವನ್ನು ಅವರಿಗೆ ಕಳಿಸುತ್ತಿದ್ದೆ. ಇದು ನನಗೆ ಈ ಸಂಸ್ಥೆಯ ಕುರಿತು ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅವಕಾಶ ಒದಗಿಸಿತು. ಈ ಸಂಸ್ಥೆಯ ಬಗ್ಗೆ ನನ್ನ ಜೀವನದ ಅತ್ಯುತ್ತಮ ಪರೀಕ್ಷೆಯ ಅವಕಾಶ ಬಂದಿದ್ದು, ತುರ್ತು ಪರಿಸ್ಥಿತಿಯ ಕರಾಳ ತಿಂಗಳುಗಳ ಅವಧಿಯಲ್ಲಿ, ಶ್ರೀಮತಿ ಇಂದಿರಾಗಾಂದಿಯವರು ಸಂವಿಧಾನದ ಬಹುಭಾಗವನ್ನು ಅಮಾನತ್ತುಗೊಳಿಸಿದಾಗ ಮತ್ತು ಇಡೀ ದೇಶ ಇಂದಿರಾಗಾಂಧಿಯವರ ಈ ಹೊಡೆತದಿಂದ ಮೂಕವಿಸ್ಮಿತಗೊಂಡಿದ್ದಾಗ. ಒಂದೇ ಒಂದು ರಾಜಕೀಯೇತರ ಸಂಸ್ಥೆ ಭಯವಿಲ್ಲದೆ ಇಂತಹುದನ್ನು ಎದುರಿಸಿದ್ದುದೆಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಮತ್ತು ಇದರ ಫಲವಾಗಿ ಈ ಭಾರತ ದೇಶ ಸರ್ವಾಧಿಕಾರಿಯ ಹಿಡಿತದಿಂದ ಬಿಡುಗಡೆಗೊಳ್ಳಲು ಸಾಧ್ಯವಾಯಿತು. ಯಾವ ನಮ್ಮ ನಾಯಕರುಗಳು ನಮ್ಮ ದೇಶಕ್ಕಾಗಿ ಗಳಿಸಿಕೊಟ್ಟಿದ್ದ ಈ ದೇಶದ ಮೂಲಭೂತ ಹಕ್ಕುಗಳನ್ನು ಮತ್ತೆ ಪುನರ್ಗಳಿಸಿಕೊಳ್ಳಲು ಅನೇಕ ಜೀವಗಳ ಬಲಿದಾನ ಮಾಡಿದ ಮತ್ತು ಜೀವನದ ಎಲ್ಲಾ ಸಂತೋಷಗಳನ್ನು ತ್ಯಾಗ ಮಾಡಿದ ಈ ಸಂಸ್ಥೆಯ ಸದಸ್ಯರುಗಳಿಗೆ ನಾವು ಅತ್ಯಂತ ಕೃತಜ್ಞರಾಗಿರಬೇಕು.

     ವೋಟು ಬ್ಯಾಂಕುಗಳ ಸಲುವಾಗಿ ದೇಶದ ಭದ್ರತೆಯ ವಿಷಯಗಳಲ್ಲಿ ಅನೇಕ ರೀತಿಗಳಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಿರುವುದನ್ನು ಕಂಡು ಈಗ ನಾನು ವಿಚಲಿತನಾಗಿದ್ದೇನೆ. ಸಂವಿಧಾನದ ೧೯ನೆಯ ವಿಧಿ ಭಾರತದ ಪ್ರಜೆಗಳಿಗೆ ದತ್ತವಾಗಿರುವ ಸ್ವಾತಂತ್ರ್ಯಗಳ ವಿವರಸೂಚಿಯಾಗಿದೆ. ಆದರೆ ಅಂತಹ ಪ್ರತಿಯೊಂದು ಸ್ವಾತಂತ್ರ್ಯಕ್ಕೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನಿರ್ಬಂಧವಿದೆ - ಅದು ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದ ಸಮರ್ಥನೀಯ ನಿರ್ಬಂಧ - ಅದೆಂದರೆ ರಾಷ್ಟ್ರದ ಭದ್ರತೆ. ಸಂವಿಧಾನ ರಚನಾಕಾರರು ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಾಮುಖ್ಯತೆ ಇರಬೇಕೆಂಬ ವಿಚಾರದಲ್ಲಿ ಅಚಲರಾಗಿದ್ದರು, ಏಕೆಂದರೆ ನಾವು ಈ ದೇಶದಲ್ಲೇ ಜೀವಿಸಬೇಕಾಗಿದೆ. ನಾನು ಅನೇಕ ಅಧಿಕೃತ ಚಟುವಟಿಕೆಗಳಲ್ಲಿ - ಸರ್ಕಾರಿ ಮತ್ತು ರಾಜಕೀಯ - ವೋಟು ಬ್ಯಾಂಕಿಗೆ ದೇಶದ ಭದ್ರತೆಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟುದನ್ನು ಕಂಡಾಗ ನಾನು ನಿಜಕ್ಕೂ ಚಿಂತಿತನಾಗಿದ್ದೇನೆ. ಈ ಒಂದು ವಿಷಯದಲ್ಲಿ ದೇಶವು ಸರ್ವಸಮ್ಮತಿಯಿಂದ ಮತ್ತು ಒಂದು ಗಟ್ಟಿ ಧ್ವನಿಯಿಂದ ಇಂತಹ ನೀತಿಯನ್ನು ನಾವು ಸಹಿಸುವುದಿಲ್ಲವೆಂದು ಘೋಷಿಸಬೇಕಿದೆ.

     ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಲ್ಪಸಂಖ್ಯಾತರ ವಿರುದ್ಧವಾಗಿದೆಯೆಂಬ ಪ್ರಚಾರವು ಒಂದು ಆಧಾರರಹಿತವಾದ ಪ್ರಚಾರವಾಗಿದೆ. ಅಷ್ಟಕ್ಕೂ ಅಲ್ಪಸಂಖ್ಯಾತ ಎಂದರೆ ಏನು? ರಾಷ್ಟ್ರೀಯ ಸ್ವಯಂಸೇವಕಸಂಘದ ಪ್ರಕಾರ ನೀವು ಯಾವ ಧರ್ಮಕ್ಕೇ ಸೇರಿರಲಿ, ನೀವು ಪೂರ್ಣ ದೇಶಪ್ರೇಮಿಯಾಗಿರಬೇಕೆಂದು ಹೇಳುತ್ತದೆಂದು ನನಗೆ ಮನವರಿಕೆಯಾಗಿದೆ. ನಿಮ್ಮ ನಂಬಿಕೆ ಅಪ್ರಸ್ತುತ. ನೀವು ಯಾವುದೇ ನಂಬಿಕೆಯನ್ನು ನೀವು ಅನುಸರಿಸಿ, ಆದರೆ ನೀವು ಗಡಿಯಾಚೆಗಿನ ನಿಷ್ಠೆ ಹೊಂದಿರಬಾರದೆಂದು ಮಾತ್ರ ಹೇಳುತ್ತದೆ. ಯಾರೊಬ್ಬರೂ 'ನನ್ನ' ಧರ್ಮವೇ 'ನಿನ್ನ' ಧರ್ಮಕಿಂತ ಉತ್ತಮ ಮತ್ತು ಆದ್ದರಿಂದ 'ನಿನ್ನ' ದರ್ಮವನ್ನು ಬಿಟ್ಟುಬಿಡು ಮತ್ತು 'ನನ್ನ' ದರ್ಮವನ್ನು ಸೇರು ಎಂದು ಹೇಳಲು ಅಧಿಕೃತರಲ್ಲವೆಂದೂ ನಾನು ಅರಿತಿದ್ದೇನೆ. ತನ್ನ ಸ್ವಂತ ಧರ್ಮದ ಮೂಲಭೂತ ಜ್ಞಾನ ಹೊಂದಿರುವ ಯಾರೊಬ್ಬರೇ ಆಗಲಿ ಹಾಗೆ ಹೇಳಲಾರರು. ತಮ್ಮದೇ ಆದ ಸ್ವಂತದ ಧರ್ಮದ ಮೂಲ ತಿರುಳೆಂದರೆ ಇತರ ಧರ್ಮವೂ ಅಷ್ಟೇ ಸಮನಾಗಿ ಮುಖ್ಯವಾಗಿರುವುದಲ್ಲದೇ, ವಿವಿಧ ಧರ್ಮಗಳು ಕೆಲವೊಮ್ಮೆ ಮಾನವತೆಗೆ ದೇವರು ಕೊಟ್ಟ ವರವಾಗಿದೆ, ಏಕೆಂದರೆ ಎಲ್ಲಾ ಧರ್ಮಗಳೂ ದುರ್ಬಲತೆಗಳನ್ನು ಹೊಂದಿವೆ. ಮತ್ತು ಒಂದು ಧರ್ಮದ ದುರ್ಬಲತೆಯನ್ನು ತುಂಬಲು ಬೇರೆ ಧರ್ಮದಲ್ಲಿ ಕೆಲವು ಸೌಲಭ್ಯಗಳನ್ನು ಕೊಡಲಾಗಿದೆ. ಈ ದೇಶ ಸಮ್ಮಿಶ್ರ ಸಂಸ್ಕೃತಿ ಸೃಷ್ಟಿಯಾಗಿರುವ ದೇಶವಾಗಿದ್ದು, ನಂಬಿಕೆ ಅಪ್ರಸ್ತುತವಾಗಿದ್ದು ನಿಮ್ಮ ನಿಷ್ಠೆ, ನಿಮ್ಮ ತೊಡಗಿಕೊಳ್ಳುವಿಕೆ ಮತ್ತು  ನಿಮ್ಮ ದೇಶಪ್ರೇಮ ಮಾತ್ರ ಅತ್ಯಂತ ಪ್ರಧಾನವಾಗುತ್ತದೆ.

     ನಾನು ಅಲ್ಪಸಂಖ್ಯಾತ ಎಂಬ ಬಗ್ಗೆ ಬೇರೆ ವಿಚಾರ ಹೊಂದಿದವನಾಗಿದ್ದೇನೆ. ಈ ವಿಚಾರದ ಬಗ್ಗೆ ನಾನು ಅನೇಕ ವೇದಿಕೆಗಳಲ್ಲಿ ಮಾತನಾಡಿದ್ದು, ಇದಕ್ಕಾಗಿ ನಾನು ಮೆಚ್ಚುಗೆಗಿಂತ ಹೆಚ್ಚಾಗಿ ಟೀಕೆಗಳನ್ನು ಸ್ವೀಕರಿಸಿದ್ದೇನೆ. ಈ ದೇಶದಲ್ಲಿ ಯಾರು ಅಲ್ಪಸಂಖ್ಯಾತರು? ಕೇವಲ ಇತರರಿಗಿಂತ ಕಡಿಮೆ ಸೌಲಭ್ಯ ಹೊಂದಿದವರು ಮಾತ್ರ! ಸಂವಿಧಾನದ ೨೯ನೆಯ ವಿಧಿಯಂತೆ ಭಾರತದ ಯಾವ ವಿಭಾಗ ಅಲ್ಪಸಂಖ್ಯಾತವೆನ್ನಿಸಿಕೊಳ್ಳಬಹುದೆಂದು ಸ್ಪಷ್ಟಪಡಿಸಿಕೊಳ್ಳಬಹುದು. ಅದು ಸಂಸ್ಕೃತಿ, ಲಿಪಿ, ಭಾಷೆ, ಇತ್ಯಾದಿಗಳ ಮೇಲೆ ಅವಲಂಬಿಸಿರಬಹುದು. ಯಾವುದೇ ವಿಭಾಗ ಯಾವುದೇ ಕೊರತೆಯಿಂದ ಬಳಲುತ್ತಿದ್ದರೆ ಅದನ್ನು ಅಲ್ಪಸಂಖ್ಯಾತವೆನ್ನಬಹುದು, ಸಂಖ್ಯಾತ್ಮಕವಾಗಿಯೂ ಕಡಿಮೆಯಿದ್ದರೆ ಮಾತ್ರ! ಸಂವಿಧಾನದ ೩೦ನೆಯ ವಿಧಿಯಂತೆ ನಂಬಿಕೆವಾರು ಅಲ್ಪಸಂಖ್ಯಾತತನವನ್ನೂ ಪರಿಗಣಿಸಬಹುದು, ಅದೂ ಸೀಮಿತ ಉದ್ದೇಶಕ್ಕಾಗಿ ಮಾತ್ರ. ಅದು ಶೈಕ್ಷಣಿಕ ಸಂಸ್ಥೆಗಳನ್ನು ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ಮೀರಿಸದಂತೆ ಇರಲು ನಡೆಸುವ ಸಲುವಾಗಿ. ಸಂವಿಧಾನದ ೨೯ನೆಯ ವಿಧಿಯನ್ನು ಒಬ್ಬ ವ್ಯಕ್ತಿ ಓದಬಲ್ಲನಾದರೆ, ಸಂವಿಧಾನದ ಒಬ್ಬ ವಿದ್ಯಾರ್ಥಿಯಾಗಿ ನಾನು ಹೇಳುತ್ತೇನೆ, ಅದು ಧರ್ಮ ಅಥವ ನಂಬಿಕೆಯನ್ನು ಆಧರಿಸಿದ ಅಲ್ಪಸಂಖ್ಯಾತತನವನ್ನು ಒಳಗೊಳ್ಳುವುದಿಲ್ಲ. ಸಂವಿಧಾನದ ೩೦ನೆಯ ವಿಧಿಗೆ ಬಂದರೆ ಈ ಧರ್ಮ ಅನ್ನುವ ಪದ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಮಾತ್ರ ಅನ್ವಯವಾಗುತ್ತದೆ. 

     ನಾನು ಟಿ.ಎಮ್.ಎ.ಪೈ ಪ್ರಕರಣದಲ್ಲಿ ಸರ್ವೋಚ್ಛನ್ಯಾಯಾಲಯದ ೧೧ ನ್ಯಾಯಾಧೀಶರುಗಳ ಪೀಠದಲ್ಲಿ ಸದಸ್ಯನಾಗಿದ್ದೆ. ಹೆಚ್ಚಿನ ನ್ಯಾಯಾಧೀಶರ ಅಭಿಪ್ರಾಯ ಆ ಸಮಯದಲ್ಲಿ ಸಂವಿಧಾನದ ೩೦ನೆಯ ವಿಧಿಯಲ್ಲಿ ಹೇಳಿದ ಶಿಕ್ಷಣವು ಜಾತ್ಯಾತೀತ ಶಿಕ್ಷಣ ಮಾತ್ರವಾಗಿರಬೇಕೆಂದು ಮತ್ತು ವೃತ್ತಿಪರ ಶಿಕ್ಷಣಕ್ಕೆ ಅನ್ವಯಿಸದೆಂಬುದಾಗಿತ್ತು. ಮಿ. ಫಾಲಿ ಎಸ್. ನಾರಿಮನ್ನರಿಗೆ ಹೇಳಿದಾಗ, ಆ ದೊಡ್ಡ ಲಾಯರ್ ಸಿಟ್ಟಿಗೆದ್ದರು ಮತ್ತು ಆ ವಿಷಯ ಎಂದೋ ಬಹಳ ಹಿಂದೆಯೇ ಇತ್ಯರ್ಥವಾದ ವಿಷಯವೆಂದೂ ಮತ್ತು ಶಿಕ್ಷಣ ಎಂಬ ಪದ ಎಲ್ಲವನ್ನೂ ಒಳಗೊಳ್ಳುತ್ತದೆಂದೂ ಮತ್ತು ಜಾತ್ಯಾತೀತ ಶಿಕ್ಷಣದ ಆಚೆಗೂ ಅನ್ವಯವಾಗುತ್ತದೆಂದು ಹೇಳಿದರು. ದುರದೃಷ್ಟವೆಂದರೆ ನಮ್ಮ ಪೀಠ ವಾದ-ವಿವಾದ ಮತ್ತು ಹೇಳಿಕೆಗಳನ್ನು ಪೂರ್ಣಗೊಳಿಸಲಾಗಲಿಲ್ಲ ಮತ್ತು ತೀರ್ಪು ಹೊರಬರಲಿಲ್ಲ. ಬಹಳ ವರ್ಷಗಳ ನಂತರ, ನನ್ನ ನಿವೃತ್ತಿಯ ನಂತರ, ಒಂದು ೧೧ ಸದಸ್ಯರ ಪೀಠ ರಚಿತವಾಯಿತು ಮತ್ತು ಅಲ್ಲಿಯೂ ಫಾಲಿ ಎಸ್. ನಾರಿಮನ್ನರು ವಾದ ಮಂಡಿಸಿದರು ಮತ್ತು ಕೊನೆಗೆ ಸಂವಿಧಾನದ ೩೦ನೆಯ ವಿಧಿಯಂತೆ ಶಿಕ್ಷಣ ಎಂದರೆ ಯಾವುದೇ ಹಂತದ ಶಿಕ್ಷಣ ಎಂಬ ತೀರ್ಪು ಹೊರಬಿತ್ತು. 

     ನಾನು ಇದನ್ನು ಮತ್ತೊಂದು ಉದ್ದೇಶಕ್ಕಾಗಿ ಹೇಳುತ್ತಿದ್ದೇನೆ. ಆ ದೊಡ್ಡ ಲಾಯರ್, ಯಾರು ಈ ಶಿಕ್ಷಣದ ವ್ಯಾಖ್ಯೆಯ ರಚನಕಾರರೋ, ಅವರು ಆತ್ಮಚರಿತ್ರೆಯನ್ನು ಬರೆದಿದ್ದು ಅದರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ, "ಇಂದು ನಾನು ಶಿಕ್ಷಣದ ಕುರಿತು ಆ ದೃಷ್ಟಿಕೋನವನ್ನು ಹೊಂದಿದ್ದಕ್ಕಾಗಿ ಅತೀವವಾಗಿ ವಿಷಾದಿಸುತ್ತೇನೆ." ಈ ದೇಶದ ಶಿಕ್ಷಣ ರಂಗದ ಎಲ್ಲಾ ಅಧೋಗತಿಗೆ ಈ ವಿಚಾರವನ್ನು ಮುಂದೊಡ್ಡಿರುವುದು ಮತ್ತು ಸರ್ವೋಚ್ಛ ನ್ಯಾಯಾಲಯ ದುರದೃಷ್ಟಕರವಾಗಿ ಇದನ್ನು ಅಂಗೀಕರಿಸಿರುವುದೇ ಕಾರಣವಾಗಿದೆ. ನಾನು ಇದನ್ನು ಒಂದು ಪ್ರಶಸ್ತ ಸ್ಥಳದಲ್ಲಿ ಹೇಳಬೇಕೆಂದಿದ್ದೆ. ನಾನು ಈ ಸಂದರ್ಭವನ್ನು ಇದಕ್ಕೆ ಬಳಸಿಕೊಂಡಿದ್ದು, ಸಂವಿಧಾನದ ೩೦ನೆಯ ವಿಧಿಯಂತೆ, ಒಮ್ಮೆ ಈ ವಿಚಾರದಲ್ಲಿ ವಾದ ಮಂಡಿಸಿದ್ದ ಆ ದೊಡ್ಡ ಲಾಯರ್ ಪ್ರಕಾರ ಸಹ ಅದು ಜಾತ್ಯಾತೀತ ಶಿಕ್ಷಣಕ್ಕೆ ಮಿತಿಗೊಳ್ಳಬೇಕಿತ್ತು. ಹಾಗಾಗಿ, ಅದೊಂದೇ ವಿಭಾಗದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಧರ್ಮ ಪರಿಗಣನೆಗೆ ಬರುವುದು. ಹಾಗಿಲ್ಲ್ಲದಿದ್ದಿದ್ದರೆ, ಭಾರತದಂತಹ ಒಂದು ದೊಡ್ಡ ರಾಷ್ಟ್ರದಲ್ಲಿ, ಅಲ್ಪ ಸಂಖ್ಯಾತವೆಂಬುದು ನಂಬಿಕೆಗೆ ಸಂಬಂಧಿಸಿದ್ದಾಗುತ್ತಿರಲೇ ಇಲ್ಲ. ನಂಬಿಕೆಯನ್ನು ಯಾರೂ ಬದಲಾಯಿಸಿಕೊಳ್ಳಬಹುದು. ತಮಿಳುನಾಡಿನಲ್ಲಿ ಒಬ್ಬ ಪಳನಿಯಪ್ಪ ಗೌಂಡರ್ ಸ್ಥಾಪಿಸಿದ ಒಂದು ಮೆಡಿಕಲ್ ಕಾಲೇಜಿನ ವಿಚಾರದಲ್ಲಿ ಕರಾರುವಾಕ್ಕಾಗಿ ಅದೇ ಆಗಿದ್ದು. ನಂತರದಲ್ಲಿ ಒಂದು ಹೊಸ ಶಾಸನದಿಂದ ಹೆಚ್ಚಿನ ಅನುಕೂಲವಾಗುತ್ತದೆಂದು ತಿಳಿದು ಆತ ಕ್ರಿಶ್ಚಿಯಾನಿಟಿಗೆ ಮತಾಂತರಿತನಾದ ಮತ್ತು ದೈವ ಸಹಾಯಮ್ ಎಂದು ಹೆಸರು ಬದಲಿಸಿಕೊಂಡ ಮತ್ತು ಆತ ಈಗಲೂ ಮೆಡಿಕಲ್ ಕಾಲೇಜನ್ನು ಮುಂದುವರೆಸಿಕೊಂಡು ಬರುತ್ತಿದ್ದಾನೆ. ಯಾರೇ ಆಗಲಿ ಅದೇ ರೀತಿ ಧರ್ಮವನ್ನು ಬದಲಿಸಿಕೊಳ್ಳಬಹುದು. 

     ನೀವು ಒಂದು ಜಾತ್ಯಾತೀತ ರಾಷ್ಟ್ರದಲ್ಲಿ ನಂಬಿಕೆ ಆಧರಿಸಿ ಒಂದು ಕಾನೂನು ಮಾಡುತ್ತಿದ್ದೀರಿ, ಅದೂ ಒಂದು ನಮ್ಮಂತಹ ಜಾತ್ಯಾತೀತ ರಿಪಬ್ಲಿಕ್ಕಿನಲ್ಲಿ, ಅದು ಆಗಬಾರದು. ಜಾತ್ಯಾತೀತ ರಿಪಬ್ಲಿಕ್ಕಿನಲ್ಲಿ, ಧರ್ಮ ನಿಮ್ಮ ಗುರುತಾಗಬಾರದು, ಆದರೆ ನೀವು ಭಾರತೀಯ ಅನ್ನುವುದು ನಿಮ್ಮ ಗುರುತಾಗಬೇಕು. ಅದನ್ನೇ ಝಾಕಿರ್ ಹುಸೇನರು ಭಾರತದ ರಾಷ್ಟ್ರಪತಿಯಾದಾಗ ಜರ್ನಲಿಸ್ಟ್ ಟಿ.ವಿ.ಆರ್. ಶೆಣೈರವರಿಗೆ ಹೇಳಿದ್ದು. ಝಾಕಿರ್ ಹುಸೇನರು ಒಬ್ಬ ದೊಡ್ಡ ವಿದ್ವಾಂಸರಾಗಿದ್ದರು. ಅವರು ಒಬ್ಬ ವೈಸ್ ಛಾನ್ಸೆಲರ್ ಆಗಿದ್ದರು. ಟಿ.ವಿ.ಆರ್. ಶೆಣೈರವರು ಅವರನ್ನು ಕಂಡು, "ರಾಷ್ಟ್ರಪತಿಜಿ, ನಾನು ತಮ್ಮನ್ನು ಅಭಿನಂದಿಸುತ್ತೇನೆ, ಎಕೆಂದರೆ ಇದು ಒಂದು ಭಾರತದಲ್ಲಿನ ಜಾತ್ಯಾತೀತೆಯ ದೊಡ್ಡ ಜಯ" ಎಂದರು. ಝಾಕಿರ್ ಹುಸೇನರು 'ಇದು ಯಾವ ರೀತಿಯಲ್ಲಿ ಜಾತ್ಯಾತೀತತೆಯ ವಿಜಯ?' ಎಂದು ಕೇಳಿದರು. 'ಒಬ್ಬ ಮುಸ್ಲಿಮ್ ಭಾರತದ ರಾಷ್ಟ್ರಪತಿಯಾಗುತ್ತಾರೆಂದರೆ ಅದು ಜಾತ್ಯಾತೀತತೆಯ ದೊಡ್ಡ ವಿಜಯ'ವೆಂದು ಶೆಣೈ ಹೇಳಿದರು. ಝಾಕಿರ್ ಹುಸೇನರು ಅವರೆಡೆಗೆ ನೋಡಿ ಮುಗುಳ್ನಕ್ಕರು. ಟಿ.ವಿ.ಆರ್. ಶೆಣೈ ಕೇಳಿದರು, "ಏಕೆ ರಾಷ್ಟ್ರಪತಿಜಿ, ನೀವು ನನ್ನನ್ನು ನೋಡಿ ನಗುತ್ತಿದ್ದೀರಿ?" ಅವರು ಉತ್ತರಿಸಿದರು, "ಶೆಣೈ, ಜಾತ್ಯಾತೀತತೆಯ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ನನಗೆ ನಗು ಬಂತು." ಅವರು ಮುಂದೆ ಹೇಳಿದರು, ಈ ವಾಕ್ಯವನ್ನು ಗುರುತು ಮಾಡಿಕೊಳ್ಳಿ, "ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!"

     ನನ್ನ ಆತ್ಮೀಯ ಸ್ನೇಹಿತರೇ, ನಾನು ಹೇಳುವುದನ್ನು ಕೇಳಿ - ಈ ದೇಶದಲ್ಲಿ ಜಾತ್ಯಾತೀತತೆ ಅನ್ನುವುದು ಧರ್ಮಕ್ಕೆ ಏನೇನೂ ಸಂಬಂಧಿಸದುದು. ನೀವು ನನ್ನ ಧರ್ಮ ಯಾವುದೆಂದು ಕೇಳಬಾರದು ಮತ್ತು ಅದೇ ರೀತಿ ನಿಮ್ಮ ಧರ್ಮದ ಕುರಿತು ನಾನು ತಲೆ ಕೆಡಿಸಿಕೊಳ್ಳಬಾರದು. ಅದು ನಿಮ್ಮ ನಂಬಿಕೆ. ಮತ್ತು ಅದನ್ನು ನೀವು ಹೇಗಾದರೂ ಗಳಿಸಿಕೊಳ್ಳಿ ಮತ್ತು ಬೆಳೆಸಿಕೊಳ್ಳಿ, ಅದು ನಿಮ್ಮ ಸ್ವಂತದ ವಿಷಯ. ಇದು ಸುದರ್ಶನಜಿಯವರೊಂದಿಗೆ ಚೆನ್ನೈನಿಂದ ಕೊಟ್ಟಾಯಮ್ ವರೆಗಿನ ಪ್ರವಾಸದ ಸಂದರ್ಭದಲ್ಲಿ ನಾನು ಕಲಿತುಕೊಂಡದ್ದು. ಇದನ್ನು ಅವರು ಒತ್ತಿ ಹೇಳುತ್ತಿದ್ದರು. ಅವರು ಹೇಳಿದ್ದರು, "ಮಾನ್ಯರೇ, ನೀವು ಶ್ರದ್ಧಾವಂತ ಕ್ರಿಶ್ಚಿಯನರಾಗಿರಬಹುದು". ನಾನು ಶ್ರದ್ಧಾವಂತ ಕ್ರಿಶ್ಚಿಯನರೆಂದು ಹೇಗೆ ಹೇಳುತ್ತೀರೆಂದು ಕೇಳಿದೆ. "ಅದು ಬೇರೆ ವಿಷಯ"- ಅವರು ಹೇಳಿದರು, "ನಾವು ಹೇಳುವುದೇನೆಂದರೆ ನಿಮ್ಮ ನಂಬಿಕೆ ಯಾವುದೇ ಇರಲಿ, ನಿಮ್ಮ ಪ್ರಾಥಮಿಕ ಬದ್ಧತೆ ಈ ದೇಶಕ್ಕೆ, ಈ ರಾಷ್ಟ್ರಕ್ಕೆ ಇರಬೇಕೆಂದಷ್ಟೆ." ಆ ವಿಷಯವನ್ನು ನಾನು ತುಂಬಾ ಮೆಚ್ಚುತ್ತೇನೆ, ನಾನೊಬ್ಬ ಈ ಸಂಸ್ಥೆಯ ಒಬ್ಬ ದೊಡ್ಡ ಪ್ರಶಂಸಕನಾಗಿದ್ದೇನೆ.

     ಎಲ್ಲೆಲ್ಲೂ ಪ್ರದರ್ಶಿತವಾದ ಶಿಸ್ತು -  ಮತ್ತು ಇಂದೂ ಕೂಡ -  ಧ್ವಜಕ್ಕೆ ಹೂವನ್ನು ಅರ್ಪಿಸಿದ ರೀತಿ, ಶಿಸ್ತು ನಿಮ್ಮ ಕಾರ್ಯಶೈಲಿ ಮತ್ತು ಸಾಧನೆಗೆ ನಿಜವಾದ ಸತ್ವ ತಂದುಕೊಟ್ಟಿದೆಯೆಂಬ ನಿಜವಾದ ಭಾವನೆ ನನ್ನಲ್ಲಿ ಮೂಡಿಸಿದೆ. ಶಿಸ್ತು ಒಂದು ದೇಶಕ್ಕೆ ಅವಶ್ಯಕ ಮತ್ತು ಶಿಸ್ತು ದೇಶದ ಬೆಳವಣಿಗೆಗೆ ಮೂಲಭೂತ ಅಗತ್ಯ. ಯಾವುದೇ ಬೆಳವಣಿಗೆಯಾದ ದೇಶದಲ್ಲಿ ನೀವು ಶಿಸ್ತು ಪ್ರಜೆಗಳಲ್ಲಿ ಒಡಮೂಡಿರುವುದನ್ನು ಕಾಣಬಹುದು. ಆ ವಿಷಯದಲ್ಲಿ  ರಾಷ್ಟ್ರೀಯ  ಸ್ವಯಂಸೇವಕಸಂಘ ನನಗೂ ಸಹ ಒಂದು ಮಾದರಿಯಾಗಿದೆಯೆಂದು ಭಾವಿಸುತ್ತೇನೆ.  

ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ : 

ಕವೆಂ. ನಾಗರಾಜ್, ಹಾಸನ.  

 

Comments

Submitted by nageshamysore Fri, 07/04/2014 - 21:25

ಒಟ್ಟಾರೆ 'ಧರ್ಮ ಶ್ರದ್ದೆ ವೈಯಕ್ತಿಕ, ದೇಶಾಭಿಮಾನ ಸಾರ್ವತ್ರಿಕ' - ಎನ್ನುವುದನ್ನು ಅರ್ಥಪೂರ್ಣವಾಗಿ ಬಿಂಬಿಸಿರುವ ಭಾಷಣದ ಕನ್ನಡ ಅವತರಣಿಕೆ ಚಿಂತನೆಯನ್ನು ಪ್ರೇರೇಪಿಸುವಂತಿದೆ.

Submitted by ಕೀರ್ತಿರಾಜ್ ಮಧ್ವ Sat, 07/05/2014 - 21:58

ಭಾರತದಲ್ಲಿ ಎಂದು ನೀವು ನನ್ನನ್ನು ಧರ್ಮದಿಂದ ಗುರುತಿಸುವುದಿಲ್ಲವೋ ಅಂದು ಮಾತ್ರ ಭಾರತದಲ್ಲಿ ಜಾತ್ಯಾತೀತತೆ ಸಾಧ್ಯವಾಗುತ್ತದೆ!" ಝಾಕೀರ್ ಹುಸೇನ್ ಮಾತುಗಳು ಅಕ್ಷರಶಃ ಸತ್ಯ.. ಬರಹಕ್ಕೆ ಧನ್ಯವಾದಗಳು

Submitted by kavinagaraj Sun, 07/06/2014 - 16:44

ಮಿತ್ರ ಗುಣಶೇಖರಮೂರ್ತಿಯವರೇ, ನನ್ನ ಆಕ್ಷೇಪಗಳಿಗೆ ನಿಮ್ಮ ಉತ್ತರ ಬರಲಿಲ್ಲ. ಇರಲಿ, ಪರವಾಗಿಲ್ಲ. ನೀವು ಹೇಳುವಂತೆ ಶ್ರೀ ಥಾಮಸ್ ರವರ ಜಾಗದಲ್ಲಿ ಒಬ್ಬ ಮೌಲ್ವಿ ಇದ್ದರೂ ಹೀಗೆಯೇ ಮಾತನಾಡುತ್ತಿದ್ದರು ಎಂದಾದಲ್ಲಿ, ಗುಣಶೇಖರ ಮೂರ್ತಿಯವರು ಇದ್ದರೂ ಹೀಗೆಯೇ ಮಾತನಾಡುತ್ತಿದ್ದರೇ ಎಂಬುದನ್ನು ತಿಳಿಯುವ ಕುತೂಹಲವಿದೆ.