ಪೆಂಗ್ವಿನ್ ಎಂಬ ಹಾರದ ಹಕ್ಕಿಯ ವೇಗದ ಕಥೆ

ಪೆಂಗ್ವಿನ್ ಎಂಬ ಹಾರದ ಹಕ್ಕಿಯ ವೇಗದ ಕಥೆ

ಪೆಂಗ್ವಿನ್ ಎಂಬ ಹಕ್ಕಿಯ ಹೆಸರು ಕೇಳುತ್ತಲೇ ಮನದಲ್ಲೇನೋ ಒಂದು ರೀತಿಯ ಪುಳಕ. ಪುಟ್ಟ ಮಗುವಿನ ಗಾತ್ರದ ಈ ಹಾರಲಾಗದ ಹಕ್ಕಿ ನಿಜಕ್ಕೂ ಸುಂದರ. ಹಿಮದಿಂದ ಆವರಿತವಾದ ಪ್ರದೇಶಗಳಲ್ಲಿ ಮಾತ್ರ ಕಾಣ ಸಿಗುವ ಇವುಗಳು ತುಂಬಾನೇ ಸ್ನೇಹಮಯಿ. ಅಧಿಕವಾಗಿ ಗುಂಪಲ್ಲೇ ಕಾಣಿಸಿಕೊಳ್ಳುವ ಇವುಗಳು ವೇಗದ ಈಜುಗಾರ ಹಕ್ಕಿಗಳು. ಪೆಂಗ್ವಿನ್ ಪಕ್ಷಿಗಳಲ್ಲಿ ಹಲವಾರು ವಿಧಗಳಿವೆ. ಅವುಗಳಲ್ಲಿ ಒಂದು ಎಂಪರರ್ ಪೆಂಗ್ವಿನ್. ಇದು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಗಂಡು ಮತ್ತು ಹೆಣ್ಣು ಬಹುತೇಕ ಸಮಾನ ಗಾತ್ರದಲ್ಲಿರುತ್ತದೆ. ಅಂಟಾರ್ಟಿಕ ಹಿಮ ಪ್ರದೇಶದಲ್ಲಿ ಕಾಣಸಿಗುವ ಇವುಗಳು ಬಹಳ ತೂಕವನ್ನೂ ಹೊಂದಿರುತ್ತವೆ. ಸುಮಾರು ೧೦೦ ಸೆಂ. ಮೀ. ಎತ್ತರಕ್ಕೆ ಬೆಳೆಯುವ ಇವುಗಳು ೨೫-೪೫ ಕೆಜಿ ಭಾರವಾಗಿರುತ್ತವೆ. ಕೆಲವು ಜಾತಿಯ ಪೆಂಗ್ವಿನ್ ಹಕ್ಕಿಗಳ ಕಿವಿ ಹಾಗೂ ಎದೆ ಭಾಗದಲ್ಲಿ ತಿಳಿ ಹಳದಿ ಬಣ್ಣವಿರುತ್ತದೆ

ಎಂಪರರ್ ಪೆಂಗ್ವಿನ್ ಪಕ್ಷಿಗಳ ವಿಶೇಷತೆಯೆಂದರೆ ಅದರ ಈಜುವ ವೇಗ. ಇವುಗಳು ಹಾರಲಾರವು. ಆದರೆ ನೀರಿನಲ್ಲಿ ವಿಪರೀತ ವೇಗವಾಗಿ ಈಜಬಲ್ಲವು. ಇವುಗಳ ದೊಡ್ದ ಶತ್ರುಗಳೆಂದರೆ ಚಿರತೆ ಸೀಲ್ ಪ್ರಾಣಿಗಳು (Leopard Seal). ಇವುಗಳು ಮಾಮೂಲಿ ಸೀಲ್ ಪ್ರಾಣಿಗಳಂತೆಯೇ ಇದ್ದು, ಮೈ ಮೇಲೆ ಚಿರತೆಗಳಿಗಿರುವಂತೆ ಕಪ್ಪು ಚುಕ್ಕೆ ಅಥವಾ ಕಲೆಗಳಿರುತ್ತವೆ. ಇವುಗಳನ್ನು ಸಮುದ್ರದ ಚಿರತೆ ಎಂದೂ ಕರೆಯುತ್ತಾರೆ. ಇವುಗಳು ನೀರಿನಲ್ಲಿ ವೇಗವಾಗಿ ಈಜ ಬಲ್ಲವು. ಇವುಗಳು ಪೆಂಗ್ವಿನ್ ಮೇಲೆ ದಾಳಿ ಮಾಡುವುದರಿಂದ ಅವುಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಈಜ ಬೇಕಾಗುತ್ತದೆ. ಪೆಂಗ್ವಿನ್ ಪಕ್ಷಿಗಳಿಗೆ ಹಾರಲು ಉಪಯುಕ್ತವಾದ ರೆಕ್ಕೆಗಳಿಲ್ಲ. ಆದರೆ ವೇಗವಾಗಿ ಈಜಲು ಅನುಕೂಲವಾಗುವಂತಹ ಕೈಗಳಂತಹ ರಚನೆಗಳಿವೆ. ಪೆಂಗ್ವಿನ್ ಪಕ್ಷಿಗಳು ನೀರಿನಲ್ಲಿ ವೇಗವಾಗಿ ಈಜಿ ನಂತರ ಅವುಗಳು ದಂಡೆಗೆ ಜಿಗಿಯುವುದನ್ನು ನೋಡಲು ಬಹಳ ಸುಂದರವಾಗಿರುತ್ತದೆ. ಸೀಲ್ ಚಿರತೆಗಳಿಗಿಂತಲೂ ವೇಗವಾಗಿ ಪೆಂಗ್ವಿನ್ ಪಕ್ಷಿಗಳು ಹೇಗೆ ಈಜುತ್ತವೆ? ಎಂಬ ಆಸಕ್ತಿದಾಯಕ ವಿಷಯಗಳ ಬಗ್ಗೆ ರೋಜರ್ ಹೂಗ್ಸ್ (Roger Hughes) ಕಡಲು ಜೀವ ಶಾಸ್ತ್ರಜ್ಞ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಅವರು ಉತ್ತರ ವೇಲ್ಸ್ ನಲ್ಲಿರುವ ಬ್ಯಾಂಗಾರ್ ವಿಶ್ವವಿದ್ಯಾನಿಲಯದಲ್ಲಿ ಕಡಲು ಜೀವಶಾಸ್ತ್ರಜ್ಞರು (Marine Biologist). 

ರೋಜರ್ ಹೂಗ್ಸ್ ಈ ಎಂಪರರ್ ಪೆಂಗ್ವಿನ್ ಗಳ ಬಗ್ಗೆ ಹಲವಾರು ಪ್ರಯೋಗಗಳನ್ನು ಮಾಡಿದ್ದಾರೆ. ವಿಶ್ವದ ರಮಣೀಯ ಪಕ್ಷಿಯಾದ ಪೆಂಗ್ವಿನ್ ನ ದೇಹ ರಚನೆ , ವಿನ್ಯಾಸ ಮತ್ತು ಅವುಗಳು ನೀರಿನಿಂದ ಹೊರ ಜಿಗಿಯಲು ಬಳಸುವ ತಂತ್ರಜ್ಞಾನದ ಬಗ್ಗೆ ಪ್ರಯೋಗಗಳನ್ನು ನಡೆಸಿ ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿದ್ದಾರೆ. ಪ್ರಾರಂಭದ ದಿನಗಳಲ್ಲಿ ಹೂಗ್ಸ್ ಪ್ರತ್ಯಕ್ಷವಾಗಿ ಪೆಂಗ್ವಿನ್ ಪಕ್ಷಿಗಳನ್ನು ನೋಡಿರುವುದಿಲ್ಲ. ಆದರೆ ಒಮ್ಮೆ ಬಿಬಿಸಿ ವಾಹಿನಿಯವರು ಹಾರದ ಹಕ್ಕಿಗಳ ಬಗ್ಗೆ ಚಿತ್ರೀಕರಿಸಿದ ಸಾಕ್ಷ್ಯಚಿತ್ರವೊಂದನ್ನು ನೋಡಿ ಪೆಂಗ್ವಿನ್ ಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಇವುಗಳು ಚುರುಕಾದ ವೇಗದದಲ್ಲಿ ಈಜುವ ಬಗ್ಗೆ, ನೀರಿನಿಂದ ಹೊರಗೆ ಧುಮುಕುವ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಾರೆ. ಆ ಸಮಯ ಅವರಿಗೆ ನೀರಿನಲ್ಲಿ ಈಜುತ್ತಿದ್ದ ಪೆಂಗ್ವಿನ್ ಸಾಗಿದ ಹಾದಿಯಲ್ಲಿ ಸಹಸ್ರಾರು ಅತೀ ಸಣ್ಣ ಗಾಳಿಯ ಗುಳ್ಳೆಗಳು ನಿರ್ಮಾಣವಾದುದನ್ನು ಗಮನಿಸುತ್ತಾರೆ. ಈಜು ಉಡುಪುಗಳ ಬಗ್ಗೆ ಮಾಹಿತಿ ಹೊಂದಿದ್ದ ಹೂಗ್ಸ್, ಎಂಪರರ್ ಪೆಂಗ್ವಿನ್ ಗಳ ವೇಗಕ್ಕೆ ಈ ಸೂಕ್ಷ್ಮವಾಗಿ ಕಾಣುವ ಗಾಳಿಯ ಗುಳ್ಳೆಗಳೇ ಕಾರಣ ಎಂದು ಅಂದಾಜು ಮಾಡುತ್ತಾರೆ. 

ಹೂಗ್ಸ್ ಈ ವಿಚಾರವನ್ನು ತಮ್ಮ ಮಿತ್ರರಾದ ಜಾನ್ ಪೋರ್ಟ್ ಇವರಲ್ಲಿ ತಿಳಿಸುತ್ತಾರೆ. ಜಾನ್ ಅವರೂ ಕಡಲು ಜೀವಿಶಾಸ್ತ್ರಜ್ಞರಾಗಿರುತ್ತಾರೆ. ಅವರು ಐರ್ಲಾಂಡಿನ ಕಾರ್ಕ್ ಯೂನಿವರ್ಸಿಟಿಯಲ್ಲಿ ಪ್ರಾಣಿಗಳ ಚಲನೆ ಹಾಗೂ ವಿನ್ಯಾಸದ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಆದರೆ ಪೆಂಗ್ವಿನ್ ಗಳು ಈಜುವಾಗ ಉಂಟಾಗುವ ಸೂಕ್ಷ್ಮ ಸಣ್ಣ ಗುಳ್ಳೆಗಳು ಹಾಗೂ ಅದರ ವೇಗಕ್ಕೆ ಇರುವ ಸಂಬಂಧಗಳ ಬಗ್ಗೆ ಅರಿವು ಅವರಿಗೂ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿಯವರೆಗೆ ಯಾರೂ ಯೋಚಿಸಿಯೂ ಇರಲಿಲ್ಲ ಮತ್ತು ಅಧ್ಯಯನಗಳೂ ಆಗಿರಲಿಲ್ಲ. ಹೂಗ್ಸ್ ಹಾಗೂ ಜಾನ್ ಅವರು ಈ ವಿಚಾರವಾಗಿ ಅಧಿಕ ಅಧ್ಯಯನ ಮಾಡಲು ನಿರ್ಧಾರ ಮಾಡುತ್ತಾರೆ. 

ಇವರಿಬ್ಬರೂ ಡೆನ್ಮಾರ್ಕ್ ದೇಶದ ಮೆಕಾನಿಕಲ್ ಇಂಜಿನಿಯರ್ ಆದ ಪೌಲ್ ಲಾರ್ಸನ್ ಅವರ ಸಹಾಯವನ್ನು ಈ ವಿಚಾರದಲ್ಲಿ ಕೇಳುತ್ತಾರೆ. ಏಕೆಂದರೆ ಪೌಲ್ ಲಾರ್ಸನ್ ದೋಣಿಗಳ ಹಾಗೂ ಟಾರ್ಪೆಡೋ ಬೋಟುಗಳ ವೇಗವನ್ನು ಹೆಚ್ಚು ಮಾಡುವ ಹಲವಾರು ತಾಂತ್ರಿಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿದ್ದರು. ಇವರ ಬಳಿ ಹೂಗ್ಸ್ ಮತ್ತು ಜಾನ್ ಈ ವಿಚಾರ ತಿಳಿಸಿದಾಗ ಅವರೂ ಪೆಂಗ್ವಿನ್ ಪಕ್ಷಿಯ ವೇಗದ ಈಜಿನ ತಾಂತ್ರಿಕತೆಯ ಬಗ್ಗೆ ಆಸಕ್ತಿ ತಾಳುತ್ತಾರೆ. ಪೆಂಗ್ವಿನ್ ಪಕ್ಷಿಗಳು ಗಾಳಿಯನ್ನು ಇಂಧನವನ್ನಾಗಿಸಿ (ಲ್ಯೂಬ್ರಿಕೆಂಟ್) ವೇಗವನ್ನಾಗಿ ಪರಿವರ್ತನೆ ಮಾಡಿಕೊಳ್ಳುತ್ತಿದ್ದುವು. ಪೆಂಗ್ವಿನ್ ಅತಿಯಾದ ರಭಸದಿಂದ ತನ್ನ ಕೈಗಳಂತಹ ರಚನೆಗಳಿಂದ ಗಾಳಿಯ ಗುಳ್ಳೆಗಳನ್ನು ಹೊರಗೆಡವುತ್ತಾ ಹಂತ ಹಂತವಾಗಿ ತನ್ನ ವೇಗವನ್ನು ವಿಪರೀತವಾಗಿ ಹೆಚ್ಚಿಸಿಕೊಳ್ಳುತ್ತಿತ್ತು. ಈ ಗಾಳಿಯ ಗುಳ್ಳೆಗಳು ಪೆಂಗ್ವಿನ್ ಸುತ್ತಮುತ್ತಲಿದ್ದ ನೀರಿನ ಸಾಂದ್ರತೆ ಮತ್ತು ಸ್ನಿಗ್ದತೆ (Viscosity) ಯನ್ನು ಕಡಿಮೆ ಮಾಡಿ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತಿತ್ತು.

ಪೆಂಗ್ವಿನ್ ಗಳು ಈ ರೀತಿ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳಲು ಕಾರಣವೆಂದರೆ ಅವುಗಳ ಕೈಗಳಂತಹ ರೆಕ್ಕೆಯ ರಚನೆ. ಇವುಗಳ ಕೈಗಳ ಕೆಳಗೆ ಗಾಳಿಯ ಪದರಗಳಿರುತ್ತವೆ. ಉಳಿದ ಪಕ್ಷಿಗಳಲ್ಲಿ ಗರಿಗಳ ಸಾಲಿನ ಮಧ್ಯೆ ತೆಳುವಾದ ಚರ್ಮವಿರುತ್ತದೆ. ಆದರೆ ಪೆಂಗ್ವಿನ್ ಗಳಲ್ಲಿ ಬೇರೆ ಹಕ್ಕಿಗಳಂತೆ ಗರಿಗಳನ್ನು ಹೊಂದಿದ ರೆಕ್ಕೆಗಳಿರುವುದಿಲ್ಲ. ಆದುದರಿಂದ ಅವುಗಳಲ್ಲಿ ರೆಕ್ಕೆಗಳಂತಹ (ಕೈ) ರಚನೆಯ ಅಡಿಯಲ್ಲಿ ಅತೀ ಸೂಕ್ಷ್ಮವಾದ ಇಪ್ಪತ್ತು ಮೈಕ್ರಾನ್ ಗಿಂತಲೂ ಕಡಿಮೆ ದಪ್ಪದ ತಂತುಗಳ ರಚನೆಗಳಿರುತ್ತವೆ. ಪೆಂಗ್ವಿನ್ ನೀರಿನಿಂದ ಹೊರಗಡೆ ಇರುವಾಗ ಈ ಸೂಕ್ಷ್ಮ ತಂತುಗಳಲ್ಲಿ ಗಾಳಿಯನ್ನು ತುಂಬಿಸಿಕೊಂಡು ನೀರಿನಲ್ಲಿ ಈಜಾಡುವಾಗ ಗಾಳಿಗುಳ್ಳೆಗಳು ಉತ್ಪತ್ತಿಯಾಗಿ ಅವುಗಳು ವೇದವರ್ಧಕ ಇಂಧನದಂತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇದರ ಕಾರಣದಿಂದ ಪೆಂಗ್ವಿನ್ ಪಕ್ಷಿಗಳ ದೇಹಕ್ಕೂ, ನೀರಿಗೂ ತಿಕ್ಕಾಟ ಕಡಿಮೆಯಾಗಿ ಅದಕ್ಕೆ ವೇಗವಾಗಿ ಈಜಲು ಸಾಧ್ಯವಾಗುತ್ತದೆ. ನೀರಿನ ಒಳಗೆ ಈಜಾಡುತ್ತಾ ಆಹಾರ ಸೇವಿಸಿ ನಂತರ ಹೊರಕ್ಕೆ ಜಿಗಿದು ಮತ್ತೆ ಗಾಳಿಯನ್ನು ತನ್ನ ರೆಕ್ಕೆಗಳ ತಂತುವಿನಲ್ಲಿ ತುಂಬಿಸಿಕೊಂಡು ಮತ್ತೆ ನೀರಿಗೆ ಧುಮುಕುತ್ತವೆ.

ಈ ಪೆಂಗ್ವಿನ್ ಗಳ ಸಹಜ ತಂತ್ರಜ್ಞಾನವನ್ನು ಹ್ಯೂಗ್ಸ್ ಮತ್ತು ಜಾನ್ ವೇಗವಾಗಿ ನೀರಿನಲ್ಲಿ ಚಲಿಸುವ ಬೋಟ್ ಗಳ ಆವಿಷ್ಕಾರಕ್ಕೆ ಬಳಸಿಕೊಳ್ಳುತ್ತಾರೆ. ೨೦೧೦ರಲ್ಲಿ ಡಚ್ ಕಂಪೆನಿಯೊಂದು ಹಡಗುಗಳಿಗೆ ಹಾಗೂ ದೋಣಿಗಳಿಗೆ ಗಾಳಿಗುಳ್ಳೆಗಳಿಂದ ನೀರಿನಲ್ಲಿ ಜಾರುವಂತೆ ಇಂಧನ ವ್ಯವಸ್ಥೆಯನ್ನು ಅಳವಡಿಸಿ ಅವುಗಳ ವೇಗವನ್ನು ಅಧಿಕಗೊಳಿಸಲು ಪ್ರಯತ್ನ ಮಾಡಿದ್ದಾರೆ. ಜಪಾನಿನ ಮಿಟ್ಸುಬಿಷಿ ಕಂಪೆನಿಯೂ ಇದೇ ತಂತ್ರಜ್ಞಾನವನ್ನು ಬಳಸಿ ಸೂಪರ್ ಟ್ಯಾಂಕರ್ ಗಳನ್ನು ತಯಾರಿಸುತ್ತಿದ್ದಾರೆ. 

ಹೀಗೆ ಪೆಂಗ್ವಿನ್ ಪಕ್ಷಿಗಳ ಸಹಜ ತಂತ್ರಜ್ಞಾನವು ಏನೆಲ್ಲಾ ಬಹುಪಯೋಗಿ ಆವಿಷ್ಕಾರಗಳಿಗೆ ಕಾರಣವಾಗಿದೆಯಲ್ಲವೇ? ಈ ತಾಂತ್ರಿಕ ಮಾಹಿತಿಯನ್ನು ಬಳಸಿಕೊಂಡು ಹೊಸ ರೀತಿಯ ವೇಗವಾಗಿ ಈಜಲು ಸಹಕಾರಿಯಾಗುವಂತಹ ಈಜು ಉಡುಪುಗಳನ್ನೂ ತಯಾರಿಸಲು ಕೆಲವು ಸಂಸ್ಥೆಗಳು ಯೋಜನೆಯನ್ನು ರೂಪಿಸಿಕೊಳ್ಳುತ್ತಿವೆಯಂತೆ. ಬಹುಷಃ ಇಂತಹ ಹಲವಾರು ಪ್ರಯೋಗಗಳಿಂದ ಜನರ ಉಪಯೋಗಕ್ಕೆ ಹಲವಾರು ಸಾಮಾಗ್ರಿಗಳು ಭವಿಷ್ಯದಲ್ಲಿ ದೊರೆಯಬಹುದು. 

ಚಿತ್ರಗಳ ವಿವರ : ೧. ಮರಿಗಳ ಜೊತೆ ಪೆಂಗ್ವಿನ್ ಹಕ್ಕಿಗಳು

೨. ಸಮುದ್ರ ಚಿರತೆ ಅಥವಾ ಚಿರತೆ ಸೀಲ್ ಪ್ರಾಣಿ

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ